ರಾಜ್ಯ ಸುದ್ದಿಗಳು
ಬೆಂಗಳೂರು: ಮೊಹರಂ, ಶ್ರೀ ಕೃಷ್ಣ ಜನ್ಮಾಷ್ಟಮಿ, ಗೌರಿ-ಗಣೇಶನ ಹಬ್ಬ ಹಾಗೂ ದುರ್ಗಾಪೂಜೆ ಮೊದಲಾದ ಹಬ್ಬಗಳ ಸಂದರ್ಭದಲ್ಲಿ ಕೋವಿಡ್ ಸಂಕಷ್ಟದ ಹಿನ್ನೆಲೆಯಲ್ಲಿ ಜನದಟ್ಟಣೆ ತಪ್ಪಿಸಲು ರಾಜ್ಯ ಸರಕಾರ ಹೊಸ ಮಾರ್ಗಸೂಚಿ ಪ್ರಕಟಿಸಿದೆ. ಮಸೀದಿ, ಚರ್ಚ್ ಹಾಗೂ ದೇವಸ್ಥಾನಗಳಲ್ಲಿ ಪ್ರಾರ್ಥನೆ-ಪೂಜೆಗೆ ಅವಕಾಶವಿದೆ. ಆದರೆ, ಜಾತ್ರೆ, ದೇವಸ್ಥಾನಗಳ ಉತ್ಸವ, ಮೆರವಣಿಗೆ, ಸಭೆ, ಸಮಾರಂಭಗಳಿಗೆ ನಿರ್ಬಂಧ ಹೇರಲಾಗಿದೆ.
ಹಬ್ಬದ ದಿನಗಳು ಮತ್ತು ಸಾಮೂಹಿಕ ಸಮಾರಂಭಗಳಿಗೆ ಅಗತ್ಯವಿದ್ದಲ್ಲಿ ಬೆಂಗಳೂರು ಮಹಾನಗರ ಪಾಲಿಕೆ ಮುಖ್ಯ ಆಯುಕ್ತರಿಂದ ಅಥವಾ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಸಾರ್ವಜನಿಕರ ಹಿತದೃಷ್ಟಿಯಿಂದ ಸ್ಥಳೀಯವಾಗಿ ನಿರ್ಬಂಧ ವಿಧಿಸಬೇಕು. ಸಾರ್ವಜನಿಕ ಸ್ಥಳಗಳಲ್ಲಿ ಆಲಂಗಳನ್ನು/ಪಂಜಾವನ್ನು ಸ್ಥಾಪಿಸುವುದನ್ನು ಹಾಗೂ ತಾಜಿಯಾವನ್ನು ನಿರ್ಬಂಧಿಸಲಾಗಿದೆ.
ಆ.12ರಿಂದ ಆ.20ರ ವರೆಗೆ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಮೋಹರಂ ಪ್ರಾಥನಾ ಸಭೆ ಮತ್ತು ಮೆರವಣಿಗೆಯನ್ನು ನಿಷೇಧಿಸಲಾಗಿದೆ.ಮೋಹರಂ ಸಂಬಂಧಿತ ಆಚರಣೆಗಳಲ್ಲಿ ಭಾಗವಹಿಸುವ ಭಕ್ತಾಧಿಗಳು ಸೂಕ್ತ ಅಂತರದೊಂದಿಗೆ ಕನಿಷ್ಠ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು. ಆಲಂ(ಕೆಂಡ ಹಾಯುವುದು), ಪಂಜಾ, ತಾಜಿಯತ್‍ಗಳನ್ನು ಸಾರ್ವಜನಿಕರು ಮುಟ್ಟದೆ ದೂರದಿಂದ ನೋಡತಕ್ಕದ್ದು. ಖಬರಸ್ಥಾನ್ ಒಳಗೊಂಡಂತೆ ಯಾವುದೇ ಖಾಲಿ ಜಾಗಗಳಲ್ಲಿ ಯಾವುದೇ ರೀತಿಯ ಸಭೆ ಏರ್ಪಡಿಸುವುದನ್ನು ನಿರ್ಬಂಧಿಸಲಾಗಿದೆ. ಖಬರಸ್ಥಾನಗಳಲ್ಲಿ ಕೇವಲ ದಫನ್ ಮಾಡಲು ಮಾತ್ರ ಅನುಮತಿ ನೀಡಿದ್ದು, ಮೊಹರಂಗೆ ಸಂಬಂಧಿಸಿದ ಆಚರಣೆಗಳಿಗೆ ಅನುಮತಿ ಇರುವುದಿಲ್ಲ.
60 ವರ್ಷ ಮೇಲ್ಪಟ್ಟ ಮತ್ತು 10 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಮನೆಯಲ್ಲಿಯೇ ಪ್ರಾರ್ಥನೆ ಮಾಡತಕ್ಕದ್ದು. ಪ್ರಾರ್ಥನೆ ವೇಳೆ ವ್ಯಕ್ತಿಗತ ಅಂತರ ಕಾಯ್ದುಕೊಳ್ಳಬೇಕು. ಮಸೀದಿಗಳು ಹೊರತುಪಡಿಸಿ ಇತರೆ ಯಾವುದೇ ಸ್ಥಳಗಳಲ್ಲಿ ಸಭಾಂಗಣ, ಸಮುದಾಯ ಭವನ, ಶಾದಿ ಮಹಲ್‍ಗಳಲ್ಲಿ ಸಾಮೂಹಿಕ ಪ್ರಾರ್ಥನೆ ಆಯೋಜಿಸುವಂತಿಲ್ಲ. ಮಸೀದಿಯಲ್ಲಿ ಪ್ರಾರ್ಥನೆ ಮಾಡಬಹುದು, ಹೆಚ್ಚಿನ ಜನರು ಆಗಮಿಸಿದ್ದಲ್ಲಿ ಪಾಳಿಯಲ್ಲಿ ಸಾಮೂಹಿಕ ಪ್ರಾರ್ಥನೆ ಮಾಡಬಹುದು. ಪ್ರಾರ್ಥನಾ ಸ್ಥಳಗಳಲ್ಲಿ ಮಾಸ್ಕ್ ಧರಿಸುವುದು ಕಡ್ಡಾಯವಾಗಿದೆ.
ಮನೆಗಳಲ್ಲಿ ಆಚರಿಸಿ: ಗಣೇಶ ಚತುರ್ಥಿಯನ್ನು ಸರಳ ರೀತಿಯಲ್ಲಿ ಭಕ್ತಿಪೂರ್ವಕವಾಗಿ ದೇವಸ್ಥಾನ ಮತ್ತು ಮನೆಗಳಲ್ಲಿ ಆಚರಿಸತಕ್ಕದ್ದು. ಇದನ್ನು ಹೊರತುಪಡಿಸಿ ಬೇರೆ ಯಾವುದೇ ಸಾರ್ವಜನಿಕ ಸ್ಥಳಗಳಲ್ಲಿ, ಹೊರಾಂಗಣಗಳಲ್ಲಿ ವೇದಿಕೆ ನಿರ್ಮಿಸಿ ಗೌರಿ-ಗಣೇಶನ ಮೂರ್ತಿ ಪ್ರತಿಷ್ಠಾಪಿಸಲು ನಿಷೇಧ ಹೇರಲಾಗಿದೆ. ಗಣೇಶ ಮೂರ್ತಿಯ ವಿಸರ್ಜನೆಯ ವೇಳೆ ನಡೆಯುವಂತ ಮರೆವಣಿಗೆಗೆ ನಿಷೇಧ ಹೇರಲಾಗಿದೆ.
ಮಹಾನಗರ ಪಾಲಿಕೆ/ಜಿಲ್ಲಾಡಳಿತ/ಹತ್ತಿರದ ಸ್ಥಳೀಯ ಸಂಸ್ಥೆಗಳ ವತಿಯಿಂದ ನಿರ್ಮಿಸಲಾದ ಹೊಂಡ, ಕಲ್ಯಾಣಿ, ಅಥವಾ ಮೊಬೈಲ್ ಟ್ಯಾಂಕ್‍ಗಳಲ್ಲಿ ಅಥವಾ ಕೃತಕ ವಿಸರ್ಜನಾ ಟ್ಯಾಂಕರ್‍ಗಳಲ್ಲಿ ಗಣೇಶನ ಮೂರ್ತಿ ವಿಸರ್ಜಿಸಬೇಕು. ಗಣೇಶ ಚತುರ್ಥಿ ಆಚರಿಸುವ ದೇಗುಲದಲ್ಲಿ ಪ್ರತಿದಿನ ಸ್ಯಾನಿಟೈಸರ್ ಮಾಡತಕ್ಕದ್ದು. ದೇವಾಲಯಕ್ಕೆ ಬರುವ ಭಕ್ತರು ಕನಿಷ್ಠ 6 ಅಡಿ ಅಂತರ, ಮಾಸ್ಕ್ ಧರಿಸುವುದು ಕಡ್ಡಾಯಗೊಳಿಸಿದೆ. ಅಲ್ಲದೆ, ಭಕ್ತಾಧಿಗಳಿಗೆ ಥರ್ಮಲ್ ಸ್ಕ್ರೀನಿಂಗ್ ವ್ಯವಸ್ಥೆ ಕಲ್ಪಿಸತಕ್ಕದ್ದು. ಕೋವಿಡ್ ಸೋಂಕು ಹರಡದಂತೆ ಸೂಕ್ತ ಮುನ್ನಚ್ಚರಿಕೆ ವಹಿಸಬೇಕು. ಅಲ್ಲದೆ, ಸರಕಾರದ ಮಾರ್ಗಸೂಚಿಯನ್ನು ಎಲ್ಲರೂ ಕಡ್ಡಾಯವಾಗಿ ಪಾಲಿಸಬೇಕೆಂದು ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ತುಷಾರ್ ಗಿರಿನಾಥ್ ಆದೇಶ ಹೊರಡಿಸಿದ್ದಾರೆ.
Be the first to comment