ಮಹಾಮಹಿಮ ಒಂಟಿಪಾದದ ಶ್ರೀ ಗುರು ಮಂಟಶ್ವರ ಜಾತ್ರಾ ಮಹೋತ್ಸವ

ವರದಿ: ಶರಣಪ್ಪ ಬಾಗಲಕೋಟೆ


ಇಲಕಲ್ಲ ತಾಲೂಕಿನ ಕೆಲೂರ ಗ್ರಾಮದ ಮಹಾ ಮಹಿಮರಾಗಿ ಬಾಳಿ ಜನಮಾನಸದಲ್ಲಿ ನೆಲೆಗೊಳಿಸಿದ ಒಂಟಿಪಾದದ ಶ್ರೀ ಗುರು ಮಂಟೇಶ್ವರ ಜಾತ್ರಾ ಮಹೋತ್ಸವ ಇದೆ ಫೆಬ್ರುವರಿ ದಿನಾಂಕ: 26,27,28 ಮತ್ತು ಮಾರ್ಚ್‌ 1ರ ವರೆಗೆ 4ದಿನಗಳ ಕಾಲ ಜಾತ್ರಾ ಮಹೋತ್ಸವ ವೈಭವದಿಂದ ಜರುಗಲಿದೆ.ತನ್ನಿಮಿತ್ಯ ಈ ಲೇಖನ.


ಬಾಗಲಕೋಟೆ:ಬಾದಾಮಿ ಶಿಲ್ಪಕಲೆಯ ತೊಟ್ಟಿಲು ಎಂದು ಕರೆಯಲ್ಪಟ್ಟಿದೆ. ಇಲ್ಲಿಯ ಶಿಲ್ಪಕಲಾ ವೈಭವ ವರ್ಣಾತೀತ. ಇಲ್ಲಿ ಆಳಿದ ಬದಾಮಿ ರಾಜರ ಕಲೆ, ಸಂಸ್ಕೃತಿ, ಸಾಹಿತ್ಯ ಅಪ್ರತಿಮವಾದುದು.ಇಂತಹ ಪ್ರಕೃತಿಯ ಮಡಿಲಿನಲ್ಲಿರುವ ಅಣತಿಯ ಹತ್ತಿರ ಇರುವ ಮತ್ತೊಂದು ಪಾವನ ಕ್ಷೇತ್ರವೆಂದರೆ ಕೆಲೂರಿನ ಶ್ರೀ ಗುರು ಮಂಟೇಶ್ವರ ಸ್ವಾಮೀಗಳ ಪುಣ್ಯಕ್ಷೇತ್ರ, ಸುಮಾರು 8ನೇ ಶತಮಾನದ ಆದಿಯಲ್ಲಿಯೇ ಬಾಳಿ-ಬೆಳಗಿದ ಜನರ ಉದ್ದಾರ ಮಾಡಿ ಸಕಲ ಕಷ್ಟಗಳನ್ನು ಪರಿಹರಿಸಿದ ಕರುಣಾಮೂರ್ತಿ ಮಹಾಮಹಿಮರೆನಿಸಿದ ಶ್ರೀ ಗುರು ಮಂಟೇಶ್ವರರು ಜೀವಂತ ಯೋಗ ಸಮಾಧಿಸ್ಥರು. ಪೂಜ್ಯರು ನಡೆದರೆ ಕೇವಲ ಒಂಟಿಪಾದದ ಗುರುತು ಭೂಮಿಯ ಮೇಲೆ ಮೂಡುತ್ತಿತ್ತು ಎಂಬುದು ಪ್ರತೀತಿ ಇದೆ. ಆದ್ದರಿಂದ ಪೂಜ್ಯರು ಒಂಟಿಪಾದ ಮಂಟೇಶ್ವರರೆಂದು ಜನ ಮನದಲ್ಲಿ ಗುರುತಿಸಿ ಕೊಂಡಿದ್ದಾರೆ.

ನಮ್ಮ ದೇಶದಲ್ಲಿ ಪುರಾತನ ಧರ್ಮಸಂಸ್ಕೃತಿಯನ್ನು ನೋಡಲಾಗಿ ಕಾಲ ಕಾಲಕ್ಕೆ ತಕ್ಕಂತೆ ಅಲ್ಲಲ್ಲಿ ಮಹಿಮಾ ಪುರುಷರು ಅವತರಿಸಿ ಭಕ್ತರನ್ನು ಉದ್ದಾರ ಮಾಡಿದ್ದಾರೆ.ಅಂತವರ ಸಾಲಿನಲ್ಲಿ ಎದ್ದು ಕಾಣುವ ಮಹಾ ಪುರುಷರೆ ಈ ಒಂಟಿಪಾದದ ಶ್ರೀ ಗುರು ಮಂಟೇಶ್ವರರು ಒಬ್ಬರು.ನಾಡಿನ ಕೆಲವು ಭಾಗಗಳಲ್ಲಿ ಸಂಚಾರ ಮಾಡಿ ತಪಸ್ಸು ಹಾಗೂ ಕಾರುಣ್ಯದಿಂದ ಜನರ ಬದುಕನ್ನು ಹಸನುಗೊಳಿಸಿದ ಮಹಾಪುರುಷರಾಗಿದ್ದಾರೆ. ಭೂತ, ವರ್ತಮಾನ ಮತ್ತು ಭವಿಷ್ಯತ್ತ್‌ ಗಳಲ್ಲಿ ಭಕ್ತರ ಭವನೆಗಳನ್ನು ನೀಗಿಸಿದವರಾಗಿದ್ದಾರೆ. ಇವರು ಶಿವಯೋಗ ಶಕ್ತಿ ತ್ರಿಕಾಲ ಅಭಾದಿತವಾದುದ್ದು. ಕಾಶಿ ಪೀಠದ ಪಂಚಾಚಾರ್ಯರ ಅನುಷ್ಠಾನದಿಂದ ಶಿವಯೋಗದಲ್ಲಿ ಪರಿಪೂರ್ಣತೆ ಹೊಂದಿದವರಾಗಿದ್ದಾರೆ.

ಇಂತಹ ಮಹಿಮಾ ಪುರುಷರು ಈ ಕೆಲೂರು ಪುಣ್ಯ ಕ್ಷೇತ್ರದಲ್ಲಿ ನೆಲೆಸಿದ್ದರು. ಅವರ ಸಮಾಧಿ ಸ್ಥಳ ಈಗ ಪುಣ್ಯಕ್ಷೇತ್ರವಾಗಿದೆ. ಅಪಾರ ಭಕ್ತಾಧಿಗಳು ಪ್ರತಿದಿನ ಬಂದು ದರ್ಶನಪಡೆದು ತಮ್ಮ ಜೀವನವನ್ನು ಉದ್ದಾರ ಮಾಡಿಕೊಂಡಿದ್ದಾರೆ.ಈ ಕೆಲೂರು ಸಿದ್ದಿ ಸ್ಥಳ ಪುಣ್ಯಕ್ಷೇತ್ರ ಹಾಗೂ ಶಿವಯೋಗಿ ಅನುಷ್ಟಾನಕ್ಕೆ ಅತ್ಯಂತ ಪ್ರಭಾವಿ ಸ್ಥಾನವಾಗಿದೆ.ಪರಿಶುದ್ಧ ಭಕ್ತಿಯಿಂದ ನಡೆದುಕೊಂಡವರಿಗೆ ಶ್ರೀ ಗುರು ಮಂಟೇಶ್ವರರು ಸಕಲ ಇಷ್ಟಾರ್ಥಗಳನ್ನು ಕರುಣಿಸಿದ್ದಾರೆ.ಪ್ರತಿ ವರ್ಷ ಭಾರತ ಹುಣ್ಣಿಮೆಯ ದಿನದಂದು ವೈಭವ ರಥೋತ್ಸವ ಜರುಗುತ್ತದೆ.ಪ್ರತಿ ವರ್ಷದಂತೆ ಅನೇಕ ಕುಟುಂಬದವರಿಂದ ಕುಂಭ ಸೇವೆ, ಹಗ್ಗದ ಸೇವೆ, ಕಳಸದ ಸೇವೆ, ನಂದಿಕೋಲಿನ ಸೇವೆ, ಬಾಳಿಕಂಬದ ಸೇವೆ,ಛತ್ರಿ ಚಾಮರ ಸೇವೆ,ಪಾಲಕಿ ಸೇವೆ,ಹೂವು ಹಾರದ ಸೇವೆ ಹೀಗೆ ಹಲವಾರು ಪರಿವಾರದವರಿಂದ ಭಕ್ತಿಯ ಸೇವೆ ನಡೆಯುತ್ತದೆ. ಇದೆ ಸಂದರ್ಭದಲ್ಲಿ ಪೂಜ್ಯ ಮಹಾಸ್ವಾಮಿಗಳವರಿಗೆ ಗೌರವ ಡಾಕ್ಟರೇಟ್‌ ಪದವಿ ದೊರೆತ ಪ್ರಯುಕ್ತ ಪೂಜ್ಯರಿಗೆ ಗೌರವ ಸಮರ್ಪಣೆ ಕಾರ್ಯಕ್ರಮ ನಡೆಯಲಿದೆ. ನಾಲ್ಕು ದಿನಗಳವರೆಗೆ ಪ್ರತಿದಿನ ಸಂಜೆ ಧರ್ಮಸಭೆ ಸಂಗೀತ ಕಾರ್ಯಕ್ರಮಗಳು ಜರುಗಲಿವೆ.

ಅಭಿವೃದ್ಧಿ ಪಥದಲ್ಲಿ ಶ್ರೀ ಗುರು ಮಂಟೇಶ್ವರ ಪ್ರೌಢ ಶಾಲೆ

ಶಿಕ್ಷಣದಿಂದಲೇ ಸರ್ವಾಂಗೀಣ ಅಭಿವೃದ್ಧಿ ಸಾಧ್ಯ ಎಂದು ಅರಿತ ಪೂಜ್ಯ ಶ್ರೀ ಷ.ಬ್ರ.ಮಲಯಶಾಂತಮುನಿ ದೇಶಿಕೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳು ಶ್ರೀ ಗುರು ಮಂಟೇಶ್ವರ ವಿದ್ಯಾವರ್ಧಕ ಸಂಘವನ್ನು ಸ್ಥಾಪಿಸಿ ಅದರಡಿಯಲ್ಲಿ ಗ್ರಾಮೀಣ ಭಾಗದ ಮಕ್ಕಳಿಗೂ ಶಿಕ್ಷಣ ಸಿಗಲಿ ಎಂಬ ಉದ್ದೇಶದಿಂದ ಶ್ರೀ ಗುರು ಮಂಟೇಶ್ವರ ಪ್ರೌಢ ಶಾಲೆಯನ್ನು 1994ರಲ್ಲಿ ಪ್ರಾರಂಭಿಸಿದರು. ಆಗ ಬಾಳಾಸಾಹೇಬ ನಾಡಗೌಡರ ಕಾರ್ಯಾಧ್ಯಕ್ಷರಾಗಿದ್ದರು. ಮುಂದೆ ಈ ಶಾಲೆ 2006ರಲ್ಲಿ ಬಾಗಲಕೋಟೆಯ ಬಸವೇಶ್ವರ ವೀರಶೈವ ವಿದ್ಯಾವರ್ಧಕ ಸಂಘಕ್ಕೆ ಹಸ್ಥಾಂತರಗೊಂಡಿತು.

2012ರಲ್ಲಿ ಅನುದಾನಕ್ಕೊಳಪಟ್ಟು ಈಗ ಪ್ರಗತಿಪಥದತ್ತ ಮುನ್ನಡೆಯುತ್ತದೆ.ಸಾಕಷ್ಟು ಅಭಿವೃದ್ಧಿ ಪಡಿಸಿದ ಸಂಘ ಈಗ ನೂತನ ಕಟ್ಟಡವನ್ನು ನಿರ್ಮಿಸಿದೆ.ಗ್ರಾಮೀಣ ಪ್ರದೇಶದಲ್ಲಿ ಉತ್ತಮ ಶಿಕ್ಷಣ ನೀಡುವ ಉದ್ದೇಶ ಇಟ್ಟುಕೊಂಡು ಸನ್ಮಾನ್ಯ ಡಾ.ವೀರಣ್ಣ ಚರಂತಿಮಠರು ಅಭಿವೃದ್ಧಿ ಪಡಿಸುತ್ತಿದ್ದಾರೆ.ಗುರು ಮಂಟೇಶ್ವರ ಪುಣ್ಯಕ್ಷೇತ್ರಕ್ಕೆ ಹೊಂದಿಕೊಂಡಿರುವ ಈ ಶಾಲೆ ಉತ್ತಮ ಫಲಿತಾಂಶ ನೀಡುತ್ತ ಗಣನೀಯ ಸಾಧನೆ ಮಾಡುತ್ತಲಿದೆ.

ಇಲ್ಲಿ ಮುಖ್ಯೋಪಾಧ್ಯಾಯರಾದ ಶ್ರೀ ಎಸ್.ಬಿ.ದಾಸರ ಹಾಗೂ ನುರಿತ ಅನುಭವಿ ಶಿಕ್ಷಕರಿಂದ ಉತ್ತಮ ಶಿಕ್ಷಣ ಮತ್ತು ಸಂಸ್ಕಾರವನ್ನು ನೀಡಲಾಗುತ್ತದೆ. ಜ್ಞಾನ ದಾಸೋಹಕ್ಕಾಗಿ ಹಲವಾರು ಯೋಜನೆಗಳನ್ನು ಹಾಕಿಕೊಂಡು ಗ್ರಾಮೀಣ ಭಾಗದಲ್ಲಿಯೂ ಉನ್ನತ ಶಿಕ್ಷಣ ನೀಡುವ ಉದ್ದೇಶ ಹೊಂದಿದೆ.

-ಸಿದ್ದರಾಜ್‌ ಎಮ್‌ ಕೆಂಧೂಳಿ.

Be the first to comment

Leave a Reply

Your email address will not be published.


*