ಲೋಕಾಯುಕ್ತಕ್ಕೆ ಹಲ್ಲು ಉಗುರೂ ಎರಡು ಇಲ್ಲ; ನೀಡಲು ರಾಜ್ಯ ಸರ್ಕಾರ ಸಿದ್ದವಿಲ್ಲ ಜನರ ಗೋಳಿಗೆ ಕೋನೆಯಿಲ್ಲ

ಬೆಂಗಳೂರು : ತನ್ನದೇ ಅಧಿಕಾರಿಗಳ ವಿರುದ್ಧ ಕರ್ನಾಟಕ ಲೋಕಾಯುಕ್ತ 12 ದೂರುಗಳನ್ನು ದಾಖಲಿಸಿಕೊಂಡಿದೆ. ಇದು ಬೇಲಿಯೇ ಎದ್ದು ಹೊಲ ಮೇಯ್ದ ಪ್ರಕರಣ. ಭ್ರಷ್ಟಾಚಾರವನ್ನು ಆದರೂ ಲೋಕಾಯುಕ್ತ ನ್ಯಾ. ಬಿ ಎಸ್ ಪಾಟೀಲ್ ಅವರು, ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ. ಕರ್ತವ್ಯಲೋಪ ಮತ್ತು ತನಿಖೆಯಲ್ಲಿನ ಲೋಪದೋಷಗಳಿಗೆ ಸಂಬಂಧಿಸಿದ ದೂರುಗಳಿವು.

ಪ್ರತಿ ಸಲವೂ ಲೋಕಾಯುಕ್ತ ಸಂಸ್ಥೆ ಕ್ರಮ ಕೈಗೊಳ್ಳುವ ಭರವಸೆ ನೀಡುತ್ತದೆ. ಆದರೆ ಕಾಲ ಸರಿದಂತೆ ಈ ಪ್ರಕರಣಗಳು ಎಲ್ಲಿ ಹೂತು ಹೋಗುತ್ತವೆ? ಸಾರ್ವಜನಿಕರು ಮತ್ತು ಮಾಧ್ಯಮಗಳ ನೆನಪಿನಿನಿಂದಲೂ ಮರೆಯಾಗುತ್ತವೆ. ಖುದ್ದು ಲೋಕಾಯುಕ್ತ ಸಂಸ್ಥೆಯೂ ಮೌನ ತಳೆಯುತ್ತದೆ.

ಅದೊಂದು ಕಾಲವಿತ್ತು. ರಾಜ್ಯ ಸರ್ಕಾರದಲ್ಲಿನ ಭ್ರಷ್ಟಾಚಾರ, ದುರಾಡಳಿತ, ಕರ್ತವ್ಯಲೋಪ ಪ್ರಕರಣಗಳ ಕುರಿತು ತನಿಖೆ ನಡೆಸಿ, ತಪ್ಪಿತಸ್ಥರನ್ನು ಶಿಕ್ಷಿಸಲು ಲೋಕಾಯುಕ್ತ ಎಂಬ ಸಂಸ್ಥೆಯೊಂದು ಇದೆ ಎಂದು ರಾಜ್ಯದ ಜನತೆಗೆ ತಿಳಿದದ್ದು ನ್ಯಾಯಮೂರ್ತಿ ಎನ್. ವೆಂಕಟಾಚಲರ ಕಾಲದಲ್ಲಿ- 2001ರಿಂದ 2006ರವರೆಗೆ. ಪ್ರತಿದಿನ ದಿನಪತ್ರಿಕೆಗಳ ಮುಖಪುಟದಲ್ಲಿ ಕಂತೆ ಕಂತೆ ನೋಟುಗಳು, ರಾಶಿ ಒಡವೆಗಳು, ಪೆಂಡಿಗಟ್ಟಲೆ ದಾಖಲೆಗಳ ಚಿತ್ರಗಳು ಓದುಗರ ಕಣ್ಣಿಗೆ ರಾಚುತ್ತಿದ್ದವು. ಭ್ರಷ್ಟರಿಗೆ ಭಯ ಹುಟ್ಟಿದ ಕಾಲವದು. ವೆಂಕಟಾಚಲರಿಗಿಂತ ಮುಂಚೆ- 1986ರಿಂದ 2001ರವರೆಗೆ, ಮೂವರು ಲೋಕಾಯುಕ್ತರು ಅಧಿಕಾರಸ್ಥಾನದಲ್ಲಿ ಕೂತು ಹೋಗಿದ್ದರು. ವೆಂಕಟಾಚಲರಷ್ಟೇ ಸಮರ್ಥವಾಗಿ ಈ ಸಂಸ್ಥೆಯನ್ನು ಮುನ್ನಡೆಸಿದವರು ನ್ಯಾಯಮೂರ್ತಿ ಸಂತೋಷ್ ಹೆಗ್ಡೆ. ಅಕ್ರಮ ಗಣಿಗಾರಿಕೆ ಕುರಿತು ವರದಿ ತಯಾರಿಸಿದ ವರದಿ ಮೈಲಿಗಲ್ಲಾಯಿತು. ರಾಜಕೀಯ ಭೂಕಂಪಗಳನ್ನು ಸೃಷ್ಟಿಸಿತು. ಅಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ರಾಜೀನಾಮೆ ನೀಡಬೇಕಾಯಿತು.

ಈ ಇಬ್ಬರು ದಿಟ್ಟ ನಂತರ ಈ ಹುದ್ದೆಗೆ ಬಂದವರು
ನ್ಯಾಯಮೂರ್ತಿ ಶಿವರಾಜ್ ಪಾಟೀಲ್, ತಾಂತ್ರಿಕ ತಕರಾರಿನ ಕಾರಣ ತಿಂಗಳ ಅಂತರದಲ್ಲಿ ಸ್ಥಾನ ತ್ಯಜಿಸಿದರು. ತರುವಾಯದ ಸರದಿ ನ್ಯಾಯಮೂರ್ತಿ ವೈ. ಭಾಸ್ಕರ್ ರಾವ್ ಅವರದು. ಇವರ ಕಾಲದಲ್ಲಿ ಲೋಕಾಯುಕ್ತ ಸಂಸ್ಥೆಯ ಘನತೆ ಗೌರವ ಬೀದಿಯಲ್ಲಿ ಹರಾಜಾಗಿಹೋಯಿತು. ಸಂಸ್ಥೆಯ ಕೆಲ ಸಿಬ್ಬಂದಿ, ಭಾಸ್ಕರ್ ರಾವ್ ಅವರ ಪುತ್ರ ಅಶ್ವಿನ್ ರಾವ್ ಜೊತೆ ಸೇರಿ, ದಾಳಿಗೊಳಗಾಗುತ್ತಿದ್ದ ಭ್ರಷ್ಟ ಅಧಿಕಾರಿಯನ್ನು ಮುಂಚಿತವಾಗಿ ಸಂಪರ್ಕಿಸಿ, ವ್ಯವಹಾರ ಕುದುರಿಸುತ್ತಿದ್ದರು. ಈ ಅಶ್ವಿನ್ ರಾವ್ ಜೊತೆ ಕೆಲ ಪತ್ರಕರ್ತರ ಹೆಸರು ತಳಕು ಹಾಕಿಕೊಂಡಿತ್ತು. ದಾಳಿಯಿಂದಾಗುವ ಸುದ್ದಿ, ಅವಮಾನ, ಇಲಾಖಾ ತನಿಖೆ, ಕೋರ್ಟು-ಕಚೇರಿ ಇತ್ಯಾದಿಗಳ ಉಸಾಬರಿ ಬೇಡವೆಂದು ಅಶ್ವಿನ್ ರಾವ್ ಮತ್ತವರ ತಂಡದ ಪರ್ತಕರ್ತರು ಕೇಳಿದಷ್ಟು ಲಂಚ ತೆತ್ತು ತಪ್ಪಿಸಿಕೊಳ್ಳುತ್ತಿದ್ದರು ಭ್ರಷ್ಟರು.

ಭಾಸ್ಕರ್ ರಾವ್ ಕಾಲದಲ್ಲಿ ಇಂತಹ ನಕಲಿ ದಾಳಿಗಳು ಅವ್ಯಾಹತ ಜರುಗಿದವು. ಲೋಕಾಯುಕ್ತ ಸಂಸ್ಥೆಯ ಸಿಬ್ಬಂದಿ ಮತ್ತು ಲೋಕಾಯುಕ್ತರ ಪುತ್ರ ನೇರವಾಗಿ ಈ ನಕಲಿ ದಾಳಿಗಳಲ್ಲಿ ಭಾಗಿಯಾಗಿದ್ದರು. ದೂರು ದಾಖಲಾಗಿ ಎಸ್ಐಟಿ ತನಿಖೆ ಮಾಡಿ ಕೆಲವರನ್ನು ಬಂಧಿಸಿತು. ಇನ್ನು ಕೆಲವು ಪ್ರತಿಷ್ಠಿತ ಪತ್ರಕರ್ತರು ಕೂದಲೆಳೆಯ ಅಂತರದಲ್ಲಿ ಬಚಾವಾದರು.

ಆ ನಂತರ ಅಂದಿನ ಸಿದ್ದರಾಮಯ್ಯನವರ ಸರ್ಕಾರ ಮಾಡಬಾರದ್ದನ್ನು ಮಾಡಿತು. ಲೋಕಾಯುಕ್ತವನ್ನೇ ರದ್ದು ಮಾಡಿತು. ಅದಕ್ಕೆ ಬದಲಾಗಿ ಎಸಿಬಿ(ಭ್ರಷ್ಟಾಚಾರ ನಿಗ್ರಹ ದಳ)ವನ್ನು ರಚಿಸಿತು. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ಎಸಿಬಿ ರದ್ದು ಮಾಡಿ ಮತ್ತೆ ಲೋಕಾಯುಕ್ತಕ್ಕೆ ಶಕ್ತಿ ತುಂಬುತ್ತಿದ್ದೇವೆ ಎಂಬ ಸುಳ್ಳು ವೀರಾವೇಶದ ಮಾತುಗಳನ್ನಾಡಿತು.

ಲೋಕಾಯುಕ್ತ ಕಾಲಕಾಲಕ್ಕೆ ಭ್ರಷ್ಟ ಅಧಿಕಾರಿಗಳ ಮೇಲೆ ದಾಳಿ ಮಾಡಿ, ವಿಚಾರಣಾ ವರದಿಗಳನ್ನು ಸಕ್ಷಮ ಪ್ರಾಧಿಕಾರಕ್ಕೆ ಕಳುಹಿಸಿಕೊಡುತ್ತದೆ. ಈ ವರದಿಗಳನ್ನು ಅಂಗೀಕರಿಸುವ ಇಲ್ಲವೇ ತಿರಸ್ಕರಿಸುವ ಅಧಿಕಾರ ರಾಜ್ಯ ಸರ್ಕಾರಕ್ಕೆ ಉಂಟು. ತನಗಿದ್ದ ಈ ಅಧಿಕಾರದ ಬಳಸಿ ಅಧಿಕ ಸಂಖ್ಯೆಯ ವರದಿಗಳನ್ನು ರಾಜ್ಯ ಸರ್ಕಾರ ತಿರಸ್ಕರಿಸುತ್ತಿದೆ. ಭ್ರಷ್ಟ ಅಧಿಕಾರಿಗಳೊಂದಿಗೆ ಶಾಮೀಲಾಗುತ್ತ ಬಂದಿದೆ. ಹೀಗಾಗಿ ಭ್ರಷ್ಟರು ಮತ್ತೆ ಸರ್ಕಾರಿ ಸೇವೆಗೆ ಮರಳುತ್ತಿದ್ದಾರೆ. ಯಾವ ಸರ್ಕಾರಗಳೂ ಭ್ರಷ್ಟ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಂಡಿಲ್ಲ. ವರದಿಗಳನ್ನು ಅಂಗೀಕರಿಸಿ ಕ್ರಮ ಜರುಗಿಸುವುದನ್ನು ಕಡ್ಡಾಯಗೊಳಿಸುವ ಸಂಬಂಧ ಕರ್ನಾಟಕ ಲೋಕಾಯುಕ್ತ ಕಾಯ್ದೆಗೆ ತಿದ್ದುಪಡಿ ತರುವಂತೆ ಆರು ತಿಂಗಳ ಹಿಂದೆ ರಾಜ್ಯ ಹೈಕೋರ್ಟ್ ತೀರ್ಪು ನೀಡಿತ್ತು ಆದರೆ ರಾಜ್ಯ ಸರ್ಕಾರ ತಿದ್ದುಪಡಿ ಕುರಿತು ಎಳ್ಳಷ್ಟೂ ತಲೆಕೆಡಿಸಿಕೊಂಡಿಲ್ಲ. ಲೋಕಾಯುಕ್ತಕ್ಕೆ ಶಕ್ತಿ ತುಂಬುವುದಾಗಿ ಬಿಜೆಪಿ ಆಡಿದ್ದ ವೀರಾವೇಶದ ಮಾತುಗಳಿಗೆ ಯಾವ ಅರ್ಥವೂ ಇಲ್ಲವೆಂದು ಸಾಬೀತಾಗಿದೆ. ಸರ್ಕಾರದ ಬದ್ಧತೆ ಪ್ರಶ್ನಾರ್ಹವೆನಿಸಿದೆ.

ಪರಿಣಾಮವಾಗಿ ಭ್ರಷ್ಟರನ್ನು ಬಗ್ಗುಬಡಿಯಬೇಕಾದ ಲೋಕಾಯುಕ್ತ ಸಂಸ್ಥೆ ಹಲ್ಲು ಉಗುರುಗಳು ಕೂಡ ಇಲ್ಲ. ಸರ್ಕಾರಗಳು ಭ್ರಷ್ಟರನ್ನು ಪೊರೆಯುತ್ತ, ಸುಳ್ಳು ಭರವಸೆಗಳನ್ನು ನೀಡುತ್ತ ಜನತೆಯನ್ನು ಮೋಸಗೊಳಿಸುತ್ತಲೇ ಸಾಗಿವೆ. ಪ್ರಭುತ್ವವನ್ನು ಪ್ರಶ್ನಿಸಬೇಕಾದ ಮಾಧ್ಯಮಗಳು ಮಾರಿಕೊಂಡಿವೆ. ಇಂತಹ ದಿಕ್ಕೆಟ್ಟ ಸಂದರ್ಭದಲ್ಲಿ ಮತದಾರರಲ್ಲಿ ವಿವೇಕ ಮೂಡಬೇಕು. ಭ್ರಷ್ಟಾಚಾರ ನಿಗ್ರಹವನ್ನು ಚುನಾವಣೆಯ ಮುಖ್ಯ ವಿಷಯಗಳನ್ನಾಗಿ ಮುನ್ನೆಲೆಗೆ ತರಬೇಕು. ವಚನ ನೀಡುವಂತೆ ಪಕ್ಷಗಳ ಮೇಲೆ ಒತ್ತಡ ತರಲು ಇದು ಸಕಾಲ

Be the first to comment

Leave a Reply

Your email address will not be published.


*