ಮನೆಗೆ ಬಿದ್ದ ಬೆಂಕಿಯಲ್ಲಿ ,ಬೀಡಿ ಹಚ್ಚಿಕೊಂಡವರು,ಯಾರು..?

ವರದಿ: ಪ್ರಕಾಶ ಮಂದಾರ.

ಹರಿಹರ:-ಕಳೆದ ಶನಿವಾರ ಹರಿಹರ S.J.V.P ಕಾಲೇಜಿನ ಸಭಾಂಗಣದಲ್ಲಿ ಹರಿಹರದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆ,ನಗರದಲ್ಲಿ ಲಾಕ್ ಡೌನ್ ಸಮಯ ನಿಗದಿಪಡಿಸುವ ಸಂಬಂಧ ತಾಲ್ಲೂಕು ಆಡಳಿತ ಸಭೆಯನ್ನು ಕರೆದಿದ್ದರು .

ತಾಲ್ಲೂಕು ಆಡಳಿತ ಲಾಕ್ ಡೌನ್ ಸಂಬಂಧ ಕರೆದ ಸಭೆಯಲ್ಲಿ ಹಾಲಿ- ಮಾಜಿ ಶಾಸಕರು ಸೇರಿದಂತೆ ನಗರದ ಎಲ್ಲ ವರ್ತಕರು,ಬೀದಿ ಬದಿ ವ್ಯಾಪಾರಸ್ಥರು, ಸಂಘ ಸಂಸ್ಥೆಯವರು,ಉಪಸ್ಥಿತರಿದ್ದರು .

ಅಂದಿನ ಸಭೆಯಲ್ಲಿ ನಗರದ ಲಾಕ್ ಡೌನ್ ಸಮಯ ನಿಗದಿಪಡಿಸುವ ವಿಚಾರದಲ್ಲಿ ,ಹಾಲಿ- ಮಾಜಿ ಶಾಸಕರ ನಡುವೆ ನಗರದ ಎಲ್ಲ ವರ್ತಕರು ಹಾಗೂ ಸಂಬಂಧಿಸಿದ ಅಧಿಕಾರಿಗಳ ಸಮ್ಮುಖದಲ್ಲಿ ಮಾತಿನ ಚಕಮಕಿ ನಡೆಯಿತು. ಒಂದು ಹಂತದಲ್ಲಿ ಮಾತಿನ ಚಕಮಕಿ ಏಕ ವಚನದಲ್ಲಿ ಮಾತನಾಡಿಕೊಳ್ಳುವ ಮಟ್ಟಕ್ಕೆ ತಾರಕ್ಕೇರಿತ್ತು.

ರಾಜಕೀಯ ಪ್ರತಿಷ್ಠೆಗೊ, ಇನ್ಯಾವುದೋ ಉದ್ದೇಶಕ್ಕಾಗಿ ನಾಯಕರ ನಡುವೆ ಪೈಪೋಟಿ ಏರ್ಪಟ್ಟು ಉಭಯ ಪಕ್ಷದ ಕಾರ್ಯಕರ್ತರಲ್ಲಿ ಗೊಂದಲ ಸೃಷ್ಟಿಯಾಯಿತು.ಪೊಲೀಸ್ ಇಲಾಖೆಯ ಅಧಿಕಾರಿಗಳು ಹೊರತುಪಡಿಸಿ, ಇನ್ನುಳಿದ ಇಲಾಖೆಯ ಅಧಿಕಾರಿಗಳು ಮೌನಕ್ಕೆ ಶರಣಾದರು .

ಅಂದಿನ ನಾಯಕರ ನಡುವಿನ ಮಾತಿನ ಚಕಮಕಿಗೆ ಸ್ಥಳೀಯ ತಾಲೂಕು ಆಡಳಿತದ ವೈಫಲ್ಯವೇ ಈ ಎಲ್ಲ ಅವಾಂತರಕ್ಕೆ ಕಾರಣವಾಯಿತೇ.?ಎಂಬ ಅನುಮಾನ ನಗರದ ಜನರಲ್ಲಿ ಕಾಡತೊಡಗಿತ್ತು .

ಸ್ಥಳೀಯ ತಾಲೂಕಾಡಳಿತ ಎಡವಿದ್ದೆಲ್ಲಿ ಎಂಬ ಪ್ರಶ್ನೆಯನ್ನು ಮುಂದಿಟ್ಟುಕೊಂಡು ಪತ್ರಿಕೆಯು ಸುದ್ದಿಯ ಬೆನ್ನತ್ತಿ ಹೊರಟಿತ್ತು, ಪತ್ರಿಕೆಗೆ ಸಿಕ್ಕ ಮಾಹಿತಿಯ ಪ್ರಕಾರ ತಾಲ್ಲೂಕು ಆಡಳಿತ ದಿನಾಂಕ 24/6/2020 ರಂದು ಶಾಸಕರ ನೇತೃತ್ವದಲ್ಲಿ ನಗರದ ಕೆಲವು ವರ್ತಕರ ಸಮ್ಮುಖದಲ್ಲಿ ನಗರದಲ್ಲಿ ಲಾಕ್ ಡೌನ್ ಸಂಬಂಧಿಸಿದ ಸಮಯ ನಿಗದಿಪಡಿಸುವ ವಿಚಾರದಲ್ಲಿ ಸಭೆ ಕರೆದಿದ್ದರು.ಸರ್ಕಾರದ ಶಿಷ್ಟಾಚಾರದ ಪ್ರಕಾರ ಶಾಸಕರ ಅಧ್ಯಕ್ಷತೆಯಲ್ಲಿ ಸಭೆ ಕರೆದಿದ್ದು ಸರಿಯಾಗಿತ್ತು.ಆದರೆ ಇದು ಕೊರೊನಾ ಸಂಕಷ್ಟದ ಸಮಯವಾಗಿದ್ದರಿಂದ ತಾಲ್ಲೂಕು ಆಡಳಿತ ತಾಲ್ಲೂಕಿನ ಎಲ್ಲ ಹಾಲಿ ಮಾಜಿ ಚುನಾಯಿತ ಜನಪ್ರತಿನಿಧಿಗಳು, ನಗರಸಭೆಯ ಎಲ್ಲ ಹಾಲಿ- ಮಾಜಿ ಚುನಾಯಿತ ಪ್ರತಿನಿಧಿಗಳು, ನಗರದ ಸಂಘ ಸಂಸ್ಥೆಯವರನ್ನು ಸಭೆಗೆ ಆಹ್ವಾನಿಸಿ, ನಗರದ ಲಾಕ್ ಡೌನ್ ಸಂಬಂಧ ಸಮಯ ನಿಗದಿಪಡಿಸುವ ವಿಚಾರದಲ್ಲಿ ವಿಶ್ವಾಸಕ್ಕೆ ತೆಗೆದುಕೊಂಡು ಅಂದೇ ಸಭೆ ನೆಡೆಸಿದ್ದರೆ.S.J.V.P. ಕಾಲೇಜಿನಲ್ಲಿ ನಡೆದ ಸಭೆಯಲ್ಲಿ ಹಾಲಿ-ಮಾಜಿ ಶಾಸಕರ ನಡುವೆ ಮಾತಿನ ಚಕಮಕಿ ನಡೆಯುತ್ತಿರಲಿಲ್ಲ.

ತಾಲೂಕಾಡಳಿತ ಮಾಡಿದ ಒಂದು ತಪ್ಪಿನಿಂದ ಇಂದು ತಾಲ್ಲೂಕಿನಲ್ಲಿ ರಾಜಕೀಯ ಕೆಸರಾಟ ಪ್ರಾರಂಭವಾಗಿದೆ. ಉಭಯ ನಾಯಕರ ನಡುವಿನ ಮಾತಿನ ಸಮರ ಸದ್ಯಕ್ಕೆ ನಿಲ್ಲುವ ಲಕ್ಷಣ ಕಾಣುತ್ತಿಲ್ಲ ,

ನಗರದಲ್ಲಿ ದಿನೇ ದಿನೇ ಕೊರೊನಾ ಸೇೂಂಕಿತ ಪ್ರಕರಣಗಳು ಹೆಚ್ಚಾಗುತ್ತಿವೆ, ವಾರ್ಡ್ ವಾರ್ಡ್ ಗಳು ಸೀಲ್ ಡೌನ್ ಆಗುತ್ತಿವೆ,ಇಂತಹ ಸಂದರ್ಭದಲ್ಲಿ ಮಾತಿನ ಚಕಮಕಿ ಬೇಕಿತ್ತೇ .?

ಕರೋನಾ ಸಂಕಷ್ಟದ ಪರಿಸ್ಥಿತಿಯ ಸಂದರ್ಭದಲ್ಲಿ ತಾಲೂಕಾಡಳಿತ ಜವಾಬ್ದಾರಿಯಿಂದ ನಡೆದುಕೊಂಡು ಎಲ್ಲರ ವಿಶ್ವಾಸ ತೆಗೆದುಕೊಂಡಿದ್ದರೆ ಶನಿವಾರದಂತಹ ಘಟನೆ ನಡೆಯುತ್ತಿರಲಿಲ್ಲ .

ಬೇಜವಾಬ್ದಾರಿತನದಿಂದ ನಡೆದುಕೊಂಡ ಅಧಿಕಾರಿಗಳನ್ನು ವರ್ಗಾವಣೆ ಮಾಡುವುದರ ಮೂಲಕ ಉಭಯ ಪಕ್ಷದ ನಾಯಕರ ನಡುವಿನ ಮಾತಿನ ಸಮರಕ್ಕೆ ರಾಜ್ಯ ಸರ್ಕಾರ ಬ್ರೇಕ್ ಹಾಕುತ್ತಾ ಕಾದು ನೋಡಬೇಕಾಗಿದೆ .

ತಾಲ್ಲೂಕಿನ ಜನರಿಗೆ ‘ಜೀವ'(ಹಾಲಿ)- ‘ಜೀವನ'(ಮಾಜಿ) ಎರಡು ಮುಖ್ಯ ,ಜೀವನಕ್ಕೆ ಏನು ಬೇಕೋ ಅದನ್ನು ಹಾಲಿ- ಮಾಜಿ ಶಾಸಕರು ರಾಜಕೀಯ ಕೆಸರಾಟ ಮಾಡುವುದನ್ನು ಬಿಟ್ಟು, ತಾಲ್ಲೂಕಿನ ಜನರ ಕೈ ಹಿಡಿದು,ಧೈರ್ಯ ತುಂಬುವ ಕೆಲಸ ಮಾಡಲಿ ಎಂಬುದೇ ನಮ್ಮ ಪತ್ರಿಕೆಯ ಆಶಯವಾಗಿದೆ.

‘ಮನೆಗೆ ಬಿದ್ದ ಬೆಂಕಿಯಲ್ಲಿ ,ಬೀಡಿ ಹಚ್ಚಿಕೊಳ್ಳದೆ.ತಾಲ್ಲೂಕಿನಲ್ಲಿ ಹೆಚ್ಚುತ್ತಿರುವ ಕರೋನಾ ವೈರಸ್ ನಿಯಂತ್ರಣಕ್ಕೆ ಪರಿಹಾರ ಹುಡುಕುವ ಪ್ರಯತ್ನವನ್ನು ಎಲ್ಲರೂ ಒಟ್ಟಿಗೆ ಸೇರಿ ಮಾಡೋಣ .

Be the first to comment

Leave a Reply

Your email address will not be published.


*