ತಳವಾರ ಎಸ್‌ಟಿ ಜಾತಿಪತ್ರ ನೀಡದ ಅಧಿಕಾರಿ ವಿರುದ್ಧ ಕ್ರಮಕ್ಕೆ ಆಗ್ರಹ

ಬೆಂಗಳೂರು: ‘ಕೇಂದ್ರ ಸರ್ಕಾರ ತಳವಾರ ಜಾತಿಯನ್ನು ಪರಿಶಿಷ್ಟ ಪಂಗಡ ಪಟ್ಟಿಗೆ ಸೇರಿಸಿ ಆದೇಶಿಸಿದ್ದರೂ ಕೆಲವು ಜಿಲ್ಲೆಗಳಲ್ಲಿ ತಹಶೀಲ್ದಾರ್‌ಗಳು ಜಾತಿ ಪ್ರಮಾಣಪತ್ರ ನೀಡಲು ನಿರಾಕರಿಸುತ್ತಿದ್ದಾರೆ. ಅವರ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳಬೇಕು’ ಎಂದು ವಿಧಾನ ಪರಿಷತ್‌ ಸದಸ್ಯ ತಳವಾರ ಸಾಬಣ್ಣಾ ಆಗ್ರಹಿಸಿದ್ದಾರೆ.

 ವಿಧಾನ ಪರಿಷತ್ ಸದಸ್ಯರಾದ ಸಾಬಣ್ಣಾ ತಳವಾರ ಈ ಬಗ್ಗೆ  ವಿಧಾನ ಪರಿಷತ್ ಕಲಾಪದ ಶೂನ್ಯ ವೇಳೆಯಲ್ಲಿ ವಿಷಯ ಪ್ರಸ್ತಾಪಿಸಿ  ಸಭಾಧ್ಯಕ್ಷರ  ಗಮನಕ್ಕೆ ತಂದಿದ್ದಾರೆ, ‘ಈಚೆಗೆ ತಳವಾರ ಜಾತಿಯವರು ಎಸ್‌ಟಿ ಪ್ರಮಾಣಪತ್ರ ತೆಗೆದುಕೊಂಡು ಸರ್ಕಾರಿ ನೌಕರಿ ಪಡೆದುಕೊಂಡವರಿಗೆ ತಕ್ಷಣ ಸಿಂಧುತ್ವ ಒದಗಿಸಬೇಕು. ಕಲಬುರಗಿ, ಯಾದಗಿರಿ, ವಿಜಯಪುರ, ಬಾಗಲಕೋಟೆ ಜಿಲ್ಲೆಗಳಲ್ಲಿ ತಳವಾರ ಎಸ್‌ಟಿ ಪ್ರಮಾಣಪತ್ರ ತೆಗೆದುಕೊಂಡ ಸರ್ಕಾರಿ ನೌಕರರಿಗೆ ಅಧಿಕಾರಿಗಳು ಕಿರುಕುಳ ನೀಡುತ್ತಿದ್ದು ಅದನ್ನು ನಿಲ್ಲಿಸುವಂತೆ ಆದೇಶಿಸಬೇಕು’ ಎಂದು ಅವರು ಒತ್ತಾಯಿಸಿದ್ದಾರೆ.

‘ಕೇಂದ್ರ ಸರ್ಕಾರ 2020ರ ಮಾರ್ಚ್ 20ರಂದು ತಳವಾರ, ಪರಿವಾರ ಜಾತಿಗಳನ್ನು ಎಸ್‌ಟಿ ಪಟ್ಟಿಗೆ ಸೇರ್ಪಡೆ ಮಾಡಿ ಅಧಿಸೂಚನೆ ಹೊರಡಿಸಿದೆ. ಕೇಂದ್ರ ಸರ್ಕಾರದ ಗೆಜೆಟ್ ಆಧಾರದ ಮೇಲೆ ಅಟಲ್ ಜಿ ಜನಸ್ನೇಹಿ ಕೇಂದ್ರಗಳಲ್ಲಿನ ತಂತ್ರಾಂಶದಲ್ಲಿ ಎಸ್‌ಟಿ ಪಟ್ಟಿ ಕ್ರ.ಸಂ.38 ರಲ್ಲಿ ಸೇರಿಸಬೆಕಾದ ಒಂದೇ ತಳವಾರ ಜಾತಿಯನ್ನು 3 ತಳವಾರ ಮತ್ತು 3 ಪರಿವಾರ

ಅಂದರೆ ಕ್ರ.ಸಂ 451ರಲ್ಲಿನ ನಾಯ್ಕಡ ತಳವಾರ ಮತ್ತು ಪರಿವಾರ, ಕ್ರ.ಸಂ 459 ರಲ್ಲಿನ ನಾಯಕ ಪರಿವಾರ ಮತ್ತು ತಳವಾರ, ಕ್ರ.ಸಂ 458ರಲ್ಲಿನ ನಾಯಕ ತಳವಾರ ಎಂದು ಸೇರಿಸಲಾಗಿದೆ’ ಎಂದು ಅವರು ಆಕ್ಷೇಪಿಸಿದ್ದಾರೆ.

‘ಸಂವಿಧಾನ ವಿರೋಧಿಯಾಗಿ ಮೂರು ಮೂರು ತಳವಾರ, ಪರಿವಾರ ಸೇರಿಸಿರುವ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಬೇಕು. 2002ರ ಹಿಂದುಳಿದ ವರ್ಗಗಳ ಮೀಸಲಾತಿ ಪಟ್ಟಿಯಲ್ಲಿನ ಕ್ರ.ಸಂ 664 ರಲ್ಲಿರುವ ತಳವಾರ-ಬೋಯಾ ಎಂಬ ಜಾತಿ ಯಾವುದೇ ಗೆಜೆಟ್, ಆದೇಶವಿಲ್ಲದೆ ಅದನ್ನು ಮುಂದುವರಿಸಿಕೊಂಡು ಬರುವ ಮೂಲಕ ತಳವಾರ ಸಮಾಜಕ್ಕೆ ಅನ್ಯಾಯ ಮಾಡಲಾಗುತ್ತಿದೆ’ ಎಂದು ಅವರು ಆರೋಪಿಸಿದ್ದಾರೆ.

‘ಈ ಹಿಂದೆ ತಳವಾರ ಜಾತಿ ಪ್ರಮಾಣ ಪತ್ರ ಪಡೆದು ರಾಜ್ಯ ಸರ್ಕಾರದ ಅಧೀನದಲ್ಲಿ ಸೇವೆ ಸಲ್ಲಿಸುತ್ತಿರುವ ಸರ್ಕಾರಿ ನೌಕರರನ್ನು ಹಿಂದಿನ ಸಿಂಧುತ್ವ ಆಧಾರದ ಮೇಲೆ ಇತ್ತೀಚಿನ ತಳವಾರ ಎಸ್‌ ಜಾತಿ ಪ್ರಮಾಣಪತ್ರ ತರಿಸಿಕೊಂಡು ಆಯಾ ಇಲಾಖೆಯ ಮುಖ್ಯಸ್ಥರು ನೌಕರರ ಸೇವಾ ಪುಸ್ತಕದಲ್ಲಿ ಎಸ್‌ಟಿ ಎಂದು ನಮೂದಿಸಬೇಕು. ಭಾರತ ಸರ್ಕಾರ ನಾಯಕ, ನಾಯ್ಕಡ ಪರ್ಯಾಯ ಪದಗಳಾದ ಪರಿವಾರ, ತಳವಾರ ಜಾತಿಗಳನ್ನು ಪರಿಶಿಷ್ಟ ಪಂಗಡ ಪಟ್ಟಿಗೆ ಸೇರಿಸಿ ಆದೇಶ ಹೊರಡಿಸಿದ್ದರೂ ಕರ್ನಾಟಕ ಸರ್ಕಾರ ಗೊಂದಲದ ಆದೇಶಗಳನ್ನು ಹೊರಡಿಸುವ ಮೂಲಕ ಸಾರ್ವಜನಿಕರು ಮತ್ತು ಅಧಿಕಾರಿಗಳ ನಡುವೆ ಕಲಹ ಉಂಟಾಗುತ್ತಿರುವುದಕ್ಕೆ ತಕ್ಷಣ ಪರಿಹಾರ ಒದಗಿಸಬೇಕು’ ಎಂದು ಅವರು ಆಗ್ರಹಿಸಿದ್ದಾರೆ.

LOGO
Logo

 

Be the first to comment

Leave a Reply

Your email address will not be published.


*