ಜೀಲ್ಲಾ ಸುದ್ದಿಗಳು
ಬಾಗಲಕೋಟೆ:ಬಾಗಲಕೋಟೆಯ ಜಿಲ್ಲಾ ಆಸ್ಪತ್ರೆಯಲ್ಲಿ ಕೋವಿಡ್ ಗಂಟಲು ಮಾದರಿಯನ್ನು ಪರೀಕ್ಷೆ ಪ್ರಯೋಗಾಲಯ ಮೇ 17 ರಿಂದ ಪ್ರಾರಂಭಿಸುತ್ತಿರುವುದಾಗಿ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ತಿಳಿಸಿದರು.
ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿಂದು ಕರೆಯಲಾಗಿದ್ದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ಕೋವಿಡ್ ಪರೀಕ್ಷೆ ಮಾಡಲು ಐಸಿಎಂಆರ್‍ನಿಂದ ಅನುಮತಿ ಬಂದಿದ್ದು, ಮೇ 17 ರಿಂದ ಕೋವಿಡ್ ಗಂಟಲು ಮಾದರಿ ಪರೀಕ್ಷೆ ಪ್ರಾರಂಭಿಸಲಾಗಿದ್ದು, ಪ್ರತಿ ದಿನಕ್ಕೆ 100 ರಿಂದ 110 ಮಾದರಿಗಳನ್ನು ಪರೀಕ್ಷೆ ಮಾಡಬಹುದಾಗಿದೆ. ಸರಕಾರದಿಂದ ಹಾಗೂ ನಗರದ ಮಿಸ್ಕಿನ್ ಲ್ಯಾಬ್‍ನವರು ನೀಡಿರುವ ಮಷೀನ್‍ಗಳಿಂದ ಜಿಲ್ಲೆಯಲ್ಲಿಯೇ ಕೋವಿಡ್ ಪರೀಕ್ಷೆ ಮಾಡಲಾಗುತ್ತಿದೆ. ಪ್ರತಿ ಗಂಟೆ 5 ಸ್ಯಾಂಪಲ್‍ಗಳನ್ನು ಪರೀಕ್ಷೆ ಮಾಡಬಹುದಾಗಿದೆ ಎಂದರು.
ರೈತರಿಗೆ ಸಹಾಯಧನ:
ರೈತರು ಬೆಳೆದ ಮೆಕ್ಕೆಜೋಳದ ದರ ಬಹಳಷ್ಟು ಇಳಿಮುಖವಾದ ಹಿನ್ನಲೆಯಲ್ಲಿ ರೈತರಿಗೆ ನೆರವಾಗುವ ನಿಟ್ಟಿನಲ್ಲಿ ರೈತರಿಗೆ ಸಹಾಯಧನವಾಗಿ 5 ಸಾವಿರ ರೂ.ಗಳಂತೆ ನೀಡಲು ಮುಖ್ಯಮಂತ್ರಿಗಳು ತೀರ್ಮಾನಿಸಿದ್ದು, ಜಿಲ್ಲೆಯ 61 ಸಾವಿರ ರೈತರಿಗೆ ಇದರ ಪ್ರಯೋಜನ ಪಡೆಯಲಿದ್ದಾರೆ. ಜಿಲ್ಲೆಯಲ್ಲಿರುವ ಒಟ್ಟು 4.50 ಲಕ್ಷ ಮಹಿಳಾ ಜನಧನ ಖಾತೆದಾರರಿಗೆ ಪ್ರತಿ ತಿಂಗಳು 500 ರೂ.ಗಳಂತೆ ಎರಡು ತಿಂಗಳು ಸೇರಿ ಒಟ್ಟು 45 ಕೋಟಿ ರೂ.ಗಳನ್ನು ಜಮಾ ಮಾಡಲಾಗಿದೆ. ಜಮಾ ಮಾಡಲಾದ ಹಣವನ್ನು ಡ್ರಾ ಕೂಡಾ ಮಾಡಿಕೊಂಡಿರುವುದಾಗಿ ತಿಳಿಸಿದರು.
ವಲಸೆ ಕಾರ್ಮಿಕರಿಗೆ ಉದ್ಯೋಗ:
ಜಲ್ಲೆಗೆ ಇಲ್ಲಿಯವರೆಗೆ ಅಂದಾಜು 30 ಸಾವಿರ ಜನ ಹೊರಗಡೆ ದುಡಿಯಲು ಹೋದ ಜನ ಮರಳಿ ಜಿಲ್ಲೆಗೆ ಆಗಮಿಸಿದ್ದು, ಅವರೆಲ್ಲರಿಗೂ ಉದ್ಯೋಗ ಖಾತ್ರಿ ಯೋಜನೆಯಡಿ ಉದ್ಯೋಗ ನೀಡಲು ಕ್ರಮವಹಿಸಲಾಗುತ್ತಿದೆ. ಇದಕ್ಕಾಗಿ ಕೇಂದ್ರ ಸರಕಾರದಿಂದ ಉದ್ಯೋಗ ಖಾತ್ರಿ ಯೋಜನೆಯಡಿ 204 ಕೋಟಿ ರೂ. ಜಿಲ್ಲೆಗೆ ನೀಡಿದ್ದು, 42 ಲಕ್ಷ ಮಾನವ ದಿನಗಳ ಗುರಿ ನೀಡಲಾಗಿದ್ದು, ವಲಸೆ ಕಾರ್ಮಿಕರಿಗೆ ಸ್ಥಳೀಯವಾಗಿಯೇ ಉದ್ಯೋಗ ನೀಡಲು ಸಿ.ಪಂ ಸಿಇಓ ಗಂಗೂಬಾಯಿ ಮಾನಕರ ಅವರಿಗೆ ಕ್ರಮಕೈಗೊಳ್ಳಲು ತಿಳಿಸಲಾಗಿದೆ ಎಂದರು.
ಉದ್ಯೋಗ ಅರಿಸಿ ಬೇರೆ ರಾಜ್ಯ ಮತ್ತು ಜಿಲ್ಲೆಗಳಿಗೆ ತೆರಳಿದ್ದ ವಲಸೆ ಕಾರ್ಮಿಕರು ಮರಳಿ ಜಿಲ್ಲೆಗೆ ಬರುತ್ತಿದ್ದು, ಬಂದ ಕಾರ್ಮಿಕರಿಗೆ ಜಾಬ್ ಕಾರ್ಡ, ರೇಷನ್ ಕಾರ್ಡ ಇಲ್ಲದವರಿಗೆ ತುರ್ತು ರೇಷನ್ ಕಾರ್ಡ ನೀಡಲು ಕ್ರಮಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಲಾಗಿದೆ.
ಪರೀಕ್ಷೆ ನಡೆಸುವ ಕುರಿತು
ಜಿಲ್ಲೆಯಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆ ನಡೆಸಲು ಎಲ್ಲ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದ್ದು, 30,829 ಜನ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಪ್ರತಿ ಕೊಠಡಿಗೆ 20 ಜನ ವಿದ್ಯಾರ್ಥಿಗಳಂತೆ ಒಟ್ಟು 1550 ಕೊಠಡಿಗಳ ವ್ಯವಸ್ಥೆ ಮಾಡಲಾಗಿದೆ ಎಂದರು.
ಅದೇ ರೀತಿ ದ್ವಿತೀಯ ಪಿಯುಸಿ ಇಂಗ್ಲೀಷ ವಿಷಯ ಮಾತ್ರ ಬಾಕಿ ಉಳಿದಿದ್ದು, ಆ ಪರೀಕ್ಷೆಗೆ ವ್ಯವಸ್ಥೆ ಮಾಡಲಾಗಿದೆ. ಜಿಲ್ಲೆಯಲ್ಲಿ ಒಟ್ಟು 23,185 ವಿದ್ಯಾರ್ಥಿಗಳು ಇಂಗ್ಲೀಷ ವಿಷಯ ಪರೀಕ್ಷೆ ಬರೆಯಲು 37 ಪರೀಕ್ಷಾ ಕೇಂದ್ರಗಳಲ್ಲಿ ಸಿದ್ದತೆ ಮಾಡಿಕೊಳ್ಳಲಾಗಿದೆ.
ಕೇಂದ್ರ ಸರ್ಕಾರದ ಪ್ಯಾಕೇಜ್ :
ಮಹಾರಾಷ್ಟ್ರದಿಂದ 1000 ಜನ ಜಿಲ್ಲೆಗೆ ಬರುವವರ ಪೈಕಿ ಈಗಾಗಲೇ 571 ಜನ ಜಿಲ್ಲೆಗೆ ಆಗಮಿಸಿದ್ದು, ಇನ್ನು 429 ಜನ ಮಾತ್ರ ಬರುವವರು ಇದ್ದು, ಅವರೆಲ್ಲರನ್ನು ಇನ್ಸ್ಟೂಟ್ಯೂಶನಲ್ ಕ್ವಾರಂಟೈನ್ ಮಾಡಲಾಗುತ್ತಿದೆ ಎಂದರು.
ಲಾಕ್‍ಡೌನ್ ಹಿನ್ನಲೆಯಲ್ಲಿ ಸಂಕಷ್ಟಕ್ಕೊಳಗಾಗುವ ಎಲ್ಲರಿಗೂ ಕೇಂದ್ರ ಮತ್ತು ರಾಜ್ಯ ಸರಕಾರ ಪ್ಯಾಕೇಜ್‍ಗಳನ್ನು ಘೋಷಿಸಿದೆ. ಕೇಂದ್ರ ಸರಕಾರ 20 ಲಕ್ಷ ಕೋಟಿ ರೂ.ಗಳ ಪ್ಯಾಕೇಜ್ ಘೋಷಿಸಿದರೆ, ರಾಜ್ಯ ಸರಕಾರ 2227 ಕೋಟಿ ರೂ.ಗಳ ಮೂರು ಹಂತರದ ಪ್ಯಾಕೇಜ್‍ಗಳನ್ನು ಘೋಷಿಸಿದನ್ನು ಅಭಿನಂದಿಸಿರುವುದಾಗಿ ಕಾರಜೋಳ ತಿಳಿಸಿದರು.
ಇದಕ್ಕು ಮುನ್ನ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಕೋವಿಡ್ ನಿಯಂತ್ರಣಕ್ಕೆ ಕೈಗೊಂಡ ಕ್ರಮಗಳ ಪ್ರಗತಿ ಪರಿಶೀಲನೆ ಮಾಡಿದರು. ಪರಿಶೀಲನಾ ಸಭೆಯಲ್ಲಿ ಸಂಸದ ಪಿ.ಸಿ.ಗದ್ದಿಗೌಡರ, ಶಾಸಕ ವೀರಣ್ಣ ಚರಂಟತಿಮಠ, ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ ಜಗಲಾಸರ, ಜಿ.ಪಂ ಸಿಇಓ ಗಂಗೂಬಾಯಿ ಮಾನಕರ, ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎ.ಎನ್.ದೇಸಾಯಿ, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಪ್ರಕಾಶ ಬಿರಾದಾರ ಸೇರಿದಂತೆ ಇತರರು ಉಪಸ್ಥಿತರಿದ್ದರು.
ನವನಗರ ಬಸ್ ನಿಲ್ದಾಣದ ಕೌಂಟರಗಳಿಗೆ ಭೇಟಿ:
ನಂತರ ನವನಗರದ ನೂತನ ಬಸ್ ತೆರೆಯಲಾದ ತಾಲೂಕುವಾರು ಕೌಂಟರಗಳಿಗೆ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರು ತೆರಳಿ ಹೊರ ರಾಜ್ಯ ಹಾಗೂ ಹೊರ ಜಿಲ್ಲೆಗಳಿಂದ ಆಗಮಿಸುವವರ ಮಾಹಿತಿಯನ್ನು ಅವರ ಆರೋಗ್ಯ ತಪಾಸಣೆ ಮಾಡುತ್ತಿರುವ ಕುರಿತು ಮಾಹಿತಿ ಪಡೆದರು. ಅಲ್ಲದೇ ಸೋಂಕು ಹೆಚ್ಚಿಗೆ ಕಾಣಿಸಿಕೊಂಡ ಬೇರೆ ರಾಜ್ಯಗಳಿಂದ ಆಗಮಿಸುವವರನ್ನು ಇನ್ಸ್ಟಿಟ್ಯೂಶನ್ ಕ್ವಾರಂಟೈನ್ ಮಾಡುತ್ತಿರುವ ಬಗ್ಗೆ ಪರಿಶೀಲನೆ ನಡೆಸಿದರು.
Be the first to comment