ನೂರು ಕೋಟಿ ಮೌಲ್ಯದ ವಕ್ಫ್ ಆಸ್ತಿ ಕಬಳಿಸಿದ ಕೆ.ಜಿ.ಎಫ್ ಬಾಬು: ವಕ್ಫ್ ಆಸ್ತಿ ಪರಭಾರೆಗೆ ಮಂಡಳಿ ಅಧ್ಯಕ್ಷ ಮೌಲಾನ ಶಫಿ ಸಾದಿ ನೆರವು – ವಿಲ್ಸನ್ ಗಾರ್ಡನ್ ಪೊಲೀಸ್ ಠಾಣೆಯಲ್ಲಿ ಎಫ್.ಐ.ಆರ್ ದಾಖಲು- ಬಂಧಿಸಿ ಕಾನೂನು ಕ್ರಮಕ್ಕೆ ಆಲಂ ಪಾಷ ಆಗ್ರಹ

ಬೆಂಗಳೂರು, ಫೆ, 15; ಜನ ಸಾಮಾನ್ಯರಿಗೆ ಸಹಾಯ ಮಾಡುವುದಾಗಿ ಸಮಾಜ ಸೇವಕನ ಮುಖವಾಡ ಧರಿಸಿರುವ ಕೆ.ಜಿ.ಎಫ್ ಬಾಬು [ಗುಜರಿ ಬಾಬು] ಬೆಂಗಳೂರಿನ ಕೆ.ಎಚ್. ರಸ್ತೆಯ ಎಂ.ಟಿ.ಆರ್ ಹೊಟೇಲ್ ಎದುರು ವಕ್ಫ್ ಮಂಡಳಿಗೆ ಸೇರಿದ ಬಡಾ ಮಕಾನ್ ದರ್ಗಾದ 33 ಸಾವಿರ ಚದರಡಿ ಭೂಮಿಯನ್ನು ಬೆದರಿಕೆ, ಮಾರಕಾಸ್ತ್ರಗಳ ಬಳಕೆ, ಕಾನೂನು ಬಾಹಿರ ಕ್ರಮಗಳ ಮೂಲಕ ಸ್ವಾಧೀನಪಡಿಸಿಕೊಂಡಿದ್ದು, ಇವರ ವಿರುದ್ಧ ಸಾಮಾಜಿಕ ಕಾರ್ಯಕರ್ತ ಮತ್ತು ದಿ ಹೆಲ್ಪಿಂಗ್ ಸಿಟಿಜನ್ ಅಂಡ್ ಪೀಪಲ್ಸ್ ಕೋರ್ಟ್ ಸಂಘಟನೆಯ ಅಧ್ಯಕ್ಷ ಆಲಂ ಪಾಷ ಕ್ರಿಮಿನಲ್ ದೂರು ಸಲ್ಲಿಸಿದ್ದಾರೆ.

 

ಕೆ.ಜಿ.ಎಫ್ ಬಾಬು ಅವರ ಕಾನೂನು ಬಾಹಿರ ಕೃತ್ಯಕ್ಕೆ ನೆರವಾಗಿರುವ ವಕ್ಪ್ ಮಂಡಳಿ ಅಧ್ಯಕ್ಷ ಮೌಲಾನ ಶಫಿ ಸಾದಿ ಅವರ ವಿರುದ್ಧ ವಿಲ್ಸನ್ ಗಾರ್ಡನ್ ಪೊಲೀಸ್ ಠಾಣೆಯಲ್ಲಿ ಎಫ್.ಐ.ಆರ್ ದಾಖಲಾಗಿದೆ. ಕೂಡಲೇ ಕೆ.ಜಿ.ಎಫ್ ಬಾಬು ಮತ್ತು ಮೌಲಾನ ಶಫಿ ಸಾದಿ ಅವರನ್ನು ಬಂಧಿಸಿ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಆಲಂ ಪಾಷ ಆಗ್ರಹಿಸಿದ್ದಾರೆ.

 

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಆಲಂ ಪಾಷ, ವಕ್ಫ್ ಆಸ್ತಿಯನ್ನು ರಕ್ಷಿಸಬೇಕಿದ್ದ ಮೌಲಾನ ಶಫಿ ಸಾದಿ ಅವರು ಗುಜರಿಬಾಬು ಅವರ ದುಷ್ಕೃತ್ಯಕ್ಕೆ ನೇರವಾಗಿ ಬೆಂಬಲಕ್ಕೆ ನಿಂತಿದ್ದಾರೆ. ವಕ್ಫ್ ಮಂಡಳಿ ಅಧ್ಯಕ್ಷರು ಅಲ್ಲಾ ಆಸ್ತಿ [ವಕ್ತ್ ಆಸ್ತಿ] ಕಬಳಿಕೆಗೆ ರಾಜಾರೋಷವಾಗಿ ಬೆಂಬಲಕ್ಕೆ ನಿಂತಿದ್ದಾರೆ ಎಂದರು.

 

 

ಸಮಾಜದ ವಿಚಿದ್ರಕಾರಿ ಶಕ್ತಿಗಳು ಗುಜರಿ ಬಾಬು ನೇತೃತ್ವದಲ್ಲಿ ಬಡಾ ಮಕಾನ್ ದರ್ಗಾಕ್ಕೆ ಸೇರಿದ ಕಟ್ಟಡಗಳನ್ನು ಧ್ವಂಸಗೊಳಿಸಿವೆ. ಜನವರಿ 27 ರಿಂದ ಫೆಬ್ರವರಿ 3 ರ ಅವಧಿಯಲ್ಲಿ ಈ ಕೃತ್ಯ ನಡೆದಿದ್ದು, ಇವರ ನೇತೃತ್ವದಲ್ಲಿ ಹಲವು ಮಂದಿ ಅಪಾಯಕಾರಿ ಮಾರಕಾಸ್ತ್ರಗಳೊಂದಿಗೆ ತೆರಳಿ, ಜೆಸಿಬಿ ಮತ್ತಿತರ ಯಂತ್ರಗಳ ಮೂಲಕ ಕಟ್ಟಡಗಳನ್ನು ಕೆಡವಿ, ಸರಕು ಸಾಗಾಣೆ ವಾಹನಗಳ ಅವಶೇಷಗಳನ್ನು ಸಾಗಾಟ ಮಾಡಿದ್ದಾರೆ. ಇದರಿಂದ ಅಸಂಖ್ಯಾತ ಮಸ್ಲಿಂ ಸಮುದಾಯಕ್ಕೆ ಮಾನಸಿಕವಾಗಿ ಆಘಾತವಾಗಿದೆ. ಇದನ್ನು ತಡೆಯಲು ತಾವು ಸ್ಥಳಕ್ಕೆ ತೆರಳಿದಾಗ ತಮ್ಮ ಮೇಲೂ ಬೆದರಿಕೆ ಮತ್ತು ಹಲ್ಲೆ ನಡೆಸುವ ಪ್ರಯತ್ನ ನಡೆಸಿದರು. ನಂತರ ನ್ಯಾಯಕ್ಕಾಗಿ ಪೊಲೀಸರಿಗೆ ದೂರು ಸಲ್ಲಿಸಬೇಕಾಯಿತು ಎಂದು ಆಲಂ ಪಾಷ ಹೇಳಿದರು.

 

 

ಬಡಾ ಮಕಾನ್ ದರ್ಗಾ ಆಸ್ತಿ ವಕ್ಫ್ ಮಂಡಳಿ ಸುಪರ್ದಿಯಲ್ಲಿದ್ದು, ಇದನ್ನು ರಕ್ಷಿಸಬೇಕಾದ ಕೆಲಸದಲ್ಲಿ ಮಂಡಳಿ ಅಧ್ಯಕ್ಷ ಮೌಲಾನ ಶಫಿ ಸಾದಿ ವಿಫಲರಾಗಿದ್ದಾರೆ. ಮುಸ್ಲಿಂ ಸಮುದಾಯಕ್ಕೆ ತೀವ್ರ ನೋವುಂಟು ಮಾಡಿರುವ, ಭಾವನೆಗಳನ್ನು ಘಾಸಿಗೊಳಿಸಿರುವ ಮೌಲನಾ ಶಫಿ ಕೂಡಲೇ ವಕ್ಫ್ ಮಂಡಳಿಯಿಂದ ತೊಲಗಬೇಕು. ಸಮಾಜ ಸೇವಕನ ಮುಖವಾಡ ತೊಟ್ಟಿರುವ ಗುಜರಿ ಬಾಬು ಬಂಧಿಸಿ ಸೂಕ್ತ ಕಾನೂನು ಕ್ರಮ ಕೈಗೊಂಡು ಸರ್ಕಾರ ಆಸ್ತಿ ರಕ್ಷಣೆಗೆ ಮುಂದಾಗಬೇಕು. ವಿಧಾನಮಂಡಲ ಅಧಿವೇಶನ ನಡೆಯುತ್ತಿರುವ ಈ ಸಂದರ್ಭದಲ್ಲಿ ಪ್ರತಿಪಕ್ಷಗಳು ಸದನದಲ್ಲಿ ವಿಷಯ ಪ್ರಸ್ತಾಪಿಸಿ ಸರ್ಕಾರಕ್ಕೆ ಬಿಸಿ ಮುಟ್ಟಿಸಬೇಕು ಎಂದು ಆಗ್ರಹಿಸಿದ್ದಾರೆ.

 

Be the first to comment

Leave a Reply

Your email address will not be published.


*