ಬೆಂಗಳೂರು,ಮಾ,3:-ಜಗತ್ತಿನಲ್ಲಿ ಸಾಕಷ್ಟು ಆತಂಕ ಸೃಷ್ಠಿಸಿರುವ ಕೊರೋನಾ ವೈರಸ್ ಭೀತಿ ದೇಶಕ್ಕೂ ಎದುರಾಗಿದೆ. ಈ ನಡುವೆ ಬೆಂಗಳೂರಿನಿಂದ ಹೈದರಾಬಾದ್ ಗೆ ಹೋದ ಟೆಕ್ಕಿಯಲ್ಲಿ ಕೊರೋನಾ ಸೋಂಕು ಪತ್ತೆಯಾಗಿರುವ ಹಿನ್ನೆಲೆ ರಾಜ್ಯದಲ್ಲೆಡೆ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ.
ಕೊರೋನಾ ಸೋಂಕು ಭೀತಿ ಹಿನ್ನೆಲೆ ಈ ಬಗ್ಗೆ ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಆರೋಗ್ಯ ಸಚಿವ ಶ್ರೀರಾಮುಲು, ಕೊರೋನಾ ವೈರಸ್ ಬಗ್ಗೆ ಗಂಭೀರವಾಗಿ ಪರಿಗಣಿಸಿದ್ದೇವೆ. ಈ ಕುರಿತು ಹಿರಿಯ ಅಧಿಕಾರಗಳ ಜತೆ ಸುದೀರ್ಘವಾಗಿ ಚರ್ಚಿಸಲಾಗಿದೆ. ರಾಜ್ಯದ ಏರ್ ಪೋರ್ಟ್ ಗಳಲ್ಲಿ ತೀವ್ರ ನಿಗಾ ವಹಿಸಲಾಗಿದೆ. .ಕೊರೋನಾ ವೈರಸ್ ಹರಡದಂತೆ ರಾಜ್ಯದಲ್ಲಿ ಅಗತ್ಯ ಮುಂಜಾಗ್ರತೆ ಕೈಗೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.
ರಾಜ್ಯದ ವಿವಿಧ ಭಾಗಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದ್ದು ವಿದೇಶ ಬೇರೆ ರಾಜ್ಯಗಳಿಂದ ಬಂದವರಿಗೆ ಬಂದರು, ಏರ್ ಪೋರ್ಟ್ ನಲ್ಲಿ ವೈದ್ಯಕೀಯ ತಪಾಸಣೆ ಮಾಡಲಾಗುತ್ತಿದೆ. 242 ಜನರ ರಕ್ತದ ಮಾದರಿ ಪರೀಕ್ಷೆ ಮಾಡಲಾಗಿದೆ. ಇವರಲ್ಲಿ 240ಜನರ ರಕ್ತದ ಮಾದರಿ ನೆಗೆಟಿವ್. ಈಗ ಇನ್ನಿಬ್ಬರ ರಕ್ತದ ಮಾದರಿಯೂ ನೆಗೆಟಿವ್ ಎಂದು ಬಂದಿದೆ. ರಾಜೀವ್ ಗಾಂಧಿ ಎದೆರೋಗಗಳ ಆಸ್ಪತ್ರೆ, ಬೆಂಗಳೂರು ಮೆಡಿಕಲ್ ಕಾಲೇಜಿನಲ್ಲಿ ಪರೀಕ್ಷೆ ಮಾಡಲಾಗಿದೆ. ಎಂದು ತಿಳಿಸಿದರು.
ಟೆಕ್ಕಿಯೊಬ್ಬರು ದುಬೈಗೆ ಹೋಗಿದ್ದಾರೆ. ನಂತರ ವಾಪಸ್ ಬೆಂಗಳೂರಿಗೆ ಬಂದಿದ್ದು, ತಪಾಸಣೆ ವೇಳೆ ನೆಗೆಟಿವ್ ಎಂದು ವರದಿ ಬಂದಿದೆ. ಆದರೆ ನಂತರ ಆತ ಬಸ್ ನಲ್ಲಿ ಹೈದರಾಬಾದ್ ಗೆ ತೆರಳಿದ್ದಾನೆ. ಅಲ್ಲಿ ತಪಾಸಣೆ ವೇಳೆ ಕೊರೋನಾ ಸೋಂಕು ಪತ್ತೆಯಾಗಿದೆ ಎಂದು ಸಚಿವ ಶ್ರೀರಾಮುಲು ಮಾಹಿತಿ ನೀಡಿದರು.
ದೆಹಲಿಯಲ್ಲಿ ಒಬ್ಬರಿಗೆ ತೆಲಂಗಾಣದಲ್ಲಿ ಒಬ್ಬರಿಗೆ ಸೋಂಕು ಹರಡಿದೆ. ಉಳಿದಂತೆ ಬೇರೆ ಯಾರಲ್ಲಿಯೂ ಕೋರೋನಾ ಸೋಂಕು ಇಲ್ಲ. ಹೀಗಾಗಿ ರಾಜ್ಯದ ಜನರು ಆತಂಕಪಡುವ ಅಗತ್ಯವಿಲ್ಲ ಎಂದು ಶ್ರೀರಾಮುಲು ತಿಳಿಸಿದರು.
ಇನ್ನುಆರೋಗ್ಯ ಇಲಾಖೆಯ ಎಲ್ಲಾ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ನಾವು 24 ಗಂಟೆ ಕೆಲಸ ಮಾಡಲು ಸಿದ್ದವಿದ್ದೇವೆ. ಕೊರೊನಾ ಪತ್ತೆಗಾಗಿ 2 ವಿಶೇಷ ಲ್ಯಾಬ್ ಸ್ಥಾಪನೆ ಮಾಡಲಾಗಿದೆ. ಅಲ್ಲದೆ, ಚಿಕಿತ್ಸೆಗೆಂದು ಎಲ್ಲಾ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ತಪಾಸಣಾ ಕೇಂದ್ರ ಆರಂಭಿಸಲಾಗಿದೆ. ಕೊರೊನಾ ಪೀಡಿತರಿಗಾಗಿ ಪ್ರತ್ಯೇಕ ಹಾಸಿಗೆ ವ್ಯವಸ್ಥೆ ಮಾಡಲೂ ಸಹ ಸೂಚಿಸಲಾಗಿದೆ. ಹೀಗಾಗಿ ಸಾರ್ವಜನಿಕರು ಕೊರೊನಾ ಕುರಿತು ಹೆದರುವ ಅಗತ್ಯವಿಲ್ಲ. ಅನಗತ್ಯ ವದಂತಿ ಮತ್ತು ಸುಳ್ಳು ಮಾಹಿತಿಗೆ ಕಿವಿಗೊಡಬೇಡಿ ಎಂದು ಸಚಿವ ಶ್ರೀರಾಮುಲು ಸಲಹೆ ನೀಡಿದರು.
Be the first to comment