ಜಿಲ್ಲಾ ಸುದ್ದಿಗಳು
ಬಾಗಲಕೋಟೆ : ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿಗೆ ರೈತರು ಬೆಳೆದ ಬೆಳೆಗಳ ಮಾಹಿತಿ ಹಾಗೂ ಛಾಯಾಚಿತ್ರ ಸಹಿತ ಅಪ್ಲೋಡ್ ಮಾಡಬಹುದಾದ ಬೆಳೆ ಸಮೀಕ್ಷೆ ಆ್ಯಪ್‍ಗೆ ಅರಣ್ಯ ಮತ್ತು ಆಹಾರ, ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಸಚಿವ ಉಮೇಶ ಕತ್ತಿ ಚಾಲನೆ ನೀಡಿದರು.
ರವಿವಾರ ಶಿಗಿಕೇರಿ ಗ್ರಾಮದ ಕಲ್ಲಪ್ಪ ಮೇಟಿ ಅವರ ಜಮೀನಿನಲ್ಲಿನ ಬೆಳೆಯನ್ನು ವೀಕ್ಷಿಸಿ ಬೆಳೆ ಸಮೀಕ್ಷೆ ಆ್ಯಪ್‍ಗೆ ಚಾಲನೆ ನೀಡಿ ಮಾತನಾಡಿದ ಅವರು ರೈತರು ತಮ್ಮ ಕ್ಷೇತ್ರಗಳಲ್ಲಿ ಬೆಳೆದಿರುವ ಬೆಳೆಯ ವಿವರಗಳನ್ನು ರೈತರೇ ಸ್ವತಃ ಬೆಳೆ ಸಮೀಕ್ಷೆಯ ಆ್ಯಪ್ ಮೂಲಕ ತಾವೇ ಅಪ್ಲೋಡ್ ಮಾಡುವ ಅವಕಾಶವನ್ನು ಕೃಷಿ ಇಲಾಖೆಯ ಮೂಲಕ ಕಲ್ಪಿಸಲಾಗಿದೆ. ಬೆಳೆ ಸಮೀಕ್ಷೆಯಿಂದ ಬೆಳೆ ವಿಮೆ ಪರಿಹಾರ, ಕನಿಷ್ಠ ಬೆಂಬಲ ಬೆಲೆ ಯೋಜನೆ, ಬೆಳೆ ಸಾಲ ಪಡೆಯುವ ಸಂದರ್ಭಗಳಲ್ಲಿ ಹಾಗೂ ಪರಿಹಾರಗಳನ್ನು ಪಡೆದುಕೊಳ್ಳುವಲ್ಲಿ ಸಹಕಾರಿಯಾಗುತ್ತದೆ ಎಂದು ತಿಳಿಸಿದರು.
ನೀವು ಕೈಗೊಳ್ಳುವ ಈ ಬೆಳೆ ಸಮೀಕ್ಷೆಯ ವಿವರಗಳು ಪಹಣೆ (ಆರ್‍ಟಿಸಿ)ಗಳಲ್ಲಿ ದಾಖಲಾಗುತ್ತದೆ. ಇಲಾಖೆಯಿಂದ ದೊರೆಯುವ ಸವಲತ್ತುಗಳನ್ನು ಪಡೆಯಲು ಅನುಕೂಲವಾಗುತ್ತದೆ. ಕಳೆದ ವರ್ಷ ಸಹ ತಾವು ಖುದ್ದಾಗಿ ಬೆಳೆ ಸಮೀಕ್ಷೆ ವಿವರಗಳನ್ನು ಆ್ಯಪ್ ಮೂಲಕ ಯಶಸ್ವಿಯಾಗಿ ಅನುಷ್ಠಾನಗೊಳಿಸಿದಕ್ಕೆ ಅಭಿನಂದನೆಗಳನ್ನು ತಿಳಿಸಿದರು. ರೈತರು ದಾಖಲಿಸುವ ಪ್ರತಿಯೊಂದು ಮಾಹಿತಿಯು ಮಹತ್ವ ಹೊಂದಿದ್ದು, ಕೂಡಲೇ ಸರಕಾರದ ಈ ಮಹಾತ್ವಾಕಾಂಕ್ಷಿ ಯೋಜನೆಯಲ್ಲಿ ಪ್ರತಿಯೊಬ್ಬ ರೈತರು ಪಾಲ್ಗೊಳ್ಳುವಂತೆ ರೈತರಲ್ಲಿ ಮನವಿ ಮಾಡಿಕೊಂಡರು.
ಕೃಷಿ ಜಂಟಿ ನಿರ್ದೇಶಕಿ ಡಾ.ಚೇತನಾ ಪಾಟೀಲ ಮಾತನಾಡಿ ಬೆಳೆ ಸಮೀಕ್ಷೆ ಆ್ಯಪ್ ಡೌನ್‍ಲೋಡ್ ಬಗ್ಗೆ ವಿವರಿಸಿದರು. ಗೂಗಲ್ ಪ್ಲೇ ಸ್ಟೋರ್‍ನಲ್ಲಿ ಪಾರ್ಮರ್ಸ್ ಕ್ರಾಫ್ ಸರ್ವೆ ಆ್ಯಪ್ 2021-22 ಡೌನಲೋಡ್ ಮಾಡಿಕೊಳ್ಳಬೇಕು. ಆರ್ಥಿಕ ವರ್ಷ, ಋತು ನಂತರ ರೈತರ ಹೆಸರು ಮೊ.ನಂ ಸಕ್ರಿಯಗೊಳಿಸಬೇಕು. ನಮೂದಿಸಿದ ಮೊನಂ.ಗೆ ಓಟಿಪಿ ಬರಲಿದ್ದು, ಅದನ್ನು ನಮೂದಿಸಿ ನೋಂದಣಿ ಮಾಡಿಕೊಳ್ಳಬಹುದು. ಮಾಸ್ಟರ ವಿವರ ಡೌನಲೋಡ್ ಮಾಡಿಕೊಂಡು ಪಹಣಿ, ಮಾಲಿಕರ ವಿವರದ ಮೇಲೆ ಕ್ಲಿಕ್ ಮಾಡಬೇಕು. ಜಿಲ್ಲೆ, ತಾಲೂಕು ಮತ್ತು ಹೋಬಳಿ ಆಯ್ಕೆ ಮಾಡಿ ಸರ್ವೆ ನಂಬರ, ಹಿಸ್ಸಾ ನಮೂದಿಸಿಬೇಕು. ನಂತರ ಜಮೀನಿನಲ್ಲಿ ಬೆಳೆದ ಬೆಳೆಯ ಛಾಯಾಚಿತ್ರವನ್ನು ದಾಖಲಿಸಬಹುದಾಗಿದೆ ಎಂದು ತಿಳಿಸಿದರು. ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೃಷಿ, ಕಂದಾಯ, ತೋಟಗಾರಿಕೆ ಹಾಗೂ ರೇಷ್ಮೆ ಇಲಾಖಾ ಅಧಿಕಾರಿಗಳನ್ನು ಸಂಪರ್ಕಿಸಲು ತಿಳಿಸಿದರು.
ಕಾರ್ಯಕ್ರಮದಲ್ಲಿ ಸಂಸದ ಪಿ.ಸಿ.ಗದ್ದಿಗೌಡರ, ಶಾಸಕ ವೀರಣ್ಣ ಚರಂತಿಮಠ, ಜಿಲ್ಲಾಧಿಕಾಇ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ, ಜಿ.ಪಂ ಸಿಇಓ ಟಿ.ಭೂಬಾಲನ್, ಕೃಷಿ ಉಪನಿರ್ದೇಶಕ ಎಸ್.ಬಿ.ಕೊಂಗವಾಡ ಸೇರಿದಂತೆ ಇತರರು ಉಪಸ್ಥಿತರಿದ್ದರು.
Be the first to comment