ಜಿಲ್ಲಾ ಸುದ್ದಿಗಳು
ಹುನಗುಂದ ತಾಲೂಕಿನ ಅಮೀನಗಡ ಪಟ್ಟಣದಿಂದ ಗ್ರಾಮೀಣ ಪ್ರದೇಶಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳು ಸಂಪೂರ್ಣವಾಗಿ ಹದಗೆಟ್ಟಿದ್ದು , ಅವುಗಳನ್ನು ದುರಸ್ತಿಗೊಳಿಸದ ಪರಿಣಾಮ ಪ್ರಯಾಣಿಕರ ಗೋಳು ಕೇಳೋರ‌್ಯಾರು ಎಂಬ ಪ್ರಶ್ನೆ ಉದ್ಭ್ಬವಿಸಿದೆ.
ಬಾಗಲಕೋಟೆ: ಹುನಗುಂದ ತಾಲೂಕಿನ ಅಮೀನಗಡ ಪಟ್ಟಣದಿಂದ ಗುಡೂರ ಗ್ರಾಮಕ್ಕೆ ಹೋಗುವ ರಸ್ತೆ ಸಂಪೂರ್ಣವಾಗಿ ಹಾಳಾಗಿದೆ. ರಸ್ತೆಯುದ್ದಕ್ಕೂ ಇರುವ ತಗ್ಗು ದಿನ್ನೆಗಳಲ್ಲಿ ಸಂಚರಿಸಲು ವಾಹನ ಚಾಲಕರು ಸೇರಿದಂತೆ ಜನಸಾಮಾನ್ಯರು ಪರದಾಡುವಂತಾಗಿದೆ.
ಅಮೀನಗಡ ದಿಂದ ಸೂಳಿಭಾವಿ ಮಾರ್ಗವಾಗಿ ಗುಡೂರ ಗ್ರಾಮಕ್ಕೆ ಹೋಗುವ ರಸ್ತೆಯಲ್ಲಿ ತಗ್ಗುಗಳು ಬಿದ್ದಿದ್ದು ವಾಹನ ಸಂಚಾರಕ್ಕೆ ಅಯೋಗ್ಯವಾಗಿದೆ. ಶಾಲಾ ಮಕ್ಕಳು ಸೇರಿದಂತೆ ಪ್ರತಿನಿತ್ಯ ನೂರಾರು ಜನ ಪ್ರಯಾಣಿಸುವ ಈ ರಸ್ತೆಯಲ್ಲಿ ಟಂಟಂಗಳಲ್ಲಿ ಪ್ರಯಾಣ ಬಲು ಹೈರಾಣ ಎಂದು ಪ್ರಯಾಣಿಕರೊಬ್ಬರು ವಾಸ್ತವ ಸ್ಥಿತಿಯನ್ನು ಬಿಚ್ಚಿಡುತ್ತಾರೆ.ಅಮೀನಗಡದಿಂದ ಕೇವಲ 15ಕಿಮೀ ಇರುವ ಗುಡೂರ ಗ್ರಾಮವನ್ನು ತಲುಪಲು ಸುಮಾರು ಒಂದು ತಾಸಿಗಿಂತಲೂ ಹೆಚ್ಚಿನ ಸಮಯ ತೆಗೆದುಕೊಳ್ಳುತ್ತದೆ. ಕೆಲವೊಮ್ಮೆ ಹೆರಿಗೆ ಹಾಗೂ ಅನಾರೋಗ್ಯದ ಸಂದರ್ಭಗಳಲ್ಲಿ ಸರಿಯಾದ ಸಮಯಕ್ಕೆ ಆಸ್ಪತ್ರೆಗೆ ತಲುಪಲಾಗದೇ ನರಕಯಾತನೆಯನ್ನು ಅನುಭವಿಸುವಂತಿದೆ.ವಾಹನ ಸಂಚಾರದ ವೇಳೆ ಒಂದು ವೇಳೆ ಚಾಲಕನ ನಿಯಂತ್ರಣ ತಪ್ಪಿದರೆ ದುರಂತಕ್ಕೀಡಾಗುವುದು ಖಚಿತ.
ಜನಪ್ರತಿನಿಧಿಗಳು ಲೋಕೋಪಯೋಗಿ ಇಲಾಖೆ ಅಧಿಕಾರಿಗಳ ಮೇಲೆ ಒತ್ತಡ ತಂದು ರಸ್ತೆಗಳ ದುರಸ್ತಿ ಕಾರ್ಯ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.ಅಮೀನಗಡದಿಂದ ಕುಣಿಬೆಂಚಿ ಕ್ರಾಸ್ ವರೆಗಿನ ರಸ್ತೆ ಈಗಾಗಲೆ ದುರಸ್ತಿಕಾರ್ಯಕ್ಕೆ ಒಳಪಟ್ಟಿದ್ದು,ಅಲ್ಲಿಂದ ಗುಡೂರ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಸಂಪೂರ್ಣವಾಗಿ ಹದಗೆಟ್ಟಿದ್ದು ಮತ್ಯಕೂಪವಾಗಿ ಮಾರ್ಪಟ್ಟಿವೆ. ಇತ್ತೀಚೆಗೆ ಸುರಿಯುತ್ತಿರುವ ಮಳೆಯಿಂದಾಗಿ ರಸ್ತೆಯುದ್ದಕ್ಕೂ ನೀರು ಸಂಗ್ರಹಗೊಂಡಿದ್ದು, ವಾಹನ ಸಂಚಾರಕ್ಕೆ ಸಮಸ್ಯೆಯಾಗಿದೆ. ಇಷ್ಟಾದರೂ ಅಧಿಕಾರಿ ಮತ್ತು ಜನಪ್ರತಿನಿಧಿಗಳು ಮೌನವಹಿಸಿರುವುದು ನಿರ್ಲಕ್ಷದ ಪರಮಾವಧಿ.
Be the first to comment