ಕಾಡು ಹಂದಿಗಳ ಕಾಟ:ರೈತರು ಕಂಗಾಲು: ಕೇಳೋರಿಲ್ಲ ಸಂಕಟ

ವರದಿ: ಶರಣಪ್ಪ ಹೆಳವರ ಬಾಗಲಕೋಟೆ

ಜಿಲ್ಲಾ ಸುದ್ದಿಗಳು

ಕೆಲೂರ ಗ್ರಾಮದಲ್ಲಿ ಕಾಡು ಹಂದಿಗಳು ಪರಸಪ್ಪ ದುರಗದ ಜಮೀನಿಗೆ ದಾಳಿ ಮಾಡಿ ಸುಮಾರು ಒಂದು ಎಕರೆಗೂ ಹೆಚ್ಚು ಪ್ರದೇಶದಲ್ಲಿ ಬೆಳೆದಿದ್ದ ಮೆಕ್ಕೆ ಜೋಳ ಬೆಳೆ ನಾಶಪಡಿಸಿದ್ದು, ಬರದಲ್ಲೂ ರೈತರು ಕಷ್ಟ ಪಟ್ಟು ಬೆಳೆದ ಬೆಳೆ ಹೀಗೆ ಕಾಡು ಹಂದಿಗಳ ಪಾಲಾಗುತ್ತಿದೆ.

ಬಾಗಲಕೋಟೆ: ಇಳಕಲ್ಲ ತಾಲೂಕಿನ ಕೆಲೂರ ಗ್ರಾಮದಲ್ಲಿ ರೈತರಿಗೆ ಕಾಡು ಹಂದಿ ಮತ್ತು ಬಿಡಾಡಿ ದನಗಳ ಕಾಟ ಹೆಚ್ಚಾಗಿದ್ದು, ಅನ್ನದಾತನ ಅಳಲು ಆಲಿಸುವವರೇ ಇಲ್ಲದಂತಾಗಿದೆ.ಮುಂಗಾರು ಮಳೆ ಜೋರಾಗಿದ್ದು, ರೈತರಲ್ಲಿ ಸಂತಸ ಮನೆ ಮಾಡಿದೆ. ಉತ್ತಮ ಮಳೆಯಿಂದಾಗಿ ರೈತರು ಜಮೀನುಗಳಲ್ಲಿ ಮೆಕ್ಕೆಜೋಳ, ಇತರ ಬೆಳೆಗಳನ್ನು ಬಿತ್ತನೆ ಮಾಡಿದ್ದಾರೆ. ಆದರೆ ರೈತರ ಮುಖದಲ್ಲಿದ್ದ ಮಂದಹಾಸ ಬಹಳ ದಿನ ಉಳಿಯದೇ ಇಡೀ ರಾತ್ರಿ ಕಾಡು ಹಂದಿಗಳು ಮೆಕ್ಕೆಜೋಳ, ಶೇಂಗಾ, ಸೂರ್ಯಕಾಂತಿ ತಿಂದು ಹಾಕುತ್ತಿದ್ದು, ರಾತ್ರಿಯೆಲ್ಲ ಜಾಗರಣೆ ಮಾಡುವಂತಾಗಿದೆ.

ರೈತರು ಸಾಲ-ಸೂಲ ಮಾಡಿ ಎಕರೆಗೆ ಕನಿಷ್ಠ ರೂ.25 ರಿಂದ 30 ಸಾವಿರ ವೆಚ್ಚ ಮಾಡಿ ಬಿತ್ತನೆ ಬೀಜ,ರಸಗೊಬ್ಬರ ಹಾಗೂ ಇತರೆ ವೆಚ್ಚ ಖರ್ಚಾಗುವುದು.ಬೆಳೆ ಬೆಳೆದು ತೆನೆಯೊಡೆಯುವ ಸಂದರ್ಭದಲ್ಲಿ ಕಾಡು ಹಂದಿಗಳು ಜಮೀನುಗಳಿಗೆ ನುಗ್ಗಿ ಜಮೀನಿನ ಎಲ್ಲ ಬೆಳೆಗಳನ್ನು ತಿಂದು ಹಾಕುತ್ತಿರುವುದರಿಂದ ರೈತರಿಗೆ ಅಪಾರ ಪ್ರಮಾಣದ ನಷ್ಟ ಉಂಟಾಗುತ್ತಿದೆ.

ಕಾಡುಹಂದಿಗಳ ಕಾಟ: ಕೆಲೂರ ಗ್ರಾಮದ ಪರಸಪ್ಪ ದುರ್ಗದ ಜಮೀನಿಗೆ ನುಗ್ಗಿದ್ದ ಕಾಡು ಹಂದಿಗಳು, ಹೊಲದಲ್ಲಿದ್ದ ಮೆಕ್ಕೆಜೋಳ ತಿಂದು ಹಾಕಿವೆ. ಹೀಗಾಗಿ ಆ ರೈತ ತಲೆಮೇಲೆ ಕೈ ಹೊತ್ತು ಕುಳಿತುಕೊಳ್ಳುವಂತಾಗಿದೆ. ಗ್ರಾಮದ ಅನೇಕ ಹೊಲಗಳಿಗೆ ಕಾಡು ಹಂದಿಗಳ ಕಾಟವಿದ್ದು, ಇದರಿಂದ ನೂರಾರು ಎಕರೆಯಲ್ಲಿ ಬಿತ್ತನೆ ಮಾಡಿರುವ ಮೆಕ್ಕೆಜೋಳ, ಶೇಂಗಾ,ಸೂರ್ಯಕಾಂತಿ ಬೆಳೆ ನಾಶವಾಗಿವೆ. ರೈತರು ಇದರಿಂದಾಗಿ ಕಂಗೆಟ್ಟಿದ್ದಾರೆ. ಸರ್ಕಾರ ಇದಕ್ಕೆ ಪರಿಹಾರ ನೀಡುತ್ತದೆಯೇ? ಎನ್ನುತ್ತಾರೆ ಕೆಲೂರ ಗ್ರಾಮದ ರೈತ ಪರಸಪ್ಪ.

ಕಾಡು ಹಂದಿಗಳು ಹೊಲಕ್ಕೆ ನುಗ್ಗದಂತೆ ಇಡೀ ರಾತ್ರಿ ಜಮೀನಗಳ ಬದುವಿನಲ್ಲಿ ಟೈಯರ್‌ಗಳಿಗೆ ಬೆಂಕಿ ಹಚ್ಚಿ ಕಾಯಬೇಕು. ಇಲ್ಲದಿದ್ದರೆ ಹೊಲವೆಲ್ಲ ನಾಶ ಮಾಡುತ್ತವೆ. ಇದರಿಂದ ರೈತರು ರೋಸಿ ಹೋಗಿದ್ದು, ಪ್ರತಿ ವರ್ಷ ಲಕ್ಷಾಂತರ ರು.ಗಳ ಬೆಳೆ ಹಾನಿ ಅನುಭವಿಸುವಂತಾಗಿದೆ.

ಗ್ರಾಮದಲ್ಲಿ ಕಾಡು ಹಂದಿ ಸೇರಿದಂತೆ ಇನ್ನಿತರ ಕಾಡು ಪ್ರಾಣಿಗಳ ಹಾವಳಿ ಮಿತಿಮೀರಿದೆ. ಇದರಿಂದ ರೈತರು ನಷ್ಟಕ್ಕೀಡಾಗುತ್ತಿದ್ದಾರೆ. ಹೀಗಾಗಿ ಕಾಡು ಪ್ರಾಣಿಗಳು ಜಮೀನಿಗೆ ನುಗ್ಗುವುದನ್ನು ತಪ್ಪಿಸಲು ಅರಣ್ಯ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ರೈತರು ಒತ್ತಾಯಿಸಿದ್ದಾರೆ.

Be the first to comment

Leave a Reply

Your email address will not be published.


*