ಬಗೆಹರಿಯಬೇಕಿದ್ದ ವಿಷಯ ಕೊಲೆಯಲ್ಲಿ ಅಂತ್ಯ | ಸ್ಥಳಕ್ಕೆ ಐಜಿ, ಎಸ್ಪಿ ಭೇಟಿ

ಸೇಡಂ: ತಾಲೂಕಿನ ಮೇದಕ ಗ್ರಾಮದಲ್ಲಿ ಬುಧವಾರ ಬೆಳಗ್ಗೆ ಜರುಗಿದ ತ್ರಿವಳಿ ಕೊಲೆ ಹಿಂದಿರುವ ಜಮೀನು ವಿವಾದ ಇನ್ನೂ ಕೆಲವೇ ದಿನಗಳಲ್ಲಿ ಬಗೆಹರಿಯುವುದಿತ್ತು, ಆದರೆ ಕೋಪಕ್ಕೆ ಬುದ್ದಿ ಕೊಟ್ಟದ್ದರಿಂದ ಕೊಲೆ ನಡೆದಿದೆ ಎನ್ನಲಾಗಿದೆ.

ಕೊಲೆಯಾದ ಮಲ್ಕಪ್ಪ ಮತ್ತು ಆತನ ತಂದೆ ಚಿನ್ನಯ್ಯ ಹೆಸರಲ್ಲಿದ್ದ 36 ಎಕರೆ ಜಮೀನು ಕೊಲೆಯಾದ ಮಲ್ಕಪ್ಪನ ಅಣ್ಣ ತಮ್ಮಂದಿರ ಮಧ್ಯೆ ಪಾಲುದಾರಿಕೆ ಆಗಬೇಕಿತ್ತು. ಇದಕ್ಕಾಗಿ ಮಲ್ಕಪ್ಪ ಹೊಲ ಪಾಲು ಮಾಡಿ ರಜಿಸ್ಟ್ರೇಷನ್ ಮಾಡಲು ಎಲ್ಲರಲ್ಲೂ ಹಣ ಕೇಳಿದ್ದನಂತೆ. ಆದರೆ ಉಳಿದವರು ಹಣ ನೀಡುವಲ್ಲಿ ಹಿಂದೇಟು ಹಾಕಿದ್ದರು ಎನ್ನಲಾಗಿದೆ. ಅಲ್ಲದೆ ಬುಧವಾರ ಮಲ್ಕಪ್ಪ ಮತ್ತು ಆತನ ಮಕ್ಕಳು ಹೊಲದಲ್ಲಿ ಉಳುಮೆ ಮಾಡಲು ಹೋದಾಗ ಆರೋಪಿಗಳು ಜಗಳ ತೆಗೆದು, ಹೊಲ ಪಾಲು ಮಾಡು ನಂತರ ಉಳುಮೆ ಮಾಡು ಎಂದು ತಗಾದೆ ತೆಗೆದಿದ್ದರು ಎನ್ನಲಾಗಿದೆ. ತಗಾದೆ ಜಗಳಕ್ಕೆ ತಿರುಗಿ ಕೊಲೆಯಲ್ಲಿ ಅಂತ್ಯಕಂಡಿದೆ.

ಮೃತರೆಲ್ಲರೂ ಕೋಲಿ ಸಮಾಜಕ್ಕೆ ಸೇರಿದವರು ಎಂದು ತಿಳಿದು ಬಂದಿದ್ದು, ಜಮೀನು ವಿವಾದದ ಬಗ್ಗೆ ಸಮಾಜ ಮುಖಂಡರಿಗೂ ಈ ವಿಷಯ ತಿಳಿಸಿ, ಕೂಡಲೇ ಮಧ್ಯಪ್ರವೇಶಿಸಿ ಬಗೆಹರಿಸಿಕೊಡಿ ಎಂದು ಕೋರಿದ್ದರಂತೆ.

ಕೊಲೆ ಮಾಡಿದ ಆಶಪ್ಪ ಚಿನ್ನಯ್ಯ, ಹಣಮಂತ ಆಶಪ್ಪ, ರಾಮಲು ಚಿನ್ನಯ್ಯ, ಸೀನಪ್ಪ ರಾಮು, ಶರಣಪ್ಪ ಚನ್ನಪ್ಪ, ಪದ್ಮಮ್ಮ ಆಶಪ್ಪ, ಲಾಲಮ್ಮ ಶರಣಪ್ಪ, ಪವಿತ್ರಾ ರಾಮುಲು ತಲೆಮರೆಸಿಕೊಂಡಿದ್ದು, ಪೊಲೀಸರು ಶೋಧ ಕಾರ್ಯ ನಡೆಸಿದ್ದಾರೆ.

ಸ್ಥಳಕ್ಕೆ ಐಜಿ ಮನೀಷ ಕರ್ದಿಕರ್, ಎಸ್ಪಿ ಎಡಾ ಮಾರ್ಟಿನ್ ಮಾರ್ಬನ್ಯಾಂಗ್, ಸಿಪಿಐ ತಮ್ಮಾರಾಯ ಪಾಟೀಲ ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ.

Advertisement

Be the first to comment

Leave a Reply

Your email address will not be published.


*