ಇಳಕಲ್ ಮಹಾಂತ ಜೋಳಿಗೆಯ ಶ್ರಮ:ರಾಜ್ಯಾದ್ಯಂತ ಅಗಸ್ಟ 1 ರಂದು ವ್ಯಸನ ಮುಕ್ತ ದಿನಾಚರಣೆ

ವರದಿ: ಶರಣಪ್ಪ ಹೆಳವರ ಬಾಗಲಕೋಟೆ

ಜಿಲ್ಲಾ ಸುದ್ದಿಗಳು

ಡಾ. ಮಹಾಂತ ಶ್ರೀಗಳು ಆಧುನಿಕ ಸಮಾಜದಲ್ಲಿ ಜನ-ಸಾಮಾನ್ಯರು ತಮ್ಮಲ್ಲಿರುವ ದುಶ್ಚಟಗಳನ್ನು ಮಹಾಂತ ಜೋಳಿಗೆಗೆ ಹಾಕುವಂತೆ ದಶಕಗಳ ಕಾಲ ಗ್ರಾಮವಾರು, ಓಣಿ-ಓಣಿಗಳಲ್ಲಿ ಸಂಚರಿಸಿ ಮಾದರಿ ಸೇವಾ ಕಾರ್ಯ ಕೈಗೊಂಡಿದ್ದರು ಆ ಮೂಲಕ ವ್ಯಸನ ಮುಕ್ತ ಸದೃಢ ಸಮಾಜ ನಿರ್ಮಿಸಲು ನಿರಂತರವಾಗಿ ಶ್ರಮಿಸಿದ ಪೂಜ್ಯರ ಹುಟ್ಟು ಹಬ್ಬವನ್ನು ರಾಜ್ಯ ಸರ್ಕಾರ ರಾಜ್ಯದೆಲ್ಲೆಡೆ ವ್ಯಸನ ಮುಕ್ತ ದಿನಾಚರಣೆ ಹಮ್ಮಿಕೊಂಡಿದೆ.

ಬಾಗಲಕೋಟೆ: ಯುವ ಪೀಳಿಗೆಯ ದುಶ್ಚಟಗಳನ್ನು ಬಿಡಿಸಿ ಸದೃಢ ಸಮಾಜ ನಿರ್ಮಾಣಕ್ಕೆ ನಿರಂತರ ಹೋರಾಟ ಮಾಡಿದ ಇಳಕಲ್ ಪೂಜ್ಯ ಶ್ರೀ ಡಾ. ಮಹಾಂತ ಶಿವಯೋಗಿಗಳ ಜಯಂತಿ ನಿಮಿತ್ತ ಆಗಸ್ಟ 1 ರಂದು ರಾಜ್ಯಾದ್ಯಂತ ವ್ಯಸನ ಮುಕ್ತ ದಿನಾಚರಣೆ ಆಚರಿಸಲಾಗುತ್ತದೆ.

ಈ ವರ್ಷ ರಾಜ್ಯ ಮಟ್ಟದ ಕಾರ್ಯಕ್ರಮವನ್ನು ಇಳಕಲ್‍ನ ಚಿತ್ತರಗಿ ಶ್ರೀ ವಿಜಯ ಮಹಾಂತೇಶ ಅನುಭವ ಮಂಟಪದಲ್ಲಿ ಆಗಸ್ಟ 1 ರಂದು ಹಮ್ಮಿಕೊಳ್ಳಲಾಗಿದೆ. ಇಂದು ಮದ್ಯಪಾನ ಸಂಯಮ ಮಂಡಳಿಯ ಕಾರ್ಯದರ್ಶಿ ಹನುಮನರಸಯ್ಯ, ಗಾಂಧೀ ಭವನದ ಸದಸ್ಯರಾದ ನಂದೀಶ ಹಾಗೂ ವಾರ್ತಾ ಇಲಾಖೆಯ ಉಪನಿರ್ದೇಶಕರಾದ ಡಿ. ದೇವರಾಜ ಅಧಿಕೃತವಾಗಿ ಕಾರ್ಯಕ್ರಮ ನಡೆಸಲು ಚಿತ್ತರಗಿ ಶ್ರೀ ವಿಜಯ ಮಹಾಂತೇಶ ಅನುಭವ ಮಠದ ಪೂಜ್ಯ ಶ್ರೀ ಮ.ನಿ.ಪ್ರ ಬಸವಲಿಂಗ ಗುರುಮಹಾಂತ ಸ್ವಾಮಿಗಳಿಗೆ ಆಹ್ವಾನ ನೀಡಿ ಅನುಮತಿ ಪಡೆದರು.

ಮಹಾಂತ ಜೋಳಿಗೆ ಸ್ವಾಮೀಜಿ ಎಂದೇ ಖ್ಯಾತರಾದ ಇಳಕಲ್‍ನ ಪೂಜ್ಯ ಶ್ರೀ ಮ.ನಿ.ಪ್ರ ಡಾ. ಮಹಾಂತ ಶಿವಯೋಗಿಗಳು ಸಮಾಜವನ್ನು ಸನ್ಮಾರ್ಗದಲ್ಲಿ ಕೊಂಡೊಯ್ಯುವುದರ ಜೊತೆಗೆ 48 ವರ್ಷಗಳಿಂದ ಮಠಾಧೀಶರಾಗಿ ಅವರು ಜನ ಸಾಮಾನ್ಯರ ದುಶ್ಚಟಗಳನ್ನು ದೂರವಾಗಿಸಲು ಮಹಾಂತ ಜೋಳಿಗೆ ಎಂಬ ಚಿಂತನೆ ಜಾರಿಗೊಳಿಸಿದ್ದು ಇದರಿಂದ ಅನೇಕರು ತಮ್ಮ ದುಶ್ಚಟಗಳನ್ನು ಬಿಟ್ಟು ಉತ್ತಮ ಬದುಕನ್ನು ಸಾಗಿಸುತ್ತಿದ್ದಾರೆ. ಇಂತಹ ಮಹಾನ್ ವ್ಯಕ್ತಿಯ ಜಯಂತಿಯನ್ನು ನಾಡಿನಾದ್ಯಂತ ವ್ಯಸನಮುಕ್ತ ದಿನವನ್ನಾಗಿ ಆಚರಿಸುವುದಕ್ಕೆ ಸರ್ಕಾರ ನಿರ್ಧರಿಸಿದ್ದು ಶ್ಲಾಘನೀಯವಾಗಿದೆ.

Be the first to comment

Leave a Reply

Your email address will not be published.


*