ಚುನಾವಣಾ ಗುರುತಿನ ಪತ್ರದೊಂದಿಗೆ ಆಧಾರ ಕಾರ್ಡ್ ಸಂಖ್ಯೆ ಜೋಡಣೆ ಭಟ್ಕಳದಲ್ಲಿ ಇಂದು ಬ್ರಹತ್ ಅಭಿಯಾನ

ವರದಿ- ಕುಮಾರ ನಾಯಕ್ ಭಟ್ಕಳ್ , ಉಪಸಂಪಾದಕರು

 

ಭಟ್ಕಳ

ಚುನಾವಣಾ ಆಯೋಗದ ಮುಖ್ಯ ಚುನಾವಣಾಧಿಕಾರಿ ನಿರ್ದೇಶನದಂತೆ ಪ್ರತಿಯೋರ್ವ ಮತದಾರರು ಕೂಡಾ ತಮ್ಮ ಮತದಾನದ ಗುರುತಿನ ಚೀಟಿಯನ್ನು ಆಧಾರ್ ಕಾರ್ಡ್ ಇಲ್ಲವೇ ಇತರ 14 ಗುರುತಿನ ಚೀಟಿಯೊಂದಿಗೆ ಜೋಡಣೆ ಮಾಡಿಕೊಳ್ಳುವುದು ಅತೀ ಅವಶ್ಯಕವಾಗಿದ್ದು ತಕ್ಷಣ ಎಲ್ಲರೂ ತಮ್ಮ ತಮ್ಮ ಮತದಾರರ ಗುರುತಿನ ಚೀಟಿಗೆ ಲಿಂಕ್ ಮಾಡಿಕೊಳ್ಳುವಂತೆ ಸಹಾಯಕ ಆಯುಕ್ತ ಮಮತಾದೇವಿ ಜಿ.ಎಸ್. ತಿಳಿಸಿದರು.
ಅವರು ತಮ್ಮ ಕಚೇರಿಯಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು.
ಪ್ರತಿಯೋರ್ವರೂ ಕೂಡಾ ತಮ್ಮ ಮೊಬೈಲ್ ಗಳಲ್ಲಿಯೇ ಲಿಂಕ್ ಮಾಡಿಕೊಳ್ಳಲು ಅವಕಾಶವಿದ್ದು ವೋಟರ್ ಹೆಲ್ಸ್ಲೈನ್ ಆ್ಯಪ್‌ನ್ನು ಡೌನ್‌ಲೋಡ್ ಮಾಡಿಕೊಂಡು ಲಿಂಕ್ ಮಾಡಬಹುದು ಎಂದರು.
ತಹಸೀಲ್ದಾರ್ ಕಚೇರಿ ಮತ್ತು ಪುರಸಭಾ ಕಚೇರಿಯಲ್ಲಿ ಮತದಾರರ ಗುರುತಿನ ಚೀಟಿ ಲಿಂಕ್ ಮಾಡಲು ಈಗಾಗಲೇ ಬೂತ್‌ಗಳನ್ನು ತೆರೆಯಲಾಗಿದೆ. ಅಲ್ಲದೇ, ದಿನಾಂಕ 27ರಂದು ಇಂದು ಬೃಹತ್ ಅಭಿಯಾನವೊಂದನ್ನು ಹಮ್ಮಿಕೊಂಡಿದ್ದು ಪ್ರತಿ ಮತಗಟ್ಟೆಯಲ್ಲಿನ ಮತದಾರರನ್ನು ಭೇಟಿಯಾಗಲು ಮತಗಟ್ಟೆ ಅಧಿಕಾರಿಗಳು, ಸಿಬ್ಬಂದಿಗಳು ಬರಲಿದ್ದಾರೆ ಎಂದ ಅವರು ಆಧಾರ್ ಜೋಡಣೆ ಮಾಡಿಕೊಳ್ಳಲು ಪ್ರತಿಯೋರ್ವ ಮತದಾರರು ಮುಂದೆ ಬರಬೇಕು ಎಂದೂ ಕರೆ ನೀಡಿದರು.

ಮತದಾರರ ಪಟ್ಟಿಯಲ್ಲಿ ಹೆಸರು ಪುನರಾವರ್ತನೆಯಾಗದಂತೆ ತಡೆಯಲು ಇದು
ಸಹಕಾರಿಯಾಗಿದ್ದು ತಮ್ಮಲ್ಲಿರುವ 14 ಗುರುತಿನ ಚೀಟಿಯಲ್ಲಿ ಯಾವುದನ್ನು ಕೂಡಾ ಲಿಂಕ್ ಮಾಡಬಹುದು. ಇದು ದೋಷರಹಿತ ಮತದಾರರ ಪಟ್ಟಿ ತಯಾರಿಸಲು ಸಹಕಾರಿಯಾಗುವುದು ಎಂದರು. ಈಗಾಗಲೇ ಅಗಸ್ಟ್ 4 ರಿಂದ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ ನಡೆಯುತ್ತಿದ್ದು ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸಲು, ಬೇರೆ ಕಡೆಗೆ ವಲಸೆ ಹೋದವರ ಹಾಗೂ ಮೃತರ ಹೆಸರು ಕಡಿಮೆ ಮಾಡಲು ಅವಕಾಶವಿದೆ ಎಂದ ಅವರು, ಮುರ್ಡೇಶ್ವರದ ಮಠದಹಿತ್ತು ಮತದಾನ ಕೇಂದ್ರದ ಬದಲಾವಣೆಗೆ ಮಠದಹಿತ್ತು ಮತದಾನ ಕೇಂದ್ರದ ಬದಲಾವಣೆಗೆ ಪ್ರಸ್ತಾವನೆ ಕಳುಹಿಸಲಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ತಹಸೀಲ್ದಾರ್ ಡಾ. ಸುಮಂತ್ ಬಿ.ಇ. ಉಪಸ್ಥಿತರಿದ್ದರು.

Be the first to comment

Leave a Reply

Your email address will not be published.


*