ಜಿಲ್ಲಾ ಸುದ್ದಿಗಳು
ಬಾಗಲಕೋಟೆ : ಮಕ್ಕಳ ಕಳ್ಳ ಸಾಗಾಣಿಕೆ ತಡೆಗೆ ಪೊಲೀಸ್ ಇಲಾಖೆಯ ಜೊತೆಗೆ ಇತರ ಇಲಾಖೆಗಳ ಸಹಕಾರ ಅಗತ್ಯವಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ ಜಗಲಾಸರ ಹೇಳಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಹಾಗೂ ಪೊಲೀಸ್ ಇಲಾಖೆ ಸಹಯೋಗದಲ್ಲಿ ಮಕ್ಕಳ ಸಾಗಾಣಿಕೆ ಮತ್ತು ಇದರಿಂದಾಗುವ ತೊಂದರೆ ಹಾಗೂ ತಡೆಗಟ್ಟುವಲ್ಲಿ ಪೊಲೀಸರ ಕರ್ತವ್ಯಗಳ ಕುರಿತು ಹಮ್ಮಿಕೊಂಡ ಒಂದು ದಿನದ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ದೈನಂದಿನ ಕರ್ತವ್ಯದಲ್ಲಿ ಒಂದು ಗಂಡು-ಹೆಣ್ಣು ಪ್ರೀತಿಸಿ ಓಡಿ ಹೋಗುತ್ತಿರುವ ಪ್ರಸಂಗಗಳನ್ನು ನೋಡುತ್ತಿದ್ದೇವೆ. ಕೆಲವೊಬ್ಬರು ಮೋಸ ಮಾಡಿ ಮಕ್ಕಳನ್ನು ಸಾಗಾಣಿಕೆಗೆ ಮುಂದಾಗುತ್ತಿದ್ದು, ಅಂತವರ ಮೇಲೆ ಹೆಚ್ಚಿನ ನಿಗಾವಹಿಸಬೇಕು. ಪೊಲೀಸ್ ಸಿಬ್ಬಂದಿಗಳು ಮಕ್ಕಳ ಮಿಸ್ಸಿಂಗ್ ಕೇಸ್ ಪ್ರಕರಣಗಳ ಬಗ್ಗೆ ಮೊದಲ ಆದ್ಯತೆ ಕೊಟ್ಟು ತುರ್ತಾಗಿ ಕ್ರಮಕೈಗೊಳ್ಳಬೇಕು. ತಡಮಾಡಿದಷ್ಟು ಸಾಗಾಣಿಕೆಗೆ ಎಡೆ ಮಾಡಿಕೊಟ್ಟಂತಾಗುತ್ತದೆ. ಪ್ರತಿದಿನ ಒಂದಾದರೂ ಸಹ ಇಂತಹ ಪ್ರಕರಣಗಳು ಕಂಡುಬರುತ್ತಿದ್ದು, ಅವುಗಳ ಮೇಲೆ ಹೆಚ್ಚಿನ ಗಮನ ಹರಿಸಲು ತಿಳಿಸಿದರು.
ಮಕ್ಕಳ ರಕ್ಷಣೆಯಲ್ಲಿ ಪೊಲೀಸರ ಪಾತ್ರದ ಕುರಿತ ತರಬೇತಿ ಕಾರ್ಯಾಗಾರ ಸಹಾಯವಾಗಲಿದ್ದು, ಇದರ ಸದುಪಯೋಗ ಪಡೆಯುವದರ ಜೊತೆಗೆ ತಮ್ಮ ಸಹದ್ಯೋಗಿಗಳಿಗೂ ತಿಳಿಸುವ ಕೆಲಸವಾಗಬೇಕು. ಇಂತಹ ಕಾರ್ಯದಲ್ಲಿ ಇತರೆ ಇಲಾಖೆಗಳ, ಸಾರ್ವಜನಿಕರ ಸಹಕಾರ ಅಗತ್ಯವಾಗಿದೆ ಎಂದು ಜಗಲಾಸರ ತಿಳಿಸಿದರು.
ಜಿ.ಪಂ ಸಿಇಓ ಟಿ.ಭೂಬಾಲಮ್ ಮಾತನಾಡಿ ಮಾಜಿ ದೇವದಾಸಿ ಮಕ್ಕಳು, ಬಾಲ್ಯವಿವಾಹ ಹಾಗೂ ಶಾಲೆ ಬಿಟ್ಟ ಮಕ್ಕಳೇ ಹೆಚ್ಚಾಗಿ ಸಾಗಾಣಿಕೆಯ ಪ್ರಕರಣಗಳಲ್ಲಿ ಕಂಡುಬರುತ್ತಿವೆ. ಬಾಲ ಕಾರ್ಮಿಕರು ಸಹ ನಮಗೆ ಗೊತ್ತಿಲ್ಲದೇ ಕೆಲಸ ಮಾಡುತ್ತಿರುತ್ತಾರೆ. ಅಂತವರ ಮೇಲೆ ನಿಗಾವಹಿಸಬೇಕು. ಪೊಲೀಸ್ ಇಲಾಖೆಯ ಜೊತೆ ಇತರೆ ಇಲಾಖೆಗಳು ಕೈಜೋಡಿಸಿದಾಗ ಮಾತ್ರ ಮಕ್ಕಳ ಸಾಗಾಣಿಕೆ ತಡೆಯಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷ ಗುಲಾಬ ನದಾಫ್ ಮಾತನಾಡಿ ಎಲ್ಲ ಹಂತದಲ್ಲಿಯೂ ಮಕ್ಕಳು ಸುರಕ್ಷಿತರಾಗಿರಬೇಕು. ಮಕ್ಕಳ ರಕ್ಷಣೆಯಲ್ಲಿ ಪೊಲೀಸ್ ಇಲಾಖೆಯ ಪಾತ್ರ ಬಹಳ ಮುಖ್ಯವಾಗಿದೆ ಎಂದು ತಿಳಿಸಿದರು.
ಎಸ್.ಎಸ್.ಬೆಳಗಲಿ ರಕ್ಷಣೆಮಾಡಿದ ಮಕ್ಕಳ ಪುನರ್ವಸತಿ ಕುರಿತು, ವಕೀಲರಾದ ಪಿ.ಎಚ್.ಮಾಳೇದ ಮಕ್ಕಳ ಕಳ್ಳಸಾಗಾಣಿಕೆ ಕಾಯ್ದೆ ಹಾಗೂ ಪೊಸ್ಕೋ ಕಾಯ್ದೆ-2012ರ ಕುರಿತು, ಗುಲಾಬ ನದಾಫ್ ಬಾಲನ್ಯಾಯ ಕಾಯ್ದೆ-2015 ಕುರಿತು, ಅಂತೋನಿಯಪ್ಪ ಮಕ್ಕಳ ಹಕ್ಕುಗಳು ಹಾಗೂ ಬಾಲ್ಯವಿವಾಹ ನಿಷೇಧನಾ ಕಾಯ್ದೆ ಕುರಿತು ತಮ್ಮ ಉಪನ್ಯಾಸದಲ್ಲಿ ವಿವರವಾಗಿ ತಿಳಿಸಿಕೊಟ್ಟರು.
ಇದೇ ಸಂದರ್ಭದಲ್ಲಿ ವಿವಿಧ ಮಕ್ಕಳ ರಕ್ಷಣಾ ಕಾಯ್ದೆ ಕುರಿತು ಪ್ರಚಾರ ಪೋಸ್ಟರಗಳನ್ನು ಬಿಡುಗಡೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ರಮೇಶ ಸೂಳಿಕೇರಿ, ಡಿವಾಯ್‍ಎಸ್‍ಪಿ ಚಂದ್ರಕಾಂತ ನಂದರೆಡ್ಡಿ, ಮಕ್ಕಳ ರಕ್ಷಣಾಧಿಕಾರಿ ಕೇಶವದಾಸ ಸೇರಿದಂತೆ ಇತರರು ಉಪಸ್ಥಿತರಿದ್ದರು.
Be the first to comment