ಕೋರೋನಾ ವೈರಸ್ ಕುರಿತು ಮಾಧ್ಯಮದವರಿಗೆ ಕಾರ್ಯಾಗಾರ ನಿಖರ ವರದಿ ಪ್ರಸಾರಕ್ಕೆ ಜಿಲ್ಲಾಧಿಕಾರಿ ಮನವಿ

ವರದಿ:ರಾಘವೇಂದ್ರ ಮಾಸ್ತರ ಸುರಪುರ

ಜೀಲ್ಲಾ ಸುದ್ದಿಗಳು


ಜಾಹೀರಾತು

ಅಂಬಿಗ ನ್ಯೂಸ್ ಡೆಸ್ಕ್

ಯಾದಗಿರಿ; ಸರ್ಕಾರದ ಆದೇಶದಂತೆ ಜಿಲ್ಲೆಯಲ್ಲಿ ಕೊರೋನಾ ವೈರಸ್ ಸೋಂಕು ಹರಡದಂತೆ ಜಿಲ್ಲಾಡಳಿತವು ಸೂಕ್ತ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದು ಸಾರ್ವಜನಿಕರು ಆತಂಕ ಪಡುವ ಅಗತ್ಯವಿಲ್ಲ.

ಮಾಧ್ಯಮದವರು ಸಂಬಂಧಪಟ್ಟ ಅಧಿಕಾರಿಗಳಿಂದ ಮಾಹಿತಿ ಪಡೆದು ಸುದ್ದಿಪ್ರಸಾರ ಮಾಡುವಂತೆ ಜಿಲ್ಲಾಧಿಕಾರಿ ಎಂ ಕೂರ್ಮಾರಾವ್ ಅವರು ತಿಳಿಸಿದರು.

ನಗರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಾರ್ಯಾಲಯದ ಸಭಾಂಗಣದಲ್ಲಿ ಗುರುವಾರ ಜಿಲ್ಲಾಡಳಿತ ಜಿಲ್ಲಾ ಪಂಚಾಯಿತಿ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಮಾಧ್ಯಮದವರಿಗೆ ಹಮ್ಮಿಕೊಂಡಿದ್ದ ಕೊರೋನಾ ವೈರಸ್ ಜಾಗೃತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

ದೊಡ್ಡ ಸಭೆ-ಸಮಾರಂಭಗಳಲ್ಲಿ ಸಾರ್ವಜನಿಕರು ಭಾಗವಹಿಸದಂತೆ ಮನವಿ ಮಾಡಲಾಗಿದೆ ಸಂತೆ ಮತ್ತು ಜಾತ್ರೆಯಲ್ಲಿ ಹೆಚ್ಚಿನ ಜನ ಸೇರುವುದರಿಂದ ಸ್ಥಳೀಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ತಿಳುವಳಿಕೆ ನೀಡಿ ಜಾತ್ರೆಗಳನ್ನು ನಿಷೇಧಿಸಲಾಗುತ್ತಿದೆ. ದಿನನಿತ್ಯದ ಸಣ್ಣಪುಟ್ಟ ವಹಿವಾಟುಗಳಿಗೆ ಯಾವುದೇ ತೊಂದರೆಯಿಲ್ಲ ಇದುವರೆಗೆ ವಿದೇಶದಿಂದ ಬಂದ 48 ಜನರಲ್ಲಿ ಯಾವುದೇ ಸೊಂಕು ಇಲ್ಲ.

ಮುಂಜಾಗ್ರತಾ ಕ್ರಮವಾಗಿ ಯಾದಗಿರಿ ಶಹಾಪುರ ಹಾಗೂ ಸುರಪುರ ಸಾರ್ವಜನಿಕ ಆಸ್ಪತ್ರೆಗಳಲ್ಲಿ ಒಟ್ಟು 27 ಐಸೋಲೇಶನ್ ಬೆಡ್ಗಳ ವ್ಯವಸ್ಥೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ಯಾದಗಿರಿ ನಗರದ ರೈಲ್ವೆ ನಿಲ್ದಾಣ ಹೊಸ ಬಸ್ ನಿಲ್ದಾಣ ಹಾಗೂ ಯರಗೋಳ ಗುರುಮಿಟ್ಕಲ್ ಸಮೀಪದ ಗ್ರಾಮದಲ್ಲಿ ಚೆಕ್ ಪೋಸ್ಟ್ ಗಳನ್ನು ಸ್ಥಾಪಿಸಿ ಸ್ಕ್ರೀನಿಂಗ್ ಮಾಡಲಾಗುತ್ತಿದೆ ಅಲ್ಲದೆ ಜಿಲ್ಲೆಯ ಎಲ್ಲಾ ಗ್ರಾಮಗಳಲ್ಲಿ ಈ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. ರೋಗದ ಲಕ್ಷಣಗಳು ಕಂಡುಬಂದಲ್ಲಿ ಆರೋಗ್ಯ ಸಹಾಯವಾಣಿ 104 ಅಥವಾ ಜಿಲ್ಲಾಡಳಿತದ ಸಹಾಯವಾಣಿ ಸಂಖ್ಯೆ
0 8 4 7 3 – 2 5 3 9 50 ಕರೆ ಮಾಡಲು ಅವರು ಮನವಿ ಮಾಡಿದರು,

ಧೀರ್ಘ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬರ ಗಂಟಲು ದ್ರವ್ಯ ಮಾದರಿಯನ್ನು ಜಿಲ್ಲೆಯಿಂದ ಪರೀಕ್ಷೆಗೆ ಕಳಿಸಿಕೊಡಲಾಗಿದೆ ಆದರೆ ಅವರು ವಿದೇಶದಿಂದ ಬಂದವರಲ್ಲ, ಅವರಿಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಹೃಷಿಕೇಶ ಭಾಗವಾನ ಸೋನಾವಣೆ ಅವರು ಮಾತನಾಡಿ ಸಾರ್ವಜನಿಕರಲ್ಲಿ ಕೊರೊನಾ ಕುರಿತಂತೆ ಸುಳ್ಳು ವದಂತಿಗಳನ್ನು ಹರಡುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ನಿಮ್ಮ ಆರೋಗ್ಯ ನಿಮ್ಮ ಕೈಯಲ್ಲಿ

ವಿಶ್ವ ಆರೋಗ್ಯ ಸಂಸ್ಥೆಯ ಕಲಬುರಗಿ ವಿಭಾಗೀಯ ಮತ್ತು ವೈದ್ಯಕೀಯ ಸರ್ವೇಕ್ಷಣಾಧಿಕಾರಿ ಡಾ:ಅನೀಲ್ ಕುಮಾರ್ ತಾಳಿಕೋಟೆ ಮಾತನಾಡಿ ಕೆಮ್ಮು ನೆಗಡಿ ಜ್ವರ ಉಸಿರಾಟತೊಂದರೆ ಇರುವವರೆಲ್ಲರೂ ಕೂರೋಣ ವೈರಸ್ ಸೊಂಕಿತರು ಎಂದು ಅನುಮಾನಿಸಬೇಡಿ

ಪ್ರತಿಯೊಬ್ಬರೂ ತಮ್ಮ ಕೈಗಳನ್ನು ಸ್ವಚ್ಛವಾಗಿ ಇಟ್ಟುಕೊಂಡು ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಿದರೆ ರೋಗ ಹರಡುವುದಿಲ್ಲ ನಿಮ್ಮ ಆರೋಗ್ಯ ನಿಮ್ಮ ಕೈಯಲ್ಲಿದೆ ಎಂದು ಹೇಳಿದರು.

ಮಾಸ್ಕಗಳನ್ನು ಪ್ರತಿಯೊಬ್ಬರು ಬಳಸುವ ಅಗತ್ಯವಿಲ್ಲ 8 ಗಂಟೆ ಮಾತ್ರ ಉಪಯೋಗಿಸಬಹುದು.

ಮಾಸ್ಕ್ ರೋಗಗಳನ್ನು ತಡೆಗಟ್ಟುತ್ತದೆ ಎನ್ನುವುದು ಸುಳ್ಳು ಸೊಂಕಿತ ವ್ಯಕ್ತಿಯು ಸೀನಿದಾಗ ಕೆಮ್ಮಿದಾಗ ಅವರ ಜೊತೆ ನಿಕಟ ಸಂಪರ್ಕದಲ್ಲಿರುವಾಗ ಹಸ್ತಲಾಘವ ಅಥವಾ ಮುಟ್ಟಿದಾಗ ಶಂಕಿತ ವ್ಯಕ್ತಿಯು ಬಳಸಿದ ವಸ್ತುಗಳನ್ನು ಯಾವುದೇ ರಕ್ಷಣೆ ಇಲ್ಲದೆ ಬಳಸಿದಾಗ ಸ್ವಚ್ಛಗೊಳಿಸದ ಕೈಗಳಿಂದ ಕಣ್ಣು ಬಾಯಿಯನ್ನು ಮುಟ್ಟಿಕೊಳ್ಳುವುದರಿಂದ ಸೊಂಕು ತಗಲುತ್ತದೆ ಎಂದು ಅವರು ತಿಳಿಸಿದರು.

ಕೆಮ್ಮು ನೆಗಡಿ ಜ್ವರ ಉಸಿರಾಟದ ತೊಂದರೆ ಇರುವ ಎಲ್ಲರಿಗೂ ಟೆಸ್ಟ್ ಮಾಡುವುದಿಲ್ಲ ಸರ್ಕಾರದ ನಿರ್ದೇಶನದ ಪ್ರಕಾರ ಪರೀಕ್ಷೆ ನಡೆಸಲಾಗುವುದು ಮುಖ್ಯವಾಗಿ ವಿದೇಶದಿಂದ ಬಂದವರನ್ನು 14 ದಿನಗಳವರೆಗೆ ನಿಗಾ ವಹಿಸಲಾಗುವುದು ಈ ಸಂದರ್ಭದಲ್ಲಿ ಅವರಲ್ಲಿ ರೋಗ ಲಕ್ಷಣಗಳು ಕಂಡುಬಂದಲ್ಲಿ ಐಸೋಲೇಷನ್ ವಾರ್ಡ್ ಗೆ ಕಳಿಸಿಕೊಡಲಾಗುವುದು ವ್ಯಕ್ತಿಯಿಂದ ವ್ಯಕ್ತಿಗೆ ರೋಗ ಲಕ್ಷಣಗಳು ಕಂಡು ಬರಲು ಎರಡರಿಂದ ನಾಲ್ಕು ದಿನ ಬೇಕು ಎಂದು ಅವರು ಮಾಹಿತಿ ನೀಡಿದರು.

ಜಿಲ್ಲೆಯಲ್ಲಿ ಇಲ್ಲಿಯವರೆಗೆ ಯಾವುದೇ ಶಂಕಿತ ಅಥವಾ ಕರೋನಾ ವೈರಸ್ ಪ್ರಕರಣಗಳು ದಾಖಲಾಗಿರುವುದಿಲ್ಲ

ವಿದೇಶದಿಂದ ಬಂದವರು ಸಮೀಪದ ಅಂಗನವಾಡಿ ಆಶಾ ಕಾರ್ಯಕರ್ತೆಯರಿಗೆ ಮಾಹಿತಿ ನೀಡಲು ಸಲಹೆ ನೀಡಿದರು.

27 ಡಿಗ್ರಿ ಸೆಲ್ಸಿಯಸ್ ಗಿಂತ ಹೆಚ್ಚಿನ ತಾಪಮಾನದಲ್ಲಿ ಕೊರೋನಾ ವೈರಸ್ ಬದುಕುವುದಿಲ್ಲ ಎನ್ನುವುದಕ್ಕೆ ಯಾವುದೇ ಆಧಾರವಿಲ್ಲ ಕಳೆದ ಜನವರಿ ತಿಂಗಳಲ್ಲಿ ಕೊರೋನಾ ಜನ್ಮತಾಳಿದ್ದು ಅದರ ವರ್ತನೆ ಬಗ್ಗೆ ನಿಖರ ಮಾಹಿತಿ ಇಲ್ಲ ಈ ಬಗ್ಗೆ ಸಂಶೋಧನೆಗಳು ನಡೆಯುತ್ತಿದ್ದು ಜನರು ವದಂತಿಗಳಿಗೆ ಕಿವಿಗೊಡಬಾರದು ರೋಗಕ್ಕೆ ನಿಖರವಾದ ಚಿಕಿತ್ಸೆ ಇರುವುದಿಲ್ಲ ಲಕ್ಷಣಗಳಿಗೆ ಅನುಗುಣವಾಗಿ ಚಿಕಿತ್ಸೆ ನೀಡಲಾಗುತ್ತದೆ ಎಂದು ಅವರು ತಿಳಿಸಿದರು
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಶಿಲ್ಪಾ ಶರ್ಮಾ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಎಂ ಎಸ್ ಪಾಟೀಲ ಜಿಲ್ಲಾ ಸರ್ವ ಶಿಕ್ಷಣಾಧಿಕಾರಿ ವಿವೇಕಾನಂದ ಟೆಂಗೆ ಶಹಾಪುರ ತಾಲೂಕು ವೈದ್ಯಾಧಿಕಾರಿ ಡಾಕ್ಟರ್ ರಮೇಶ್ ಹಾಗೂ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.


Be the first to comment

Leave a Reply

Your email address will not be published.


*