ಜಾಹೀರಾತು
ದಾವಣಗೆರೆ: ಕೊರೊನಾ ವೈರಸ್‍ನಿಂದಾಗಿ ಸಂಭವಿಸಬಹುದಾದ ಅನಾಹುತಗಳನ್ನು ತಡೆಗಟ್ಟಲು ಒಂದು ವಾರ ಮಾ.18 ರಿಂದ 24 ರವರೆಗೆ ಹಲವು ಮುಂಜಾಗೃತಾ ಕ್ರಮಗಳನ್ನು ತೆಗೆದುಕೊಳ್ಳಲು ಜಿಲ್ಲೆಯಾದ್ಯಂತ 144 ಸೆಕ್ಷನ್ ಜಾರಿ ಮಾಡಿ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಆದೇಶಿಸಿದ್ದಾರೆ.
ಸಾರ್ವಜನಿಕರು ಹೆಚ್ಚಾಗಿ ಸೇರುವಂತಹ ಸಂತೆ, ಜಾತ್ರೆ, ಸಮಾವೇಶ, ಸಮ್ಮೇಳನ, ಮದುವೆ, ಕ್ರೀಡಾ ಕೂಟ ಹಾಗೂ ಧಾರ್ಮಿಕ ಸಮಾರಂಭಗಳಲ್ಲಿ ಕೊರೊನಾ ವೈರಸ್ ಸೋಂಕು ಒಬ್ಬರಿಂದ ಒಬ್ಬರಿಗೆ ಹರಡುವಂತಹ ಸಾಧ್ಯತೆಗಳಿದ್ದು, ಇಂತಹ ಸಂದರ್ಭಗಳಲ್ಲಿ ಕೊರೊನಾ ವೈರಸ್ ಸೋಂಕು ಹರಡದಂತೆ ಸಾರ್ವಜನಿಕ ಹಿತದೃಷ್ಟಿಯಿಂದ ಪರಿಣಾಮಕಾರಿಯಾಗಿ ಸೂಕ್ತ ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳಲು ಮಾ.18 ರಿಂದ 24 ರವರೆಗೆ ದಾವಣಗೆರೆ ಜಿಲ್ಲೆಯಾದ್ಯಂತ ನಡೆಯಲಿರುವ ಜಾತ್ರೆ, ಸಂತೆ, ಸಮಾವೇಶ, ಮೆರವಣಿಗೆ, ಸಮ್ಮೇಳನ, ಕ್ರೀಡಾ ಕೂಟ ಹಾಗೂ ಯಾವುದೇ ಧಾರ್ಮಿಕ ಸಮಾರಂಭ ನಡೆಸುವುದನ್ನು ನಿಷೇಧಿಸಲಾಗಿದೆ. ಅಥವಾ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರದಂತೆ ನಿರ್ಬಂಧಿಸುವುದು ಅವಶ್ಯವೆಂದು ಕಂಡು ಬಂದಿರುವುದರಿಂದ ಸಿಆರ್‍ಪಿಸಿ 1973 ರ ಕಲಂ 144 ರನ್ವಯ ಮಾ.18 ರಿಂದ 24 ರವರೆಗೆ ಜಿಲ್ಲೆಯಾದ್ಯಂತ 5 ಕ್ಕಿಂತ ಹೆಚ್ಚು ಜನರು ಗುಂಪು ಸೇರುವುದನ್ನು ನಿಷೇಧಿಸಿ, ನೀಷೇಧಾಜ್ಞೆಯನ್ನು ಜಿಲ್ಲಾಧಿಕಾರಿ ಆದೇಶಿಸಿದ್ದಾರೆ.
ಈ ಆದೇಶವು ಅಂತ್ಯಕ್ರಿಯೆ, ಮೆರವಣಿಗೆ ಮತ್ತು ಪರೀಕ್ಷೆಯಲ್ಲಿ ಪಾಲ್ಗೊಳ್ಳುವ ವಿದ್ಯಾರ್ಥಿಗಳಿಗೆ ಅನ್ವಯಿಸುವುದಿಲ್ಲವೆಂದು ಪ್ರಕಟಣೆ ತಿಳಿಸಿದೆ.
Be the first to comment