ಸಿದ್ದರಾಮಯ್ಯ ವಿರುದ್ಧದ ಮುಡಾ ಹಗರಣ ಆರೋಪ ಹರಿಯಾಣ ಚುನಾವಣೆ ಮೇಲೆ ಎಫೆಕ್ಟ್ ಆಗಿದೆ: ಕೋಳಿವಾಡ

 

ಸಿ ಎಂ ಸಿದ್ದರಾಮಯ್ಯ ರಾಜೀನಾಮೆ ಕೊಟ್ಟು ತನಿಖೆ ಎದುರಿಸಬೇಕು ಎಂಬ ನನ್ನ ಹೇಳಿಕೆಗೆ ನಾನು ಈಗಲೂ ಬದ್ಧನಾಗಿದ್ದೇನೆ. ಮುಖ್ಯಮಂತ್ರಿಗಳು ರಾಜೀನಾಮೆ ಕೊಡಲಿ ಎಂಬ ನನ್ನ ಹೇಳಿಕೆ ಅಳಿಸಲು ಸಾಧ್ಯವಿಲ್ಲ. ನಾನು ಕಾಂಗ್ರೆಸ್ ಪಕ್ಷದ ದೃಷ್ಟಿಯಿಂದ ಆ ಮಾತನ್ನು ಹೇಳಿದ್ದೇನೆ ಎಂದು ಕಾಂಗ್ರೆಸ್ ಹಿರಿಯ ನಾಯಕ ಕೆಬಿ ಕೋಳಿವಾಡ ಹೇಳಿದರು.​

ಬೆಂಗಳೂರು, ಅಕ್ಟೋಬರ್​ 08: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಕೇಳಿಬಂದಿರುವ ಮುಡಾ ಹಗರಣದ ಆರೋಪ ಹರಿಯಾಣ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಎಫೆಕ್ಟ್ ನೀಡಿದೆ.

ಚುನಾವಣೆ ಪ್ರಚಾರದಲ್ಲಿ ಪ್ರಧಾನಿ ಮೋದಿಯವರು ಮುಡಾ ಹಗರಣದ ಬಗ್ಗೆ ಪದೇಪದೆ ಮಾತನಾಡಿದ್ದೂ ಕೂಡ ಸಾಕಷ್ಟು ಎಫೆಕ್ಟ್ ಆಗಿದೆ ಎಂದು ಕಾಂಗ್ರೆಸ್ ಹಿರಿಯ ನಾಯಕ ಕೆ.ಬಿ.ಕೋಳಿವಾಡ (KB Koliwad) ಹೇಳಿದರು. ಬೆಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಟ್ಟು ತನಿಖೆ ಎದುರಿಸಬೇಕು ಎಂಬ ನನ್ನ ಹೇಳಿಕೆಗೆ ನಾನು ಈಗಲೂ ಬದ್ಧನಾಗಿದ್ದೇನೆ ಎಂದರು.

ಮುಖ್ಯಮಂತ್ರಿಗಳು ರಾಜೀನಾಮೆ ಕೊಡಲಿ ಎಂಬ ನನ್ನ ಹೇಳಿಕೆ ಅಳಿಸಲು ಸಾಧ್ಯವಿಲ್ಲ. ನಾನು ಕಾಂಗ್ರೆಸ್ ಪಕ್ಷದ ದೃಷ್ಟಿಯಿಂದ ಆ ಮಾತನ್ನು ಹೇಳಿದ್ದೇನೆ. ಕಾಂಗ್ರೆಸ್ ಪಕ್ಷಕ್ಕೆ ಧಕ್ಕೆ ಆದರೆ ನೋಟಿಸ್ ಕೊಡುತ್ತಾರೆ. ನಾನು ಸಕ್ರಿಯ ರಾಜಕಾರಣದಲ್ಲಿ ಇಲ್ಲ, ಪಕ್ಷ ಉಳಿಸಲು ಕೆಲಸ ಮಾಡುತ್ತೇನೆ ಎಂದರು.

ಎಐಸಿಸಿ ನಾಯಕರು ಯಾಕೆ ನನಗೆ ಎಚ್ಚರಿಕೆ ನೀಡುತ್ತಾರೆ? ನಾನು ಕಾಂಗ್ರೆಸ್​ನ ಹಿರಿಯ ನಾಯಕ. ನಾನು (ಕೋಳಿವಾಡ) ಮತ್ತು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸ್ನೇಹಿತರು. ನನ್ನ ಅಭಿಪ್ರಾಯವನ್ನ ನಾನು ಹೇಳಿದ್ದೇನೆ. ಮಲ್ಲಿಕಾರ್ಜುನ್​ ಖರ್ಗೆಯವರೂ ಕೂಡ ಅವರು ಇರಬಹುದು, ಇಲ್ಲದೇ ಇರಬಹುದು, ಪಕ್ಷ ಇರುತ್ತದೆ ಎಂದು ಹೇಳಿದ್ದಾರೆ ಎಂದು ತಿಳಿಸಿದರು

ಕಾಂತರಾಜ ವರದಿ ಕೇವಲ ಆರ್ಥಿಕ ಶೈಕ್ಷಣಿಕ ಸಾಮಾಜಿಕ ಜನಗಣತಿ ಮಾತ್ರವಲ್ಲ. ಅದು ಜಾತಿ ಜನಗಣತಿ ಕೂಡ ಹೌದು. ಅವೈಜ್ಞಾನಿಕ ಅಂದರೆ ಹೇಗೆ ಅಂತ ಅರ್ಥವಾಗುತ್ತಿಲ್ಲ. ಜಾತಿ ಗಣತಿ ವರದಿಯಿಂದ ಯಾವುದೇ ಸಮುದಾಯಕ್ಕೆ ಅನ್ಯಾಯ ಆಗುತ್ತದೆ ಎಂದು ಅನಿಸುವುದಿಲ್ಲ. ಇದನ್ನು ಜಾರಿಗೆಗೆ ವಿಳಂಬ ಮಾಡುವ ಅವಶ್ಯಕತೆ ಇಲ್ಲ. ಜಾತಿಗಣತಿ ಜಾರಿಗೆ ನನ್ನ ಬೆಂಬಲ ಇದೆ. ಒಂದು ತಿಂಗಳು ಸಮಯ ಕೊಟ್ಟು ಏನಾದರೂ ಬದಲಾವಣೆ ಇದ್ದರೆ ಮಾಡಲಿ. ಜಾತಿ ಜನಗಣತಿ ಮಾಡುವಾಗ ನಾನೇ ವೈಯಕ್ತಿಕವಾಗಿ ಹಲವು ಕಡೆ ಹೋಗಿದ್ದೇನೆ. ಪ್ರತಿಯೊಂದು ಮನೆಗೆ ಭೇಟಿ ನೀಡಿದ್ದಾರೆ. ಉಪಜಾತಿಯನ್ನೂ ಕೂಡ ದಾಖಲು ಮಾಡಿಕೊಂಡಿದ್ದಾರೆ. ಬಹಳ ಉತ್ತಮವಾಗಿ ಜನಗಣತಿ ಮಾಡಿದ್ದಾರೆ ಎಂದು ಹೇಳಿದರು.

Be the first to comment

Leave a Reply

Your email address will not be published.


*