ಜಿಲ್ಲಾ ಸುದ್ದಿಗಳು
ಬಾಗಲಕೋಟೆ:
ಅಗತ್ಯ ವಸ್ತುಗಳನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡುವುದು ಮತ್ತು ಅಂಗಡಿಯಲ್ಲಿ ದಾಸ್ತಾನು ಇದ್ದರೂ ಸಹ ಇಲ್ಲವೆಂದು ಕೃತಕ ಅಭಾವ ಸೃಷ್ಠಿಸುವುದು ಮಾಡಿದಲ್ಲಿ ಅಗತ್ಯ ವಸ್ತುಗಳ ಕಾಯ್ದೆ-1955 ಹಾಗೂ ಅಗತ್ಯ ವಸ್ತುಗಳ ಆದೇಶ-1981ರ ನಿಯಮಾವಳಿ ಹಾಗೂ ಅಗತ್ಯ ವಸ್ತುಗಳ ಗುಣಮಟ್ಟ ಕಳಪೆಯಿದ್ದಲ್ಲಿ 2006ರಡಿಯಲ್ಲಿ ಪ್ರಕರಣ ದಾಖಲಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ ತಿಳಿಸಿದ್ದಾರೆ.
ಕೋವಿಡ್ ಎರಡನೇ ಅಲೆ ಹಿನ್ನಲೆಯಲ್ಲಿ ರಾಜ್ಯ ಸರಕಾರವು ರಾತ್ರಿ ಕಪ್ರ್ಯೂ ಹಾಗೂ ವಾರಾಂತ್ಯದ ಕಪ್ರ್ಯೂ ವಿಧಿಸಿರುವ ಬೆನ್ನಲ್ಲೆ ಸಾರ್ವಜನಿಕರ ದೈನಂದಿನ ಜೀವನಕ್ಕೆ ಬೇಕಾಗಿರುವ ಅವಶ್ಯಕ ವಸ್ತುಗಳನ್ನು ಪಡೆದುಕೊಳ್ಳಲು ಚಿಲ್ಲರೆ ಕಿರಾಣಿ ಅಂಗಡಿಗಳು ಹಾಗೂ ಸಗಟು ಕಿರಾಣಿ ಅಂಗಡಿಗಳು ನಿಗಧಿತ ಸಮಯದಲ್ಲಿ ಕಾರ್ಯನಿರ್ವಹಿಸಲು ಆದೇಶಿದೆ. ಆದರೆ ಕೆಲವೊಂದು ಕಿರಾಣಿ ಚಿಲ್ಲರೆ ಹಾಗೂ ಸಗಟು ವಿತರಕರು ಹೆಚ್ಚಿನ ಬೆಲೆಯಲ್ಲಿ ಅಗತ್ಯ ವಸ್ತುಗಳನ್ನು ಮಾರಾಟ ಮಾಡುತ್ತಿರುವುದಾಗಿ ತಿಳಿದುಬಂದಿದೆ.
ಅದರಂತೆ ಅಂಗಡಿ ಮುಂಗಟ್ಟುಗಳು ಬೇಕರಿ ದಿನಸಿ ವಸ್ತುಗಳು ಹಾಗೂ ಗಟ್ಕಾ ಸಿಗರೇಟ್, ಬೀಡಾ ದರಗಳು ದುಪ್ಪಟ್ಟಾಗಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿರುವುದಾಗಿ ಪತ್ರಿಕೆಗಳಲ್ಲಿ ಗಮನಿಸಲಾಗಿದೆ. ಕಾರಣ ಹೆಚ್ಚಿನ ಬೆಲೆಗೆ ಅಗತ್ಯ ವಸ್ತುಗಳನ್ನು ಮಾರಾಟ ಮಾಡುವವರ ವಿರುದ್ದ ಕಾನೂನಿನ ಪ್ರಕಾರ ಕ್ರಮವನ್ನು ಕೈಗೊಳ್ಳಲು ಜಿಲ್ಲೆಯ ಎಲ್ಲ ಸಂಬಂಧಿಸಿದ ಅಧಿಕಾರಿ, ಸಿಬ್ಬಂದಿಗಳ ತಂಡ ರಚಿಸಿ ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಲಾಗಿದೆ.
ಅಂಗಡಿಗೆ ಗ್ರಾಹಕರು ಬಂದಾಗ ಕಡ್ಡಾಯವಾಗಿ ಮಾಸ್ಕ ಧರಿಸಲು, ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಬಿಳಿಯ ಪಟ್ಟಿಯ ಚೌಕ್ ಬಾಕ್ಸನ್ನು ಹಾಕಿ 1 ಮೀಟರ್ ಅಂತರ ಕಾಯ್ದುಕೊಳ್ಳಲು ನಿರ್ದೇಶನ ನೀಡಲು ಜಿಲ್ಲಾಧಿಕಾರಿಗಳು ಸೂಚಿಸಿದ್ದಾರೆ.
Be the first to comment