ನೊಂದಾಯಿತ ಕಟ್ಟಡ ಕಾರ್ಮಿಕರಿಗೆ ಆಹಾರಧಾನ್ಯಗಳ ಕಿಟ್ ವಿತರಣೆ

ವರದಿ: ಶರಣಪ್ಪ ಹೆಳವರ ಬಾಗಲಕೋಟೆ

ಜಿಲ್ಲಾ ಸುದ್ದಿಗಳು

ಬಾಗಲಕೋಟೆ: ಕೋವಿಡ್ ಹಿನ್ನಲೆಯಲ್ಲಿ ಸಂಕಷ್ಟಕ್ಕೆ ಒಳಗಾದ ವಿವಿಧ ವಲಯದ ನೊಂದಾಯಿತ ಕಾರ್ಮಿಕರಿಗೆ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಿಂದ ನೀಡಲಾದ ಆಹಾರಧಾನ್ಯಗಳ ಕಿಟ್‍ಗಳನ್ನು ಶಾಸಕ ವೀರಣ್ಣ ಚರಂತಿಮಠ ಮಂಗಳವಾರ ವಿತರಿಸಿದರು.

ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್‍ನಲ್ಲಿ ಜಿಲ್ಲಾಡಳಿತ ಹಾಗೂ ಕಾರ್ಮಿಕ ಇಲಾಖೆಯಿಂದ ಹಮ್ಮಿಕೊಂಡ ಆಹಾರಧಾನ್ಯಗಳ ಕಿಟ್ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ನಂತರ ಮಾತನಾಡಿದ ಅವರು ಕಳೆದ ಒಂದೂವರೇ ವರ್ಷದಲ್ಲಿ ಕೋವಿಡ್ ಹಿನ್ನಲೆಯಲ್ಲಿ ದುಡಿಯುವ ವರ್ಗ ಕೆಲಸ ಕಳೆದು ಕೊಂಡಿದ್ದು, ಸಂಕಷ್ಟಕ್ಕೆ ಒಳಗಾಗಿದ್ದಾರೆ. ಅಂತಹ ಕಾರ್ಮಿಕರಿಗೆ ಆಹಾರಧಾನ್ಯಗಳ ಕಿಟ್ ವಿತರಿಸಲಾಗುತ್ತಿದೆ. ಅಲ್ಲದೇ ದುಡಿಯುವ ಕಾರ್ಮಿಕರಿಗೆ ಸರಕಾರ ವಿಶೇಷ ಪ್ಯಾಕೇಜ ಘೋಷಿಸಿದೆ ಎಂದು ತಿಳಿಸಿದರು.
ಬಾಗಲಕೋಟೆ ತಾಲೂಕಿನಲ್ಲಿ 2500 ನೋಂದಾಯಿತ ಕಾರ್ಮಿಕರು ಇದ್ದು, ಅವರೆಲ್ಲರಿಗೂ ಆಹಾರಧಾನ್ಯಗಳ ಕಿಟ್‍ಗಳನ್ನು ವಿತರಿಸಲಾಗುತ್ತಿದ್ದು, ಸಾಂಕೇತಿಕವಾಗಿ ಕೆಲವೊಂದು ಕಾರ್ಮಿಕರಿಗೆ ವಿತರಿಸಲಾಗಿದೆ. ಮುಂದಿನ ದಿನಗಳಲ್ಲಿ ಕೊರೊನಾ ಕಡಿಮೆಯಾಗಿ ದುಡಿಯುವ ವರ್ಗಕ್ಕೆ ಕೆಲಸ ಮಾಡಲು ಅನುಕೂಲವಾಗಲಿ ಎಂದು ಪ್ರಾರ್ಥಿಸಿದರು.

ಇದೇ ಸಂದರ್ಬದಲ್ಲಿ ಸಾಂಕೇತಿಕವಾಗಿ 40 ಜನ ಕಾರ್ಮಿಕರಿಗೆ ಆಹಾರಧಾನ್ಯಗಳ ಕಿಟ್‍ಗಳನ್ನು ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ, ಜಿಲ್ಲಾ ಕಾರ್ಮಿಕ ಅಧಿಕಾರಿ ಬಿ.ಆರ್.ಜಾದವ, ಜಿಲ್ಲಾ ಬಾಲಕಾರ್ಮಿಕ ಯೋಜನಾ ಸಂಸ್ಥೆಯ ಯೋಜನಾ ನಿರ್ದೇಶಕ ಸುಧಾಕರ ಬಡಿಗೇರ, ಕಾರ್ಮಿಕ ನಿರೀಕ್ಷಕ ಅವಿನಾಶ ನಾಯಕ, ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿಯ ಶಿವಾನಂದ ಮಾದರ ಸೇರಿದಂತೆ ಇತರರು ಉಪಸ್ಥಿತರಿದ್ದರು.

Be the first to comment

Leave a Reply

Your email address will not be published.


*