ಬೆಂಗಳೂರು, ಜುಲೈ 23:“ಕೃಷ್ಣ ಜಲಭಾಗ್ಯ ನಿಗಮದಲ್ಲಿ ಪರಿಹಾರ ಕೊಡಿಸುವ ನೆಪದಲ್ಲಿ ಅಕ್ರಮ ನಡೆದಿದ್ದು. ಇದರಲ್ಲಿ ಒಂದಷ್ಟು ಜನ ಶಾಮೀಲಾಗಿದ್ದಾರೆ. ಇಲ್ಲಿ ನಮ್ಮ ರೈತರನ್ನು ಉಳಿಸಲು ತನಿಖಾ ತಂಡ ರಚಿಸಲಾಗುವುದು” ಎಂದು ಡಿಸಿಎಂ ಡಿ.ಕೆ ಶಿವಕುಮಾರ್ ತಿಳಿಸಿದರು.
ವಿಧಾನಸಭೆಯ ಪ್ರಶ್ನೋತ್ತರ ವೇಳೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರ, ಕೃಷ್ಣ ಜಲಭಾಗ್ಯ ನಿಗಮದ ಅಡಿ ಸಮರ್ಪಕವಾದ ನೀರಾವರಿ ಕೆಲಸಗಳು ನಡೆಯುತ್ತಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಡಿಸಿಎಂ ಅವರು, “ನ್ಯಾಯಲಯಗಳಲ್ಲಿ ಭೂಸ್ವಾಧೀನದ ಕುರಿತು ಪ್ರಕರಣಗಳು ನಡೆಯುತ್ತಿವೆ. ವಿಜಯಪುರ, ಬಾಗಲಕೋಟೆ, ರಾಯಚೂರು ಭಾಗದಲ್ಲಿ ನ್ಯಾಯಲಯದ ಮೂಲಕ ಎಕರೆಗೆ 74 ಲಕ್ಷ ಹಾಗೂ ಸಬ್ಅರ್ಬ್ ಭೂಮಿಗೆ 1 ಕೋಟಿ 26 ಲಕ್ಷ ಪರಿಹಾರ ಪಡೆಯುತ್ತಿದ್ದಾರೆ. ಸುಮಾರು 285 ಪ್ರಕಣಗಳಲ್ಲಿ ಈ ರೀತಿಯಾಗಿದೆ. 367 ಪ್ರಕರಣಗಳಿಗೆ ಪುನರ್ ವಸತಿ ಕಲ್ಪಿಸುವ ವಿಚಾರವಾಗಿ ಒಂದು ಎಕರೆಗೆ 5 ಕೋಟಿ 18 ಲಕ್ಷ ಪರಿಹಾರ ನೀಡಬೇಕು ಎಂದು ಕೋರ್ಟ್ ಆದೇಶ ಮಾಡಿದೆ. ಪೆರಿಫೆರಲ್ ರಿಂಗ್ ರಸ್ತೆಗೆ ಬೆಂಗಳೂರಿನಲ್ಲೇ ಇಷ್ಟು ದೊಡ್ಡ ಮೊತ್ತದ ಪರಿಹಾರ ನೀಡಲು ಆಗುತ್ತಿಲ್ಲ” ಎಂದರು.
“ಭೂ ಸ್ವಾಧೀನ ಪ್ರಕರಣಗಳನ್ನು ನಡೆಸುತ್ತಿರುವ ಎಲ್ಲಾ ಸರ್ಕಾರಿ ವಕೀಲರನ್ನು ಹಿಂದಕ್ಕೆ ಪಡೆಯಲಾಗುವುದು. ಹೈಕೋರ್ಟಿಗೆ ಮೇಲ್ಮನವಿ ಸಲ್ಲಿಸಲಾಗುವುದು. ಇದರ ಬಗ್ಗೆ ಕಾನೂನು ಸಚಿವರ ಬಳಿ ಚರ್ಚೆ ನಡೆಸಲಾಗುವುದು” ಎಂದು ಡಿ.ಕೆ.ಶಿವಕುಮಾರ್ ಅವರು ಹೇಳಿದರು.
“ಬಸವರಾಜ ಬೊಮ್ಮಾಯಿ ಅವರ ಕಾಲದಲ್ಲಿ ಸಚಿವ ಸಂಪುಟ ಉಪಸಮಿತಿ ಮಾಡಿ ಎಕರೆಗೆ 25 ಲಕ್ಷ ಪರಿಹಾರ ನೀಡಬೇಕು ಎಂದು ತೀರ್ಮಾನ ತೆಗೆದುಕೊಳ್ಳಲಾಗಿತ್ತು. ಈಗ ದುಪ್ಪಟ್ಟು ಪರಿಹಾರ ನೀಡಬೇಕು ಎಂದು ನ್ಯಾಯಲಯ ಹೇಳಿದೆ. ಇದಕ್ಕೆ ಎಲ್ಲಿಂದ ಹಣ ತರುವುದು?” ಎಂದು ಹೇಳಿದರು.
“ಕೃಷ್ಣ ಜಲಭಾಗ್ಯ ನಿಗಮದ ಅಡಿ ಕೈಗೊಂಡಿರುವ ಕಾರ್ಯಕ್ರಮಗಳು ಮುಗಿಯಲು ಹೆಚ್ಚಿನ ಅನುದಾನದ ಅವಶ್ಯಕತೆಯಿದೆ. ನಮ್ಮ ಸರ್ಕಾರ ಆದ್ಯತೆ ಮೇರೆಗೆ ಕೆಲಸ ಮಾಡುತ್ತಿದೆ. ಈ ಯೋಜನೆಯ ಬಗ್ಗೆ ಪುನರ್ ಪರಿಶೀಲನೆ ನಡೆಸಿದಾಗ ಗಾಬರಿ ಹುಟ್ಟಿಸುವ ಸಂಗತಿಗಳು ಬೆಳಕಿಗೆ ಬಂದಿವೆ. ಲಾಲ್ ಬಹದ್ದೂರ್ ಶಾಸ್ತ್ರೀ ಅವರ ಕಾಲದಲ್ಲಿ ಈ ಅಣೆಟಕಟ್ಟು ನಿರ್ಮಾಣದ ವೇಳೆ ಅನೇಕ ಜನರು 1-2 ಸಾವಿರ ರೂಪಾಯಿಗೆ ಜಮೀನು ಬಿಟ್ಟುಕೊಟ್ಟಿದ್ದಾರೆ. 5 ವರ್ಷದ ಹಿಂದೆಯೂ ರೈತರು ಎಕರೆಗೆ 5 ಸಾವಿರ ಪಡೆದು ಜಮೀನು ನೀಡಿದ್ದಾರೆ” ಎಂದರು.
ಇನ್ನು ಕನಕನಾಲ ಯೋಜನೆ ಜಾರಿಯ ಬಗ್ಗೆ ಬಸನಗೌಡ ತುರ್ವಿಹಾಳ ಅವರ ಪ್ರಸ್ತಾವನೆಗೆ ಉತ್ತರಿಸಿದ ಅವರು “ಮಸ್ಕಿ ನಾಲೆಯಿಂದ ಕನಕನಾಲಾ ಕಣಿವೆಗೆ ಪ್ರವಾಹದ ನೀರನ್ನು ತಿರುಗಿಸುವ ಹಾಗೂ ಕನಕನಾಲೆಯ ಆಧುನೀಕರಣ ಯೋಜನೆಗೆ ₹ 134.56 ಕೋಟಿ ಮೊತ್ತದ ಡಿಪಿಆರ್ ಗೆ ಅನುಮತಿ ನೀಡುವ ವಿಚಾರ ಸರ್ಕಾರದ ಮುಂದಿದೆ.” ಎಂದು ಹೇಳಿದರು.
“ನಾನು ಮತ್ತು ಮುಖ್ಯಮಂತ್ರಿಗಳು ಅನೇಕ ಬಾರಿ ಭೇಟಿ ನೀಡಿ ಈ ಭಾಗವನ್ನು ವೀಕ್ಷಣೆ ಮಾಡಿದ್ದೇವೆ. ಶಾಸಕರ ಕ್ಷೇತ್ರದಲ್ಲಿ ₹ 980 ಕೋಟಿ ಮೊತ್ತದ ನೀರಾವರಿಗೆ ಸಂಬಂಧಿಸಿದ ಕಾಮಗಾರಿ ನಡೆಸಲು ಸರ್ಕಾರ ಮುಂದಾಗಿದೆ. ಇದು ಮುಗಿದ ನಂತರ ಕೆರೆ ತುಂಬಿಸುವ ಯೋಜನೆ ಮಾಡಲಾಗುವುದು” ಎಂದರು.
ಹೆಸರಘಟ್ಟ, ತಿಪ್ಪಗೊಂಡನಹಳ್ಳಿ ಕೆರೆ ಸಂರಕ್ಷಣೆಗೆ ಕ್ರಮ
ಹೆಸರಘಟ್ಟ ಕೆರೆಗೆ ಎತ್ತಿನಹೊಳೆ ನೀರು ಹರಿಸುವ ಪ್ರಮಾಣ ಕಡಿಮೆ ಮಾಡಲಾಗಿದೆ ಎನ್ನುವ ಶಾಸಕ ಎಸ್.ಆರ್.ವಿಶ್ವನಾಥ್ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ “ಎತ್ತಿನಹೊಳೆ ವಿಚಾರವಾಗಿ ವಿಶ್ವನಾಥ್ ಅವರ ಮಾತಿನಲ್ಲಿ ಶೇ. 50 ರಷ್ಟು ಸತ್ಯಾಂಶವಿದೆ. ವಿಧಾನಸಭೆ ಮಗಿದ ತಕ್ಷಣ ಬೆಂಗಳೂರಿಗೆ ನೀರು ಕೊಡುತ್ತಿದ್ದ ತಿಪ್ಪಗೊಂಡನಹಳ್ಳಿ ಹಾಗೂ ಹೆಸರಘಟ್ಟ ಕೆರೆಗೆ ಭೇಟಿ ನೀಡೋಣ. ಎರಡೂ ಕೆರೆಗಳನ್ನು ಸಂರಕ್ಷಣೆ ಮಾಡಬೇಕಿದೆ. ಬಹಳ ವರ್ಷಗಳ ಹಿಂದೆ ಹೆಸರಘಟ್ಟ ಕೆರೆಗೆ ಭೇಟಿ ನೀಡಿದ್ದೆ. ಕೆರೆ ಒತ್ತುವರಿ ಬಹಳ ಕಡಿಮೆಯಿದೆ ಎನ್ನುವ ವರದಿಯಿದೆ. ಅದನ್ನು ಸಂರಕ್ಷಣೆ ಮಾಡೋಣ” ಎಂದು ಡಿಸಿಎಂ ಉತ್ತರಿಸಿದರು.
“ಕಳೆದ ವರ್ಷದ ಬರಗಾಲದ ವೇಳೆ ಬೆಂಗಳೂರಿನಲ್ಲಿ ಸುಮಾರು 7 ಸಾವಿರ ಬೋರ್ ವೆಲ್ ಗಳು ಬತ್ತಿ ಹೋದವು. ಬೆಂಗಳೂರಿನ ಯಾವ ಕೆರೆಗಳಲ್ಲೂ ನೀರು ಇರಲಿಲ್ಲ. ಎಲ್ಲೆಲ್ಲಿ ನೀರನ್ನು ಸಂಸ್ಕರಿಸಲು ಅವಕಾಶವಿದೆಯೋ ಅಲ್ಲೆಲ್ಲಾ ನೀರನ್ನು ಸಂಸ್ಕರಿಸಿ ಕೆರೆಗೆ ಹರಿಸಲಾಗುವುದು. ಕೆರೆಯಲ್ಲಿ ನೀರಲಿಲ್ಲದಿದ್ದರೆ ಒತ್ತುವರಿ ಮಾಡಿಕೊಳ್ಳುತ್ತಾರೆ. ಜುಲೈ 27 ರ ಸಭೆಯಲ್ಲಿ ಕೆರೆ ಸಂರಕ್ಷಣೆ ಬಗ್ಗೆ ಚರ್ಚೆ ಮಾಡಿ, ನಿಮ್ಮ ಅಭಿಪ್ರಾಯ ತಿಳಿಸಿ. ಯಾರೇ ಒತ್ತುವರಿ ಮಾಡಿದ್ದರೂ ನಿರ್ದಾಕ್ಷಿಣ್ಯವಾಗಿ ತೆರವು ಮಾಡೋಣ. ನಾವೆಲ್ಲ ಒಟ್ಟಿಗೆ ಸೇರಿ ಈ ಕೆಲಸ ಮಾಡೋಣ” ಎಂದರು.
“ಹೆಸರಘಟ್ಟ ಕೆರೆಗೆ ನೀರು ಹರಿಸುವ ಕಾಮಗಾರಿ 2025 ರ ಅಕ್ಟೋಬರ್ ವೇಳೆಗೆ ಮುಗಿಸುವ ಗುರಿಹೊಂದಲಾಗಿದೆ. ದೊಡ್ಡಬಳ್ಳಾಪುರ ತಾಲ್ಲೂಕಿನ ಮಾಡೇಶ್ವರ ಗ್ರಾಮದ ಬಳಿ ನಿರ್ಮಾಣ ಮಾಡಿರುವ ವಿತರಣಾ ತೊಟ್ಟಿಯಿಂದ ಕೆರೆಗೆ ನೀರು ಹರಿಸಲಾಗುವುದು” ಎಂದು ತಿಳಿಸಿದರು.
ತರೀಕೆರೆ, ಕಡೂರು, ಅರಸೀಕೆರೆ ಭಾಗದ 197 ಕೆರೆಗಳಿಗೆ ಭದ್ರಾ ನೀರು
“ತರೀಕೆರೆ, ಕಡೂರು, ಚಿಕ್ಕಮಗಳೂರು ಹಾಗೂ ಅರಸೀಕೆರೆ ತಾಲ್ಲೂಕಿನ 197 ಕೆರೆಗಳಿಗೆ ಭದ್ರಾ ನೀರನ್ನು ತುಂಬಿಸುವ ಯೋಜನೆ ಪ್ರಗತಿಯಲ್ಲಿದೆ. ಎತ್ತಿನಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆಯ ಅಡಿ ಕಡೂರು ತಾಲ್ಲೂಕಿನ ಯಾವುದೇ ಕೆರೆಗಳನ್ನು ತುಂಬಿಸುವ ಯೋಜನೆ ಸರ್ಕಾರದ ಮುಂದಿಲ್ಲ ಆದರೆ ಎರಡನೇ ಹಂತದಲ್ಲಿ ವಿಷ್ಣ ಸಮುದ್ರ ಕೆರೆ ತುಂಬಿಸುವ ಆಲೋಚನೆಯಿದೆ. ಎತ್ತಿನಹೊಳೆಯಿಂದ ಯಾವುದೇ ಕಾರಣಕ್ಕೂ ನೀರು ಹರಿಸಲು ಆಗುವುದಿಲ್ಲ” ಎಂದು ಭದ್ರಾ ಮೇಲ್ದಂಡೆ ಯೋಜನೆಯ 3 ಮತ್ತು 4 ನೇ ಹಂತದ ಕಾಮಗಾರಿ ಪ್ರಾರಂಭ ಮಾಡುವ ಬಗ್ಗೆ ಶಾಸಕ ಕೆ.ಎಸ್.ಆನಂದ್ ಅವರ ಪ್ರಶ್ನೆಗೆ ಡಿಸಿಎಂ ಉತ್ತರ ನೀಡಿದರು.
ಎತ್ತಿನಹೊಳೆಯಿಂದ ಏಕೆ ನೀರನ್ನು ನೀಡಲು ಆಗುವುದಿಲ್ಲ ಎನ್ನುವ ಬಗ್ಗೆ ಡಿಸಿಎಂ ಅವರು ಸದನಕ್ಕೆ ವಿವರಿಸಲಿ ಎಂದು ಶಾಸಕ ಸುನೀಲ್ ಕುಮಾರ್ ಒತ್ತಾಯಿಸಿದಾಗ “ಯಡಿಯೂರಪ್ಪ ಅವರ ಕಾಲದಲ್ಲಿ ಚಿಕ್ಕಬಳ್ಳಾಪುರ ಹಾಗೂ ಕೋಲಾರ ಭಾಗಕ್ಕೆ ನೀರು ಹರಿಸಬೇಕು ಎಂದು ತೀರ್ಮಾನ ಮಾಡಲಾಯಿತು. ನಾನು ಈ ಕಾಮಗಾರಿಗಳನ್ನು ನಿಲ್ಲಿಸಿದ್ದು, ಮೊದಲು ಅಲ್ಲಿಂದ ನೀರನ್ನು ಮೇಲಕ್ಕೆ ಎತ್ತೋಣ ತುಮಕೂರಿಗೆ ನೀರು ತಲುಪಿದ ಮೇಲೆ ಮಿಕ್ಕ ಭಾಗಗಳ ಬಗ್ಗೆ ಆಲೋಚನೆ ಮಾಡೋಣ ಎಂದು ಒಂದಷ್ಟು ಭಾಗಗಳ ಕಾಮಗಾರಿ ನಿಲ್ಲಿಸಲಾಗಿದೆ. ವಿದ್ಯುತ್ ಸಮಸ್ಯೆ ಸೇರಿದಂತೆ ಅನೇಕ ಸಮಸ್ಯೆಗಳನ್ನು ಬಗೆಹರಿಸಲಾಗಿದೆ. ಕೇವಲ 25 ದಿನಗಳು ಮಾತ್ರ ನೀರನ್ನು ಪಂಪ್ ಮಾಡಬಹುದು ಎನ್ನುವ ಮಾಹಿತಿಯನ್ನು ಕೆಲವರು ನೀಡುತ್ತಿದ್ದಾರೆ. ಈ ಯೋಜನೆಯ ಬಗ್ಗೆ ಕರಾರುವಾಕ್ಕು ಮಾಹಿತಿ ನೀಡಲು ಮಲೆನಾಡು, ಕರಾವಳಿ ಹಾಗೂ ಬಯಲುಸೀಮೆ ಭಾಗದ ಶಾಸಕರ ಜೊತೆ ಸಭೆ ನಡೆಸೋಣ” ಎಂದು ತಿಳಿಸಿದರು.
ಶಾಸಕ ಸುರೇಶ್ ಗೌಡ, ಜ್ಯೋತಿ ಗಣೇಶ್ ಅವರು ಎತ್ತಿನಹೊಳೆ ಯೋಜನೆ ಬಗ್ಗೆ ಚರ್ಚೆ ವಿಸ್ತರಿಸಲು ಮುಂದಾದಾಗ ಉತ್ತರಿಸಿದ ಡಿಸಿಎಂ ಅವರು “ತುಮಕೂರು ಭಾಗದ 6 ಕೆರೆಗಳನ್ನು ತುಂಬಿಸಲಾಗುವುದು. ಜುಲೈ ತಿಂಗಳ ಕೊನೆಯಲ್ಲಿ ನೀರು ಹರಿಸಲು ಒಳ್ಳೆ ಸಮಯ, ಮುಹೂರ್ತ ನೋಡುತ್ತಿದ್ದೇನೆ. ಇತ್ತೀಚೆಗೆ ನೀರು ಹರಿಸಲು ಪ್ರಾಯೋಗಿಕ ಪರೀಕ್ಷೆ ನಡೆಸಿದಾಗ ಪೈಪ್ ಒಡೆದು ಹೋಗಿದೆ. ಅದನ್ನು ದುರಸ್ತಿ ನಡೆಸಿ, ನೀರು ಹರಿಸಲಾಗುವುದು. ಆಷಾಡ ಮುಗಿದ ಮೇಲೆ ನೀರು ಬರುವುದು” ಎಂದರು.
ಎಲೆಕ್ಟ್ರಿಕಲ್ ಎಂಜಿನಿಯರ್ ಗಳ ನೇಮಕಾತಿಗೆ ಕ್ರಮ
ಏತ ನೀರಾವರಿ ಯೋಜನೆಯಲ್ಲಿ ಅಳವಡಿಸಿರುವ ಬೃಹತ್ ಪಂಪ್ ಗಳ ನಿರ್ವಹಣೆಗೆ ಎಲೆಕ್ಟ್ರಿಕಲ್ ಎಂಜಿನಿಯರ್ ಗಳ ಲಭ್ಯತೆ ಬಗ್ಗೆ ಶಾಸಕ ಎ.ಮಂಜು ಅವರು ಗಮನ ಸೆಳೆದಾಗ “ಏತ ನೀರಾವರಿ ಯೋಜನೆಗಳ ಮುಖ್ಯಸ್ಥಾವರಗಳ ನಿರ್ವಹಣೆಗಾಗಿ ಇಂಧನ ಇಲಾಖೆಯಿಂದ 3 ಮಂದಿ ವಿದ್ಯುತ್ ಎಂಜಿನಿಯರ್ ಗಳನ್ನು ಎರವಲು ಸೇವೆ ಮೇಲೆ ಪಡೆಯಲಾಗಿದೆ. ಮಿಕ್ಕಂತೆ ಅಗತ್ಯಕ್ಕೆ ಅನುಗುಣವಾಗಿ ಹೊರಗುತ್ತಿಗೆ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳಲಾಗಿದೆ. ಮುಂದಿನ ದಿನಗಳಲ್ಲಿ ನಮ್ಮ ಇಲಾಖೆಯಿಂದಲೇ ವಿದ್ಯುತ್ ಎಂಜಿನಿಯರ್ ಗಳನ್ನು ನೇಮಕಾತಿ ಮಾಡಿಕೊಳ್ಳಲು ನಿಯಮ ತರಲಾಗುವುದು” ಎಂದರು.
ಹಿಡಕಲ್ ಜಲಾಶಯದ ಜಿಎಲ್ ಬಿಸಿ ಕಾಲುವೆಯಿಂದ ತಾಲ್ಲೂಕುವಾರು ನೀರಿನ ಹಂಚಿಕೆಯಾಗಿಲ್ಲ ಎಂದು ಮಹೇಂದ್ರ ಕಲ್ಲಪ್ಪ ತಮ್ಮಣ್ಣ ಅವರು ಪ್ರಸ್ತಾಪಿಸಿದಾಗ “ನೀರು ಹಂಚಿಕೆ ತಾರತಮ್ಯ ಉಂಟಾಗಿದ್ದರೆ ಸಮಸ್ಯೆ ಬಗೆಹರಿಸಲಾಗುವುದು. ಜುಲೈ 25 ರಂದು ಅಧಿಕಾರಿಗಳ ಸಭೆಯಲ್ಲಿ ಇದರ ಬಗ್ಗೆ ಗಮನ ಹರಿಸಲಾಗುವುದು. ಇದಕ್ಕಾಗಿ ವಿಶೇಷ ಸಭೆ ಕರೆದು ನಿಮ್ಮ ಅಹವಾಲು ಆಲಿಸಲಾಗುವುದು” ಎಂದರು.
ಬೆಂಗಳೂರಿನ ಮೇಲೆ ಒತ್ತಡ ತಗ್ಗಿಸಲು ಉಪನಗರಗಳ ಅಭಿವೃದ್ಧಿ ಮಾಡಬೇಕು
ಬೆಂಗಳೂರು ಹೊರ ವಲಯದಲ್ಲಿ ಉಪನಗರಗಳನ್ನು ಅಭಿವೃದ್ಧಿ ಬಗ್ಗೆ ಯಾವ ಕ್ರಮ ತೆಗೆದುಕೊಳ್ಳಲಾಗಿದೆ ಎನ್ನುವ ಶಾಸಕ ಧೀರಜ್ ಮುನಿರಾಜು ಅವರ ಪ್ರಶ್ನೆಗೆ “2006 ರಲ್ಲಿಯೇ ರಾಮನಗರ, ಬಿಡದಿ, ಸಾತನೂರು, ಸೋಲೂರು ಸೇರಿದಂತೆ ಒಂದಷ್ಟು ಭಾಗಗಳಲ್ಲಿ ಉಪನಗರಗಳನ್ನು ಮಾಡಲು ಯೋಜನೆ ರೂಪಿಸಲಾಗಿತ್ತು. ನಂತರ ಯಾವುದೇ ಸರ್ಕಾರಗಳು ಹೆಚ್ಚಾಗಿ ಗಮನ ಹರಿಸಲಿಲ್ಲ. ಪ್ರಸ್ತುತ ಸಂದರ್ಭದಲ್ಲಿ ಬೆಂಗಳೂರಿಗೆ ಬರುವ ಜನರನ್ನು ತಡೆಯಬೇಕು ಎಂದರೆ ಉಪನಗರಗಳನ್ನು ಅಭಿವೃದ್ದಿ ಪಡಿಸಬೇಕು. ಬೆಂಗಳೂರಿನಲ್ಲಿ ಬಾಡಿಗೆ, ಜೀವನ ನಿರ್ವಹಣಾ ವೆಚ್ಚ ಹೆಚ್ಚಾಗಿದೆ. ಇದನ್ನು ತಡೆಯಬೇಕು. ಮೊದಲು 110 ಹಳ್ಳಿಗಳ ಅಭಿವೃದ್ದಿ ಬಗ್ಗೆ ಬೆಂಗಳೂರು ಶಾಸಕರ ಸಲಹೆ ಪಡೆಯಬೇಕಾಗಿದೆ. ನಂತರ ಉಪನಗರಗಳ ಅಭಿವೃದ್ಧಿ ಬಗ್ಗೆ ಯೋಚನೆ ಮಾಡಲಾಗುವುದು” ಎಂದು ಹೇಳಿದರು.
ಸಂವಿಧಾನದ ಬಗ್ಗೆ ಕಾಳಜಿ ಹೊಂದಿರುವ ಅಶೋಕ್ ಗೆ ಅಭಿನಂದನೆ:
ವಿಧಾನಸಭೆಯ ಅಭಿನಂದನೆ ಸೂಚನಾ ನಿರ್ಣಯದ ಮೇಲೆ, ನೂತನವಾಗಿ ಅಳವಡಿಸಿರುವ ಸಂವಿಧಾನ ಪ್ರಸ್ತಾವನೆ ಫಲಕದ ಬಗ್ಗೆ ನಡೆದ ಚರ್ಚೆ ವೇಳೆ, “ಸಂವಿಧಾನವನ್ನು ಅನುಸರಿಸಬೇಕು ಎನ್ನುವ ಕಾಳಜಿ ಆರ್. ಅಶೋಕ್ ಅವರಿಗೆ ಬಂದಿರುವುದರಿಂದ ಅವರಿಗೆ ವಿಶೇಷ ಅಭಿನಂದನೆಗಳು. ಬಿಜೆಪಿಗರು ಸಂವಿಧಾನ ರಕ್ಷಣೆ ಮಾಡಲಿ ಎಂದು ಪ್ರಾರ್ಥಿಸುತ್ತೇನೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ವಿರೋಧ ಪಕ್ಷದ ನಾಯಕರಾದ ಆರ್. ಅಶೋಕ್ ಅವರ ಕಾಲೆಳೆದರು.
ಕಾಂಗ್ರೆಸ್ ತುರ್ತು ಪರಿಸ್ಥಿತಿ ಹೇರಿಕೆ ಮಾಡಿ ಸಂವಿಧಾನ ಮುಗಿಸಿಬಿಟ್ಟಿದೆ ಎಂದು ಆರ್.ಅಶೋಕ್ ಅವರು ಹೇಳಿದಾಗ, ತಿರುಗೇಟು ನೀಡಿದ ಶಿವಕುಮಾರ್ ಅವರು, “ತುರ್ತು ಪರಿಸ್ಥಿತಿ ನಂತರವು ಇಂದಿರಾಗಾಂಧಿ, ರಾಜೀವ್ ಗಾಂಧಿ, ಮನಮೋಹನ್ ಸಿಂಗ್ ಅವರ ಸರ್ಕಾರ ಅಧಿಕಾರಕ್ಕೆ ಬಂದಿದೆ” ಎಂದರು.
“ವಿಧಾನಸಭೆಯಲ್ಲಿ ಸಂವಿಧಾನ ಪೀಠಿಕೆ ಅಳವಡಿಸಿರುವ ಸ್ಪೀಕರ್ ಅವರಿಗೆ ಅಭಿನಂದನೆಗಳು. ಎಲ್ಲರೂ ಸಂವಿಧಾನ ರಕ್ಷಣೆ ಮಾಡಬೇಕು. ಆದ ಕಾರಣಕ್ಕೆ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ತಕ್ಷಣ ಸಮಾಜ ಕಲ್ಯಾಣ ಸಚಿವರು
ಸಂವಿಧಾನ ಪೀಠಿಕೆ ಓದುವುದು ಕಡ್ಡಾಯ ಮಾಡಿದರು. ಪೀಠಿಕೆ ಓದಿಯೇ ನಾನು ಕೆಪಿಸಿಸಿ ಅಧ್ಯಕ್ಷನಾಗಿ ಅಧಿಕಾರ ತೆಗೆದುಕೊಂಡೆ” ಎಂದು ಹೇಳಿದರು.
Be the first to comment