ಹಾವೇರಿ: ಮಾ.05(ಕರ್ನಾಟಕ ವಾರ್ತೆ): ವಿಶ್ವದ ಹಲವೆಡೆ ಕಾಣಿಸಿಕೊಂಡಿರುವ ಕರೋನಾ ವೈರಸ್ ಹಾವೇರಿ ಜಿಲ್ಲೆಯಲ್ಲಿ ಹರಡದಂತೆ ಎಲ್ಲಾ ಮುಂಜಾಗರೂಕತಾ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ ಅವರು ತಿಳಿಸಿದರು.
ADVERTISEMENT
ಅವರು ಗುರುವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕರೋನಾ ವೈರಸ್ ಹರಡದಂತೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.
ಜಿಲ್ಲೆಯಲ್ಲಿ ಇದುವರೆಗೆ ಕರೋನಾ ವೈರಸ್‍ನ ಯಾವುದೇ ಪ್ರಕರಣ ಪತ್ತೆಯಾಗಿಲ್ಲ. ಶಂಕಿತ ವೈರಸ್ ಪೀಡಿತರ ಮೇಲೆ ನಿಗಾ ಇರಿಸಲಾಗಿದೆ. ಕರೋನಾ ವೈರಸ್ ಪೀಡಿತ ದೇಶಗಳಿಗೆ ಪ್ರವಾಸ ಕೈಗೊಂಡು ಜಿಲ್ಲೆಗೆ ಆಗಮಿಸಿರುವವರನ್ನು ಸೂಕ್ಷ್ಮವಾಗಿ ಗಮನಿಸಲಾಗುವುದು. ಅವರಲ್ಲಿ ಕರೋನಾ ವೈರಸ್ ಪತ್ತೆಯಾಗಿರದಿದ್ದರೂ, ನಾಲ್ಕು ವಾರಗಳ ಕಾಲ ನಿಗಾದಲ್ಲಿರಿಸಲಾಗುವುದು. ಕರೋನಾ ವೈರಸ್ ಪತ್ತೆಯಾಗಿರುವ ದೇಶಗಳಿಗೆ ಸಧ್ಯಕ್ಕೆ ಪ್ರವಾಸ ಕೈಗೊಳ್ಳದಂತೆ ನಾಗರಿಕರಿಗೆ ಸಲಹೆ ನೀಡಲಾಗಿದೆ. ವಿದೇಶದಿಂದ ಆಗಮಿಸಿದ ವ್ಯಕ್ತಿಗಳಲ್ಲಿ ಶೀತ, ನೆಗಡಿ, ಕೆಮ್ಮು, ಜ್ವರ ಇತ್ಯಾದಿ ರೋಗ ಲಕ್ಷಣಗಳು ಕಂಡು ಬಂದರೆ ಸ್ವಯಂ ಚಿಕಿತ್ಸೆ ನಡೆಸದೆ ಆಸ್ಪತ್ರೆಗೆ ಬಂದು ದಾಖಲಾಗಬೇಕು ಎಂದು ಅವರು ಹೇಳಿದರು.
ADVERTISEMENT
ಮುಂಜಾಗೃತಾ ಕ್ರಮ: ಕರೋನಾ ವೈರಸ್ ಪೀಡಿತರ ತಪಾಸಣೆಗಾಗಿ ಜಿಲ್ಲಾಸ್ಪತ್ರೆ, ತಾಲೂಕಾ ಆಸ್ಪತ್ರೆ ಹಾಗೂ ಸಿ.ಎಚ್.ಸಿ.ಗಳಲ್ಲಿ ಪ್ರತ್ಯೇಕ ವಾರ್ಡ್‍ಗಳನ್ನು ಆರಂಭಿಸಿರುವ ವಾರ್ಡ್‍ಗಳಲ್ಲಿ ಸಾಕಷ್ಟು ಪ್ರಮಾಣದಲ್ಲಿ ಔಷಧಗಳು ಲಭ್ಯವಿರುವಂತೆ ನೋಡಿಕೊಳ್ಳಬೇಕು. ಕರ್ತವ್ಯ ನಿರ್ವಹಿಸುವ ಸಿಬ್ಬಂದಿಗಳಿಗೆ ತರಬೇತಿ ನೀಡಬೇಕು. ಆರೋಗ್ಯ ಸಚಿವಾಲಯದ ಮಾರ್ಗಸೂಚಿ ಪ್ರಕಾರ ಕರೋನಾ ವೈರಸ್ ತಡೆಗೆ ಮುಂಜಾಗರೂಕತಾ ಕ್ರಮ ಕೈಗೊಳ್ಳಲು ಸಮಿತಿಗಳನ್ನು ರಚಿಸಲಾಗಿದೆ. ಪ್ರತಿ ದಿನ ಸಂಜೆ 6ಗಂಟೆಯ ಒಳಗಾಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಅವರು ಕರೋನಾ ವೈರಸ್ ಕುರಿತಾಗಿ ವರದಿಯನ್ನು ಸಲ್ಲಿಸಬೇಕು ಎಂದು ಸೂಚನೆ ನೀಡಿದರು.
ADVERTISEMENT
4*3
ಎಲ್ಲಾ ಶಾಲೆಗಳಲ್ಲಿ ವಿದ್ಯಾರ್ಥಿಗಳು ಹಾಗೂ ಅಂಗನವಾಡಿಗಳಲ್ಲಿ ಮಕ್ಕಳು ಕೈಗಳನ್ನು ಸರಿಯಾಗಿ ತೊಳೆದು ಸ್ವಚ್ಛವಾಗಿರುವಂತೆ ಸೂಚನೆ ನೀಡಬೇಕು. ಬಸ್ ಪ್ರಯಾಣಿಕರಿಗೆ ಈ ಕುರಿತಂತೆ ಮಾಹಿತಿ ನೀಡಬೇಕು, ಚಾಲಕರಿಗೆ ಹಾಗೂ ನಿರ್ವಾಹಕರಿಗೆ ಮಾಹಿತಿ ನೀಡಬೇಕು. ಬಸ್‍ಗಳನ್ನು ನಿತ್ಯ ಸ್ವಚ್ಛಗೊಳಿಸಬೇಕು ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಆತಂಕ ಪಡುವ ಅಗತ್ಯವಿಲ್ಲ: ಕರೋನಾ ವೈರಸ್ ಹರಡದಂತೆ ಎಲ್ಲಾ ಮುಂಜಾಗರೂಕತಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಈ ಕುರಿತು ಸಾರ್ವಜನಿಕರು ಯಾವುದೇ ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ. ಈ ಕುರಿತಂತೆ ಯಾವುದೇ ಸುಳ್ಳು ಸುದ್ದಿಗಳಿಗೆ ಕಿವಿಗೊಡುವ ಅಗತ್ಯವಿಲ್ಲ. ಕರೋನಾ ವೈರಸ್ ಬಗ್ಗೆ ಆರೋಗ್ಯ ಇಲಾಖೆ, ಸಾರಿಗೆ, ಹಾಗೂ ಶಿಕ್ಷಣ ಇಲಾಖೆ ವ್ಯಾಪಕ ಪ್ರಚಾರ ಕೈಗೊಂಡು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ತಿಳಿಸಿದರು.
ಕರೋನಾ ಮುಂಜಾಗ್ರತೆ ಕುರಿತಂತೆ ಆರೋಗ್ಯ ಅಧಿಕಾರಿಗಳು ಮಾಹಿತಿ ನೀಡಿ , ವೈರಲ್ಸ್‍ಗಳಿಗೆ ನಿಖರ ಚಿಕಿತ್ಸೆ ಇರುವುದಿಲ್ಲ. ಜ್ವರ ಬಂದರೆ ಪ್ಯಾರಾಸಿಟೋಮೊಲ್, ದೇಹದ ನಿರ್ಜಲಿಕರಣಕ್ಕೆ ಸೋಡಿಯಂ ಕ್ಲೋರೈಡ್ ಹ್ಯಾಂಡ್ ಡೆಕ್ಸೋಟ್ರೋಸ್ ನೀಡಲಾಗುವುದು. ಸಂಶಯುತ ಪ್ರಕರಣಗಳು ಕಂಡುಬಂದರೆ ರಕ್ತ ಪರೀಕ್ಷೆಗೆ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಜಿಲ್ಲಾ ಆಸ್ಪತ್ರೆಯಲ್ಲಿ ತಲಾ ಒಂದು ಬೆಡ್‍ನಂತೆ ಐದು ಕೊಠಡಿಗಳನ್ನು ಸ್ಥಾಪಿಸಲಾಗಿದೆ. ಜಿಲ್ಲೆಯ ಐದು ತಾಲೂಕುಗಳಲ್ಲಿ ತಲಾ ಎರಡು ಕೊಠಡಿಗಳು ಜಿಲ್ಲೆಯ ಆರು ಸಿ.ಎಚ್.ಸಿ.ಗಳಲ್ಲಿ ಆರು ಕೊಠಡಿಗಳು ಸೇರಿದಂತೆ ಒಟ್ಟಾರೆ 27 ಕೊಠಡಿಗಳನ್ನು ಜಿಲ್ಲೆಯಲ್ಲಿ ಕರೋನಾ ಚಿಕಿತ್ಸೆಗಾಗಿ ಮುನ್ನೆಚ್ಚರಿಕೆ ಕ್ರಮವಾಗಿ ಸಜ್ಜುಗೊಳಿಸಲಾಗಿದೆ. ಈ ಕುರಿತಂತೆ 24*7 ತಾಸು ಕೆಲಸ ಮಾಡಲು ವೈದ್ಯಾಧಿಕಾರಿಗಳು ಹಾಗೂ ದಾದಿಯರನ್ನು ನೇಮಿಸಿ ತರಬೇತಿ ಸಹ ನೀಡಲಾಗಿದೆ. ವಾರ್ಡ್‍ಗಳಲ್ಲಿ ಚಿಕಿತ್ಸೆ ನೀಡುವ ಸಿಬ್ಬಂದಿಗಳಿಗೆ ಮಾಸ್ಕ್ ವ್ಯವಸ್ಥೆ ಕಲ್ಪಿಸಲಾಗಿದೆ. ಅಂದಾಜು 25 ಸಾವಿರ ಮಾಸ್ಕ್ ದಾಸ್ತಾನಿದೆ. ಒಂದೊಮ್ಮೆ ರೋಗಿಗಳು ದಾಖಲಾದರೆ ರೋಗಿಗಳಿಗೆ ಮತ್ತು ಅವರ ಯೋಗಕ್ಷೇಮ ನೋಡಿಕೊಳ್ಳಲುವರಿಗೆ ಮಾಸ್ಕ್ ವ್ಯವಸ್ಥೆ ಕಲ್ಪಿಸಲಾಗುವುದು. ಹೆಚ್ಚಿನ ಚಿಕಿತ್ಸೆಗಾಗಿ ಹೊರ ಜಿಲ್ಲೆಗೆ ಕಳುಹಿಸುವ ಅವಶ್ಯಕತೆ ಇದ್ದರೆ ಅಂಬ್ಯುಲನ್ಸ್ ವ್ಯವಸ್ಥೆ ಸಹ ಮಾಡಲಾಗಿದೆ. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಆಸ್ಪತ್ರೆ ಎಲ್ಲ ಮುನ್ನೆಚ್ಚರಿಕೆ ಕ್ರಮ ವಹಿಸಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರಾಜೇಂದ್ರ ದೊಡ್ಮನಿ, ಜಿಲ್ಲಾ ಶಸ್ತ್ರ ಚಿಕಿತ್ಸಕ ನಾಗರಾಜ ನಾಯಕ ವಿವರಿಸಿದರು.
ಕರೋನಾ ವೈರಸ್ ಶ್ವಾಸಕೋಶ ಹಾಗೂ ಉಸಿರಾಟಕ್ಕೆ ತೊಂದರೆ ಉಂಟುಮಾಡುತ್ತದೆ. ಜ್ವರ, ತಲೆನೋವು, ನೆಗಡಿ, ಕೆಮ್ಮು, ಉಸಿರಾಟದ ತೊಂದರೆ, ನಿಮೋನಿಯಾ, ಬೇಧಿ ಈ ರೋಗದ ಲಕ್ಷಣಗಳಾಗಿದ್ದು, ಸೋಂಕಿತ ವ್ಯಕ್ತಿಯು ಸೀನಿದಾಗ ಮತ್ತು ಕೆಮ್ಮಿದಾಗ ಹಾಗೂ ಹಸ್ತಲಾಗ ಮತ್ತು ಮುಟ್ಟಿದಾಗ, ಸೋಂಕಿತ ವ್ಯಕ್ತಿ ಬಳಸಿದ ವಸ್ತುಗಳನ್ನು ಯಾವುದೇ ರಕ್ಷಣೆ ಇಲ್ಲದೆ ಬಳಸಿದರೆ ಹಾಗೂ ಸ್ವಚ್ಛಗೊಳಿಸದ ಸುರಕ್ಷಿತವಲ್ಲದ ಕೈಗಳಿಂದ ಕಣ್ಣು, ಮೂಗು, ಬಾಯಿಯನ್ನು ಮುಟ್ಟುವುದರಿಂದ ಈ ರೋಗ ಹರಡುತ್ತದೆ. ಮುಂಜಾಗ್ರತಾ ಕ್ರಮವಾಗಿ ಸೋಂಕುಪೀಡಿತರ ಸಂಪರ್ಕದಿಂದ ದೂರ ಉಳಿಯುವುದು, ಈ ರೋಗಿಗಳನ್ನು ಪ್ರತ್ಯೇಕವಾಗಿರಿಸಿ ಚಿಕಿತ್ಸೆ ನೀಡುವುದು, ಮಾಸ್ಕ್ ಧರಿಸುವುದು, ಕೈಸ್ವಚ್ಛಗೊಳಿಸಿಕೊಳ್ಳುವುದು, ಕೈವಸ್ತ್ರ ಉಪಯೋಗಿಸುವುದು, ಮಾಂಸ, ಮೊಟ್ಟೆಗಳನ್ನು ಚನ್ನಾಗಿ ಬೇಯಿಸಿ ತಿನ್ನುವುದು, ಸಾರ್ವಜನಿಕ ಸ್ಥಳಗಳಲ್ಲಿ ಉಗಳದಂತೆ ಎಚ್ಚರವಹಿಸಿವುದು, ಅಸುರಕ್ಷಿತವಲ್ಲದ ಕಾಡು ಮತ್ತು ಸಾಕು ಪ್ರಾಣಿಗಳನ್ನು ಮುಟ್ಟದಂತೆ ಎಚ್ಚರವಹಿಸಬೇಕು ಎಂದು ಡಾ.ಸಂತೋಷ್ ವಿವರಿಸಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ರಮೇಶ ದೇಸಾಯಿ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಜಿಲ್ಲಾ ಆರಣ್ಯ ಸಂರಕ್ಷಣಾಧಿಕಾರಿ ಕ್ರಾಂತಿ, ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಅಂದಾನೆಪ್ಪ ವಡಗೇರಿ, ಉಪವಿಭಾಗಾಧಿಕಾರಿಗಳಾದ ಡಾ.ಎನ್.ತಿಪ್ಪೇಸ್ವಾಮಿ, ಶ್ರೀಮತಿ ಅನ್ನಪೂರ್ಣ ಮುದಕಮ್ಮನವರ, ಜಿಲ್ಲಾ ವಾರ್ತಾಧಿಕಾರಿ ಬಿ.ಆರ್.ರಂಗನಾಥ್, ಕ.ವಾ.ರ.ಸ. ಹಾವೇರೀ ವಿಭಾಗೀಯ ನಿಯಂತ್ರಣಾಧಿಕಾರಿ ಜಗದೀಶ, ವಿವಿಧ ಇಲಾಖಾ ಅಧಿಕಾರಿಗಳು ಉಪಸ್ಥಿತರಿದ್ದರು.
Be the first to comment