ಜೀಲ್ಲಾ ಸುದ್ದಿಗಳು
ಬೀದರ್:-ರಾಜ್ಯ ಸರ್ಕಾರ ದಿಢೀರ್ ಎಪಿಎಂಸಿ ಕಾಯ್ದೆ ತಿದ್ದುಪಡಿಗೆ ಮುಂದಾಗಿರುವುದನ್ನು ವಿರೋಧಿಸಿ ನಗರದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ವ್ಯಾಪ್ತಿಯ ಗಾಂಧಿಗಂಜ್ ವ್ಯಾಪಾರಿಗಳು ಗುರುವಾರ ಅಂಗಡಿ ಬಂದ್ ಮಾಡಿ ಪ್ರತಿಭಟನೆ ನಡೆಸಿದರು.
ಸಂಪೂರ್ಣ ಅಂಗಡಿ, ಮುಂಗಟ್ಟುಗಳು ಬಂದ್ ಆಗಿದ್ದ ಕಾರಣ ಗಾಂಧಿಗಂಜ್‍ನಲ್ಲಿ ಯಾವುದೇ ವ್ಯಾಪಾರ, ವಹಿವಾಟು ನಡೆಯಲಿಲ್ಲ. ಪ್ರಮುಖ ವ್ಯಾಪಾರ ಕೇಂದ್ರ ದಿನವಿಡೀ ಯಾವುದೇ ಚಟುವಟಿಕೆಗಳು ಇಲ್ಲದೇ ಬಿಕೋ ಎನ್ನುತ್ತಿತ್ತು.
ವ್ಯಾಪಾರಿಗಳು ದಿ ಗ್ರೇನ್ ಆ್ಯಂಡ್ ಸೀಡ್ಸ್ ಮರ್ಚಂಟ್ಸ್ ಅಸೋಸಿಯೇಶನ್ ಅಧ್ಯಕ್ಷ ಬಸವರಾಜ ಧನ್ನೂರ ಅವರ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಹಾಗೂ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಕಚೇರಿಗೆ ತೆರಳಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಕೃಷಿ ಮಾರುಕಟ್ಟೆ ಸಚಿವ ಎಸ್.ಟಿ. ಸೋಮಶೇಖರ ಅವರಿಗೆ ಬರೆದ ಪ್ರತ್ಯೇಕ ಮನವಿ ಪತ್ರಗಳನ್ನು ಸಲ್ಲಿಸಿದರು.
ರಾಜ್ಯ ಸರ್ಕಾರವು ಕೇಂದ್ರ ಸರ್ಕಾರದ ನಿರ್ದೇಶನದಂತೆ ಕೃಷಿ ವಲಯವನ್ನು ಖಾಸಗೀಕರಣಗೊಳಿಸುವ ಉದ್ದೇಶದಿಂದ ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತರಲು ಹೊರಟಿದೆ ಎಂದು ಬಸವರಾಜ ಧನ್ನೂರ ಆರೋಪಿಸಿದರು.
ಉದ್ದೇಶಿತ ಎಪಿಎಂಸಿ ತಿದ್ದುಪಡಿ ಕಾಯ್ದೆಯು ಸುದೀರ್ಘ ಅವಧಿಯಿಂದ ನಡೆದುಕೊಂಡು ಬಂದಿರುವ ಎಪಿಎಂಸಿ ವ್ಯವಸ್ಥೆಯನ್ನು ಬುಡಮೇಲು ಮಾಡಲಿದೆ. ರೈತರು, ವ್ಯಾಪಾರಿಗಳು, ಮಾರುಕಟ್ಟೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಗುಮಾಸ್ತರು, ಹಮಾಲರು ಹಾಗೂ ಇತರ ಕಾರ್ಮಿಕರಿಗೆ ಮಾರಕವಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಬಹುರಾಷ್ಟ್ರೀಯ/ ಕಾರ್ಪೋರೇಟ್ ಕಂಪನಿಗಳಿಗೆ ರತ್ನಗಂಬಳಿ ಹಾಸಿ, ಕೃಷಿ ಹಾಗೂ ಗ್ರಾಹಕ ಮಾರುಕಟ್ಟೆಯನ್ನು ವರ್ಗಾಯಿಸುವ ಹಾಗೂ ಅವುಗಳಿಗೆ ಅನುಕೂಲ ಮಾಡಿಕೊಡುವ ಉದ್ದೇಶ ಎಪಿಎಂಸಿ ಕಾಯ್ದೆ ತಿದ್ದುಪಡಿ ಹಿಂದೆ ಇದೆ ಎಂದು ದೂರಿದರು.
ಕಾಯ್ದೆ ತಿದ್ದುಪಡಿಯು ಬಹುರಾಷ್ಟ್ರೀಯ/ಕಾರ್ಪೋರೇಟ್ ಕಂಪನಿಗಳಿಗೆ ರೈತರು ಹಾಗೂ ಗ್ರಾಹಕರನ್ನು ಮನಬಂದಂತೆ ಶೋಷಣೆ ಮಾಡಲು ನೆರವಾಗಲಿದೆ. ಶೇ 1.5 ರಷ್ಟು ಮಾರುಕಟ್ಟೆ ಶುಲ್ಕ ಪಾವತಿ ಸ್ಥಗಿತಗೊಂಡು ಸರ್ಕಾರದ ಬೊಕ್ಕಸಕ್ಕೂ ನಷ್ಟ ಉಂಟಾಗಲಿದೆ ಎಂದು ಹೇಳಿದರು.
ರಾಜ್ಯದ ಎಪಿಎಂಸಿ ವ್ಯವಸ್ಥೆ ಇಡೀ ದೇಶದಲ್ಲೇ ಮಾದರಿಯಾಗಿದೆ. ರೈತರಿಗೆ ಅನುಕೂಲಕರ ಹಾಗೂ ಪಾರದರ್ಶಕವೂ ಆಗಿದೆ. ಹೀಗಾಗಿ ಈಗಿರುವ ಕಾಯ್ದೆಯನ್ನೇ ಮುಂದುವರಿಸಿಕೊಂಡು ಹೋಗಬೇಕು. ಎಪಿಎಂಸಿ ಕಾಯ್ದೆ ತಿದ್ದುಪಡಿಯನ್ನು ಕೈಬಿಡಬೇಕು ಎಂದು ಆಗ್ರಹಿಸಿದರು.
ಬೀದರ್ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷ ಬಿ.ಜಿ. ಶೆಟಕಾರ್, ದಿ ಗ್ರೇನ್ ಆ್ಯಂಡ್ ಸೀಡ್ಸ್ ಮರ್ಚಂಟ್ಸ್ ಅಸೋಸಿಯೇಶನ್ ಉಪಾಧ್ಯಕ್ಷ ಅಣ್ಣಾರಾವ್ ಮೊಗಶೆಟ್ಟಿ, ಕಾರ್ಯದರ್ಶಿ ಭಗವಂತ ಔದತ್‍ಪುರ, ಬಸವರಾಜ ಭಂಡೆ, ಸೋಮನಾಥ ಗಂಗಶೆಟ್ಟಿ, ರಾಜಕುಮಾರ ಗುನ್ನಳ್ಳಿ, ನಾಗಶೆಟ್ಟೆಪ್ಪ ದಾಡಗಿ, ಚಂದ್ರಪ್ಪ ಹಳ್ಳಿ, ವಿಶ್ವನಾಥ ಕಾಜಿ ಇದ್ದರು.
Be the first to comment