ಕೋವಿಡ್ : ಗ್ರಾಮಗಳಲ್ಲಿ ಮನೆ ಮನೆ ಸರ್ವೇ ಕಾರ್ಯ:ವಿವಿಧ ಗ್ರಾಮಗಳಿಗೆ ಶಿವಯೋಗಿ ಕಳಸದ ಭೇಟಿ ಪರಿಶೀಲನೆ

ವರದಿ: ಶರಣಪ್ಪ ಹೆಳವರ ಬಾಗಲಕೋಟೆ

ಜಿಲ್ಲಾ ಸುದ್ದಿಗಳು

ಬಾಗಲಕೋಟೆ :

ಕೋವಿಡ್ ಎರಡನೇ ಅಲೆ ನಗರದಿಂದ ಹಳ್ಳಿಯ ಕಡೆಗೆ ಪ್ರಸರಿಸುತ್ತಿರುವ ಹಿನ್ನಲೆಯಲ್ಲಿ ವಿವಿಧ ಗ್ರಾಮ ಮತ್ತು ಕೋವಿಡ್ ಕೇರ್ ಸೆಂಟರಗಳಿಗೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳಾದ ಶಿವಯೋಗಿ ಕಳಸದ ಶನಿವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.ನವನಗರದ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ನಿಲಯಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಆರೈಕೆಯಲ್ಲಿರುವ ರೋಗಿಗಳ ಆರೋಗ್ಯ ವಿಚಾರಿಸಿದರು. ಅಲ್ಲಿಯ ರೋಗಿಗಳಿಗೆ ಕಾಲ ಕಾಲಕ್ಕೆ ತಪಾಸಣೆ, ಊಟದ ವ್ಯವಸ್ಥೆ ಬಗ್ಗೆ ಪರಿಶೀಲಿಸಿದ ಕಳಸದ ಅವರು ಅಲ್ಲಿಯ ರೋಗಿಗಳ ದಾಖಲಾತಿಯ ಬಗ್ಗೆಯೂ ಮಾಹಿತಿ ಪಡೆದುಕೊಂಡರು.

ಬೀಳಗಿ ತಾಲೂಕಿನ ಅನಗವಾಡಿ, ಮನ್ನಿಕೇರಿ ಹಾಗೂ ಹೊನ್ನಿಹಾಳ ಗ್ರಾಮಗಳಿಗೆ ಭೇಟಿ ನೀಡಿದ ಕಳಸದ ಅವರು ಆಶಾ ಕಾರ್ಯಕರ್ತರು, ಆರೋಗ್ಯ ಸಿಬ್ಬಂದಿ ಹಾಗೂ ಗ್ರಾ.ಪಂ ಪಂಚಾಯತಿ ಸಿಬ್ಬಂದಗಳನ್ನೊಳಗೊಂಡ ಮನೆ ಮನೆ ಸಮೀಕ್ಷೆ ತಂಡದ ಕಾರ್ಯವನ್ನು ಪರಿಶೀಲಿಸಿದರು. ಸರ್ವೆ ನಡೆಸುತ್ತಿರುವ ಸ್ಥಳಕ್ಕೆ ಭೇಟಿ ನೀಡಿ ಪ್ರತಿಯೊಂದು ಮನೆಗಳಿಗೆ ಭೇಟಿ ನೀಡಿ ಮನೆ ಸದಸ್ಯರಲ್ಲಿ ಜ್ವರ, ಕೆಮ್ಮು, ನೆಗಡಿ ಇದ್ದಲ್ಲಿ ತಪಾಸಣೆ ಕೈಗೊಳ್ಳಬೇಕು. ಔಷಧ ಕಿಟ್‍ಗಳನ್ನು ಸಹ ವಿತರಿಸಲು ತಿಳಿಸಿದರು.
ಹೊನ್ನಿಹಾಳ ಗ್ರಾಮ ಪಂಚಾಯತಿಗೆ ಭೇಟಿ ನೀಡಿ ಅಲ್ಲಿಯ ಸಿಬ್ಬಂದಿ ಹಾಗೂ ಗ್ರಾ.ಪಂ ಚುನಾಯಿತ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿ ಕೋವಿಡ್ ಬಗ್ಗೆ ಗ್ರಾಮಸ್ಥರಲ್ಲಿ ಜಾಗೃತಿ ಮೂಡಿಸಬೇಕು. ಕೆಮ್ಮು, ನೆಗಡಿ, ಜ್ವರ ಬಂದಲ್ಲಿ ನಿರ್ಲಕ್ಷ ವಹಿಸದೇ ಸರಕಾರಿ ಆಸ್ಪತ್ರೆಯಲ್ಲಿ ತಪಾಸಣೆ ಮಾಡಿಸಿಕೊಳ್ಳುವಂತೆ ಜನರಲ್ಲಿ ಅರಿವು ಮೂಡಿಸಬೇಕು.

ಪ್ರಾರಂಭದಲ್ಲಿಯೇ ಕೋವಿಡ್ ಪತ್ತೆ ಹಚ್ಚಿದಲ್ಲಿ ಬೇಗನೇ ಗುಣಪಡಿಸಲು ಸಾಧ್ಯವಾಗುತ್ತದೆ. ಗ್ರಾಮದ ಜನರಲ್ಲಿ ತಿಳುವಳಿಕೆ ನೀಡುವ ಕಾರ್ಯವಾಗಬೇಕು ಎಂದರು.
ನಗರದಿಂದ ಗ್ರಾಮಕ್ಕೆ ಮರಳಿ ವಲಸಿಗರು ಬಂದಿದ್ದು, ವಲಸಿಗರ ಆರೋಗ್ಯ ತಪಾಸಣೆಗೆ ಒಳಪಡಿಸಬೇಕು. ಕೋವಿಡ್ ಗ್ರಾಮಗಳಲ್ಲಿ ಹೆಚ್ಚಾಗಿ ಕಂಡುಬರುತ್ತಿದ್ದು, ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯವಾಗಬೇಕು. ನರೇಗಾದಡಿ ಹೆಚ್ಚು ಹೆಚ್ಚು ಕಾಮಗಾರಿಗಳನ್ನು ಕೈಗೊಂಡು ದುಡಿಯುವ ಜನರಿಗೆ ಉದ್ಯೋಗ ನೀಡಬೇಕು. ಗ್ರಾಮದ ಅಭಿವೃದ್ದಿಗೆ ಎಲ್ಲರೂ ಕೈಜೋಡಿಸಬೇಕು ಎಂದು ತಿಳಿಸಿದರು. ಭೇಟಿ ಸಂದರ್ಭದಲ್ಲಿ ಜಿ.ಪಂ ಸಿಇಓ ಟಿ.ಭೂಬಾಲನ, ಉಪ ಕಾರ್ಯದರ್ಶಿ ಅಮರೇಶ ನಾಯಕ, ಉಪ ವಿಭಾಗಾಧಿಕಾರಿ ಎಂ.ಗಂಗಪ್ಪ, ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ಅರವಿಂದ ಪಟ್ಟಣಶೆಟ್ಟಿ, ತಹಶೀಲ್ದಾರ ಗುರುಸಿದ್ದಯ್ಯ ಹಿರೇಮಠ, ಬಾಗಲಕೋಟೆ ತಾ.ಪಂ ಇಓ ಕಲ್ಲಾಪೂರ, ಬೀಳಗಿ ಪ್ರಭಾರಿ ಇಓ ಕಾರ್ತಿಕ್, ತಾಲೂಕಾ ವೈದ್ಯಾಧಿಕಾರಿ ದಯಾನಂದ ಕರಿಯನ್ನವರ ಸೇರಿದಂತೆ ಇತರರು ಉಪಸ್ಥಿತರಿದ್ದರು.

Be the first to comment

Leave a Reply

Your email address will not be published.


*