“ಪರಿಸರ ರಕ್ಷಣೆ ನಮ್ಮೆಲ್ಲರ ಹೊಣೆ” ಅಂಕಣ ಲೇಖಕರು ಮಹಾಂತೇಶ್.ಬಿ.ನಿಟ್ಟೂರ್ ದಾವಣಗೆರೆ

 

‘ಬೇಲಿಯೇ ಎದ್ದು ಹೊಲ ಮೇಯುವಾಗ ಯಾರನ್ನು ದೂರ ಬೇಕು’ ಎಂಬ ಮಾತಿದೆ. ಇಡೀ ವ್ಯವಸ್ಥೆಯೇ ಲೋಪದ, ದೋಷದ, ದ್ವೇಷದ ವ್ಯಾಪಾರ, ವ್ಯವಹಾರ, ರಾಜಕಾರಣದಲ್ಲಿ ತೊಡಗಿರುವಾಗ ಯಾರನ್ನು ಹೊಣೆಯನ್ನಾಗಿ ಮಾಡಬೇಕು. ಪರಿಹಾರ ಅಷ್ಟು ಸುಲಭವಲ್ಲ, ಅಲ್ವೇ?
ಉದಾಹರಣೆಗೆ ಪ್ರಸ್ತುತ ದಿನಗಳಲ್ಲಿ ಇಡೀ ಜಗತ್ತನ್ನೇ ತಲ್ಲಣಗೊಳಿಸಿ, ಕಾಡಿ ಭಯಭೀತವಾಗಿಸಿದ ಕೊರೋನ-19 ವೈರಾಣು ರೋಗ. ಅದಕ್ಕೆ ಪರಿಹಾರ ಕಾಣದೆ ಸಾವಿರಾರು ಜನ ಪ್ರಾಣ ಕಳೆದುಕೊಂಡು, ಕುಟುಂಬಗಳು ಬೀದಿಗೆ ಬಿದ್ದು, ಎಷ್ಟೋ ಮಕ್ಕಳು ಅನಾಥರಾದರು. ಅದಕ್ಕೆ ಕಾರಣ ಜನರ ಮನೋವಿಕಾರ ಎಂದು ಹೇಳಬಹುದು. ಅಂದ್ರೆ ಮಾನವ ಪರಿಸರ ಅಸಮತೋಲನಕ್ಕೆ ಕಾರಣವಾಗಿರುವುದು, ತನ್ನ ದುರಾಸೆಗೆ ಸ್ವರ್ಗ ಸ್ವರೂಪದ ಪ್ರಕೃತಿಯನ್ನು ನಾಶ ಮಾಡುತ್ತಾ ತಾನೇ ನಾಶದ ಅಂಚಿಗೆ ಬಂದು ನಿಂತಿದ್ದಾನೆ.
ಅದಕ್ಕೆ ತಾತ್ಪೂರ್ತಿಕವಾಗಿ ಅಲ್ಲಮ ಪ್ರಭುವಿನ ಒಂದು ವಚನ ಇಂತಿದೆ ನೋಡಿ……

“ಬೆಟ್ಟಕ್ಕೆ ಚಳಿಯಾದಡೆ
ಏನ ಹೊದಿಸುವರಯ್ಯ !
ಬಯಲು ಬತ್ತಲೆಯಾದಡೆ
ಏನನುಡಿಸುವರಯ್ಯ ?
ಭಕ್ತನು ಭವಿಯಾದಡೆ
ಏನನುಪಮಿಸುವೆನಯ್ಯ ಗುಹೇಶ್ವರಾ?”

ಅಂದರೆ…. ಬೆಟ್ಟಕ್ಕೆ ಚಳಿಯಾದರೆ ಕಂಬಳಿ, ದುಪ್ಪಟ್ಟು, ಶಾಲು – ಏನಾದರೂ ಹೊದಿಸಲು ಸಾಧ್ಯವೇ? ಹಾಗೆಯೇ ಇಡೀ ಬಯಲು ಬತ್ತಲೆಯಾದರೆ ಯಾವ ರೀತಿಯ ಎಷ್ಟು ಬಟ್ಟೆ ಉಡಿಸಿ ಮುಚ್ಚಲಾದೀತು. ಅಂತೆಯೇ ಭಕ್ತನಾದವನು ವೈರಾಗ್ಯ, ತ್ಯಾಗ, ಆದರ್ಶ, ತತ್ವ-ಸಿದ್ಧಾಂತಗಳನ್ನು ಗಾಳಿಗೆ ತೂರಿ ಭವಿಯಾಗಿ ವಿಷಯಾಸಕ್ತದಲ್ಲಿ ಮುಳುಗಿದರೆ ಅಂತಹವರನ್ನು ಯಾರಿಗೆ, ಹೇಗೆ ಹೋಲಿಸುವುದು?- ಎಂದು ಅಲ್ಲಮ ಪ್ರಭು ಪ್ರಶ್ನಿಸುತ್ತಾನೆ.

ಇನ್ನಾದರೂ ಮಾನವರು ಬುದ್ದಿ ಕಲಿತು, ಜವಾಬ್ದಾರಿಯಿಂದ, ಪರಸ್ಪರ ಹೊಂದಾಣಿಕೆಯಿಂದ ಪರಿಸರ ಮಾಲಿನ್ಯ ನಿಯಂತ್ರಿಸಬೇಕಾಗಿದೆ. ಅಂತರಂಗ-ಬಹಿರಂಗ ಶುದ್ಧತೆಯೊಂದಿಗೆ ಪರಿಸರ ಸಂರಕ್ಷಣೆ ಹಾಗೂ ಸಮತೋಲನ ನಮ್ಮೆಲ್ಲರ ಹೊಣೆಯಾಗಿದೆ, ಅಲ್ವಾ….ಹಾಗೇ ಚಿಂತಿಸಿ ನೋಡೋಣ.

ಅಂಕಣ ಲೇಖಕರು

ಮಹಾಂತೇಶ್.ಬಿ.ನಿಟ್ಟೂರ್
ದಾವಣಗೆರೆ.

Be the first to comment

Leave a Reply

Your email address will not be published.


*