ಲಿಂಗಸುಗೂರು (ಅ;06)ತಾಲೂಕಿನಲ್ಲಿ ಹರಿಯುತ್ತಿರುವ ಕೃಷ್ಣಾ ನದಿಯ ನಡುಗಡ್ಡೆಯಲ್ಲಿ ಸಿಲುಕಿರುವ ಜನರು ರಕ್ಷಣೆಗೆ ಮೊರೆ ಇಡುತ್ತಿದ್ದಾರೆ.
ಕರಕಲಗಡ್ಡಿಯಲ್ಲಿ ವಾಸಿಸುತ್ತಿರುವ ಸುಮಾರು 15ಕ್ಕೂ ಹೆಚ್ಚು ಜನ ನದಿ ದಾಟಲು ರಕ್ಷಣೆಗೆ ಕೂಗುತ್ತಿರುವ ದೃಶ್ಯ ಕಂಡು ಬಂತು.
ರಾಷ್ಟ್ರೀಯ ವಿಪತ್ತು ಪಡೆ (NDRF)ಯ ಸಿಬ್ಬಂದಿ ಸ್ಥಳದಲ್ಲಿ ಬೀಡುಬಿಟ್ಟಿದ್ದು, ನದಿಯಲ್ಲಿ ಪ್ರವಾಹ ಹೆಚ್ಚಾಗಿದೆ. ನೀರು ಸ್ವಲ್ಪ ಕಡಿಮೆಯಾದ ಬಳಿಕ ನಡುಗಡ್ಡೆಯಲ್ಲಿ ಸಿಲುಕಿರುವ ಜನರನ್ನಜ ರಕ್ಷಣೆ ಮಾಡಲಾಗುವುದು ಎಂದು ಸಹಾಯಕ ಆಯುಕ್ತ ರಾಜಶೇಖರ ಡಂಬಳ್ ತಿಳಿಸಿದ್ದಾರೆ.
ಜನರ ಜೊತೆಗೆ ಕರಕಲಗಡ್ಡಿಯಲ್ಲಿ 3 ಎತ್ತು, 3 ಆಕಳು, 2 ಕರುಗಳು, 70 ಮೇಕೆಗಳು, 09 ಕುರಿಮರಿ, 40 ಕೋಳಿ, 4 ಬೇಟೆ ನಾಯಿಗಳು ಸಿಲುಕಿಕೊಂಡಿವೆ ಎಂಬ ಮಾಹಿತಿ ಸ್ಥಳೀಯರಿಂದ ತಿಳಿದು ಬಂದಿದೆ.
ಜನರ ರಕ್ಷಣೆಗೆ ಪ್ರವಾಹ ಎನ್.ಡಿ.ಆರ್.ಎಫ್. ಪಡೆಗೆ ಅಡಚಣೆ ಉಂಟು ಮಾಡುತ್ತಿದೆ.
ಸೋಮವಾರ ಸಂಜೆ ಕೃಷ್ಣಾ ನದಿಗೆ 2.92 ಲಕ್ಷ ಕ್ಯೂಸೆಕ್ ನೀರು ಹರಿ ಬಿಟ್ಟ ಪರಿಣಾಮ ಕರಕಲಗಡ್ಡಿಗಳಲ್ಲಿ ವಾಸವಿರುವ ಕುಟುಂಬಗಳಿಗೆ ನದಿ ದಾಟಲು ಸಂಕಷ್ಟ ಎದುರಾಗಿತ್ತು. ಇದನ್ನರಿತ ಪಡೆಯ ಯೋಧರು ಬೋಟ್ ಮೂಲಕ ಪ್ರವಾಹದಲ್ಲಿ ಉಕ್ಕಿ ಹರಿಯುತ್ತಿರುವ ನದಿಯಲ್ಲಿ ತೆರಳಲು ಮುಂದಾದರೂ ಅದು ಸಾಧ್ಯವಾಗಲಿಲ್ಲ ಎಂದು ತಿಳಿದುಬಂದಿದೆ.
ಜನರಿಗೆ ಜೀವ ರಕ್ಷಕ ಜಾಕೇಟ್ ಗಳನ್ನು ತೊಡಿಸಿ ಸುರಕ್ಷಿತವಾಗಿ ದಡಕ್ಕೆ ಕರೆ ತರಲು ತಾಲೂಕಾಡಳಿತ ಪ್ರಯತ್ನ ಪಡುತ್ತಿದೆಯಾದರೂ, ನದಿಯಲ್ಲಿ ನೀರಿನ ಮಟ್ಟ ಕೊಂಚ ತಗ್ಗಬೇಕು ಎನ್ನುವ ಅಧಿಕಾರಿಗಳ ಮಾತು, ನಡುಗಡ್ಡೆ ನಿವಾಸಿಗಳ ಸಂಬಂಧಿಕರಲ್ಲಿ ಆತಂಕಕ್ಕೆ ಎಡೆ ಮಾಡಿಕೊಟ್ಟಿದೆ.
ಎನ್.ಡಿ.ಆರ್.ಎಫ್. ಕಾರ್ಯಪಡೆಯ ಜೊತೆ ನುರಿತ ಈಜು ತಜ್ಞರನ್ನು ತುರ್ತು ಪರಿಸ್ಥಿತಿ ನಿಭಾಯಿಸಲು ಸ್ಥಳದಲ್ಲಿ ತೈನಾತು ಮಾಡಲಾಗಿದೆ.
Be the first to comment