ಜೀಲ್ಲಾ ಸುದ್ದಿಗಳು
ಅಂಬಿಗ ನ್ಯೂಸ್ ಟಿವಿ
ಶೈಕ್ಷಣಿಕ, ಆರ್ಥಿಕ ಹಾಗೂ ಸಾಮಾಜಿಕ ಸಬಲೀಕರಣವೇ ಜಾತಿ ಪದ್ಧತಿ ನಿರ್ಮೂಲನಾ ಅಸ್ತ್ರಗಳು. ಈ ನಿಟ್ಟಿನಲ್ಲಿ ಜನರು ಸಶಕ್ತರಾದಾಗ ಮಾತ್ರ ಜಾತಿ ವ್ಯವಸ್ಥೆ ಕೊನೆಗೊಳ್ಳುತ್ತದೆ ಎಂದು ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರು ಹೇಳಿದರು.
ನಗರದ ಜಿಲ್ಲಾಡಳಿತ ಭವನದ ಆವರಣದಲ್ಲಿರುವ ಜೆ.ಎಚ್.ಪಟೇಲ್ ಸಭಾಂಗಣದಲ್ಲಿ ನಾಗರಿಕ ಹಕ್ಕು ಸಂರಕ್ಷಣಾ ಅಧಿನಿಯಮ 1955 ಮತ್ತು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ (ದೌರ್ಜನ್ಯ ಪ್ರತಿಬಂಧ) ಅಧಿನಿಯಮ 1989 ಹಾಗೂ ನಿಯಮಗಳು 1995ರ ಕುರಿತಾಗಿ ನಡೆದ ವಿಚಾರ ಸಂಕಿರಣ ಮತ್ತು ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ದೇಶ ಅನೇಕ ರೀತಿಯಲ್ಲಿ ಪ್ರಗತಿ ಸಾಧಿಸಿದ್ದರೂ, ಜಾತಿ ಎಂಬ ಪಿಡುಗು ಇನ್ನೂ ಜೀವಂತವಾಗಿದೆ. ಸಮಾಜದಲ್ಲಿರುವ ಈ ಜಾತಿ ಪದ್ಧತಿಯನ್ನು ನಿರ್ಮೂಲನೆ ಮಾಡಲು, ಪ್ರತಿಯೊಬ್ಬರೂ ಶೈಕ್ಷಣಿಕ, ಆರ್ಥಿಕ ಹಾಗೂ ಸಾಮಾಜಿಕವಾಗಿ ಸಶಕ್ತರಾಗಬೇಕಿದೆ. ಜತೆಗೆ ಸಂವಿಧಾನ ನೀಡಿರುವ ಹಕ್ಕುಗಳ ಬಗೆಗೆ ಜಾಗೃತಿ ಮೂಡಿಸುವ ಕೆಲಸಗಳು ಆಗಬೇಕಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಜಾತಿ ಕಾರಣದಿಂದ ಯಾರಾದರೂ ದಮನಕ್ಕೆ ಒಳಗಾದರೆ ಅದು ಕೇವಲ ಕಾನೂನಿನ ಉಲ್ಲಂಘನೆ ಮಾತ್ರ ಆಗದೇ, ಮಾನವೀಯತೆ ಹಾಗೂ ಸಂವಿಧಾನದ ಉಲ್ಲಂಘನೆಯಾಗುತ್ತದೆ. ಹೀಗಾಗಿ ಈ ಪಿಡುಗನ್ನು ಮೂಲದಿಂದ ತೊಡೆದು ಹಾಕಲು, ಜಾತಿ ವ್ಯವಸ್ಥೆಯನ್ನು ನಿರ್ಮೂಲನೆ ಮಾಡುವ ಅಂತಃಕರಣದ ಆಲೋಚನೆಯ ಅಗತ್ಯವಿದೆ. ಈ ಯೋಚನೆ ಪ್ರತಿಯೊಬ್ಬರ ಮನಸ್ಸಿನಲ್ಲೂ ಒಡಮೂಡಿದಾಗ ಜಾತಿ ಎಂಬುದೇ ಇಲ್ಲವಾಗಲಿದೆ ಎಂದು ಡಾ.ರವಿ ಹೇಳಿದರು.
Be the first to comment