ಜಿಲ್ಲಾ ಕ್ರೀಡಾಂಗಣದಲ್ಲಿ ಸಂಭ್ರಮದ 73ನೇ ಗಣರಾಜ್ಯೋತ್ಸವ:ಭಾರತ ದೇಶ ಜಗತ್ತಿಗೆ ಮಾದರಿ : ಸಚಿವ ಸಿ.ಸಿ.ಪಾಟೀಲ

ವರದಿ: ಶರಣಪ್ಪ ಹೆಳವರ ಬಾಗಲಕೋಟೆ

ಜಿಲ್ಲಾ ಸುದ್ದಿಗಳು

ವಿವಿಧ ಕ್ಷೇತ್ರದಲ್ಲಿ ಸಾಧನೆಗೈದವರಿಗೆ ಸನ್ಮಾನ
ವಿವಿಧ ಕ್ಷೇತ್ರದಲ್ಲಿ ಸಾಧನೆಗೈದರವನ್ನು ಸನ್ಮಾನಿಸಲಾಯಿತು. ಗೀತ ಬಳಬಟ್ಟಿ, ಕೌಸರ್‍ಬಾನು, ರುಕ್ಕಮಣಿ ಮಿರ್ಜಿ, ಶಾಂತಬಾಯಿ ತೇಲಿ, ಭಾರತಿ ಮುರಬಂಡಿ (ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಸೈನಿಕ ಕುಟುಂಬಸ್ಥರು, ಪದ್ಮಾವತಿ ತುಂಬರಮಟ್ಟಿ, ಲಕ್ಷ್ಮಣ ಬಿಳ್ಳೂರ (ಕೃಷಿ), ಶಿವಾನಂದ ಕೊಣ್ಣೂರ, ಅಡವೇಂದ್ರ ಇನಾಂದಾರ, ಎಚ್.ಎಚ್.ಬೇಪಾರಿ (ಪತ್ರಿಕಾ ಮಾಧ್ಯಮ), ದಾನಮ್ಮ ಚಿಚಖಂಡಿ, ಸಂಪತ್ ಪಾಸಮೇಲ್, ಸವಿತಾ ಆಡಗಲ್ (ಸೈಕ್ಲಿಂಗ್), ಆದರ್ಶ ತೋಟದಾರ (ಕುಸ್ತಿ), ಶ್ರವಣಕುಮಾರ ಲಾಗಲೋಟಿ, ರಮೇಶ ಭೂಷಣ್ಣವರ (ವುಶೂ), ಡಾ.ರಾಹುಲ ಜೋಶಿ, ಬಸಿರ ಅಹಮ್ಮದ, ಶಫಿ ಅಹಮ್ಮದ ಮುಲ್ಲಾ, ರಾಜಶ್ರೀ, ಕೃಷ್ಣಾ ಪೂಜಾರ, ಹನಮಂತ ಕಾಂಬಳೆ (ವೈದ್ಯಕೀಯ).

ಬಾಗಲಕೋಟೆ:ಭಾರತ ದೇಶವು ವೈವಿದ್ಯತೆಯಲ್ಲಿ ಏಕತೆಯನ್ನು, ಅಖಂಡತೆಯನ್ನು ಎತ್ತಿ ಹಿಡಿದ ಜಗತ್ತಿನ ಏಕೈಕ ರಾಷ್ಟ್ರವಾಗಿದ್ದು, ತಂತ್ರಜ್ಞಾನ, ರಕ್ಷಣಾ ಕ್ಷೇತ್ರ, ಶಿಕ್ಷಣ, ಆದ್ಯಾತ್ಮ, ಯೋಗ ಹಾಗೂ ಕೋವಿಡ್ ಲಸಿಕೆ ನೀಡುವುದರಲ್ಲಿ ಜಗತ್ತಿಗೆ ಮಾದರಿಯಾಗಿದೆ ಎಂದು ಲೋಕೋಪಯೋಗಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಸಿ.ಸಿ.ಪಾಟೀಲ ಹೇಳಿದರು.

ನವನಗರದ ಜಿಲ್ಲಾ ಕ್ರೀಡಾಂಗಣದಲ್ಲಿಂದು ಜಿಲ್ಲಾಡಳಿತದಿಂದ ಹಮ್ಮಿಕೊಂಡ 73ನೇ ಗಣರಾಜ್ಯೋತ್ಸವದ ಧ್ವಜಾರೋಹಣ ನೆರವೇರಿಸಿ ಗೌರವ ವಂದನೆ ಸ್ವೀಕರಿಸಿ ಮಾತನಾಡಿದ ಅವರು ಪ್ರಜಾಪ್ರಭುತ್ವ ಮತ್ತು ಒಕ್ಕೂಟ ವ್ಯವಸ್ಥೆಯ ಆಧಾರದ ಮೇಲೆ ಅತ್ಯಂತ ಬಲಿಷ್ಟ ರಾಷ್ಟ್ರವನ್ನಾಗಿ, ಸ್ವಾವಲಂಭಿ ದೇಶವಾಗಿ ಅಭಿವೃದ್ದಿ ಪಥದಲ್ಲಿ ಸಾಗುತ್ತಿರುವುದು ಪ್ರಶಂಸಣೆಗೆ ಪಾತ್ರವಾಗಿದೆ. ಕೋವಿಡ್ ಹಿನ್ನಲೆಯಲ್ಲಿ ರಾಷ್ಟ್ರೀಯ ಹಬ್ಬಗಳನ್ನು ಸರಳವಾಗಿ ಆಚರಿಸಲಾಗುತ್ತಿದೆ ಎಂದರು.

ಜಾಗತಿಕ ಪಿಡುಗಾದ ಕೊರೊನಾ ನಿಯಂತ್ರಣಕ್ಕೆ ನಮ್ಮ ಸರಕಾರ ಅವಿರವಾಗಿ ಶ್ರಮಿಸಿದೆ. ಕೊರೊನಾಗೆ ಸಂಜೀವಿನಿ ಎಂದೆ ಕರೆಯಲ್ಪಡುವ ಕೋವಿಡ್ ಲಸಿಕೆ ನೀಡುವಲ್ಲಿ ರಾಜ್ಯ ದೇಶದಲ್ಲಿಯೇ ಎರಡನೇ ಸ್ಥಾನದಲ್ಲಿದೆ. ಜಿಲ್ಲೆಯಲ್ಲಿ ಶೇ.101 ರಷ್ಟು ಮೊದಲನೆ ಡೋಸ್ ಪಡೆದುಕೊಂಡಿದದು, ಶೇ,80 ರಷ್ಟು ಎರಡನೇ ಡೋಸ್ ಹಾಗೂ 15 ರಿಂದ 18 ವರ್ಷದ ಮಕ್ಕಳು ಪಡೆದುಕೊಂಡಿದ್ದಾರೆ. ಆರೋಗ್ಯ ಮತ್ತು ಮುಂಚೂಣಿ ಕಾರ್ಯಕರ್ತರು ಹಾಗೂ 60 ವರ್ಷ ಮೇಲ್ಪಟ್ಟವರಿಗೆ ಬೂಸ್ಟರ್ ಡೋಸ್ ಸಹ ನೀಡಲಾಗುತ್ತಿದೆ ಎಂದರು.

ಪ್ರಸಕ್ತ ಸಾಲಿಗೆ ಪ್ರವಾಹ, ಅತಿವೃಷ್ಟಿಯಿಂದ 552 ಮನೆಗಳು ಹಾನಿಗೊಂಡಿದ್ದು, 3.1 ಕೋಟಿ ಪರಿಹಾರ ನೀಡಲಾಗಿದೆ. ಬೆಳೆಹಾನಿಗೆ 62953 ರೈತರ ಖಾತೆಗೆ 53028 ಕೋಟಿ ರೂ.ಗಳ ಪರಿಹಾರ ಜಮೆ ಮಾಡಲಾಗಿದೆ. ಆಗಸ್ಟ ಮತ್ತು ನವೆಂಬರ ಮಾಹೆಯಲ್ಲಿ ರಾಜ್ಯದಲ್ಲಿ ಬಹುತೇಕ ವಾಡಿಕೆಗಿಂತ ಹೆಚ್ಚಿಗೆ ಮಳೆಯಾಗಿದ್ದರಿಂದ ರಸ್ತೆ, ಸೇತುವೆಗಳಿಗೆ ಹಾನಿಯುಂಟಾಗಿದ್ದು, ದುರಸ್ಥಿ ಕಾರ್ಯಕ್ಕೆ 610 ಕೋಟಿ ರೂ.ಗಳ ಅನುದಾನ ನೀಡಿದ್ದು, ಈ ಪೈಕಿ ಬಾಗಲಕೋಟೆಗೆ 20.5 ಕೋಟಿ ರೂ.ಗಳಷ್ಟು ನೀಡಲಾಗಿದೆ. ರಾಜ್ಯದ ಪ್ರಮುಖ ಹೆದ್ದಾರಿಗಳ ಅಭಿವೃದ್ದಿಗೆ 3500 ಕೋಟಿ ನೀಡಿದ್ದು, ಈ ಯೋಜನೆಯಡಿ ಜಿಲ್ಲೆ 77 ಕಿ.ಮೀ ಅಭಿವೃದ್ದಿಯನ್ನು 154 ಕೋಟಿ ರೂ.ಗಳಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ ಎಂದರು.

ಲೋಕೋಪಯೋಗಿ ಇಲಾಖೆಗೆ ಕೇಂದ್ರದಿಂದ ರಾಜ್ಯಕ್ಕೆ 4882.00 ಕೋಟಿ ಮೊತ್ತದಲ್ಲಿ 1096.60 ಕಿ.ಮೀ ರಸ್ತೆ ಹಾಗೂ ಸೇತುವೆ ನಿರ್ಮಾಣಕ್ಕಾಗಿ ಕೇಂದ್ರ ಭೂಸಾರಿಗೆ ಮಂತ್ರಾಲಯದಿಂದ ಕಳೆದ ಮೇ ತಿಂಗಳಲ್ಲಿ ಅನುಮೋದನೆ ನೀಡಲಾಗಿದೆ. 80.79 ಕಿ.ಮೀ ಉದ್ದದ ರಸ್ತೆ ನಿರ್ಮಾಣಕ್ಕೆ 788.06 ಕೋಟಿ ವೆಚ್ಚದಲ್ಲಿ ಪಟ್ಟದಕಲ್ಲು-ಶಿರೂರ, ಶಿರೂರ-ಗದ್ದನಕೇರಿ ಹಾಗೂ ಬಾನಾಪೂರ ಗದ್ದನಕೇರಿ ಭಾಗದ ಹೆದ್ದಾರಿ ಅಭಿವೃದ್ದಿ ಕಾಮಗಾರಿಗೆ ಆರ್ಥಿಕ ಮತ್ತು ತಾಂತ್ರಿಕ ಅನುಮೋದನೆ ನೀಡಿ ಟೆಂಡರ್ ಆಹ್ವಾನಿಸಲಾಗಿದೆ ಎಂದರು.

ಜಲ ಜೀವನ ಮಿಷನ್ ಯೋಜನೆಯಡಿ 558 ಗ್ರಾಮಗಳಿಗೆ 412.38 ಕೋಟಿ ವೆಚ್ಚದಲ್ಲಿ ಮನೆ ಮನೆಗೆ ನಲ್ಲಿ ನೀರನ್ನು ಒದಗಿಸುವ ಕಾಮಗಾರಿ ಪ್ರಗತಿಯಲ್ಲಿದೆ. ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿಯಡಿ ಜಿಲ್ಲೆಯ 2.17 ಲಕ್ಷ ರೈತರು ನೊಂದಾಯಿಸಿದ್ದು, ಎಲ್ಲ ಕಂತು ಸೇರಿ ಒಟ್ಟು 300.056 ಕೋಟಿ ರೂ.ಗಳ ಅನುದಾನ ನೇರವಾಗಿ ರೈತರ ಖಾತೆಗೆ ಜಮೆ ಮಾಡಲಾಗಿದೆ. ಕೇಂದ್ರ ಸರಕಾರ ಮಹತ್ವದ ಯೋಜನೆಯಾದ ಒಂದು ಜಿಲ್ಲೆ ಒಂದು ಉತ್ಪನ್ನದಡಿ ಬೆಲ್ಲ ಆಯ್ಕೆಯಾಗಿದ್ದು, ಇದರಡಿ 28 ಫಲಾನುಭವಿಗಳು ಅರ್ಜಿ ಸಲ್ಲಿಸಿರುವುದಾಗಿ ತಿಳಿಸಿದರು.

ಕಾರ್ಯಕ್ರಮದಲ್ಲಿ ಸಂಸದ ಪಿ.ಸಿ.ಗದ್ದಿಗೌಡರ, ಶಾಸಕ ವೀರಣ್ಣ ಚರಂತಿಮಠ, ವಿಧಾನ ಪರಿಷತ್ ಸದಸ್ಯ ಪಿ.ಎಚ್.ಪೂಜಾರ, ಬುಡಾದ ಅಧ್ಯಕ್ಷ ಬಸವಲಿಂಗಪ್ಪ ನಾವಲಗಿ, ನಗರಸಭೆ ಅಧ್ಯಕ್ಷೆ ಜ್ಯೋತಿ ಭಜಂತ್ರಿ, ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ, ಜಿ.ಪಂ ಸಿಇಓ ಟಿ.ಭೂಬಾಲನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ ಜಗಲಾಸರ, ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ, ಉಪವಿಭಾಗಾಧಿಕಾರಿ ಎಂ.ಗಂಗಪ್ಪ, ತಹಶೀಲ್ದಾರ ಗುರುಸಿದ್ದಯ್ಯ ಹಿರೇಮಠ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಶಿಷ್ಯವೇತನಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳು

ಮುಖ್ಯಮಂತ್ರಿ ರೈತ ವಿದ್ಯಾನಿಧಿ ಕಾರ್ಯಕ್ರಮದ ಶಿಷ್ಯವೇತನಕ್ಕೆ ಜಿಲ್ಲೆಯ 5 ಜನ ರೈತ ಮಕ್ಕಳು ಆಯ್ಕೆಯಾಗಿದ್ದಾರೆ. ಸರಕಾರಿ ಮಹಿಳಾ ಪದವಿ ಪೂರ್ವ ಕಾಲೇಜಿನ ಕಾವ್ಯಾ ವಾಲಿಕಾರ, ಅಶ್ವಿನಿ ತೆಗ್ಗಿ, ಮುರಾರ್ಜಿ ದೇಸಾಯಿ ವಿಜ್ಞಾನ ಪದವಿ ಪೂರ್ವ ಕಾಲೇಜಿನ ಮಹೇಶ, ಶ್ರೀಧರ ಸೋಂದಿ, ಮೊರಾರ್ಜಿ ದೇಸಾಯಿ ಅಲ್ಪಸಂಖ್ಯಾತರ ಕಾಲೇಜಿನ ಮುತ್ತಕೀನ ಮಹಮ್ಮದ ಇಮ್ತಿಯಾಜಖಾನ್ ಆಯ್ಕೆಯಾಗಿದ್ದಾರೆ.

Be the first to comment

Leave a Reply

Your email address will not be published.


*