ಜಿಲ್ಲಾ ಸುದ್ದಿಗಳು
ಬಾಗಲಕೋಟೆ:
ಈ ಬಾರಿ ರೈತರು ತಾವು ಬೆಳೆದ ಬೆಳೆಗಳ ಸಮೀಕ್ಷೆ ಮಾಡಲು ಸರಕಾರವು ಅನುಮತಿ ನೀಡಿದ್ದು ಅದಕ್ಕಾಗಿ ‘ರೈತ ಬೆಳೆ ಸಮೀಕ್ಷೆ ಅಪ್ಲಿಕೇಶನ್’ ಉಚಿತವಾಗಿ ಲಭ್ಯವಿದೆ. ರೈತರು ಈ ಅಪ್ಲಿಕೇಶನ್ ಡೌನ್ ಲೋಡ್ ಮಾಡಿಕೊಂಡು ತಮ್ಮ ಕೃಷಿ ಸಂಬಂಧಿತ ಮಾಹಿತಿಗಳನ್ನು ನಮೂದಿಸಬಹುದಾದ ಈ ಯೋಜನೆಗೆ ಇಳಕಲ್ಲ ತಾಲೂಕಿನ ಕೆಲೂರ ಗ್ರಾಮದಲ್ಲಿನ ಸರ್ವೆನಂಬರ 305ರ ಜಮೀನಿನ ಮಾಲಿಕ ಶರಣಪ್ಪ ಮಂಡಿ ಎಂಬ ರೈತರ ಬೆಳೆಯ ಛಾಯಾಚಿತ್ರ ಕ್ಲಿಕ್ಕಿಸಿ ಪೋಟೋ ಅಪ್ಲೋಡ್ ಮಾಡುವುದರೊಂದಿಗೆ ಗ್ರಾಮದ ಪಿ.ಕೆ.ಪಿ.ಎಸ್.ಅಧ್ಯಕ್ಷರು ಹಾಗೂ ವಿಜಯ ಮಾಹಾಂತೇಶ ಬ್ಯಾಂಕಿನ ನಿರ್ದೇಶಕರಾದ ಬಸವರಾಜ ನಾಡಗೌಡರ ರೈತರಲ್ಲಿ ಜಾಗೃತಿ ಮೂಡಿಸಿದರು.
ಗ್ರಾಮದಲ್ಲಿ ಡಂಗುರ ಸಾರಿಸಿ ಜನರಲ್ಲಿ ಜಾಗೃತಿ ಮೂಡಿಸಿದ ಕಂದಾಯ ಇಲಾಖೆಯ ಅಧಿಕಾರಿ ಧರ್ಮಣ್ಣ ಯತ್ನಟ್ಟಿ.
ಬೆಳೆ ಸಮೀಕ್ಷೆ ಕುರಿತು ರೈತರಲ್ಲಿ ಮಾಹಿತಿ ಹಾಗೂ ಜಾಗೃತಿ ಮೂಡಿಸಲು ಗ್ರಾಮದಲ್ಲಿ ಗ್ರಾಮ ಸಹಾಯಕ ಬಸಪ್ಪ ಶಿರಬಡಗಿಯವರ ಮೂಲಕ ಡಂಗುರ ಸಾರಿಸಿ,ರೈತರ ಜೊತೆಗೂಡಿ ಯುವ ರೈತರು ಮತ್ತು ಪಿ.ಕೆ.ಪಿ.ಎಸ್. ಉಪಾಧ್ಯಕ್ಷರಾದ ವಜಿರಪ್ಪ ಪೂಜಾರ ಇವರ ಮೊಬೈಲ್ ನಲ್ಲೆ ಆ್ಯಪ್ ಡೌನ್‌ಲೋಡ್ ಮಾಡಿಸಿ ಮಾರ್ಗದರ್ಶನ ನೀಡುವುದರ ಜೊತೆಗೆ ರೈತರ ಮೂಲಕವೆ ಬೆಳೆ ಸಮೀಕ್ಷೆ ದಾಖಲು ಮಾಡುವ ಮಾಹಿತಿ ತಿಳಿಸುವುದರ ಮೂಲಕ ಸರ್ಕಾರದ ಈ ಯೋಜನೆ ಯಶಸ್ವಿಗೊಳಿಸುವತ್ತ ಹೆಜ್ಜೆಯನ್ನಿಟ್ಟು ರೈತ ಬೆಳೆ ಸಮೀಕ್ಷೆ ಅಪ್ಲಿಕೇಶನ್ ಕುರಿತು ಪ್ರಮುಖ ಮಾಹಿತಿಯನ್ನು ಕಂದಾಯ ಅಧಿಕಾರಿ ಧರ್ಮಣ್ಣ ಯತ್ನಟ್ಟಿ ಹಂಚಿಕೊಂಡರು.
ಆ್ಯಪ್ ಡೌನ್ಲೋಡ್ ಹೇಗೆ?
ರೈತರು ಬೆಳೆ ಸಮೀಕ್ಷೆ ಆ್ಯಪ್‌ಅನ್ನು ಗೂಗಲ್ ಪ್ಲೇಸ್ಟೋರ್‌ನಿಂದ ಡೌನ್‌ಲೋಡ್ ಮಾಡಿಕೊಂಡು ಸ್ವಯಂ ಬೆಳೆ ಸಮೀಕ್ಷೆ ಮಾಡಬಹುದಾಗಿದೆ.
ರೈತ ಬೆಳೆ ಸಮೀಕ್ಷೆ ಅಪ್ಲಿಕೇಶನ್ ಪ್ರಯೋಜನಗಳು
* ಬೆಳೆ ನಷ್ಟ ಪರಿಹಾರ ವಿತರಣೆಗೆ ಮಾಹಿತಿ
*ಬೆಳೆ ವಿಮೆ ಯೋಜನೆಯಡಿ ಬೆಳೆ ವಿವರ ಪರಿಶೀಲನೆ
* ಪಹಣಿಯಲ್ಲಿ ಬೆಳೆ ವಿವರ ದಾಖಲು
* ಕನಿಷ್ಠ ಬೆಂಬಲ ಬೆಲೆಗೆ ಫಲಾನುಭವಿ ಗುರುತಿಸುವುದು
* ಬೆಳೆ ಕಟಾವು ಪ್ರಯೋಗಕ್ಕೆ ಮಾಹಿತಿ
ಕಾಲಮಿತಿ ನಿಗದಿ :
ರೈತರು ಬೆಳೆದ ವಿವರಗಳನ್ನು ಅಪ್‌ಲೋಡ್ ಮಾಡಲು ಮುಂಗಾರು ಹಂಗಾಮಿಗೆ ಆಗಸ್ಟ್ 24 ಕೊನೆಯದಿನವಾಗಿದ್ದು, ರೈತರು ನಿಗದಿತ ಸಮಯದೊಳಗೆ ತಾವು ಬೆಳೆದ ಬೆಳೆಗಳ ಮಾಹಿತಿಯನ್ನು ಅಪ್‌ಲೋಡ್ ಮಾಡಬೇಕು.
ಏನಿದು ಬೆಳೆ ಸಮೀಕ್ಷೆ ಮೊಬೈಲ್ ಆ್ಯಪ್?
ರೈತರ ಪಹಣಿಗಳಲ್ಲಿ ನಮೂದಾಗಿರುವ ಬೆಳೆ ಮಾಹಿತಿಯಲ್ಲಿ ನಿಖರತೆ ತರುವ ಸಲುವಾಗಿ ಇ-ಆಡಳಿತ ಇಲಾಖೆ ವತಿಯಿಂದ ಬೆಳೆ ಸಮೀಕ್ಷೆ ಆ್ಯಪ್ ಅಭಿವೃದ್ಧಿಪಡಿಸಲಾಗಿದೆ. ಬೆಳೆ ಸಮೀಕ್ಷೆ ಯೋಜನೆಯನ್ವಯ ಜಿಲ್ಲೆಯ ರೈತರು ತಮ್ಮ ಜಮೀನಿನ ಸರ್ವೆ ನಂಬರ, ಹಿಸ್ಸಾ ನಂಬರವಾರು ತಾವು ಬೆಳೆದ ಕೃಷಿ ಬೆಳೆ ಹಾಗು ಬಹುವಾರ್ಷಿಕ ತೋಟಗಾರಿಕೆ, ಅರಣ್ಯ ಇತರೆ ಬೆಳೆ ಸಮೀಕ್ಷೆ 2020 ಆ್ಯಪ್ ಡೌನ್‍ಲೋಡ್ ಮಾಡಿಕೊಂಡು ಸ್ವತಃ ತಾವೇ ಬೆಳೆ ಸಮೀಕ್ಷೆ ಮೂಲಕ ನೋಂದಾಯಿಸ ಬಹುದು.
ಈ ಸಂದರ್ಭದಲ್ಲಿ ರೈತ ಮತ್ತು ಮಾಜಿ ಗ್ರಾಮ ಪಂಚಾಯತಿ ಸದಸ್ಯ ಮುತ್ತಣ್ಣ ನಾಡಗೌಡರ, ರೈತರಾದ ಮಲ್ಲಪ್ಪ ಬೆಳ್ಳವರಿ,ಮಂಜುನಾಥ ಮಂಡಿ ಹಾಗೂ ಇತರರು ಉಪಸ್ಥಿತರಿದ್ದರು.
Be the first to comment