ಕೊನೆಗೂ ಆ ಪರಿಸ್ಥಿತಿ ಬಂದೇ ಬಿಟ್ಟಿದೆ.
ಸತ್ತ ಮನುಷ್ಯನ ದೇಹವನ್ನು ಹೇಗೆ ಘನತೆಯಿಂದ ಸಂಸ್ಕಾರ ಮಾಡುವುದು.
ಹರಿಹರ:ನಿನ್ನೆಯ ಒಂದು ದೃಶ್ಯ,
ಹೆಣಗಳನ್ನು ಮೂಟೆಯಲ್ಲಿ ಕಟ್ಟಿ ಹಳ್ಳಕ್ಕೆ ಬಿಸಾಕಿ ಮಣ್ಣು ಮುಚ್ಚುವುದು ಸಾಂಪ್ರದಾಯಿಕ ಮನಸ್ಸುಗಳಿಗೆ ತುಂಬಾ ಘಾಸಿ ಉಂಟು ಮಾಡಿದೆ. ಕನಿಷ್ಠ ಅಂತ್ಯ ಸಂಸ್ಕಾರವೂ ಗೌರವಯುತವಾಗಿ ಮಾಡದ ಅಸಹಾಯಕ ಸ್ಥಿತಿಗೆ ವ್ಯವಸ್ಥೆ ಹದಗೆಟ್ಟಿದೆ. ಕೊರೋನಾ ವೈರಸ್ ಭಯವೇ ಇದಕ್ಕೆಲ್ಲಾ ಕಾರಣ.
ಶವಸಂಸ್ಕಾರದ ಬಗ್ಗೆ ಅನೇಕ ಧಾರ್ಮಿಕ ಕಟ್ಟುಪಾಡುಗಳು ವಿವಿಧ ಸಮುದಾಯಗಳಲ್ಲಿ ವಿವಿಧ ರೀತಿಯಲ್ಲಿ ಆಚರಣೆಯಲ್ಲಿವೆ. ಆದರೆ ಈಗಿನ ಪರಿಸ್ಥಿತಿಯಲ್ಲಿ ಅದನ್ನು ಅನುಸರಿಸುವುದು ತುಂಬಾ ತುಂಬಾ ಕಷ್ಟ. ಹಾಗಂತ ಸಿಕ್ಕ ಸಿಕ್ಕ ಕಡೆ ಬಿಸಾಡುವುದು ತಪ್ಪು ಮತ್ತು ಕಾನೂನು ಬಾಹಿರ. ಕೆಲವು ಪ್ರಕರಣಗಳಲ್ಲಿ ಸತ್ತವರ ಮನೆಯವರು ಶವವನ್ನು ಸ್ವೀಕರಿಸಲು ನಿರಾಕರಿಸಿದ ಘಟನೆಗಳು ಸಹ ಘಟಿಸುತ್ತಿದೆ. ಈಗ ಮಾಡುವುದಾದರೂ ಏನು ?
ಸ್ಥಳೀಯವಾಗಿಯೇ ನಿರ್ಧಾರ ತೆಗೆದುಕೊಳ್ಳುವ ಅಧಿಕಾರ ನೀಡಿದರೆ ಅನೇಕ ಪಕ್ಷಪಾತದ ದೂರುಗಳನ್ನು ಎದುರಿಸಬೇಕಾಗುತ್ತದೆ ಅಥವಾ ಒಂದೊಂದು ಸಮುದಾಯದವರು ಒಂದೊಂದು ರೀತಿಯ ಆಚರಣೆಗೆ ಒಲವು ತೋರಬಹುದು ಅಥವಾ ವೈಜ್ಞಾನಿಕವಾಗಿ ಸತ್ತ ದೇಹದಿಂದ ಕೊರೋನಾ ರೋಗ ಹರಡುವುದಿಲ್ಲ ಎಂದು ಅರ್ಥಮಾಡಿಸುವುದು ಸಹ ಈಗಿನ ಸಂದರ್ಭದಲ್ಲಿ ಸಾಧ್ಯವಿಲ್ಲ. ಜನರನ್ನು ಭಯಭೀತಗೊಳಿಸಲಾಗಿದೆ.
ಆದ್ದರಿಂದ ಸರ್ಕಾರವೇ ಕೊರೋನಾ ವೈರಸ್ ನಿಂದಾಗಿ ಆಗುವ ಮರಣದ ಶವಸಂಸ್ಕಾರಕ್ಕೆ ಹೊಸ ನೀತಿಯನ್ನು ಸುಗ್ರೀವಾಜ್ಞೆ ಮೂಲಕ ತಕ್ಷಣವೇ ಜಾರಿಗೆ ತರಬೇಕು. ಅದರ ಪ್ರಕಾರ ಕೊರೋನಾ ವೈರಸ್ ನಿಂದ ಸಾವಿಗೀಡಾದ ಯಾವುದೇ ವ್ಯಕ್ತಿಯ ಶವವನ್ನು ಸಂಬಂಧಿಸಿದವರಿಗೆ ನೀಡಲಾಗುವುದಿಲ್ಲ. ಗರಿಷ್ಠ 12 ಗಂಟೆಯವರೆಗೆ ಶವವನ್ನು ಒಂದು ನಿರ್ಧಿಷ್ಟ ಶವಾಗಾರದಲ್ಲಿ ಇಡಲಾಗುತ್ತದೆ. ಆಸಕ್ತಿ ಇರುವ ಕೆಲವೇ ರಕ್ತ ಸಂಬಂಧಿಗಳು ಒಂದು ಗಾಜಿನ ಗೋಡೆಯ ಮರೆಯಲ್ಲಿ ನಿಂತು ತಮ್ಮ ನಂಬುಗೆಯ ರೀತಿ ಪೂಜೆ ಪುರಸ್ಕಾರ ಅಥವಾ ಪ್ರಾರ್ಥನೆ ಸಲ್ಲಿಸಬಹುದು. ಅದಕ್ಕೂ ಸಮಯದ ಮಿತಿ ಗೊತ್ತುಪಡಿಸಬೇಕು. ನಂತರ ಶವವನ್ನು ಸರ್ಕಾರದ ವತಿಯಿಂದಲೇ ವಿದ್ಯುತ್ ಚಿತಾಗಾರದಲ್ಲಿ ಸಂಸ್ಕಾರ ಮಾಡುವುದು. ಎಂದಿನಂತೆ ಬೂದಿಯನ್ನು ಇಚ್ಛಿಸಿದವರಿಗೆ ನೀಡುವುದು ಅಥವಾ ಇದಕ್ಕಿಂತ ಉತ್ತಮ ವಿಧಾನ ಇದ್ದರೆ ಅದನ್ನು ಜಾರಿಗೊಳಿಸುವುದು.
ಇದನ್ನು ಜಾತಿ ಧರ್ಮ ಲಿಂಗ ವರ್ಗ ಮುಂತಾದ ಯಾವುದೇ ತಾರತಮ್ಯವಿಲ್ಲದೆ ಇಡೀ ರಾಜ್ಯಕ್ಕೆ ಅನ್ವಯಿಸುವುದು. ಇದು ಕಾನೂನಿನ ರೂಪ ಪಡೆದರೆ ಎಲ್ಲರೂ ಒಪ್ಪಿಕೊಳ್ಳಲೇಬೇಕು.
ಇಲ್ಲದಿದ್ದರೆ ಶವ ಸಂಸ್ಕಾರವೇ ಒಂದು ದೊಡ್ಡ ವಿವಾದ ಮತ್ತು ಸಮಸ್ಯೆಯಾಗಿ ಪರಿವರ್ತನೆಯಾಗಬಹುದು. ಏಕೆಂದರೆ ವೈದ್ಯಕೀಯ ಸಿಬ್ಬಂದಿಯಿಂದ ಯಾರದೋ ಶವದ ಘನತೆ ಕಾಪಾಡುವ ಒತ್ತಡ ನಿರೀಕ್ಷಿಸಲಾಗದು. ಅವರಿಗೂ ಜೀವ ಭಯ ಶುರುವಾಗಿದೆ.
ಇದು ಅತ್ಯಂತ ಸಂಕಷ್ಟದ ಸಮಯ. ಅನಿವಾರ್ಯವಾಗಿ ಸತ್ತವರಿಗಿಂತ ಇರುವವರನ್ನು ಉಳಿಸಿಕೊಳ್ಳುವುದೇ ಮೊದಲ ಆದ್ಯತೆಯಾಗಬೇಕು. ಹಿಂದೆಯೂ ಕೆಲವು ಸಾಮೂಹಿಕ ಶವ ಸಂಸ್ಕಾರಗಳನ್ನು ಮಾಡಲಾಗಿದೆ. ಆದರೆ ಆಗೆಲ್ಲಾ ಮಾರಕ ಸಾಂಕ್ರಾಮಿಕ ರೋಗದ ಭೀತಿ ಅಷ್ಟಾಗಿ ಇರಲಿಲ್ಲ. ಈಗ ಶವವನ್ನು ಮುಟ್ಟುವುದು ಅಪಾಯಕಾರಿ ಅಲ್ಲ ಎಂದು ತಿಳಿದಿದ್ದರೂ ಜನರು ಹಿಂದೇಟು ಹಾಕುತ್ತಿದ್ದಾರೆ.
ನೋಡಿ, ಯಾವೆಲ್ಲ ಪರಿಸ್ಥಿತಿಗೆ ನಾವು ತಲುಪಿದ್ದೇವೆ. ಇದು ಹೀಗೆ ಇನ್ನೂ ಮುಂದುವರೆದರೆ, ನಿಯಂತ್ರಣದ ಲಸಿಕೆ ಸಂಶೋಧನೆಯಾಗದಿದ್ದರೆ ಆಗ ಪರಿಸ್ಥಿತಿ ಮತ್ತಷ್ಟು ಹದಗೆಡಬಹುದು. ಅದಕ್ಕೆ ಇರುವ ಮೂಲ ಮತ್ತು ಏಕೈಕ ಪರಿಹಾರ…..
” ಧೈರ್ಯಂ ಸರ್ವತ್ರ ಸಾಧನಂ “
ಧೈರ್ಯದಿಂದ ಎಲ್ಲವನ್ನೂ ಗೆಲ್ಲಬಹುದು. ಇಲ್ಲಿಯವರೆಗಿನ ಸಾಂಪ್ರದಾಯಿಕ ಯೋಚನಾ ವಿಧಾನವನ್ನು ಬದಲಾಯಿಸಿ ಪರಿಸ್ಥಿತಿ ಅರ್ಥಮಾಡಿಕೊಂಡು ಜೀವನ ವಿಧಾನ ಬದಲಾಯಿಸಿ ರೋಗದ ವಿರುದ್ಧ, ಆರ್ಥಿಕ ಅಭಿವೃದ್ಧಿಯ ಪರವಾಗಿ ಬದುಕನ್ನು ಮುನ್ನಡೆಸುವ ದೃಢ ನಿರ್ಧಾರ ಮಾಡಿದಲ್ಲಿ ಬಹುಶಃ ಈ ಕೊರೋನಾ ವೈರಸ್ ಸಿಂಡ್ರೋಮ್ ಎಂಬುದನ್ನು ಮೆಟ್ಟಿ ನಿಲ್ಲಬಹುದು.
ಸಾವಿನ ಭಯದಿಂದ ನಿರಂತರ ನರಳುವ ಬದಲು ಕೊರೋನಾ ನಮ್ಮ ಸಹ ಜೀವಿ ಎಂದು ಭಾವಿಸಿ ಅದರೊಂದಿಗೆ ಜೀವಿಸುತ್ತಾ ಸ್ವಲ್ಪ ನೆಮ್ಮದಿ ಕಾಣೋಣ. ಮಾಧ್ಯಮಗಳ ಅತಿರಂಜಿತ ವರದಿಗಳನ್ನು ನಿರ್ಲಕ್ಷಿಸೋಣ. ಈಗ ತಕ್ಷಣಕ್ಕೆ ಶವಗಳ ಘನತೆಯನ್ನು ಕಾಪಾಡುವ ಏಕ ರೂಪದ ನೀತಿಗೆ ಸರ್ಕಾರದ ಮೇಲೆ ಒತ್ತಡ ಹೇರೋಣ.
Be the first to comment