ಕ್ರೀಡಾ ವರದಿ-
ಲೇಖನ : ರಂಜಿತ್ ಶಿರಿಯಾರ, ಪತ್ರಕರ್ತರು
ಹೊತ್ತಿನ ತುತ್ತಿಗೂ ಗತಿಯಿಲ್ಲದೇ ಬೆಳೆದಾಕೆಯೀಕೆ. ಶೂ ಕೊಳ್ಳೋದಕ್ಕೂ ಸಾಧ್ಯವಾಗದಿದ್ದಾಗ ಬರಿಗಾಲಿನಲ್ಲೇ ಓಡಿ ಸಾಧನೆಯ ಶಿಖರವೇರಿದಾಕೆ. 18ರ ಹರೆಯದಲ್ಲೇ ಭಾರತ ಕೀರ್ತಿ ಪತಾಕೆಯನ್ನೇ ಜಗದಲಕ್ಕೂ ಮೊಳಗಿಸಿದ ಪೋರಿ. ಎಲ್ಲರ ಬಾಯಲ್ಲೂ ಈಗ ಆಕೆಯದ್ದೇ ಮಾತು, ವಿಶ್ವದಾದ್ಯಂತ ಇವಳದ್ದೇ ಜಪ…ಕೇವಲ ಹದಿನೈದೇ ದಿನಗಳಲ್ಲಿ 4 ಚಿನ್ನದ ಪದಕ ಗೆದ್ದ ಆಕೆ ಬೆಳೆದು ಬಂದಿದ್ದು ಮಾತ್ರ ಕಲ್ಲು ಮುಳ್ಳಿನ ಹಾದಿಯಿಂದ…
ಅಷ್ಟಕ್ಕೂ ಯಾರೀ ಸಾಧಕಿ ಅಂದ್ರಾ ಹೌದು,,,.ಈಕೆ ಬೇರಾರೂ ಅಲ್ಲ ಭಾರತದ ಚಿರತೆ ವೇಗದ ಓಟಗಾರ್ತಿ ಹಿಮಾದಾಸ್. ಹೀಮಾದಾಸ್ ಹುಟ್ಟಿದ್ದು ಅಸ್ಸಾಂನ ನಾಗಾಂವ್ ಜಿಲ್ಲೆಯ ದಿಂಗ್ ಅನ್ನೋ ಪುಟ್ಟ ಹಳ್ಳಿಯಲ್ಲಿ. ರಂಜಿತ್ ದಾಸ್ ಹಾಗೂ ಜುನಾಲಿ ದಂಪತಿಗಳ 6 ಮಕ್ಕಳ ಪೈಕಿ ಹಿಮಾ ದಾಸ್ ಕಿರಿಯವಳು. ಒಂದು ಹೊತ್ತಿನ ಊಟಕ್ಕೂ ಗತಿಯಿಲ್ಲದೇ ಇರುವಾಗ ರಂಜಿತ್ ದಾಸ್ ಗೆ ತನ್ನ ಮಕ್ಕಳ ಫೋಷಣೆ ಮಾಡೋದೇ ಕಷ್ಟವಾಗ್ತಿತ್ತು. ತನ್ನಲ್ಲಿದ್ದ ಕೇವಲ 40 ಸೆಂಟ್ಸ್ ಭೂಮಿಯಲ್ಲಿ ಭತ್ತವನ್ನು ಬೆಳೆದು ದಿನದೂಡ್ತಾ ಇದ್ರು.
ಅಂದು ನಡೆದ ವಿಶ್ವ ಜೂನಿಯರ್ ಚಾಂಪಿಯನ್ ಶಿಪ್ ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ಹಿಮಾದಾಸ್ ಅನ್ನೋ ಪೋರಿಯ ಚೀತಾ ವೇಗೆಕ್ಕೆ ವಿಶ್ವವೇ ನಿಬ್ಬೆರಗಾಗಿ ಹೋಗಿತ್ತು. 400 ಮೀಟರ್ ಓಟ ಸ್ಪರ್ಧೆಯಲ್ಲಿ 4 ನೇ ಲೇನ್ ನಲ್ಲಿ ಓಟ ಆರಂಭಿಸಿದ ಹಿಮಾದಾಸ್ 350 ಮೀಟರ್ ಕ್ರಮಿಸೋ ವರೆಗೂ 4 ರಿಂದ 5 ನೇ ಸ್ಥಾನದಲ್ಲಿದ್ರು. ಆದರೆ ಕೇವಲ 50 ಮೀಟರ್ ಓಟ ಬಾಕಿಯಿರೋವಾಗ ಆಕೆಯ ಚಿರತೆಯ ಓಟ ಎಲ್ಲರನ್ನೂ ನಿಬ್ಬೆರಗಾಗಿಸಿತು. ಆ ಶರವೇಗಕ್ಕೆ ವೇಗದ ಓಟಗಾರ್ತಿ ರೊಮೆನಿಯಾದ ಆಂಡ್ರಸ್ ಮಿಲ್ಕೋಸ್ ಕೂಡ ಮಕಾಡೆ ಮಲಗಿದ್ರು. ಅಂದು ಹಿಮಾದಾಸ್ ಚಿನ್ನದ ಪದಕಕ್ಕೆ ಕೊರಳೊಡ್ಡುತ್ತಿದ್ರೆ ಆಕೆಯ ಕಣ್ಣಲ್ಲಿ ಆನಂದಬಾಷ್ಪವಾಗುತ್ತಿತ್ತು. 130 ಕೋಟಿ ಭಾರತೀಯರ ದೇಶಭಕ್ತಿ ಪುಟಿದೇಳುವಂತೆ ಮಾಡಿತ್ತು.
ಅಲ್ಲಿಂದ ಹಿಮಾದಾಸ್ ತಿರುಗಿ ನೋಡಿದ್ದೇ ಇಲ್ಲ. ಇದೀಗ 18ರ ಪೋರಿ ಇದೀಗ ಚೆಕ್ ಗಣರಾಜ್ಯದಲ್ಲಿ ನಡೆದ ಟ್ಯಾಬರ್ ಅಥ್ಲೆಟಿಕ್ ಮೀಟ್ ನಲ್ಲಿ ಕೇವಲ 15 ದಿನಗಳಲ್ಲಿ ನಾಲ್ಕು ಚಿನ್ನದ ಪದಕವನ್ನು ಮುಡಿಗೇರಿಸಿಕೊಂಡಿದ್ದು, ರಾಷ್ಟ್ರಪತಿ, ಪ್ರಧಾನಮಂತ್ರಿ, ಕ್ರಿಕೆಟ್ ದಿಗ್ಗಜ ಸಚಿನ್ ತೆಂಡ್ಕೂಲ್ಕರ್ , ನಟ ಶಾರುಕ್ ಖಾನ್ ಮಾತ್ರವಲ್ಲದೇ ವಿಶ್ವದ ಮಹಾನ್ ನಾಯಕರ ಬಾಯಲ್ಲೂ ಹಿಮಾದಾಸ್ ತನ್ನ ಹೆಸರು ಪಟಿಸುವಂತಹ ಸಾಧನೆ ಮಾಡಿದ್ದಾಳೆ.
ಶೂ ಕೊಳ್ಳಲಾಗದವಳ ಹೆಸರಲ್ಲೇ ಶೂ ಕಂಪೆನಿ !
ನಿಜಕ್ಕೂ ಹಿಮಾದಾಸ್ ಕಲ್ಲು ಮುಳ್ಳಿನ ಹಾದಿಯಲ್ಲಿಯೇ ಬೆಳೆದು ಬಂದಿದ್ದವರು. ಬಡತನದ ನಡುವಲ್ಲೇ ಛಲ ಬಿಡಿದೇ ಸಾಧನೆಯ ಶಿಖರವನ್ನೇ ಏರಿದವರು. ಬಾಲ್ಯದಿಂದಲೂ ಬರಿಗಾಲಿನಲ್ಲೇ ರಕ್ತ ಸುರಿಸಿಕೊಂಡೇ ಚಿಗರೆಯಂತೆ ಓಡುತ್ತಿದ್ದ ಹಿಮಾದಾಸ್ ಅದೆಷ್ಟೋ ನೋವನ್ನು ನುಂಗಿಕೊಂಡಿದ್ದರು. ಅಷ್ಟೇ ಯಾಕೆ ಗುವಾಹಟಿಯಲ್ಲಿ ತರಬೇತಿಗೆ ಬಂದಾಗಲು ಆಕೆಯ ಕೈಯಲ್ಲಿ ಸ್ಪೈಕ್ ಶೂ ಕೂಡ ಇರಲಿಲ್ಲ. ಕೊಳ್ಳೋದಕ್ಕೂ ಹಣವೂ ಇರಲಿಲ್ಲ. ಆದರೆ ಆಕೆ ಸಾಲು ಸಾಲು ಸ್ವರ್ಣ ಪದಕಕ್ಕೆ ಮುತ್ತಿಡುತ್ತಿದ್ದಂತೆಯೇ ವಿಶ್ವದ ಪ್ರತಿಷ್ಠಿತ ಶೂ ಕಂಪೆನಿ ಅಡಿದಾಸ್ ಹಿಮಾದಾಸ್ ರನ್ನೇ ಬ್ರಾಂಡ್ ಅಂಬಾಸಿಡರ್ ಆಗಿ ನೇಮಕ ಮಾಡಿಕೊಂಡಿದ್ದು ಮಾತ್ರವಲ್ಲದೇ ಆಕೆಯ ಹೆಸರಿನಲ್ಲೇ ಶೂಗಳನ್ನು ತಯಾರಿಸುತ್ತಿದೆ.
ನೆರೆ ಸಂತ್ರಸ್ತರಿಗೆ ನೆರವಾದ ಹಿಮಾದಾಸ್
ತನ್ನ ಹುಟ್ಟೂರು ಪ್ರವಾಹಕ್ಕೆ ತುತ್ತಾಗಿದ್ದರೂ ಎದೆಗುಂದದೆ ಸಾಧನೆಯ ಶಿಖರವೇರಿರೋ ಹಿಮಾದಾಸ್ ತನ್ನ ಹುಟ್ಟೂರನ್ನೂ ಮರೆಯಲಿಲ್ಲ. ಅಸ್ಸಾಂನಲ್ಲಿ ಸಂಬಂವಿಸಿರೋ ಪ್ರವಾಹ ಸಂತ್ರಸ್ತರಿಗೆ ನೆರವಾಗಿದ್ದಾರೆ. ಈಗಾಗಲೇ ತನ್ನ ವೇತನದ ಅರ್ಧಭಾಗವನ್ನೂ ನೆರೆ ಸಂತ್ರಸ್ತರ ಪರಿಹಾರ ನಿಧಿಗೆ ನೀಡೋ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಕೇವಲ 18ರ ಹರೆಯದಲ್ಲಿಯೇ ವಿಶ್ವಮಟ್ಟದಲ್ಲಿ ಭಾರತದ ಕೀರ್ತಿ ಪತಾಕೆಯನ್ನು ವಿಶ್ವಮಟ್ಟದಲ್ಲಿ ಹಾರಿಸಿದ ಹಿಮಾದಾಸ್ ರಿಂದ ಇನ್ನಷ್ಟು ಸಾಧನೆಗಳು ಮೊಳಗಲಿ. ಸಾಧನೆಗೆ ಕಡುಬಡತನ ಅಡ್ಡಿಯಾಗೋದಿಲ್ಲ ಅನ್ನೋದನ್ನು ಹಿಮಾದಾಸ್ ತೋರಿಸಿಕೊಟ್ಟಿದ್ದಾರೆ. ನಿಜಕ್ಕೂ ಇಂದಿನ ಯುವ ಜನಾಂಗಕ್ಕೆ ಹಿಮಾದಾಸ್ ಮಾದರಿ ಅಲ್ವಾ…
ಇಂದು ಅದೇ ಸಾಧಕಿ,,,ಅಪ್ರತಿಮ ಕ್ರೀಡಾಪಟು,, 15 ದಿನದಲ್ಲಿ 4 ಚಿನ್ನದ ಪದಕಗೆದ್ದು…ಭಾರತೀಯರ ಶಕ್ತಿ ಸಾಮಥ್ಯವನ್ನ ವಿಶ್ವಕ್ಕೆಸಾರಿದ್ದಾಳೆ…ಆ ಮಹಾನ್ ಸಾಧಕಿಯ ಹೆಸರು ಉಚ್ಚರಿಸಲುನನಗೆ ಹೆಮ್ಮೆ ಅನ್ನಿಸುತ್ತಿದೆ…ಭಾರತದ ಪರ ಇತಿಹಾಸಬರೆಯುತ್ತಿರುವ,, ಆ ಕ್ರೀಡಾ ಪಟು ಬೇರೆ ಯಾರು ಅಲ್ಲ ದಿಗ್ರೇಟ್ ಅಥ್ಲೇಟ್ “ಹಿಮಾ ದಾಸ್“.. ಶುಭಾಶಯಗಳು ನಿನಗೆ,, ಭಾರತದ ಕೀರ್ತಿ ಪತಾಕೆ ನಿನ್ನಿಂದ ಮುಗಿಲೆತ್ತರಕ್ಕೆ ಹಾರಲಿ… ಹಿಮಾ ದಾಸ್ ರಂತ ನಮ್ಮ ಬಡ ಕ್ರೀಡಾ ಪಟುಗಳಿಗೆ ಸರ್ಕಾರನೆರವಿನ ಹಸ್ತ ಚಾಚಲಿ,,,,ವಿಶ್ವಮಟ್ಟದಲ್ಲಿ ಭಾರತ ನಂಬರ್ ಒನ್ಆಗೋ ದಿನ ಸನಿಹವಾಗಲಿ
Be the first to comment