ಜಿಲ್ಲಾ ಸುದ್ದಿಗಳು
ಗೋಕರ್ಣ:
ಜಿಲ್ಲೆಯಲ್ಲಿ ಕಳೆದೆರಡು ಮೂರು ದಿನಗಳಿಂದ ಅಬ್ಬರದ ಮಳೆ ಸುರಿಯುತ್ತಿದ್ದು, ಗೋಕರ್ಣದ ಪ್ರಸಿದ್ಧ ಮಹಾಬಲೇಶ್ವರ ದೇವಾಲಯದ ಆತ್ಮಲಿಂಗ ಇರುವ ಗರ್ಭಗುಡಿಗೆ ನೀರು ತುಂಬಿ, ಆತ್ಮಲಿಂಗ ಜಲಾವೃತಗೊಂಡಿದೆ.
ಆತ್ಮಲಿಂಗ ಜಲಾವೃತವಾಗಿರುವುದರಿಂದ ದಿನನಿತ್ಯ ಪೂಜಾ ವಿಧಾನಕ್ಕೆ ಸ್ವಲ್ಪ ಅಡ-ತಡೆಯುಂಟಾಗಿ ವಿಳಂಬವಾಗಿದೆ. ಈ ಘಟನೆ ಕುರಿತಂತೆ ತಕ್ಷಣ ದೇವಾಲಯದ ಸಿಬ್ಬಂದಿ ಮೇಲಾಧಿಕಾರಿಗಳಿಗೆ ಮಾಹಿತಿ ನೀಡಿದರು. ನಂತರ ಸಿಬ್ಬಂದಿಗಳು ದೇವಾಲಯವನ್ನು ಸ್ವಚ್ಛಗೊಳಿಸಿದ್ದಾರೆ.
ಪ್ರತಿ ವರ್ಷ ಮಳೆಗಾಲ ಪೂರ್ವದಲ್ಲಿ ದೇವಾಲಯದ ತೀರ್ಥ ಅಭಿಷೇಕದ ನೀರು ಹೋಗುವ ಸೋಮಸೂತ್ರ ನಾಲಾವನ್ನು ಸ್ವಚ್ಛಗೊಳಿಸಲಾಗುತ್ತದೆ. ಆದರೆ, ಈ ವರ್ಷ ಸೋಮಸೂತ್ರ ನಾಲಾವನ್ನು ಸ್ವಚ್ಛಗೊಳಿಸಿಲ್ಲ. ಹೀಗಾಗಿ ನೀರು ವಾಪಸ್ ಬರುತ್ತಿದೆ ಎನ್ನಲಾಗಿದೆ.
ಗರ್ಭಗುಡಿಯ ನೀರು ಹೋಗುವ ಭಾಗದ ಸ್ಥಳವನ್ನು ಕೂಡ ಬಂದ್ ಮಾಡಲಾಗಿದೆ ಎನ್ನಲಾಗಿದ್ದು, ಜಲವಡೆದಾಗ ನೀರು ನಾಲದಲ್ಲಿ ಹೋಗದೇ ಹಿಮ್ಮುಖವಾಗಿ ಚಲಿಸಿ ಗರ್ಭಗುಡಿಗೆ ಬರುತ್ತಿದೆ ಎಂಬುದು ಕೆಲ ಸಾರ್ವಜನಿಕರ ದೂರು. ಇದಕ್ಕೊಂದು ಶಾಶ್ವತ ಪರಿಹಾರ ಒದಗಿಸಿಕೊಡಬೇಕೆಂದು ಭಕ್ತರು ಆಗ್ರಹಿಸಿದ್ದಾರೆ.
Be the first to comment