ರೈತರಿಂದಲೇ ಸ್ವಯಂ ಬೆಳೆ ಸಮೀಕ್ಷೆ

ವರದಿ: ಶರಣಪ್ಪ ಹೆಳವರ ಬಾಗಲಕೋಟೆ

ಜಿಲ್ಲಾ ಸುದ್ದಿಗಳು

ಬಾಗಲಕೋಟೆ:ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನ ಬೆಳೆ ಸಮೀಕ್ಷೆ ಯೋಜನೆಯು ಪ್ರಾರಂಭವಾಗಿದ್ದು, ಈ ಯೋಜನೆ ಅನ್ವಯ ಜಿಲ್ಲೆಯ ರೈತರು ತಮ್ಮ ಜಮೀನಿನ ಸರ್ವೆ ನಂಬರ್, ಹಿಸ್ಸಾ ನಂಬರ್‍ವಾರು ತಾವು ಬೆಳೆದ ಕೃಷಿ ಬೆಳೆ ಹಾಗೂ ಬಹುವಾರ್ಷಿಕ ತೋಟಗಾರಿಕೆ, ಅರಣ್ಯ, ಇತರೆ ಬೆಳೆ ಮಾಹಿತಿ ಛಾಯಾ ಚಿತ್ರ ಸಹಿತ ರೈತರು ಅಂಡ್ರ್ಯಾಡ್ ಮೊಬೈಲ್ ಮೂಲಕ ಗೂಗಲ್ ಪ್ಲೇಸ್ಟೋರ್‍ನಲ್ಲಿ ಮುಂಗಾರು ಬೆಳೆ ಸಮೀಕ್ಷೆ 2021 ಆ್ಯಪ್‍ನ್ನು ಡೌನ್‍ಲೋಡ್ ಮಾಡಿಕೊಂಡು ಸ್ವತಃ ಬೆಳೆ ಸಮೀಕ್ಷೆ ಮಾಹಿತಿಯನ್ನು ದಾಖಲಿಸಬಹುದಾಗಿದೆ.

ಮುಂಗಾರು ಬೆಳೆ ಸಮೀಕ್ಷೆ 2021-22 ಮೊಬೈಲ್ ಆ್ಯಪ್‍ನ್ನು ಗೂಗಲ್ ಪ್ಲೇಸ್ಟೋರ್ ನಿಂದ ಡೌನ್‍ಲೋಡ್ ಮಾಡಿಕೊಂಡು ಆಧಾರ ಕ್ಯೂಆರ್ ಕೋಡ್‍ನ್ನು ಸ್ಕ್ಯಾನ್ ಮಾಡಿ ಮೊಬೈಲ್ ಸಂಖ್ಯೆ ನಮೂದಿಸಿ ಸಕ್ರಿಯಗೊಳಿಸುವುದರಿಂದ ಮೊಬೈಲ್ ಸಂಖ್ಯೆಗೆ ಒಟಿಪಿ ಬರಲಿದ್ದು, ಒಟಿಪಿಯನ್ನು ದಾಖಲಿಸಬೇಕು. ನಂತರ ಜಿಲ್ಲೆ, ತಾಲ್ಲೂಕು, ಹೋಬಳಿ, ಗ್ರಾಮ, ಸರ್ವೇ ನಂಬರ್, ಮಾಲೀಕರ ಹೆಸರು ಆಯ್ಕೆಮಾಡಿ ಕ್ಷೇತ್ರವನ್ನು ನಮೂದಿಸಿ ಸರ್ವೇ ನಂಬರಿನ ಗಡಿರೇಖೆ ಒಳಗೆ ನಿಂತು ಬೆಳೆಗಳ ವಿವರ ದಾಖಲಿಸಿ ಛಾಯಾ ಚಿತ್ರ ತೆಗೆದು ಅಪಲೋಡ್ ಮಾಡಬಹುದು.

ಬೆಳೆ ಸಮೀಕ್ಷೆಯ ದತ್ತಾಂಶವನ್ನು ಕೃಷಿ, ತೋಟಗಾರಿಕೆ, ರೇಷ್ಮೆ ಬೆಳೆಗಳ ವಿಸ್ತೀರ್ಣ ಲೆಕ್ಕ ಹಾಕುವ ಕಾರ್ಯದಲ್ಲಿ, ಪ್ರಕೃತಿ ವಿಕೋಪದ ಸಂದರ್ಭದಲ್ಲಿ ಬೆಳೆ ಹಾನಿ ಕುರಿತು ಅರ್ಹ ಫಲಾನುಭವಿಗಳ ಪಟ್ಟಿ ತಯಾರಿಸುವಲ್ಲಿ, ಬೆಳೆ ವಿಮಾ ಯೋಜನೆ ಅಡಿ ಸರ್ವೆ ನಂಬರ್‍ವಾರು ಬೆಳೆ ಪರಿಶೀಲನೆ ಹಾಗೂ ಬೆಳೆ ಕಟಾವು ಪ್ರಯೋಗಳನ್ನು ಕೈಗೊಳ್ಳಲು ಸರ್ವೆ ನಂಬರ್ ಆಯ್ಕೆ ಮಾಡಲು, ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಅರ್ಹ ಫಲಾನುಭವಿಗಳನ್ನು ಗುರುತಿಸಲು, ಬೆಳೆ ಮಾನದಂಡಗಳಿಗೆ ಅನುಗುಣವಾಗಿ ಕೃಷಿ, ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆಗಳ ಫಲಾನುಭವಿ ಆಧಾರಿತ ಯೋಜನೆ ಅನುಷ್ಠಾನಕ್ಕಾಗಿ ಹಾಗೂ ಆರ್.ಟಿ.ಸಿ.ಯಲ್ಲಿ ಬೆಳೆ ವಿವರ ದಾಖಲಾತಿಗಾಗಿ ಬಳಸ ಬಹುದಾಗಿದೆ.

ಜಿಲ್ಲೆಯ ರೈತ ಬಾಂಧವರು ತಪ್ಪದೇ ತಮ್ಮ ಜಮೀನಲ್ಲಿರುವ ಬೆಳೆಗಳ ವಿವರವನ್ನು ದಾಖಲಿಸಬೇಕು ಹಾಗೂ ಗ್ರಾಮಗಳಲ್ಲಿರುವ ವಿದ್ಯಾವಂತ ಯುವಕರು ರೈತರ ಬೆಳೆ ಸಮೀಕ್ಷೆ ಆ್ಯಪ್ ಡೌನ್‍ಲೋಡ್ ಮಾಡಿಕೊಂಡು ತಮ್ಮ ಹಳ್ಳಿಯ ರೈತ ಸಮೂದಾಯದ ಬೆಳೆ ಮಾಹಿತಿಯನ್ನು ದಾಖಲಿಸಬಹುದು. ಇಲ್ಲವಾದಲ್ಲಿ ಸರ್ಕಾರದ ಯೋಜನೆಗಳಿಂದ ವಂಚಿತರಾಗುವ ಸಾದ್ಯತೆ ಇರುತ್ತದೆ. ಆದ್ದರಿಂದ ಜಿಲ್ಲೆಯ ರೈತ ಬಾಂಧವರು ಈ ಯೋಜನೆಯ ಸದುಪಯೋಗಯನ್ನು ಪಡೆದುಕೊಳ್ಳಬೇಕು.

ಹೆಚ್ಚಿನ ಮಾಹಿತಿಗಾಗಿ ಸಂಬಂಧಪಟ್ಟ ಗ್ರಾಮದ ಖಾಸಗಿ ನಿವಾಸಿ (ಪಿ.ಆರ್), ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿಗಳು, ಕಂದಾಯ ನಿರೀಕ್ಷಕರು, ಗ್ರಾಮ ಲೆಕ್ಕಾಧಿಕಾರಿಗಳು, ಸಹಾಯಕ ತೋಟಗಾರಿಕೆ ಅಧಿಕಾರಿಗಳು, ರೇಷ್ಮೆ ಮತ್ತು ನೀರಾವರಿ ಇಲಾಖೆಯ ಅಧಿಕಾರಿಗಳನ್ನು ಸಂಪರ್ಕಿಸಬಹುದಾಗಿದೆ.

Be the first to comment

Leave a Reply

Your email address will not be published.


*