ವಿಜಯಪುರ:(ಆ:30)ಡಿ.ಕೆ.ಶಿವಕುಮಾರ್ ಮಾತ್ರವಲ್ಲ ಕಾನೂನಿಗಿಂತ ಯಾರೂ ದೊಡ್ಡವರಲ್ಲ. ಉಪ್ಪು ತಿಂದವ ನೀರು ಕುಡಿಯಲೇಬೇಕು. ಇಷ್ಟಕ್ಕೂ ತಪ್ಪು ಮಾಡಿಲ್ಲ ಎಂದಾದರೆ ಇ.ಡಿ. ನೋಟೀಸಗೆ ಡಿ.ಕೆ.ಶಿವಕುಮಾರ್ ಹೆದರುವುದು ಏಕೆ ಎಂದು ಆರೋಗ್ಯ ಸಚಿವ ಬಿ.ಶ್ರೀರಾಮುಲು ಕುಟುಕಿದ್ದಾರೆ.
ನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ರಾಜಕೀಯ ಬೇರೆ, ಆರ್ಥಿಕ ವ್ಯವಹಾರ ಬೇರೆ. ಇ.ಡಿ ಹಾಗೂ ಕೇಂದ್ರ ಸರಕಾರ ನನ್ನ ರಕ್ತ ಹೀರಿದೆ, ದೇಹ ಮಾತ್ರ ಉಳಿದಿದೆ ಎಂಬ ಅರೋಪ ಸರಿಯಲ್ಲ, ಕಾನೂನು ಎಲ್ಲರಿಗೂ ಒಂದೆ, ತಪ್ಪು ಮಾಡಿರದಿದ್ದರೆ ಹೆದರಿಕೆ ಏಕೆ ಎಂದು ಪ್ರಶ್ನಿಸಿದರು.
ಕಾಂಗ್ರೆಸ್ ನ ಹಲವು ನಾಯಕರು ಆರ್ಥಿಕ ಅಪರಾಧ ಕೃತ್ಯದಲ್ಲಿ ಜೈಲಿಗೆ ಹೋಗಿದ್ದಾರೆ, ಕೆಲವರು ಜೈಲಿನಿಂದ ಹೊರ ಬಂದಿದ್ದಾರೆ. ಕಾನೂನು ತನ್ನ ಕೆಲಸ ಮಾಡುತ್ತದೆ ಎಂದರು.
ಮೈತ್ರಿ ಸರಕಾರ ಪತನದ ವೇಳೆ ಡಿ.ಕೆ.ಶಿವಕುಮಾರ್ ಅವರು ಬಿಜೆಪಿ ಸರಕಾರದಲ್ಲಿ ನಿಮಗೆ ಉಪ ಮುಖ್ಯಮಂತ್ರಿ ಸ್ಥಾನ ಸಿಗುವುದಿಲ್ಲ ಎಂದು ಗೇಲಿ ಮಾಡಿದ್ದರು. ಆದರೆ ನಾನು ಬಿಜೆಪಿ ನಿಷ್ಠಾವಂತ ಕಾರ್ಯಕರ್ತ, ಸಚಿವ ಸ್ಥಾನ ದೊರೆಯದಿದ್ದರೂ ನಾನು ಬಿಜೆಪಿ ತೊರೆಯಲ್ಲ ಎಂದು ಸ್ಪಷ್ಟಪಡಿಸಿದರು.
ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಮಲೇಷಿಯಾದಲ್ಲಿ ಮೋಜು ಮಸ್ತಿ ಜೂಜಾಟ ಆಡಿರುವುದರಿಂದ ಕೇಳಿ ಬರುತ್ತಿರುವ ಟೀಕೆಗಳಿಗೆ ನಾನು ಪ್ರತಿಕ್ರಿಯಿಸಲಾರೆ. ಯಾರೇ ಆಗಲಿ ವಿದೇಶಕ್ಕೆ ಹೋದರೂ ದೇವರು ಮೆಚ್ಚುವ ಕೆಲಸ ಮಾಡಬೇಕು ಎಂದು ಸಚಿವ ಶ್ರೀರಾಮುಲು ಸಲಹೆ ನೀಡಿದರು
Be the first to comment