ಜಿಲ್ಲೆಯಲ್ಲಿನ ತ್ರಿವಳಿ ನದಿಗಳಿಂದ ಪ್ರವಾಹ ಮುನ್ಸೂಚನೆ: ಪ್ರವಾಹ ನಿರ್ವಹಣೆಗೆ ಅಗತ್ಯ ಕ್ರಮಕೈಗೊಳ್ಳಿ : ಸಚಿವ ಕತ್ತಿ

ವರದಿ: ಶರಣಪ್ಪ ಹೆಳವರ ಬಾಗಲಕೋಟೆ

ಜಿಲ್ಲಾ ಸುದ್ದಿಗಳು

ಆಲಮಟ್ಟಿ ಜಲಾಶಯಕ್ಕೆ ಭೇಟಿ ಪರಿಶೀಲನೆ
ಸಭೆಯ ಪೂರ್ವದಲ್ಲಿ ಆಹಾರ, ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಸಚಿವರು ಹಾಗೂ ಬಾಗಲಕೋಟೆ ಜಿಲ್ಲಾ ಉಸ್ತುವಾರಿ ಸಚಿವರಾದ ಉಮೇಶ ಕತ್ತಿ ಅವರು ಆಲಮಟ್ಟಿಯ ಲಾಲಬಹದ್ದೂರ ಶಾಸ್ತ್ರೀ ಸಾಗರಕ್ಕೆ ಭೇಟಿ ನೀಡಿ ಜಲಾಶಯದಲ್ಲಿನ ಒಳ ಹಾಗೂ ಹೊರ ಹರಿವಿನ ಪ್ರಮಾಣವನ್ನು ವೀಕ್ಷಣೆ ಮಾಡುವದರ ಜೊತೆಗೆ ಸದ್ಯ ಆಲಮಟ್ಟಿ ಜಲಾಶಯದ ನೀರಿನ ಮಟ್ಟದ ಮಾಹಿತಿಯನ್ನು ಪಡೆದುಕೊಂಡರು.

ಬಾಗಲಕೋಟೆ :ಜಿಲ್ಲೆಯಲ್ಲಿ ಕೃಷ್ಣಾ, ಮಲಪ್ರಭಾ ಹಾಗೂ ಘಟಪ್ರಭಾ ನದಿಗಳಿಂದ ಉಂಟಾಗುವ ಪ್ರವಾಹ ನಿರ್ವಹಣೆಗೆ ಕ್ರಮಕೈಗೊಳ್ಳುವದರ ಜೊತೆಗೆ ಜನ ಮತ್ತು ಜಾನುವಾರುಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸುವ ಕಾರ್ಯವಾಗಬೇಕೆಂದು ಆಹಾರ, ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಸಚಿವರಾದ ಉಮೇಶ ಕತ್ತಿ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾ ಪಂಚಾಯತ ಸಭಾಭವನದಲ್ಲಿಂದು ಪ್ರವಾಹ ಮುಂಜಾಗ್ರತಾ ಕುರಿತು ಜರುಗಿದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ನೆರೆಯ ಮಹಾರಾಷ್ಟ್ರದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗುತ್ತಿರುವ ಹಿನ್ನಲೆಯಲ್ಲಿ ವಿವಿಧ ಜಲಾಶಯಗಳ ಒಳಹರಿವಿನ ಪ್ರಮಾಣ ಹೆಚ್ಚಾಗುತ್ತಿದೆ. ಹಿಡಕಲ್ ಜಲಾಶಯದಿಂದ 20096 ಕ್ಯೂಸೆಕ್ಸ್, ಹಿಪ್ಪರಗಿ ಜಲಾಶಯದಿಂದ 2.17 ಲಕ್ಷ ಕ್ಯೂಸೆಕ್ಸ್, ಆಲಮಟ್ಟಿಯಿಂದ 3 ಲಕ್ಷ ಕ್ಯೂಸೆಕ್ಸ್ ಹಾಗೂ ನವೀಲತೀರ್ಥದಿಂದ 15394 ಕ್ಯೂಸೆಕ್ಸ್ ನೀರು ಬಿಡಲಾಗುತ್ತಿದೆ. ಎಂದು ತಿಳಿಸಿದರು.

ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬಡುತ್ತಿರುವದರಿಂದ ಜಿಲ್ಲೆಯಲ್ಲಿ ಪ್ರವಾಹ ಉಂಟಾಗುವ ಗ್ರಾಮಗಳಲ್ಲಿನ ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಕ್ಕೆ ಕ್ರಮವಹಿಸಬೇಕು. ಬಾದಿತಗೊಳಗಾಗುವ ಜನರಿಗೆ ಬೇಕಾದ ಅಗತ್ಯ ಕಾಳಜಿ ಕೇಂದ್ರ ತೆರೆಯಲು ಸೂಚಿಸಿದರು. ಜಿಲ್ಲೆಯಲ್ಲಿ ಒಟ್ಟು 188 ಗ್ರಾಮಗಳು ಬಾಧಿತಗೊಳಗಾಗುತ್ತಿದ್ದು, ಆಯಾ ವಿಭಾಗದ ಉಪವಿಭಾಗಾಧಿಕಾರಿಗಳು ಆಯಾ ತಾಲೂಕಿನ ತಹಶೀಲ್ದಾರರು ಎಲ್ಲ ರೀತಿಯ ಸುರಕ್ಷತಾ ಕ್ರಮವಹಿಸಲು ಸೂಚಿಸಿದರು.

ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ ಮಾತನಾಡಿ ಜೂನ್‍ದಿಂದ ಜುಲೈ 23 ವರೆಗೆ ಜಿಲ್ಲೆಯಲ್ಲಿ ಸುರಿದ ಮಳೆಯಿಂದಾಗಿ 217 ಮನೆಗಳು, 12 ಜಾನುವಾರುಗಳು, 74.2 ಹೆಕ್ಟರ್ ಬೆಳೆ, 15 ಕಿ.ಮೀ ರಸ್ತೆ, 3 ಶಾಲೆ, 173 ವಿದ್ಯುತ್ ಪೋಲ್ ಹಾಗೂ 73 ಟ್ರಾನ್ಸ್‍ಫಾರ್ಮರ್‍ಗಳು ಹಾನಿಗೊಳಗಾಗಿವೆ. ಪ್ರವಾಹ ನಿರ್ವಹಣೆಗೆ ವಿಭಾಗ ಮತ್ತು ತಾಲೂಕಾ ಮಟ್ಟದಲ್ಲಿ ಸಭೆಗಳನ್ನು ಜರುಗಿಸಲಾಗಿದೆ. ಪ್ರವಾಹ ಪೀಡಿತ ಗ್ರಾಮಗಳಿಗೆ ತಾಲೂಕಾ ಮಟ್ಟದ ನೋಡಲ್ ಅಧಿಕಾರಿಗಳನ್ನು ಸಹ ನೇಮಿಸಲಾಗಿದೆ ಎಂದು ತಿಳಿಸಿದರು.

ಜಿಲ್ಲೆಯ ಎಲ ಗ್ರಾ.ಪಂ ಮಟ್ಟದಲ್ಲಿ ವಿಪತ್ತು ನಿರ್ವಹಣಾ ಯೋಜನೆ ಸಿದ್ದಪಡಿಸಲಾಗಿದೆ. ಜಲಾಶಯಗಳ ನೀರಿನ ಒಳ ಹಾಗೂ ಹೊರ ಹರಿವಿನ ಬಗ್ಗೆ ಕ್ಷಣ ಕ್ಷಣಕ್ಕೂ ಮಾಹಿತಿ ಪಡೆಯಲು ಮಹಾರಾಷ್ಟ್ರ ಹಾಗೂ ಬೆಳಗಾವಿ, ಬಾಗಲಕೋಟೆ ಜಿಲ್ಲೆಯ ಸಂಬಂಧಪಟ್ಟ ಅಧಿಕಾರಿಗಳನ್ನ ಒಳಗೊಂಡ ವಾಟ್ಸಪ್ ಗ್ರೂಪ್ ಮೂಲಕ ಮಾಹಿತಿ ಪಡೆಯಲಾಗುತ್ತಿದೆ. ಪ್ರತಿ ತಾಲೂಕು, ವಿಭಾಗ ಮಟ್ಟ ಹಾಗೂ ಜಿಲ್ಲಾಧಿಕಾರಿಗಳ ಕಾರ್ಯಾಲಯದಲ್ಲಿ ದಿನ 24 ಗಂಟೆಗಳ ತುರ್ತು ಸಹಾಯವಾಣಿ ಕೇಂದ್ರ ಸ್ಥಾಪಿಸಲಾಗಿದೆ.

ಜಿಲ್ಲೆಯಲ್ಲಿ ನುರಿತ ಈಜುಗಾರರು, ಹಾವು ಹಿಡಿಯುವವರು ಹಾಗೂ ಸ್ವಯಂ ಸೇವಕರನ್ನು ಗುರುತಿಸಲಾಗಿದೆ. 28 ನಾವೆಗಳು ಇದ್ದು ಅವುಗಳ ಪೈಕಿ 11 ದುರಸ್ಥಿಯಲ್ಲಿವೆ. ಸಚಿವರ ನಿರ್ದೇಶನದಂತೆ ಹೊಸ ಖರೀದಿಗೆ ಕ್ರಮವಹಿಸಲಾಗುವುದು. 4 ಹೊಸ ರೆಸ್ಕ್ಯೂ ಬೋಟ್, ತುರ್ತು ಅಗತ್ಯವಿರುವ ರಕ್ಷಣಾ ಸಾಮಗ್ರಿಗಳನ್ನು ಖರೀದಿಸಲು ಕ್ರಮವಹಿಸಲಾಗಿದೆ. ಗುರುತಿಸಿದ ಕಾಳಜಿ ಕೇಂದ್ರಗಳಲ್ಲಿ ಸಾಕಷ್ಟು ಪ್ರಮಾಣದಲ್ಲಿ ಸ್ಯಾನಿಟೈಜರ್, ಮಾಸ್ಕ್ ಹಾಗೂ ಗ್ಲೋಸ್‍ಗಳ ದಾಸ್ತಾನು ಇರಿಸಲಾಗಿದೆ. ಅಗತ್ಯ ಆಹಾರದಾನ್ಯ, ಸಕ್ಕರೆ, ಉಪ್ಪು, ಹಾಲಿನ ಪೌಡರ ಸಂಗ್ರಹಿಸಿ ಇಡಲಾಗಿದೆ ಎಂದು ತಿಳಿಸಿದರು.

ಜಿಲ್ಲಾ ಜಂಟಿ ಕೃಷಿ ನಿರ್ದೇಶಕಿ ಡಾ.ಚೇತನಾ ಪಾಟೀಲ ಮಾತನಾಡಿ ಪ್ರಸಕ್ತ ಸಾಲಿನಲ್ಲಿ ಸರಾಸರಿ ವಾಡಿಕೆಯಂತೆ 580.80 ಮೀ.ಮೀ ಇದ್ದು, ಜನವರಿಯಿಂದ ಜುಲೈ 23 ವರೆಗೆ 208.8 ಮೀ.ಮೀ ವಾಡಿಕೆ ಮಳೆಗೆ ಎದುರಾಗಿ 277.5 ಮೀ.ಮೀ ಮಳೆಯಾಗಿರುತ್ತದೆ. ಸರಾಸರಿ 32.9% ರಷ್ಟು ಹೆಚ್ಚಿಗೆ ಮಳೆಯಾಗಿರುತ್ತದೆ ಎಂದು ತಿಳಿಸಿದರು. ಕಳೆದ ಬೆಳೆಹಾನಿ ಕುರಿತು ಚರ್ಚೆ ಸಂದರ್ಭದಲ್ಲಿ ಸಭೆಗೆ ಬರುವಾಗ ಸಂಪೂರ್ಣ ಮಾಹಿತಿಯೊಂದಿಗೆ ಬರಬೇಕೆಂದು ಶಾಸಕ ವೀರಣ್ಣ ಚರಂತಿಮಠ ತಿಳಿಸಿದರು. ಕೋವಿಡ್ 3ನೇ ಅಲೆ ನಿಯಂತ್ರಣಕ್ಕೆ ಎಲ್ಲ ರೀತಿಯ ಸಿದ್ದತೆ ಮಾಡಿಕೊಳ್ಳುವಂತೆ ತಿಳಿಸಲಾಯಿತು.

ಸಭೆಯಲ್ಲಿ ರಾಜ್ಯ ಕೈಮಗ್ಗ ಅಭಿವೃದ್ದಿ ನಿಗಮದ ಅಧ್ಯಕ್ಷ ಸಿದ್ದು ಸವದಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ ಜಗಲಾಸರ, ಜಿ.ಪಂ ಉಪಕಾರ್ಯದರ್ಶಿ ಅಮರೇಶ ನಾಯಕ, ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ, ಉಪವಿಭಾಗಾಧಿಕಾರಿ ಎಂ.ಗಂಗಪ್ಪ ಸೇರಿದಂತೆ ವಿವಿಧ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

Be the first to comment

Leave a Reply

Your email address will not be published.


*