ಬೆಂಗಳೂರು; ಸುಪ್ರೀಂಕೋರ್ಟ್ ತೀರ್ಪಿಗೆ ವಿರುದ್ಧವಾಗಿ ಪರಿಶಿಷ್ಟ ಜಾತಿಯಲ್ಲಿ ಒಳಮೀಸಲಾತಿ (ವರ್ಗಿಕರಣ) ಜಾರಿಗಾಗಿ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಲು ಮುಂದಾಗಿರುವ ರಾಜ್ಯ ಸರ್ಕಾರ ಸಂವಿಧಾನ ವಿರೋಧಿ ನೀತಿ ಅನುಸರಿಸುತ್ತಿದೆ. ಸ್ಪರ್ಶ, ಅಸ್ಪೃಶ್ಯತೆ ಪರಿಕಲ್ಪನೆಯಡಿ ಒಳವರ್ಗೀಕರಣ ಮಾಡಿ ದಲಿತರನ್ನು ಓಡೆದು ಆಳುವ ದಮನಕಾರಿ ನೀತಿ ವಿರುದ್ಧ ಕಾನೂನು ಹೋರಾಟ ನಡೆಸುವುದಾಗಿ ಅಖಿಲ ಕರ್ನಾಟಕ ಕುಳುವ ಮಹಾ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ಎಂ. ಭಜಂತ್ರಿ ಹೇಳಿದ್ದಾರೆ.
ಸರ್ಕಾರದ ಈ ಸಂವಿಧಾನ ವಿರೋಧಿ ಒಳಮೀಸಲಾತಿಯ ಶಿಫಾರಸ್ಸನ್ನು ಕೂಡಲೇ ಕೈ ಬಿಡಬೇಕು, ಇಲ್ಲದಿದ್ದರೆ ಭಾಧಿತ 99 ಪರಿಶಿಷ್ಟ ಸಮುದಾಯಗಳು ಒಗ್ಗಟ್ಟಾಗಿ ಹೋರಾಟ ಮಾಡುತ್ತೇವೆ. ನ್ಯಾಯಮೂರ್ತಿ ಎ.ಜೆ. ಸದಾಶಿವ ಆಯೋಗದ ವರದಿ ವಿರೋಧಿಸಿ ರಾಜ್ಯಾದ್ಯಂತ ಹೋರಾಟ ನಡೆಸಿ, ಇತ್ತೀಚೆಗೆ ಬೆಂಗಳೂರಿನ ಪ್ರೀಡಂ ಪಾರ್ಕ್ ನಲ್ಲಿ ಪರಿಶಿಷ್ಟ ಜಾತಿಗಳ ಬೃಹತ್ ಸಂಕಲ್ಪ ಸಮಾವೇಶದಲ್ಲಿ ನಿರ್ಣಯ ಕೈಗೊಳ್ಳಲಾಗಿತ್ತು ಎಂದಿದ್ದಾರೆ.
ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಶಿವಾನಂದ ಎಂ. ಭಜಂತ್ರಿ, ಪರಿಶಿಷ್ಟರಲ್ಲಿ ಸಮಾನ ಅವಕಾಶ ವಂಚಿತ ಶೋಷಿತ ತಳಸಮುದಾಯಗಳನ್ನು ಮರುವರ್ಗೀಕರಿಸಲು ರಾಜ್ಯ ಸರ್ಕಾರಕ್ಕೆ ಅಧಿಕಾರವೇ ಇಲ್ಲ. ಆದರೂ ಮೀಸಲಾತಿಯ ಮೂಲ ಪರಿಕಲ್ಪನೆಯಾದ ಸಮಾಜಿಕ, ಶೈಕ್ಷಣಿಕ ಹಿಂದುಳಿದಿರುವಿಕೆಯ ಮೂಲ ಮಾನದಂಡ ಕಡೆಗಣಿಸಿ, ರಾಜ್ಯದ 101 ಪರಿಶಿಷ್ಟ ಜಾತಿಗಳ ಪ್ರಸ್ತುತ ಸಮಾಜಿಕ, ಶೈಕ್ಷಣಿಕ ಹಿಂದುಳಿದಿರುವಿಕೆ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಯಾವ ಪ್ರಮಾಣದಲ್ಲಿ ಯಾವ, ಯಾವ ಜಾತಿಗಳು ಹಿಂದುಳಿದಿವೆ ಎಂಬುದನ್ನು ವೈಜ್ಞಾನಿಕ ಮಾನದಂಡಗಳ ಮೂಲಕ ಅಧ್ಯಯನ ಮಾಡಲೇಬೇಕು. ಜೊತೆಗೆ ವಸ್ತುನಿಷ್ಠ, ವರದಿಯ ಆಧಾರದ ಮೇಲೆ ಹಿಂದುಳಿದಿರುವಿಕೆಯನ್ನು ಪರಿಗಣಿಸದೇ “ಕೇವಲ ಜನಸಂಖ್ಯೆಯ ಆಧಾರದ ಮೇಲೆ ಪರಿಶಿಷ್ಟ ಜಾತಿಯ ಪಟ್ಟಿಯನ್ನು ತಿದ್ದಿ, ತೇಪೆಹಚ್ಚಿ, ಮರು ವರ್ಗೀಕರಿಸಿ ಮೇಲ್ನೋಟಕ್ಕೆ ಗುಂಪುಗಳನ್ನಾಗಿ ವರ್ಗೀಕರಣ ಮಾಡುತ್ತಿರುವುದು ಕಾರ್ಯಸಾಧುವಲ್ಲ ಎಂದು ಹೇಳಿದ್ದಾರೆ.
“ಮೀಸಲಾತಿಗೆ ಹಿಂದುಳಿದಿರುವಿಕೆ ಮಾನದಂಡವಾದ ಮೇಲೆ ಒಳಮೀಸಲಾತಿಗೂ ಹಿಂದುಳಿದಿರುವಿಯೇ ಮಾನದಂಡವಾಗಬೇಕೆ ಹೊರತು ಜನಸಂಖ್ಯೆಯಲ್ಲ”. ಸಂವಿಧಾನದ ಅನುಚ್ಚೇದ-17 ರಂತೆ ಈಗಾಗಲೇ ದೇಶದ್ಯಾಂತ ಅಸ್ಪಶ್ಯತೆ ಆಚರಣೆ ನಿಷಿದ್ದವಾಗಿದ್ದರೂ ಸಹ ಸರ್ಕಾರ ಸ್ಪರ್ಶ, ಅಸ್ಪೃಶ್ಯತೆ ಎಂಬ ಪರಿಕಲ್ಪನೆಯಡಿ ಒಳವರ್ಗೀಕರಣ ಮಾಡುತ್ತಿರುವುದು ಸಂವಿಧಾನದ ಸಮಾನತೆಯ ಆಶಯಕ್ಕೆ ವಿರುದ್ದವಾಗಿದೆ ಎಂದು ಶಿವಾನಂದ ಎಂ. ಭಜಂತ್ರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Be the first to comment