ಜಿಲ್ಲಾ ಸುದ್ದಿಗಳು
ಭಟ್ಕಳ
ಭಟ್ಕಳದ ಜನತಾ ಪತ್ತಿನ ಸಹಕಾರಿ ಸಂಘದಲ್ಲಿ ಅವ್ಯವಹಾರ ಇಲ್ಲದಿದ್ದರೆ ಕಲಂ ೬೪ರಡಿ ತನಿಖೆ ನಡೆಸದಂತೆ ಕೋರ್ಟಿನಿಂದ ತಡೆಯಾಜ್ಞೆ ತರುವ ಅಗತ್ಯವೇನಿತ್ತು ಎಂದು ಶಾಸಕ ಸುನೀಲ ನಾಯ್ಕ ಪ್ರಶ್ನಿಸಿದ್ದಾರೆ.
ಇತ್ತೀಚೆಗೆ ಸಂಘದ ವಾರ್ಷಿಕ ಸರ್ವಸಾಧಾರಣಾ ಸಭೆಯಲ್ಲಿ ಸಂಘದ ಅಧ್ಯಕ್ಷ ಹಾಗೂ ಮಾಜಿ ಶಾಸಕ ಮಂಕಾಳ ವೈದ್ಯ ನೀಡಿದ ಹೇಳಿಕೆಗೆ ಪ್ರತ್ಯುತ್ತರಿಸಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.ಜನತಾ ಪತ್ತಿನ ಸಹಕಾರಿ ಸಂಘ ಡಾ. ಚಿತ್ತರಂಜನ್, ಭಾಸ್ಕರ ನಾಯಕ, ಗೋಪಾಲಕೃಷ್ಣ ಭಟ್ಕಳ, ಲಕ್ಷ್ಮಣ ನಾಯ್ಡ ಮಣ್ಣುಳಿ ಅವರಂತಹ ಹಿರಿಯರು ಕಟ್ಟಿ ಬೆಳೆಸಿದ ಸಂಸ್ಥೆ. ಕೆಲವು ಗ್ರಾಹಕರು ಸೊಸೈಟಿಯಲ್ಲಿ ಅವ್ಯವಹಾರವಾಗಿದ್ದು, ಸೂಕ್ತ ತನಿಖೆ ನಡೆಸಬೇಕು. ಎಂದು ನನಗೆ ದೂರು ನೀಡಿದ್ದರಿಂದ ವಿಧಾನಸಭೆಯ ಅಧಿವೇಶನದಲ್ಲಿ ಈ ಕುರಿತು ಪ್ರಶ್ನಿಸಿದ್ದೇನೆ. ಸಂಘದಲ್ಲಿನ ಠೇವಣಿದಾರರ ಹಿತಕಾಪಾಡುವ ಉದ್ದೇಶದಿಂದ ಸದನದಲ್ಲಿ ಪ್ರಶ್ನೆ ಮಾಡಿದ್ದೇನೆಯೇ ಹೊರತು ಇದರಲ್ಲಿ ಬೇರೆ ಯಾವುದೇ ದುರುದ್ದೇಶವಿಲ್ಲ ಎಂದು ಸ್ಪಷ್ಟಪಡಿಸಿದರು.
ಇತ್ತೀಚೆಗೆ ನಡೆದ ಸಂಘದ ವಾರ್ಷಿಕ ಸಭೆಯಲ್ಲಿ ಸಿಬ್ಬಂದಿ ನೇಮಕಾತಿ ವಿಳಂಬಕ್ಕೆ ನಾನೇ ಕಾರಣ ಎಂದು ಆರೋಪ ಮಾಡಿದ್ದಾರೆ. ವಿವಿಧ ಸಹಕಾರಿ ಸಂಘಗಳ ಮೇಲೆ ಒತ್ತಡ ಹಾಕಿ ತಮ್ಮ ಸೊಸೈಟಿಯಲ್ಲಿ ಠೇವಣಿ ಮಾಡಿಸಿಕೊಳ್ಳುತ್ತಿರುವುದು ಗಮನಕ್ಕೆ ಬಂದಿದ್ದು ಇದು ಕಾನೂನು ಬಾಹೀರ ಕ್ರಮ. ಸಹಕಾರಿ ಸಂಘಗಳು ಇನ್ನೊಂದು ಸಹಕಾರಿ ಸಂಘದಲ್ಲಿ ಹಣ ಠೇವಣಿ ಇಡುವಂತಿಲ್ಲ. ಆದರೆ ಇಲ್ಲಿ ಕಾಯ್ದೆ ಬಾಹೀರವಾಗಿ ಠೇವಣಿ ಇರಿಸಿಕೊಳ್ಳಲಾಗುತ್ತಿದೆ. ಸಂಘದ ವತಿಯಿಂದ ಪ್ರತಿ ಆರು ತಿಂಗಳಿಗೊಮ್ಮೆ ಅಧ್ಯಕ್ಷರು, ನಿರ್ದೇಶಕರು ಟೂರ್‌ಗೆ ಹೋಗಿ ಮೋಜು ಮಸ್ತಿ ಮಾಡುತ್ತಿದ್ದು, ಸೊಸೈಟಿ ಹಣದಲ್ಲಿ ಇದೆಲ್ಲಾ ಮಾಡುವುದು ಸರಿನಾ ಎಂದು ಶಾಸಕರು ಪ್ರಶ್ನಿಸಿದರು.
ಅಮಾನತೆಗೊಂಡಿದ್ದ ಹಿರಿಯ ಸಿಬ್ಬಂದಿಯನ್ನು ಮಾಜಿ ಶಾಸಕರು ಸೊಸೈಟಿಯ ವಾರ್ಷಿಕ ಮಹಾಸಭೆಯಲ್ಲಿ ಸೇವೆಯಿಂದ ವಜಾ ಮಾಡುವುದಾಗಿ ಘೋಷಿಸಿದ್ದಾರೆ ಎಂದು ಗಂಭೀರ ಆರೋಪ ಮಾಡಿದ ಶಾಸಕರು, ಈಗ ವಜಾ ಮಾಡುತ್ತೇನೆಂದು ಘೋಷಿಸುವುದರ ಮೂಲಕ ಸಿಬ್ಬಂದಿಯನ್ನು ಬಲಿಪಶು ಮಾಡಿದ್ದಾರೆ. ಸಿಬ್ಬಂದಿಯ ಕುಟುಂಬ ಏನಾಗಬೇಕು? ಎಂದರು. ಕಲಂ ೬೪ರ ಅಡಿ ತನಿಖೆಯಾದರೆ ಮಾತ್ರ ಎಲ್ಲವೂ ಬಹಿರಂಗಗೊಳ್ಳುತ್ತದೆ. ಯಾವುದೇ ಅವ್ಯವಹಾರ ಇಲ್ಲದಿದ್ದರೆ ೬೪ರ ಭಯ ಯಾಕೆ? ಎಂದೂ ಕೇಳಿದರು.ಬಿಜೆಪಿ ಮಂಡಲಾಧ್ಯಕ್ಷ ಸುಬ್ರಾಯ ದೇವಡಿಗ, ಪ್ರಧಾನ ಕಾರ್ಯದರ್ಶಿ ಭಾಸ್ಕರ ದೈಮನೆ, ಮೋಹನ ನಾಯ್ಕ, ಪಿಎಲ್ಲಿ ಬ್ಯಾಂಕ್ ನಿರ್ದೇಶಕ ಸಂತೋಷ ನಾಯ್ಕ, ಮುಖಂಡರಾದ ಶ್ರೀಕಾಂತ ನಾಯ್ಕ, ಸಂದೀಪ ಶೇಟ್, ಸಂತೋಷ ನಾಯ್ಕ ಮುಂತಾದವರಿದ್ದರು.
Be the first to comment