ಜಿಲ್ಲಾ ಸುದ್ದಿಗಳು
ಬಾಗಲಕೋಟೆ: ಗ್ರಾಮೀಣ ಭಾಗದಲ್ಲಿ ಪ್ರತಿಯೊಂದು ಮನೆಗೂ ಕುಡಿಯುವ ನೀರಿನ ನಲ್ಲಿ ಸಂಪರ್ಕ ನೀಡುವ ಜಲ ಜೀವನ್ ಮಿಷನ್ ಯೋಜನೆಯ ಸಮರ್ಪಕ ಅನುಷ್ಠಾನಕ್ಕೆ ಸಮುದಾಯ ವಂತಿಗೆ ಕುರಿತು ಜನರಲ್ಲಿ ಜಾಗೃತಿ ಮೂಡಿಸುವುದು ಅಗತ್ಯವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ಹಾಗೂ ಜಿ.ಪಂ ಆಡಳಿತಾಧಿಕಾರಿ ಶಿವಯೋಗಿ ಕಳಸದ ತಿಳಿಸಿದರು.
ಜಿಲ್ಲಾ ಪಂಚಾಯತ ಸಿಇಓ ಕಚೇರಿಯಲ್ಲಿಂದು ವಿಡಿಯೋ ಸಂವಾದದ ಮೂಲಕ ಜರುಗಿದ ಜಲಜೀವನ ಮಿಷನ್ ಯೋಜನೆಯ ಅನುಷ್ಠಾನದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಜಲ ಜೀವನ ಮಿಷನ್ ಒಂದು ಸಂಪೂರ್ಣ ಸಮುದಾಯ ಆಧಾರಿತ ಯೋಜನೆಯಾಗಿದ್ದು, ಸ್ಥಳೀಯ ಗ್ರಾಮಸ್ಥರು ಸಕ್ರಿಯವಾಗಿ ಪಾಲ್ಗೊಂಡು ಸಂಪೂರ್ಣ ಸಹಕಾರ ಪಡೆಯುವ ಅಗತ್ಯವಿದೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಪ್ರಸ್ತುತ ಮೊದಲನೇ ಹಂತದಲ್ಲಿ 2020-21ನೇ ಸಾಲಿನಲ್ಲಿ ಒಟ್ಟು 337 ಗ್ರಾಮಗಳಿಗೆ ಕಾರ್ಯಾತ್ಮಕ ನಲ್ಲಿ ನೀರನ್ನು ಒದಗಿಸುವ ಕಾಮಗಾರಿಗಳು ಪ್ರಗತಿಯಲ್ಲಿದ್ದು, ಅದರಲ್ಲಿ 65 ಕಾಮಗಾರಿಗಳು ಮುಕ್ತಾಯದ ಹಂತದಲ್ಲಿವೆ. ಇದರಿಂದ ಸುಮಾರು 1.56 ಲಕ್ಷ ಗ್ರಾಮೀಣ ಪ್ರದೇಶದ ಮನೆಗಳಿಗೆ 55 ಲೀಟರ್ ಶುದ್ದ ಹಾಗೂ ಸುರಕ್ಷಿತ ನೀರನ್ನು ಒದಗಿಸಲು ಕ್ರೀಯಾ ಯೋಜನೆಗೆ ಅನುಮೋದನೆಯನ್ನು ಪಡೆಯಲಾಗಿದೆ. ಅದರಂತೆ 2ನೇ ಹಂತದಲ್ಲಿ ಒಟ್ಟು 77 ಗ್ರಾಮಗಳಲ್ಲಿ ಕಾಮಗಾಗಿಯನ್ನು ಕೈಗೊಳ್ಳಲಾಗುತ್ತಿದ್ದು, ಅದರಲ್ಲಿ 26 ಸಾವಿರ 2022-23ನೇ ಸಾಲಿನ ಅಂತ್ಯದಲ್ಲಿ ಎಲ್ಲ 414 ಗ್ರಾಮಗಳ ಪ್ರತಿ ಮನೆಗೆ ನಲ್ಲಿ ನೀರು ಸಂಪರ್ಕ ಕಲ್ಪಿಸುವ ಗುರಿಯನ್ನು ಹೊಂದಲಾಗಿದ್ದು, ಅನುಷ್ಠಾನಕ್ಕೆ ಕ್ರಮವಹಿಸಲು ತಿಳಿಸಿದರು.
ಯೋಜನೆಯ ಕುರಿತು ಗ್ರಾಮಸ್ಥರಲ್ಲಿ ಜಾಗೃತಿಯನ್ನು ಮೂಡಿಸಲು ವಿನ್ ಸೋಸೈಟಿ ಅನುಷ್ಠಾನ ನೆರವು ಸಂಸ್ಥೆಯ ನೇಮಕ ಮಾಡಲಾಗಿದೆ. ಗ್ರಾಮ ಮಟ್ಟದಲ್ಲಿ ಯೋಜನೆಯ ಕುರಿತು ವಿವಿಧ ಆಯ್.ಇ.ಸಿ ಹಾಗೂ ಹೆಚ್.ಆರ್.ಡಿ ಚಟುವಟಿಕೆಗಳಾದ ಬೀದಿ ನಾಟಕಗಳು, ಅಧಿಕಾರಿಗಳಿಗೆ ಕಾರ್ಯಗಾರ, ಶಾಲೆಗಳಲ್ಲಿ ಕಿರು ಚಿತ್ರಗಳ ಪ್ರದರ್ಶನ, ವಿಶೇಷ ಗ್ರಾಮ ಸಭೆಗಳು, ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್, ಹಾಗೂ ಗ್ರಾಮ ಪಂಚಾಯತ್ ಸದಸ್ಯರಿಗೆ ಹಾಗೂ ಗ್ರಾಮ ಮಟ್ಟದ ಗ್ರಾಮೀಣ ನೀರು ಮತ್ತು ನೈರ್ಮಲ್ಯ ಸಮಿತಿಯ ಸದಸ್ಯರಿಗೆ ತರಭೇತಿಯನ್ನು ನೀಡುವದು, ತಳ ಹಂತದ ಕಾರ್ಮಿಕರಿಗೆ ಹಾಗೂ ಕಾರ್ಯಕರ್ತರಿಗೆ ತರಬೇತಿ ನೀಡಲು ತಿಳಿಸಿದರು.
ತಾಲೂಕುವಾರು ಜಲ ಜೀವನ್ ಮಿಷನ್ ಯೋಜನೆ ಅನುಷ್ಠಾನದ ಕುರಿತು ಆಯಾ ತಾಲೂಕಿನ ಕಾರ್ಯನಿರ್ವಾಹಕ ಅಧಿಕಾರಿಗಳಿಂದ ಮಾಹಿತಿ ಪಡೆದು ಅಧಿಕಾರಿಗಳು ಯೋಜನೆಯಡಿ ಆಯ್ಕೆಯಾದ ಗ್ರಾಮಗಳಿಗೆ ತೆರಳಿ ಕಾಮಗಾರಿ ಪರಿಶೀಲಿಸಬೇಕು. ಯೋಜನೆ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯವಾಗಬೇಕು. ಜವಾಬ್ದಾರಿ ವಹಿಸಿ ಕೆಲಸ ಮಾಡುವ ಮೂಲಕ ಪ್ರತಿ ಮನೆಗೂ ನಲ್ಲಿ ಜೋಡನೆಗೆ ಕ್ರಮವಹಿಸಲು ತಿಳಿಸಿದರು. ಮೇಲುಸ್ತುವಾರಿಯಾಗಿ ಜಿ.ಪಂ ಉಪ ಕಾರ್ಯದರ್ಶಿಗಳು ವಹಿಸಲು ತಿಳಿಸಿದರು.
ಸಭೆಯಲ್ಲಿ ಜಿ.ಪಂ ಉಪ ಕಾರ್ಯದರ್ಶಿ ಅಮರೇಶ ನಾಯಕ, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಾದ ಪುರೋಹಿತ, ಜಗಲಿಮಠ, ಮರೋಳ, ಕಿರಣ ಗೋರ್ಪಡೆ, ಜಿ.ಪಂ ಮುಖ್ಯ ಲೆಕ್ಕಾಧಿಕಾರಿ ಉಕ್ಕಲಿ ಸೇರಿದಂತೆ ಆಯಾ ತಾಲೂಕಿನ ಕಾರ್ಯನಿರ್ವಾಹಕ ಅಧಿಕಾರಿಗಳು ಉಪಸ್ಥಿತರಿದ್ದರು.
Be the first to comment