ಜೆರುಸಲೇಂ: ಪ್ಯಾಲೆಸ್ತೀನ್‌ನ ಹಮಾಸ್ ಉಗ್ರರಿಗೆ ಬೆಂಬಲವಾಗಿ ನಿಂತು ತನಗೆ ಉಪಟಳ ನೀಡುತ್ತಿರುವ ಲೆಬನಾನ್‌ನ ಹಿಜ್ಬುಲ್ಲಾ ಉಗ್ರ ಸಂಘಟನೆಯ ಪರಮೋಚ್ಚ ನಾಯಕ ಹಸನ್ ನಸ್ರಲ್ಲಾನನ್ನು ಹೊಡೆದುರುಳಿಸುವ ಮೂಲಕ ಭಯೋತ್ಪಾದಕರಿಗೆ ಇಸ್ರೇಲ್ ಭರ್ಜರಿ ಆಘಾತ ಕೊಟ್ಟಿದೆ. ಈ ಕಾರ್ಯಾಚರಣೆ ಬಲು ರೋಚಕವಾಗಿದ್ದು, ಇಸ್ರೇಲ್‌ನ ಸೇನೆಯ ಚಾಕಚಕ್ಯತೆಯ ಬಗ್ಗೆ ಉಗ್ರ ನಿಗ್ರಹ ತಜ್ಞರು ಮೆಚ್ಚುಗೆ ಸೂಚಿಸುತ್ತಿದ್ದಾರೆ.
ಬೈರೂತ್‌ನ ದಕ್ಷಿಣ ಭಾಗದಲ್ಲಿರುವ ಅತ್ಯಂತ ಬಿಗಿಭದ್ರತೆಯ ಬಂಕರ್‌ನಲ್ಲಿ ನಸ್ರಲ್ಲಾ ಹಾಗೂ ಹಿಜ್ಬುಲ್ಲಾ ಉಗ್ರ ಸಂಘಟನೆಯ ಪ್ರಮುಖ ನಾಯಕರು ಇದ್ದರು. ಆ ಬಂಕರ್ ನೆಲಮಟ್ಟದಿಂದ 60 ಅಡಿ ಆಳದಲ್ಲಿತ್ತು. ಇಸ್ರೇಲ್ ವಿರುದ್ಧ ದಾಳಿ ಕಾರ್ಯಾಚರಣೆ ಬಗ್ಗೆ ಆ ಸಭೆಯಲ್ಲಿ ಚರ್ಚೆ ನಡೆಯುತ್ತಿತ್ತು. ಈ ಬಗ್ಗೆ ಇಸ್ರೇಲ್‌ಗೆ ಖಚಿತ ಗುಪ್ತಚರ ಮಾಹಿತಿ ಲಭಿಸಿತು. ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರನ್ನು ಸಂಪರ್ಕಿಸಿ ದಾಳಿಗೆ ಅನುಮತಿ ಪಡೆಯುವ ಯತ್ನ ಮಾಡಲಾಯಿತು. ಆ ವೇಳೆ ನೆತನ್ಯಾಹು ಅವರು ಅಮೆರಿಕದ ನ್ಯೂಯಾರ್ಕ್‌ನಲ್ಲಿರುವ ವಿಶ್ವಸಂಸ್ಥೆಯಲ್ಲಿನ ಸಾಮಾನ್ಯ ಅಧಿವೇಶನದಲ್ಲಿ ಭಯೋತ್ಪಾದನೆ ಕುರಿತು ಭಾಷಣ ಮಾಡುತ್ತಿದ್ದರು. ಆ ಭಾಷಣದ ವೇಳೆಯೇ ಅವರು ದಾಳಿಗೆ ಅನುಮೋದನೆ ನೀಡಿದ್ದು ವಿಶೇಷ.
ತಕ್ಷಣ ಕಾರ್ಯಪ್ರವೃತ್ತವಾದ ಇಸ್ರೇಲ್ 80 ಟನ್ ಬಾಂಬ್ ಹೊತ್ತ ವಿಮಾನವನ್ನು ಲೆಬನಾನ್‌ಗೆ ಕಳುಹಿಸಿತು. ನಸ್ರಲ್ಲಾ ಇದ್ದ ಬಂಕರ್ ಮೇಲೆ ಆ ವಿಮಾನ ಬಾಂಬ್ ಹಾಕಿತು. ಕ್ಷಣಾರ್ಧದಲ್ಲಿ ನಸ್ರಲ್ಲಾ ಹಾಗೂ ಜತೆಯಲ್ಲಿದ್ದವರ ಅಂತ್ಯವಾಯಿತು.
ಅಂದಹಾಗೆ, ಈ ಕಾರ್ಯಾಚರಣೆಗೆ ಇಸ್ರೇಲ್ ಬಳಸಿದ 80 ಟನ್ ಬಾಂಬ್ ಪೈಕಿ ಶೇ.85ರಷ್ಟು ‘ಬಂಕರ್ ಬಸ್ಟರ್’ ಸ್ಫೋಟಕವೇ ಇತ್ತು. ಈ ಸ್ಫೋಟಕ ಭೂಮಿಯನ್ನು 30 ಮೀಟರ್‌ನಷ್ಟು ಭೇದಿಸುವ ಅಥವಾ ಆರು ಮೀಟರ್‌ನಷ್ಟು ಕಾಂಕ್ರಿಟ್ ನೆಲವನ್ನೂ ಸ್ಫೋಟಿಸುವ ಶಕ್ತಿ ಹೊಂದಿದೆ. ದಾಳಿಯಿಂದ ತಪ್ಪಿಸಿಕೊಳ್ಳಲು ಬಂಕರ್ ಮೊರೆ ಹೋಗುವ ಶತ್ರುಗಳನ್ನು ಕೊಲ್ಲಲೆಂದೇ ಈ ಬಾಂಬ್ ವಿನ್ಯಾಸಗೊಳಿಸಲಾಗಿದೆ. 2ನೇ ಮಹಾಯುದ್ಧದ ಕಾಲದಿಂದಲೇ ಈ ಬಾಂಬ್ ಬಳಕೆಯಲ್ಲಿದೆ.
ಬಾಂಬ್ ಶಬ್ದಕ್ಕೆ ಬೆಚ್ಚಿ ಸತ್ತಿರುವ ಶಂಕೆ
ಲೆಬನಾಣ್ ರಾಜಧಾನಿ ಬೈರೂತ್ ಮೇಲೆ ಇಸ್ರೇಲ್ ನಡೆಸಿದ ಭಾರಿ ವಾಯುದಾಳಿಯಲ್ಲಿ ಮೃತನಾದ ಹಿಜ್ಬುಲ್ಲಾ ಉಗ್ರ ಸಂಘಟನೆಯ ನೇತಾರ ಸಯ್ಯದ್ ಹಸನ್ ನಸ್ರಲ್ಲಾನ ಮೃತದೇಹವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಮೂಲಗಳು ಹೇಳಿವೆ. ಅಚ್ಚರಿ ಎಂದರೆ ಮೃತದೇಹದ ಮೇಲೆ ಯಾವುದೇ ಗಾಯದ ಗುರುತುಗಳು ಇಲ್ಲ. ದಕ್ಷಿಣ ಬೈರೂತ್‌ನ ದಾಳಿಯ ಸ್ಥಳದಲ್ಲೇ ದೇಹ ಲಭಿಸಿದೆ. ಇಸ್ರೇಲ್ 90 ಟನ್ ಬಾಂಬ್ ಹಾಕಿದ್ದರಿಂದ ಉಂಟಾದ ಭಾರಿ ಶಬ್ದವು ನಸ್ರಲ್ಲಾ ಹೃದಯಾಘಾತಕ್ಕೆ ಕಾರಣ ಆಗಿರಬಹುದು. ಅದರಿಂದ ಆತ ಸತ್ತಿರಬಹುದು ಎಂದು ರಾಯಿಟರ್ಸ್ ಸುದ್ದಿಸಂಸ್ಥೆ ವರದಿ ಮಾಡಿದೆ.
ಹೀಗಾಗಿಯೇ ನಸ್ರಲ್ಲಾ ಸತ್ತಿದ್ದಾನೆ ಎಂದು ಹಿಜ್ಬುಲ್ಲಾ ದೃಢೀಕರಿಸಿದ್ದರೂ ಸಾವಿನ ಕಾರಣ ತಿಳಿಸಿಲ್ಲ. ಇದೇ ವೇಳೆ, ಅಂತ್ಯಕ್ರಿಯೆ ಯಾವಾಗ ಎಂಬ ಹೇಳಿಕೆಯನ್ನೂ ನೀಡಿಲ್ಲ.
Be the first to comment