ಯಾದಗಿರಿ; ನಾರಾಯಣಪುರ ಬಲದಂಡೆ ಕಾಲುವೆಯ ಸರಪಳಿ 0.000 ಕಿ ಮೀ ನಿಂದ 95.00 ಕಿ ಮೀವರೆಗೆ ಬರುವ ವಿತರಣಾ ಕಾಲುವೆ ಸಂಖ್ಯೆ 1ರಿಂದ 15 ಹಾಗೂ ಅದರಡಿ ಬರುವ ಸೀಳುಗಾಲುವೆಗಳ ಆಧುನೀಕರಣ ಕಾಮಗಾರಿಗಳ ಹಲವು ನ್ಯೂನತೆಗಳೊಂದಿಗೆ ಅಂದಾಜು ಪತ್ರಿಕೆ ತಯಾರಿಸಿ ಗುತ್ತಿಗೆದಾರರಿಗೆ ಕೋಟ್ಯಂತರ ರುಪಾಯಿ ಅಕ್ರಮವಾಗಿ ಲಾಭ ಮಾಡಿಕೊಟ್ಟ ಇಂಜನಿಯರ್‌ಗಳ ಪಟ್ಟಿ ಇದೀಗ ಬಹಿರಂಗವಾಗಿದೆ.
ಎನ್ಆರ್‌ಬಿಸಿ ಕಾಲುವೆಗಳ ಆಧುನೀಕರಣ ಕಾಮಗಾರಿಗಳ ಸಂಬಂಧ ಸಲ್ಲಿಕೆಯಾಗಿದ್ದ ದೂರನ್ನಾಧರಿಸಿ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿದ್ದ ವಿಧಾನಮಂಡಲದ ಅಂದಾಜು ಸಮಿತಿ ಸದಸ್ಯ ಶಾಸಕರಿಗೆ ಅಡ್ಡಿಯನ್ನುಂಟು ಮಾಡಿದ್ದಲ್ಲದೇ ಅವರ ಮೇಲೆ ಗುತ್ತಿಗೆದಾರರು ಹಲ್ಲೆಗೆ ಮುಂದಾಗಿದ್ದ ಘಟನೆ ಬಳಿಕ 25 ಇಂಜಿನಿಯರ್‌ಗಳ ಪಟ್ಟಿಯು ಮುನ್ನೆಲೆಗೆ ಬಂದಿದೆ.
ಕಾಮಗಾರಿಯಲ್ಲಿನ ಲೋಪದೋಷ ಹಾಗೂ ನ್ಯೂನತೆಗಳೊಂದಿಗೆ ತಯಾರಿಸಲಾದ ಅಂದಾಜು ಪತ್ರಿಕೆಗೆ ಕಾರಣರಾದ ಮತ್ತು ಕಾಮಗಾರಿ ನಿರ್ಮಾಣ ಹಂತದಲ್ಲಿ ಅನಾವಶ್ಯಕ ಐಟಂಗಳ ಹೆಚ್ಚುವರಿ ಪರಿಮಾಣವನ್ನು ಅಳತೆ ಪುಸ್ತಕದಲ್ಲಿ ನಮೂದಿಸಿ ಬಿಲ್ ಪಾವತಿಗೆ ಕಾರಣರಾದ ಯೋಜನಾ ಅಧಿಕಾರಿಗಳನ್ನು ಗುರುತಿಸಿ ಅವರನ್ನು ಅಮಾನತಿನಲ್ಲಿಡಲು ಸೂಕ್ತ ಪ್ರಸ್ತಾವನೆ ಸಲ್ಲಿಸಬೇಕು ಎಂದು ಜಲಸಂಪನ್ಮೂಲ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯು ಕೃಷ್ಣ ಭಾಗ್ಯ ಜಲನಿಗಮ ವ್ಯವಸ್ಥಾಪಕ ನಿರ್ದೇಶಕರಿಗೆ 2022ರ ಜೂನ್ 17ರಂದು ಪತ್ರ ಬರೆದು ನಿರ್ದೇಶಿಸಿದ್ದರು.
‘ಪ್ರಸ್ತಾವಿತ ಆಧುನೀಕರಣ ಕಾಮಗಾರಿಯಲ್ಲಿ ಅನಾವಶ್ಯಕ ಐಟಂಗಳ /ಹೆಚ್ಚುವರಿ ಪರಿಮಾಣಗಳಿಗಾಗಿ ಪಾವತಿಸಲಾದ ಬಿಲ್ ಮೊತ್ತವನ್ನು ಗುತ್ತಿಗೆದಾರರಿದಂದ ವಸೂಲಿ ಮಾಡಿ ಕೈಗೊಂಡ ಕ್ರಮದ ವರದಿಯನ್ನು ಸಲ್ಲಿಸಬೇಕು,’ ಎಂದು ಜಲ ಸಂಪನ್ಮೂಲ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಕೇಶ್‌ಸಿಂಗ್ ಅವರು ಕೃಷ್ಣಭಾಗ್ಯ ಜಲನಿಗಮದ ವ್ಯವಸ್ಥಾಪಕ ನಿರ್ದೇಶಕರಿಗೆ ಪತ್ರ ಬರೆದು ಸೂಚಿಸಿದ್ದರು.
ಅದರಂತೆ ಕೃಷ್ಣ ಭಾಗ್ಯ ಜಲನಿಗಮವು ಸಹಾಯಕ ಮತ್ತು ಕಿರಿಯ ಇಂಜಿನಿಯರ್‌ಗಳ ಪಟ್ಟಿಯನ್ನು ಸರ್ಕಾರಕ್ಕೆ ಒದಗಿಸಿದೆ. ನಾರಾಯಣಪುರ ಬಲದಂಡೆ ಕಾಲುವೆ ಉಪ ವಿಭಾಗದ ರೋಡಲಬಂಡಾ ಸೇರಿದಂತೆ ಇನ್ನಿತರೆ ವಲಯಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸಹಾಯಕ ಮತ್ತು ಕಿರಿಯ ಇಂಜಿನಿಯರ್‌ಗಳು ಗುತ್ತಿಗೆದಾರರು ಮತ್ತು ಪ್ರಭಾವಿ ಕಂಪನಿಗಳೊಂದಿಗೆ ಕೈಜೋಡಿಸಿ ಕೋಟ್ಯಂತರ ರುಪಾಯಿ ಮೊತ್ತ ಪಾವತಿಗೆ ಕಾರಣರಾಗಿದ್ದರು ಎಂಬುದು ತಿಳಿದು ಬಂದಿದೆ.
ಅದೇ ರೀತಿ ಕಾಮಗಾರಿ ನಿರ್ಮಾಣ ಹಂತದಲ್ಲಿ ಅನಾವಶ್ಯಕ ಐಟಂಗಳ/ಹೆಚ್ಚುವರಿ ಪರಿಮಾಣ ಲೀಡ್ ಅಂಡ್ ಲಿಫ್ಟ್‌ನೊಂದಿಗೆ ಅಳತೆ ಪುಸ್ತಕದಲ್ಲಿ ನಮೂದಿಸಿ ಬಿಲ್ ಪಾವತಿಗೆ ಮಂದಿ ಎಕ್ಸಿಕ್ಯೂಟಿವ್, ಅಸಿಸ್ಟೆಂಟ್ ಎಕ್ಸಿಕ್ಯೂಟಿವ್ ಇಂಜನಿಯರ್‌ಗಳು ಕಾರಣರಾಗಿದ್ದರು. ಆದರೂ ತಪ್ಪಿತಸ್ಥ ಇಂಜಿನಿಯರ್‌ಗಳನ್ನು ಇದುವರೆಗೂ ಅಮಾನತುಗೊಳಿಸಿಲ್ಲ. ಅಲ್ಲದೇ ಈ ಬಗ್ಗೆ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಅವರು ಕಠಿಣ ಕ್ರಮಕೈಗೊಂಡಿಲ್ಲ ಎಂದು ತಿಳಿದು ಬಂದಿದೆ.
ಇಂಜಿನಿಯರ್‌ಗಳ ಹೆಸರಿನ ಪಟ್ಟಿ ಇಲ್ಲಿದೆ
ಭೀಮಣ್ಣ ನಾಗಠಾಣ, ಪುಟ್ಟಣ್ಣ, ಸಂತೋಷ ಕೆ, ಶಿವಕುಮಾರ್, ಬೈಲಪ್ಪ, ಭರತಕುಮಾರ್, ಮಹ್ಮದ ಮೂಸಾ, ಅನಂದ, ಶ್ರೀಧರ ಬಳ್ಳಿದವ, ಶಿವಕುಮಾರ, ನರೇಂದ್ರ, ಸಂತೋಷ ಪಾಟೀಲ, ವೀರೇಶ, ಮಿಥುನ ಪವಾ, ಸೂರಪ್ಪ ಬಿ, ಅನಿಲ ಪಾಟೀಲ, ನಾಗರಾಜ ಬಿ, ಗೋಪಾಲಸಿಂಗ್ ಠಾಕೂರ, ಮಹಿಬೂಬ ಸಾಬ, ಎಮ್ ಎಸ್ ಬಜಂತ್ರಿ, ವಿ ಎಸ್ ಮಲ್ಲಿಕಾರ್ಜುನ, ಅಮೃತ ಪವಾರ, ಗೋವಿಂದರಾಜು ವಿ, ಅನಿಲ ರಾಜ, ಶಂಕರ ಇವರು ಅಂದಾಜು ಪತ್ರಿಕೆಯಲ್ಲಿನ ಲೋಪದೋಷ ಮತ್ತು ನ್ಯೂನತೆಗಳಿಗೆ ಕಾರಣರಾಗಿದ್ದರು ಎಂಬುದು ಪಟ್ಟಿಯಿಂದ ತಿಳಿದು ಬಂದಿದೆ.
ಕೃಷ್ಣಭಾಗ್ಯ ಜಲನಿಗಮದ ನಾರಾಯಣಪುರ ಬಲದಂಡೆ ಕಾಲುವೆ ಅಧುನೀಕರಣ, ನವೀಕರಣ ಮತ್ತು ವಿಸ್ತರಣೆ ಕಾಮಗಾರಿಗಳ ಗುಣಮಟ್ಟ ಮತ್ತು ಭೌತಿಕ ಪರಿಶೀಲನೆಗೆ ತೆರಳಿದ್ದ ಬಿಜೆಪಿ ಶಾಸಕ ಅಭಯ್ ಪಾಟೀಲ್ ಅಧ್ಯಕ್ಷತೆಯ ಕರ್ನಾಟಕ ವಿಧಾನಸಭೆಯ ಅಂದಾಜುಗಳ ಸಮಿತಿಯ ಶಾಸಕ ಸದಸ್ಯರ ಮೇಲೆ ಗುತ್ತಿಗೆದಾರರ ಬೆಂಬಲಿಗರ ಗುಂಪೊಂದು ಮುಗಿಬಿದ್ದು ಹಲ್ಲೆಗೂ ಮುಂದಾಗುವ ಮೂಲಕ ರಾಜ್ಯದಲ್ಲಿ ಬಿಹಾರ ವಾತಾವರಣವನ್ನು ಸೃಷ್ಟಿ ಮಾಡಿದ್ದರು.
ರಾಯಚೂರು ಜಿಲ್ಲೆಯ ಲಿಂಗಸಗೂರು ಮತ್ತು ಸುತ್ತಮುತ್ತ ತಾಲೂಕುಗಳಲ್ಲಿ 95 ಕಿ ಮೀ ವರೆಗೆ ಪ್ರವಾಸ ನಡೆಸಿದ್ದರೂ ಅಂದಾಜುಗಳ ಸಮಿತಿಯ ಶಾಸಕರುಗಳಿಗೆ ಪೊಲೀಸ್ ಅಧಿಕಾರಿಗಳು ಸಮರ್ಪಕವಾಗಿ ಬಂದೋಬಸ್ತ್ ಒದಗಿಸಿರಲಿಲ್ಲ. ಕಾಲುವೆಗಳ ಭೌತಿಕ ಪರಿಶೀಲನೆಗೆ 2022ರ ಮೇ 4 ಮತ್ತು 5ರಂದು ಕೈಗೊಂಡಿದ್ದ ಪ್ರವಾಸದ ವೇಳೆಯಲ್ಲಿ ಭದ್ರತಾ ವೈಫಲ್ಯವೂ ಕಂಡು ಬಂದಿತ್ತು.
ಕಾಲುವೆಗಳ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡುತ್ತಿದ್ದಂತೆ ಗುತ್ತಿಗೆದಾರರ ಗುಂಪೊಂದು ಮುಗಿಬಿದ್ದು ಅವಾಚ್ಯ ಪದಗಳಿಂದ ನಿಂದಿಸಿರುವುದಲ್ಲದೆ ಶಾಸಕರುಗಳಿದ್ದ ವಾಹನಗಳ ಸಂಚಾರಕ್ಕೂ ಅಡ್ಡಿಯುಂಟು ಮಾಡಿರುವುದು ಮತ್ತು ಸದಸ್ಯರನ್ನೇ ಗುರಿಯಾಗಿಸಿಕೊಂಡು ನುಗ್ಗಿದ ಗುಂಪೊಂದು ಸಮಿತಿಯ ಸದಸ್ಯರನ್ನು ತಳ್ಳಾಡಿತ್ತು.
ಈ ಸಮಿತಿಯಲ್ಲಿ ಅಧ್ಯಕ್ಷ ಅಭಯ್ ಪಾಟೀಲ್ ಸೇರಿ ಒಟ್ಟು 15 ಮಂದಿ ಶಾಸಕರಿದ್ದರು. ಕಾಲುವೆಗಳ ಕಾಮಗಾರಿ ಭೌತಿಕ ಪರಿಶೀಲನೆಗೆ ಮುಂದಾಗುತ್ತಿದ್ದಂತೆ ಇದ್ದಕ್ಕಿದ್ದಂತೆ ಗುತ್ತಿಗೆದಾರರ ಗುಂಪೊಂದು ಸಮಿತಿಯ ಸುತ್ತಲೂ ಘೇರಾಯಿಸಿ ಬೆದರಿಕೆಯನ್ನೂ ಒಡ್ಡಿತು. ಮತ್ತು ಪರಿಶೀಲನೆಗೆ ಅಡ್ಡಿಯುಂಟು ಮಾಡಿತು. ಆದರೆ ಈ ವೇಳೆಯಲ್ಲಿ ಬೆರಳಣಿಕೆಯಷ್ಟು ಪೊಲೀಸರು ಇದ್ದುದ್ದರಿಂದಾಗಿ ಸಮಿತಿಯ ಸದಸ್ಯರ ಜೀವಕ್ಕೂ ಆಪತ್ತು ಬಂದೊದಗಿತ್ತು.
ನಾರಾಯಣಪುರ ಬಲದಂಡೆ ಮುಖ್ಯ ಕಾಲುವೆ, ಸೀಳು ಕಾಲುವೆ ಸೇರಿದಂತೆ ಇನ್ನಿತರೆ ಕಾಮಗಾರಿಗಳನ್ನು ಡಿ ವೈ ಉಪ್ಪಾರ್ ಮತ್ತು ಎನ್ ಡಿ ವಡ್ಡರ್ ಎಂಬ ಗುತ್ತಿಗೆದಾರರು ನಿರ್ವಹಿಸಿದ್ದರು ಎಂದು ತಿಳಿದು ಬಂದಿದೆ. ಈ ಪೈಕಿ ಎನ್ ಡಿ ವಡ್ಡರ್ ಅವರು ಬಿಜೆಪಿಯ ಮಾಜಿ ಶಾಸಕ ಮಾನಪ್ಪ ವಜ್ಜಲ್ ಅವರ ಸಂಬಂಧಿ ಎಂದು ಹೇಳಲಾಗಿತ್ತು.
ವಿಶೇಷವೆಂದರೆ ಸಮಿತಿ ಸದಸ್ಯರಿಗೆ ಬಂದೋಬಸ್ತ್ ಮತ್ತು ಭದ್ರತೆ ನೀಡಲು ನಿಯೋಜಿತವಾಗಿದ್ದ ಡಿವೈಎಸ್ಪಿ ಮಲ್ಲಿಕಾರ್ಜುನ ಸಾಲಿ ಎಂಬುವರು ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ನೇಮಕಾತಿಯ ಹಗರಣದಲ್ಲಿ ಭಾಗಿ ಆಗಿದ್ದಾರೆ ಎಂಬ ಆರೋಪದಡಿ ಸಮಿತಿ ಭೇಟಿ ನೀಡಿದ ದಿನದಂದೇ ಬಂಧನಕ್ಕೊಳಗಾಗಿದ್ದರು.
ನಾರಾಯಣಪುರ ಬಲದಂಡೆ ಮುಖ್ಯ ಕಾಲುವೆ, ಉಪ ಕಾಲುವೆ ಮತ್ತು ಸೀಳು ಕಾಲುವೆ ಕಾಮಗಾರಿಯು ಗುಣಮಟ್ಟದಿಂದ ಕೂಡಿಲ್ಲ. ಕಾಮಗಾರಿಗಳಲ್ಲಿ ಬೋಗಸ್ ಬಿಲ್ ಸೃಷ್ಟಿಸಿ ಅವ್ಯವಹಾರ ಎಸಗಲಾಗಿದೆ ಎಂದು ಸ್ಥಳೀಯ ಶಾಸಕರೂ ಸೇರಿದಂತೆ ಇನ್ನಿತರರು ಅಂದಾಜುಗಳ ಸಮಿತಿಗೆ ದೂರು ಸಲ್ಲಿಸಿತ್ತು. ಇದನ್ನಾಧರಿಸಿ ಸಮಿತಿಯು ಪ್ರವಾಸ ನಡೆಸಿ ಭೌತಿಕ ಪರಿಶೀಲನೆಗೆ ಮುಂದಾಗಿತ್ತು.
‘ಸರ್ಕಾರದ ಅನುದಾನವನ್ನು ಈ ಭ್ರಷ್ಟ ರಾಜಕಾರಣಿಗಳು ಹಾಗೂ ಈ ಭ್ರಷ್ಟ ಅಧಿಕಾರಿಗಳು ಲೂಟಿ ಮಾಡುತ್ತಿದ್ದಾರೆ ಇದರಿಂದ ರೈತರಿಗೆ ಬಹಳ ಅನ್ಯಾಯವಾಗಿದೆ. ಸರ್ಕಾರ ಗಮನ ಹರಿಸಬೇಕು, ತಾಂತ್ರಿಕ ತನಿ ಖೆ ನಡೆಸಬೇಕು. ಎಲ್ಲಾ ಕಾಮಗಾರಿಗಳನ್ನು ಸಂಪೂರ್ಣವಾಗಿ ತನಿಖೆ ಮಾಡಿಸಿ ತಪ್ಪಿತಸ್ಥರ ವಿರುದ್ಧ ಕಟ್ಟು ನಿಟ್ಟಿನ ಕಾನೂನು ಕ್ರಮ ಜರುಗಿಸಬೇಕು ಎಂದು ಭೀಮು ಕೋಲಿ ಆಗ್ರಹಿಸಿದ್ದಾರೆ.
ವರದಿ ಮಾಹಿತಿ ಭೀಮು ಕೋಲಿ ಯಾದಗಿರಿ
Be the first to comment