ಜಿಲ್ಲಾ ಸುದ್ದಿಗಳು
ವಿಮೆಗೆ ಒಳಪಡುವ ಬೆಳೆಗಳ ವಿವರ:
ಹೆಸರು, ಉದ್ದು, (ಮಳೆ ಆಶ್ರಿತ), ಜೋಳ, ಸೊಯಾ ಅವರೆ (ನೀರಾವರಿ) ಬೆಳೆಗಳಿಗೆ ವಿಮಾ ಕಂತು ಪಾವತಿಗೆ ಜುಲೈ 15 ಕೊನೆಯ ದಿನವಾದರೆ,ಕೆಂಪು ಮೆಣಸಿಕಾಯಿ, ತೊಗರಿ, ಸಜ್ಜೆ, ಶೇಂಗಾ, ಮುಸುಕಿನ ಜೋಳ (ನೀರಾವರಿ), ಸೂರ್ಯಕ್ರಾಂತಿ, ಸಜ್ಜೆ, ಎಳ್ಳು, ಶೇಂಗಾ, ಜೋಳ, ತೊಗರಿ, ಹುರುಳಿ, ಅರಿಶಿಣ, ಮುಸುಕಿನ ಜೋಳ (ಮಳೆ ಆಶ್ರಿತ) ಬೆಳೆಗಳಿಗೆ ಜುಲೈ 31 ಕೊನೆಯ ದಿನವಾಗಿದೆ. ಕೆಂಪು ಮೆಣಸಿನಕಾಯಿ, ಈರುಳ್ಳಿ (ಮಳೆ ಆಶ್ರಿತ), ಸೂರ್ಯಕ್ರಾಂತಿ, ಈರುಳ್ಳಿ (ನೀರಾವರಿ) ಬೆಳೆಗಳಿಗೆ ವಿಮಾ ಕಂತು ಪಾವತಿಗೆ ಆಗಸ್ಟ 16 ಆಗಿದ್ದಾನ.
ಬಾಗಲಕೋಟೆ :ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿಗೆ ಕರ್ನಾಟಕ ರೈತ ಸುರಕ್ಷಾ ಫಸಲ್ ಭೀಮಾ ಯೋಜನೆಯಡಿ ಜಿಲ್ಲೆಯ 9 ತಾಲೂಕುಗಳಲ್ಲಿ 4 ಮುಖ್ಯ ಬೆಳೆಗಳನ್ನು ಗ್ರಾಮ ಪಂಚಾಯತಿ ಮಟ್ಟಕ್ಕೆ ಹಾಗೂ ಉಳಿದ ಬೆಳೆಗಳನ್ನು ಹೋಬಳಿ ಮಟ್ಟದಲ್ಲಿ ಅನುಷ್ಠಾನಗೊಳಿಸಲಾಗುತ್ತಿದ್ದು, ಜಿಲ್ಲೆಯಾದ್ಯಂತ ನೊಂದಣಿ ಪ್ರಕ್ರಿಯೆ ಪ್ರಾರಂಭಿಸಲಾಗಿದೆ ಎಂದು ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ ತಿಳಿಸಿದ್ದಾರೆ.
ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಬುಧವಾರ ಫಸಲ್ ಬಿಮಾ ಯೋಜನೆಯ ಜಿಲ್ಲಾ ಮಟ್ಟದ ಅನುಷ್ಠಾನ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಅಧಿಸೂಚಿತ ಬೆಳೆಗೆ ಬೆಳೆಸಾಲ ಪಡೆದ ರೈತರಿಗೆ ಈ ಯೋಜನೆಯು ಕಡ್ಡಾಯವಾಗಿದೆ. ಒಂದು ವೇಳೆ ಬೆಳೆಸಾಲ ಪಡೆದ ರೈತರು ಫಸಲ್ ಭೀಮಾ ಯೋಜನೆಯಡಿ ನೊಂದಣಿಗೆ ಇಚ್ಚೆಪಡದೆ ಇದ್ದಲ್ಲಿ, ಈ ಬಗ್ಗೆ ಬ್ಯಾಂಕಿನ ವ್ಯವಸ್ಥಾಪಕರಿಗೆ ಬೆಳೆ ನೋಂದಣಿ ಅಂತಿಮ ದಿನಾಂಕಕ್ಕಿಂತ 7 ದಿನಗಳ ಮುಂಚಿತವಾಗಿ ಲಿಖಿತವಾಗಿ ಮುಚ್ಚಳಿಕೆ ಪತ್ರವನ್ನು ನೀಡಿದಲ್ಲಿ ಅಂತಹ ರೈತರನ್ನು ಬೆಳೆವಿಮೆ ಯೋಜನೆಯಿಂದ ಕೈಬಿಡಲಾಗುವುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಬೆಳೆಸಾಲ ಪಡೆಯದ ರೈತರಿಗೆ ಬೆಳೆವಿಮೆ ಯೋಜನೆಯು ಐಚ್ಛಿಕವಾಗಿರುತ್ತದೆ. ಪ್ರಸಕ್ತ ಸಾಲಿನಲ್ಲಿ ಜಿಲ್ಲೆಗೆ ಬಜಾಜ ಅಲಿಯಾಂಜ ಜಿ.ಐ.ಸಿ. ವಿಮಾ ಕಂಪನಿ ಆಯ್ಕೆಯಾಗಿದ್ದು, ಆಸಕ್ತ ರೈತರು ಕೊನೆಯ ದಿನಾಂಕದವರೆಗೆ ಕಾಯದೆ ಅಧಿಸೂಚಿತ ಬೆಳೆಗೆ ಹತ್ತಿರದ ಬ್ಯಾಂಕಿನಲ್ಲಿ ವಿಮಾ ಕಂತು ತುಂಬಿ ಬೆಳೆಗಳಿಗೆ ವಿಮೆಗೆ ಒಳಪಡಿಸಬೇಕು. ಮುಂಗಾರು ಹಂಗಾಮಿನಲ್ಲಿ ಆಹಾರ ಬೆಳೆಗಳಿಗೆ ಬೆಳೆ ವಿಸ್ತೀರ್ಣಕ್ಕೆ ತಕ್ಕಂತೆ ಬೆಳೆ ವಿಮಾ ಕಂತಿನ ಶೇಕಡಾ 2 ರಷ್ಟು ಹಾಗೂ ವಾಣಿಜ್ಯ ಬೆಳೆಗಳಿಗೆ ಬೆಳೆ ವಿಮಾ ಕಂತಿನ ಶೇಕಡಾ 5 ರಷ್ಟು ರೈತರು ಪಾವತಿಸಬೇಕಾಗಿರುತ್ತದೆ ಎಂದು ತಿಳಿಸಿದರು.
ಸ್ಥಳೀಯ ಗಂಡಾಂತರ ಕಾರಣಗಳಿಂದ ಬೆಳೆ ನಷ್ಟ ಸಂಭವಿಸಿದರೆ, ಬೆಳೆ ವಿಮೆ ಮಾಡಿಸಿರುವ ರೈತರು ಈ ಬಗ್ಗೆ ನೇರವಾಗಿ ಸಂಬಂಧಪಟ್ಟ ಅನುಷ್ಠಾನಗೊಳಿಸುವ ವಿಮಾ ಸಂಸ್ಥೆಗಳ ಕಛೇರಿಗಳಿಗೆ ಅಥವಾ ಹಣಕಾಸು ಸಂಸ್ಥೆ ಅಥವಾ ಕೃಷಿ, ತೋಟಗಾರಿಕೆ ಇಲಾಖೆ ಮೂಲಕ ತಕ್ಷಣ ಸೂಚನೆ ನೀಡತಕ್ಕದ್ದು. ಇಂತಹ ಸಂದರ್ಭದಲ್ಲಿ ವಿಮೆ ಮಾಡಿಸಿದ ಬೆಳೆಯ ವಿವರಗಳನ್ನು, ಹಾನಿಯ ವ್ಯಾಪ್ತಿ ಹಾಗೂ ಹಾನಿಗೆ ಕಾರಣಗಳನ್ನು 72 ಗಂಟೆಗಳೊಳಗಾಗಿ ತಿಳಿಸತಕ್ಕದ್ದು.
ಈ ಯೋಜನೆಯಡಿ 2021ರ ಮುಂಗಾರು ಹಂಗಾಮಿನಲ್ಲಿ ಕಟಾವಿನ ನಂತರ ಬೆಳೆಯನ್ನು ಜಮೀನಿನಲ್ಲೆ ಒಣಗಲು ಬಿಟ್ಟಂತಹ ಸಂದರ್ಭದಲ್ಲಿ ಕಟಾವು ಮಾಡಿದ ಎರಡು ವಾರಗಳೊಳಗೆ (ಹದಿನಾಲ್ಕು ದಿನಗಳು) ಚಂಡಮಾರುತ, ಚಂಡಮಾರುತ ಸಹಿತ ಮಳೆ ಮತ್ತು ಅಕಾಲಿಕ ಮಳೆಯಿಂದಾಗಿ ಬೆಳೆ ನಾಶವಾದರೆ ವೈಯಕ್ತಿಕವಾಗಿ ವಿಮಾ ಸಂಸ್ಥೆಯು ನಷ್ಟ ನಿರ್ಧಾರ ಮಾಡಿ ಬೆಳೆ ನಷ್ಟ ಪರಿಹಾರವನ್ನು ಇತ್ಯರ್ಥಪಡಿಸಲು ರಾಜ್ಯದ ಎಲ್ಲಾ ಜಿಲ್ಲೆಗಳನ್ನು ಒಳಪಡಿಸಲಾಗಿದ್ದು, ಇದರ ಸದುಪಯೋಗ ರೈತರು ಪಡೆದುಕೊಳ್ಳಲು ತಿಳಿಸಿದರು.
ಜಿಲ್ಲಾ ಕೃಷಿ ಜಂಟಿ ನಿರ್ದೇಶಕಿ ಡಾ.ಚೇತನಾ ಪಾಟೀಲ ಮಾತನಾಡಿ ತಾಲೂಕು, ಗ್ರಾಮ ಪಂಚಾಯತಿ ಹಾಗೂ ಹೋಬಳಿವಾರು ಬೆಳೆಗಳಿಗೆ ವಿಮೆಗೆ ಒಳಪಡಿಸಲಾಗುತ್ತಿದೆ. ಬೆಳೆ ವಿಮೆ ಕುರಿತು ಗ್ರಾಮ ಮಟ್ಟದಲ್ಲಿ ಪ್ರಚಾರಕ್ಕಾಗಿ ವಿಮಾ ಸಂಸ್ಥೆಯ ವಾಹನಗಳು ಜಿಲ್ಲೆಯಾದ್ಯಂತ ಸಂಚರಿಸಲಿದ್ದು, ರೈತರು ಇದರ ಸದುಪಯೋಗ ಪಡೆಯುವಂತೆ ವಿನಂತಿಸಿದರು.
ಬೆಳೆ ವಿಮೆ ಯೋಜನೆಯ ಹೆಚ್ಚಿನ ಮಾಹಿತಿಗಾಗಿ ಸಮೀಪದ ರೈತ ಸಂಪರ್ಕ ಕೇಂದ್ರ, ತಾಲೂಕ ಕೃಷಿ ಕಛೇರಿಗಳಿಗೆ ಅಥವಾ ವಿಮಾ ಸಂಸ್ಥೆಯ ಪ್ರತಿನಿಧಿಗಳಾದ ಬದಾಮಿ ತಾಲೂಕಿಗೆ ಸಂತೋಷ ಕಮತಗಿ (8151074930), ಬಾಗಲಕೋಟೆಗೆ ಬಸವರಾಜ ದೂಪದ (9036620814), ಗುಳೇದಗುಡ್ಡ ಮಲ್ಲಿಕಾರ್ಜುನ್ ಎಸ್.ಬ್ಯಾಳಿ (9008134063), ಬೀಳಗಿ ಅನೀಲ ಆಯ್ ರವಿಕಿರಣ (6360923667), ಹುನಗುಂದಕ್ಕೆ ನಿರಂಜನ ಎಸ್ ಕೋಟೂರ (9740316233), ಜಮಖಂಡಿಗೆ ಬಸವರಾಜ ಹಿಟ್ಟನಗಿ (7411106947), ಮುಧೋಳಕ್ಕೆ ಮಹೇಶ ಮಣ್ಣನ್ನವರ (7846060071), ಇಲಕಲ್ಲ ಮಹಾಂತೇಶ ತೆಗ್ಗಿನಮಠ (9901259436), ರಬಕವಿ-ಬನಹಟ್ಟಿಗೆ ಬಸವರಾಜ ಹಿಟ್ಟನಗಿ (7411106947) ಇವರನ್ನು ಸಂಪರ್ಕಿಸಬಹುದಾಗಿದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಫಸಲ್ ಭಿಮಾ ಯೋಜನೆಯ ಮಾಹಿತಿಯುಳ್ಳ ಕರಪತ್ರಗಳನ್ನು ಬಿಡುಗಡೆ ಮಾಡಲಾಯಿತು. ಸಭೆಯಲ್ಲಿ ಜಿ.ಪಂ ಉಪ ಕಾರ್ಯದರ್ಶಿ ಅಮರೇಶ ನಾಯಕ, ಕೃಷಿ ಇಲಾಖೆಯ ಉಪನಿರ್ದೇಶಕ ಎಸ್.ಬಿ.ಕೊಂಗವಾಡ, ತೋಟಗಾರಿಕೆ ಇಲಾಖೆಯ ಉಪನಿರ್ದೇಶಕ ರಾಹುಲ್‍ಕುಮಾರ ಬಾವಿದಡ್ಡಿ, ಜಿಲ್ಲಾ ಅಂಕಿ ಸಂಖ್ಯೆ ಅಧಿಕಾರಿ ಗಂಗಾಧರ ದಿವಟರ, ಜಿಲ್ಲಾ ಅಂಗ್ರಣಿ ಬ್ಯಾಂಕ್‍ನ ಗೋಪಾಲರೆಡ್ಡಿ ಸೇರಿದಂತೆ ಆಯಾ ತಾಲೂಕಿನ ಎಫ್‍ಪಿಓ, ತಾಲೂಕಾ ಮಟ್ಟದ ಅಧಿಕಾರಿಗಳು, ಬ್ಯಾಂಕ್‍ನ ಪ್ರತಿನಿಧಿಗಳು ಉಪಸ್ಥಿತರಿದ್ದರು.
Be the first to comment