ರಾಜ್ಯದಲ್ಲಿ ಸಮ್ಮಿಶ್ರ ಸರಕಾರ ಶುರುವಾದಾಗಿನಿಂದಲೂ ಹಾಗೊಂದು, ಹೀಗೊಂದು ಬಾರಿ ಅತೃಪ್ತಿಯ ಹೊಡೆತಗಳು ಬೀಳುತ್ತಿದ್ದವಾದರೂ ಈ ಪ್ರಮಾಣದಲ್ಲಿ ಎಂದಿಗೂ ಬಾಂಬ್ ಬಿದ್ದಿರಲಿಲ್ಲ. ಶನಿವಾರ ಬೆಳಗ್ಗೆ ದಿಢೀರನೇ ಉದಯವಾದ ಈ ರಾಜಕೀಯ ಬೆಳವಣಿಗೆಗಳು ಸದ್ಯ ಸ್ಪೀಕರ್ ಕಚೇರಿಯಲ್ಲಿ ನಿಂತಿದ್ದು, ಸರಕಾರ ಉಳಿಯುವ ಅಥವಾ ಬೀಳುವ ನಿರ್ಧಾರ ಸ್ಪೀಕರ್ ಕೈಯಲ್ಲಿದೆ.
ಶನಿವಾರ ಮಧ್ಯಾಹ್ನ ಸ್ಪೀಕರ್ ಕಚೇರಿ ಸಿಬಂದಿಗೆ ರಾಜೀನಾಮೆ ತಲುಪಿಸಿರುವ 12 ಮಂದಿ ಶಾಸಕರು ಅಲ್ಲಿಂದ ನೇರವಾಗಿ ರಾಜಭವನಕ್ಕೆ ಹೋಗಿ ರಾಜ್ಯಪಾಲರ ಭೇಟಿ ಮಾಡಿದರು. ರಾಜೀನಾಮೆಗೆ ಕಾರಣವಾದ ಅಂಶಗಳ ಬಗ್ಗೆ ಅವರಿಗೆ ವಿವರಣೆ ನೀಡಿದರು. ಈ ಮಧ್ಯೆ, ದೂರದಿಂದಲೇ ನಿಂತು ನೋಡುತ್ತಿರುವ ಬಿಜೆಪಿ, ಒಳಗೊಳಗೇ ಸರಕಾರ ರಚನೆಗೆ ಸಿದ್ಧತೆ ಮಾಡಿಕೊಳ್ಳುತ್ತಿದೆ ಎಂದು
ಹೇಳಲಾಗುತ್ತಿದೆ.
ಸಿದ್ದು ಶಿಷ್ಯರೂ ರಾಜೀನಾಮೆ
ಕಾಂಗ್ರೆಸ್‌ನ ಹಿರಿಯ ನಾಯಕ, ಮಾಜಿ ಸಚಿವ ರಾಮಲಿಂಗಾ ರೆಡ್ಡಿ, ಗುರುವಾರವಷ್ಟೇ ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನವನ್ನು ವರ್ಗಾಯಿಸಿದ್ದ ಎಚ್.
ವಿಶ್ವನಾಥ್, ದೇವೇಗೌಡರ ಪರಮಾಪ್ತ ಗೋಪಾಲಯ್ಯ, ಸಿದ್ದರಾಮಯ್ಯನವರ ಆಪ್ತ ಶಿಷ್ಯರಲ್ಲಿ ಗುರುತಿಸಿಕೊಂಡಿರುವ ಬೈರತಿ ಬಸವರಾಜ್, ಮುನಿರತ್ನ, ಎಸ್.ಟಿ. ಸೋಮಶೇಖರ ರಾಜೀನಾಮೆ ನೀಡಿ ಎಲ್ಲರಿಗೂ ಶಾಕ್ ನೀಡಿದ್ದಾರೆ.
ವಿದೇಶದಿಂದ ವಾಪಸ್
ಸಿಎಂ ಕುಮಾರಸ್ವಾಮಿ ವಿದೇಶ ಪ್ರವಾಸದಲ್ಲಿರುವಾಗಲೇ ಈ ಬೆಳವಣಿಗೆ ನಡೆದಿದ್ದು, ಪ್ರವಾಸ ಮೊಟಕುಗೊಳಿಸಿ ಅವರು ವಾಪಸ್ ಆಗುತ್ತಿದ್ದಾರೆ. ಇನ್ನು
ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಕೂಡ ಲಂಡನ್‌ನಿಂದ ವಾಪಸ್ ಬರುತ್ತಿದ್ದಾರೆ. ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಕೂಡ ಹೈಕಮಾಂಡ್ ಜತೆಗೆ ಚರ್ಚಿಸಿ ಬೆಂಗಳೂರಿಗೆ ಆಗಮಿಸಿದ್ದಾರೆ.
ವೇಣು ಆಗಮನ
ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣು ಗೋಪಾಲ್ ಶನಿವಾರ ಸಂಜೆಯೇ ಬೆಂಗಳೂರಿಗೆ ಆಗಮಿಸಿದ್ದು, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಜತೆ ಚರ್ಚಿಸಿದ್ದಾರೆ. ಸೌಮ್ಯಾ ರೆಡ್ಡಿ ಸಹಿತ ಹಲವು ಶಾಸಕರ ಜತೆ ಮಾತನಾಡಿ ನಿರ್ಧಾರ ಬದಲಿಸಲು ಮನವೊಲಿಸುವ ಪ್ರಯತ್ನ ನಡೆಸಿದ್ದಾರೆ.
ಸ್ಪೀಕರ್,ರಾಜ್ಯಪಾಲರ ಮುಂದಿರುವ ಆಯ್ಕೆಗಳು
13 ಅತೃಪ್ತ ಶಾಸಕರು ರಾಜೀನಾಮೆ ಸಲ್ಲಿಸಿರುವುದರಿಂದ ರಾಜ್ಯ ಸರಕಾರ, ಅಲ್ಪಮತಕ್ಕೆ ಕುಸಿದಿದೆ. ಇಂಥ ಸನ್ನಿವೇಶದಲ್ಲಿ ವಿಧಾನ ಸಭೆ ಸ್ಪೀಕರ್ ರಮೇಶ್ ಕುಮಾರ್ ಮತ್ತು ರಾಜ್ಯಪಾಲ ವಜೂಭಾç ವಾಲಾ ಅವರ ಪಾತ್ರವೇನು ಎಂಬ ಬಗ್ಗೆ ಕುತೂಹಲ ಮೂಡಿಸಿದೆ.
ಸ್ಪೀಕರ್ ಮುಂದಿನ ಆಯ್ಕೆ
1. ಪ್ರತಿ ಶಾಸಕರಿಂದಲೂ ರಾಜೀನಾಮೆಗೆ ಕಾರಣವೇನು ಎಂಬ ಬಗ್ಗೆ ಕೇಳಬಹುದು .
2. ಸ್ವಇಚ್ಛೆಯಿಂದ ಬರೆದಿದ್ದೀರಾ? ಟೈಪ್ ಮಾಡಿದ್ದರೆ ಸ್ವಇಚ್ಛೆಯಿಂದ ಸಹಿಮಾಡಿದ್ದೀರಾ ಎಂದು ಪ್ರಶ್ನಿಸಬಹುದು.
3. ಯಾರಿಂದಾದರೂ ದೂರು ಬಂದರೆ, ಜನರ ಅಭಿಪ್ರಾಯ ಕೇಳಬಹುದು.
4. ಕ್ಷೇತ್ರದ ಜನ ರಾಜೀನಾಮೆ ಅಂಗೀಕಾರ ಮಾಡಬೇಡಿ ಎಂದು ಕೇಳಿಕೊಂಡರೆ ರಾಜೀನಾಮೆ ತಡೆಹಿಡಿಯಬಹುದು.
5. ಜನರ ಅಭಿಪ್ರಾಯ ಪಡೆಯದೆ, ಸಕಾರಣವಿಲ್ಲದೆ ರಾಜೀನಾಮೆ ನೀಡಿದ್ದರೆ ಸ್ಪೀಕರ್ ತಮ್ಮದೇ ರೂಲಿಂಗ್ ನೀಡಬಹುದು.
ರಾಜ್ಯಪಾಲರ ನಡೆ ಏನು
1. ಶಾಸಕರ ರಾಜೀನಾಮೆ ಬಗ್ಗೆ ಸ್ಪೀಕರ್ ಗಮನಕ್ಕೆ ತರಬಹುದು.
2. ಮುಖ್ಯಮಂತ್ರಿಗೆ ಬಹುಮತ ಸಾಬೀತುಪಡಿಸಲು ಸೂಚಿಸಬಹುದು.
3. ರಾಜ್ಯದಲ್ಲಿ ಗೊಂದಲದ ವಾತಾವರಣ ಇದೆ ಎಂದು ರಾಷ್ಟ್ರಪತಿ ಆಡಳಿತಕ್ಕೆ ಕೇಂದ್ರ ಸರಕಾರಕ್ಕೆ ಶಿಫಾರಸು ಮಾಡಬಹುದು.
4. ಶಾಸಕರ ಕುದುರೆ ವ್ಯಾಪಾರ ನಡೆಯುತ್ತಿದೆ ಎಂದು ವಿಧಾನಸಭೆ ವಿಸರ್ಜನೆಗೆ
ಸೂಚನೆ ನೀಡಬಹುದು.
5. ಮೈತ್ರಿ ಸರಕಾರ ಬಹುಮತ ಸಾಬೀತು ಪಡಿಸಲು ವಿಫಲವಾದಲ್ಲಿ ಸರಕಾರ ರಚನೆಗೆ ಬಿಜೆಪಿಗೆ ಆಹ್ವಾನ ನೀಡಬಹುದು.
ಮುಖ್ಯಮಂತ್ರಿಯವರ ಮುಂದಿರುವ ಅವಕಾಶ
1. ರಾಜೀನಾಮೆ ನೀಡಿರುವ ಶಾಸಕರ ಮನವೊಲಿಕೆ ಮಾಡಿ ವಾಪಸ್ ಪಡೆಯುವಂತೆ ಮಾಡಬಹುದು.
2. ಸರಕಾರ ವಿಸರ್ಜನೆ ಮಾಡಲು ತೀರ್ಮಾನ ಮಾಡಿ ರಾಜ್ಯಪಾಲರಿಗೆ ಕಳುಹಿಸಬಹುದು.
3. ನಾಯಕತ್ವ ಬದಲಾವಣೆಗೆ ಸಿಎಂ ಮುಂದಾಗಿ ಬೇರೆಯವರಿಗೆ ಅವಕಾಶ ಕಲ್ಪಿಸಿಕೊಡಬಹುದು.
ಅಮೆರಿಕದಿಂದ ಸಿಎಂ ವಾಪಸ್
ಕಾಂಗ್ರೆಸ್, ಜೆಡಿಎಸ್‌ನ ಅತೃಪ್ತ ಶಾಸಕರು ರಾಜೀನಾಮೆಯ ಬಾಂಬ್ ಹಾಕುತ್ತಿದ್ದಂತೆ, ಅಮೆರಿಕಕ್ಕೆ ತೆರಳಿದ್ದ ಸಿಎಂ ಕುಮಾರಸ್ವಾಮಿ ಪ್ರವಾಸ ಮೊಟಕುಗೊಳಿಸಿ ವಾಪಸ್ ಹೊರಟರು. ವೇಳಾಪಟ್ಟಿ ಪ್ರಕಾರ ರವಿವಾರ ರಾತ್ರಿ ಅಮೆರಿಕದಿಂದ ಹೊರಡಬೇಕಿತ್ತು. ಈಗ ಶನಿವಾರ ರಾತ್ರಿಯೇ ಹೊರಟಿರುವ ಅವರು, ರವಿವಾರ ಬೆಳಗ್ಗೆ ಬೆಂಗಳೂರು ತಲುಪಲಿದ್ದಾರೆ ಎಂದು ಮೂಲಗಳು ಹೇಳಿವೆ. ಏತನ್ಮಧ್ಯೆ, ರಾಜ್ಯದ ಕ್ಷಿಪ್ರಕ್ರಾಂತಿಯ ಬಗ್ಗೆ ಕುಮಾರಸ್ವಾಮಿ ಅವರು ದೇವೇಗೌಡ ಮತ್ತು ಸಿದ್ದರಾಮಯ್ಯ ಜತೆ ಚರ್ಚಿಸಿದ್ದಾರೆ. ಅಲ್ಲದೆ, ಪ್ರತಿಯೊಂದು ಬೆಳವಣಿಗೆ ಬಗ್ಗೆಯೂ ತಮ್ಮ ಆಪ್ತರ ಮೂಲಕ ಮಾಹಿತಿ ಪಡೆದಿದ್ದಾರೆ.
ರಾಜ್ಯಪಾಲರ ಭೇಟಿಯಾಗಲ್ಲ: ಬಿಎಸ್‌ವೈ
ಕಾಂಗ್ರೆಸ್, ಜೆಡಿಎಸ್ ಶಾಸಕರ ರಾಜೀನಾಮೆಗೂ ನಮಗೂ ಸಂಬಂಧವಿಲ್ಲ. ಸದ್ಯದ ಬೆಳವಣಿಗೆಯನ್ನು ಸೂಕ್ಷ್ಮವಾಗಿ ಗಮನಿಸಲಾಗುತ್ತಿದ್ದು, ಸೂಕ್ತ ಸಂದರ್ಭದಲ್ಲಿ ನಿರ್ಧಾರ ಕೈಗೊಳ್ಳಲಾಗುವುದು. ರಾಜ್ಯಪಾಲರನ್ನು ಭೇಟಿಯಾಗುವ ಯಾವುದೇ ಚಿಂತನೆಯಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎ ಸ್. ಯಡಿಯೂರಪ್ಪ ಸ್ಪಷ್ಟ ಪಡಿಸಿದ್ದಾರೆ.
ಮೈತ್ರಿ ಪಕ್ಷಗಳಲ್ಲಿ ಅತೃಪ್ತರು ದೊಡ್ಡ ಸಂಖ್ಯೆಯಲ್ಲಿದ್ದು, ಏನು ಬೇಕಾದರೂ ಆಗಬಹುದು ಎಂದು ಬಹಳ ದಿನಗಳಿಂದ ನಾನು ಹೇಳುತ್ತಿದ್ದೆ.
ಸ್ಪೀಕರ್ ಕ್ರಮ ಆಧರಿಸಿ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದಿದ್ದಾರೆ.
ಸಚಿವ ಡಿ.ಕೆ. ಶಿವ ಕುಮಾರ್ ಶಾಸಕ ಮುನಿರತ್ನ ರಾಜೀನಾಮೆ ಪತ್ರ ಹರಿದರು ಎಂಬ ವಿಚಾರ ಕುರಿತು ಪ್ರತಿಕ್ರಿಯಿಸಿದ ಯಡಿಯೂರಪ್ಪ, ಸ್ಪೀಕರ್ ಕಚೇರಿಗೆ ಹೋಗಿ ಪತ್ರ ಹರಿದು ಹಾಕಿ ಶಾಸಕರನ್ನು ಕರೆದುಕೊಂಡು ಹೋಗಿದ್ದು ಅವರಿಗೆ ಶೋಭೆ ತರುವುದಿಲ್ಲ. ಅವರ ನಡೆಯನ್ನು ಖಂಡಿಸುತ್ತೇನೆ ಎಂದು ಹೇಳಿದರು.
Be the first to comment