ಬೆಂಗಳೂರು, ಸೆ, 16; ಭಾನುವಾರ [ಸೆ.18]ದಂದು ನಡೆಯಲಿರುವ ಅಮಾನತ್ ಕೋ ಅಪರೇಟಿವ್ ಬ್ಯಾಂಕ್ ಚುನಾವಣೆಯ ಫಲಿತಾಂಶ ನ್ಯಾಯಾಲಯದ ಅಂತಿಮ ತೀರ್ಪಿಗೆ ಒಳಪಟ್ಟಿರುತ್ತದೆ ಎಂದು ರಾಜ್ಯ ಹೈಕೋರ್ಟ್ ಮಧ್ಯಂತರ ಆದೇಶ ನೀಡಿದೆ.
ನ್ಯಾಯಮೂರ್ತಿ ಕೃಷ್ಣ ಕುಮಾರ್ ಅವರನ್ನೊಳಗೊಂಡ ನ್ಯಾಯಪೀಠ ಸಹಕಾರ ಇಲಾಖೆ, ಚುನಾವಣೆ ನಡೆಸುವ ಸಹಕಾರ ಸಂಘಗಳ ಚುನಾವಣಾ ಚುನಾವಣಾ ಆಯೋಗ, ಚುನಾವಣಾಧಿಕಾರಿ ಬಿ.ಕೆ. ಸಲೀಂ ಮತ್ತು ಅಮಾನತ್ ಬ್ಯಾಂಕ್ ಗೆ ಈ ಸಂಬಂಧ ನೋಟಿಸ್ ಜಾರಿ ಮಾಡಿದೆ. ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿರುವ ಅರ್ಜಿದಾರರು ಚುನಾವಣೆಗೆ ಸ್ಪರ್ಧಿಸಬಹುದು, ಮತದಾನ ಮಾಡಬಹುದು. ಆದರೆ ಚುನಾವಣಾ ಫಲಿತಾಂಶ ಅಂತಿಮ ತೀರ್ಪಿಗೆ ಒಳಪಟ್ಟಿರುತ್ತದೆ ಎಂದು ತಿಳಿಸಿದೆ.
ಸಾಮಾಜಿಕ ಕಾರ್ಯಕರ್ತ ಆಲಂ ಪಾಶ ನೇತೃತ್ವದ ಹೆಲ್ಪಿಂಗ್ ಸಿಜಿಟನ್ ಅಂಡ್ ಪೀಪಲ್ಸ್ ಗ್ರೂಪ್ ನೇತೃತ್ವದಲ್ಲಿ ಅಬ್ದುಲ್ ಖುದ್ದೂರ್, ಧರ್ ಶಾ ಬೇಗಂ ಹಾಗೂ ಅಕ್ವಾಶ್ ಅಹಮದ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.
ಅಮಾನತ್ ಕೋ ಅಪರೇಟಿವ್ ಬ್ಯಾಂಕ್ 1970 ರಲ್ಲಿ ಸ್ಥಾಪನೆಯಾಗಿದ್ದು, ಈ ಬ್ಯಾಂಕ್ ಅನ್ನು ಅಸಂಖ್ಯಾತ ಠೇವಣಿದಾರರು ಕಟ್ಟಿ ಬೆಳೆಸಿದ್ದಾರೆ. ಈವರೆಗೆ ಎಲ್ಲಾ ಸದಸ್ಯರಿಗೂ ಚುನಾವಣೆಯಲ್ಲಿ ಮತದಾನ ಮಾಡಲು ಹಕ್ಕು ಹೊಂದಿದ್ದರು. ಆದರೆ ಇತ್ತೀಚೆಗೆ ಒಂದು ಸಾವಿರ ರೂ ಗಿಂತ ಕಡಿಮೆ ಠೇವಣಿ ಹೊಂದಿರುವವರಿಗೆ ಚುನಾವಣೆಗೆ ಸ್ಪರ್ಧಿಸುವಂತಿಲ್ಲ. ಮತದಾನ ಮಾಡುವಂತಿಲ್ಲ ಎಂಬ ನಿಯಮವನ್ನು ಜಾರಿಗೆ ತರಲಾಗಿದೆ. ಇದು ಸದಸ್ಯರ ಹಕ್ಕುಗಳಿಗೆ ವಿರುದ್ಧವಾಗಿದೆ. ಸಹಕಾರಿ ನಿಯಮಗಳ ಉಲ್ಲಂಘನೆಯಾಗಿದೆ. ಒಮ್ಮೆ ಸದಸ್ಯರಾದವರು ಮತದಾನ ಮಾಡಲು ಮತ್ತು ಚುನಾವಣೆಗೆ ಸ್ಪರ್ಧಿಸಲು ಅರ್ಹತೆ ಹೊಂದಿದ್ಧಾರೆ. ಆದರೆ ಈ ಚುನಾವಣೆಯಲ್ಲಿ 46 ಸಾವಿರಕ್ಕೂ ಹೆಚ್ಚು ಸದಸ್ಯರನ್ನು ಮತದಾನದಿಂದ ವಂಚಿತರನ್ನಾಗಿ ಮಾಡಲಾಗಿದೆ ಎಂದು ನ್ಯಾಯಾಲಯದ ಮೊರೆ ಹೋಗಿದ್ದಾರೆ.
ಇದಲ್ಲದೇ ಅಮಾನತ್ ಕೋ ಅಪರೇಟಿವ್ ಬ್ಯಾಂಕ್ ರಾಜ್ಯಾದ್ಯಂತ ಹರಡಿಕೊಂಡಿದೆ. ಬೆಳಗಾವಿಯಲ್ಲಿ ಹೆಚ್ಚಿನ ಸದಸ್ಯರನ್ನು ಹೊಂದಿದೆ. ಮಂಗಳೂರು, ಮೈಸೂರು, ಕಲಬುರಗಿ, ಚೆನ್ನಪಟ್ಟಣದಲ್ಲಿ ಶಾಖೆಗಳನ್ನು ಹೊಂದಿದ್ದು, ಇಲ್ಲೂ ಕೂಡ ಮತದಾನ ಮಾಡಲು ಅವಕಾಶ ಕಲ್ಪಿಸಬೇಕು. ಇದೀಗ ಮಳೆಗಾಲವಾಗಿದ್ದು, ಹಿರಿಯ ನಾಗರಿಕರು ದೂರದ ಪ್ರದೇಶಗಳಿಂದ ಬಂದು ಬೆಂಗಳೂರಿನ ಮತದಾನ ಮಾಡಲು ಸಾಧ್ಯವಾಗುವುದಿಲ್ಲ ಎಂದು ಅರ್ಜಿದಾರು ನ್ಯಾಯಪೀಠದ ಗಮನ ಸೆಳೆದಿದ್ದರು.
Be the first to comment