ಕೋವಿಡ್-19 ಲಾಕ್ ಡೌನ್ ಕಾರಣದಿಂದ ಮುಂದೂಡಲಾಗಿರುವ ಎಸ್ ಎಸ್ ಎಲ್ ಸಿ ಪರೀಕ್ಷೆಯನ್ನು ಜೂನ್ 25ರಿಂದ ಪ್ರಾರಂಭಿಸಿದ್ದು ಕೋರೋನಾ ಸಂಕಷ್ಟ ಪರಿಸ್ಥಿತಿಯಲ್ಲಿ ಪರೀಕ್ಷೆಗಳು ಹೇಗೆ ನಡೆಯುತ್ತವೆ ಎಂಬುದನ್ನು ಇಡೀ ಸಮಾಜ ಗಮನಿಸುತ್ತಿದ್ದು ಶ್ರೀ ಖೋಡೆ ಈಶ್ವರಸಾ ಪ್ರೌಢಶಾಲೆ ಗುಡೂರ ಪರೀಕ್ಷಾ ಕೇಂದ್ರದಲ್ಲಿ ಶಿಕ್ಷಣ ಇಲಾಖೆಯ ಮಾರ್ಗದರ್ಶನದೊಂದಿಗೆ ಯವುದೇ ಅವಘಡಗಳಿಗೆ ಅವಕಾಶ ನೀಡದೆ ಪರೀಕ್ಷೆಯನ್ನು ಯಶಸ್ವಿಯಾಗಿ ನಿರ್ವಹಿಸಿದ್ದಾರೆ.
ಗುಡೂರ ಪರೀಕ್ಷಾ ಕೇಂದ್ರ ಎಂದರೆ ಭಯ:
ಕಳೆದ ಹಲವು ವರ್ಷಗಳಿಂದ ಗುಡೂರ ಪರೀಕ್ಷಾ ಕೇಂದ್ರ ಎಂದರೆ ಅಲ್ಲಿ ಸೇವೆ ಸಲ್ಲಿಸುವ ಎಲ್ಲ ಸಿಬ್ಬಂದಿಯವರು ಭಯ ಪಡುತ್ತಿದ್ದರು.ಕಾರಣ ಪರೀಕ್ಷೆ ಎಂದರೆ ಜಾತ್ರೆಯಂತೆ ಜನ ಸೇರಿ ಮಕ್ಕಳಿಗೆ ಕಾಪಿ ಕೊಡಲು ಮುಗಿಬೀಳುತ್ತಿದ್ದರು.ಎಷ್ಟೋ ಬಾರಿ ಪರೀಕ್ಷೆಗಳು ಮರಳಿ ನಡೆದ ಉದಾಹರಣೆಗಳಿವೆ ಆದರೆ ಈ ವರ್ಷದಲ್ಲಿ ಯಾವೊಬ್ಬ ಪಾಲಕರು ಪರೀಕ್ಷಾ ಕೇಂದ್ರದ ಸುತ್ತಮುತ್ತಲು ಸುಳಿಯದಿರುವುದು ನಿಜಕ್ಕೂ ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ.
ಪರೀಕ್ಷಾ ಕೇಂದ್ರದ ಸುತ್ತ ಬಿಗಿ ಭದ್ರತೆ.25-6-2020 ರಿಂದ 03-06-2020 ರ ವರೆಗೆ ನಡೆದಿರುವ ಎಸ್.ಎಸ್.ಎಲ್.ಸಿ ಪರೀಕ್ಷೆಗಳು ಮಾನ್ಯ ಜಿಲ್ಲಾಧಿಕಾರಿಗಳ ಆದೇಶದಂತೆ ಸಿ.ಆರ್.ಪಿ ಕಲಂ 144 ಅಡಿಯಲ್ಲಿ ಪರೀಕ್ಷಾ ಕೇಂದ್ರಗಳ ಸುತ್ತ 200ಮೀಟರ್ ಪ್ರದೇಶದ ವ್ಯಾಪ್ತಿಯಲ್ಲಿ ಪರೀಕ್ಷಾ ಅವಧಿಯಲ್ಲಿ ಪರೀಕ್ಷಾರ್ಥಿಗಳನ್ನು ಹಾಗೂ ಪರೀಕ್ಷಾ ಸಿಬ್ಬಂದಿಗಳನ್ನು ಹೊರತುಪಡಿಸಿ ಯಾವುದೇ ಸಾರ್ವಜನಿಕರ ಪ್ರವೇಶವನ್ನು ನಿಷೇಧಿಸಲಾಗಿದ್ದು ಅದರಂತೆ ಪೊಲೀಸ್ ಸಿಬ್ಬಂದಿ ಯವರಾದ ವಾಯ್.ಎಸ್.ವಾಲಿಕಾರ ಮತ್ತು ಎಸ್.ಎನ್.ತುಪ್ಪದ ರವರು ಗಲಭೆ ಉಂಟಾಗದಂತೆ ಉತ್ತಮವಾಗಿ ಕಾರ್ಯನಿರ್ವಹಿಸಿದ್ದಾರೆ.
ಕಂಟೈನ್ಮೆಂಟ್ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಕೊಠಡಿ.ಪರೀಕ್ಷಾ ಕೇಂದ್ರದಲ್ಲಿ ಕಂಟೈನ್ಮೆಂಟ್ ವ್ಯಾಪ್ತಿಯ ಒಟ್ಟು 08 ವಿದ್ಯಾರ್ಥಿಗಳು ಪರಿಕ್ಷೆ ಬರೆದಿದ್ದು ಶಿಕ್ಷಣ ಇಲಾಖೆಯಿಂದ ಅವರಿಗೆ ಪ್ರತ್ಯೇಕ ಸಾರಿಗೆ ವ್ಯವಸ್ಥೆ ಮಾಡಲಾಗಿ ಪರೀಕ್ಷಾ ಕೇಂದ್ರದಲ್ಲಿ ಪ್ರತ್ಯೇಕ ಕೊಠಡಿ ವ್ಯವಸ್ಥೆ ಮಾಡಲಾಗಿದೆ.ಈ ವಿದ್ಯಾರ್ಥಿಗಳಿಗೆ ಇಲಾಖೆಯಿಂದ N-95 ಮಾಸ್ಕ ವಿತರಿಸಲಾಗಿದೆ.
ವಲಸೆ ಮಕ್ಕಳಿಗೂ ಅವಕಾಶ.ಧಾರವಾಡ,ಉಡುಪಿ ಜಿಲ್ಲೆ,ಮುಧೋಳ ತಾಲೂಕು ಮತ್ತು ಇಳಕಲ್ಲ ನಗರದಿಂದ ಗುಡೂರ ಪರೀಕ್ಷಾ ಕೇಂದ್ರ ಆಯ್ಕೆ ಮಾಡಿಕೊಂಡು ಒಟ್ಟು 04 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ.
ಸಾಮಾಜಿಕ ಅಂತರಕಾಪಾಡುವಲ್ಲಿ ಯಶಸ್ವಿ:ಸ್ಕೌಟ್ಸ್, ಗೈಡ್ ಹಾಗೂ ಸೇವಾದಳದ ಶಿಕ್ಷರು ಮತ್ತು ಆರೋಗ್ಯ ಇಲಾಖೆಯ ಸಿಬ್ಬಂದಿಯವರು ಬೆಳಿಗ್ಗೆ 7:30ಕ್ಕೆ ಮಕ್ಕಳನ್ನು ಸಾಲಾಗಿ ಸಾಮಾಜಿಕ ಅಂತರದಲ್ಲಿ ನಿಲ್ಲಿಸಿ ಥರ್ಮಲ್ ಸ್ಕ್ಯಾನಿಂಗ್ ಮಾಡುತ್ತ ,ಪರೀಕ್ಷಾ ಕೊಠಡಿಗೆ ಹೋಗುವ ಮುಂಚೆ ಕೈಗೆ ಸ್ಯಾನಿಟೈಜರ್ ಹಾಕುತಿದ್ದರು. ಹೀಗೆ ಎಲ್ಲರ ಕಾರ್ಯವೈಖರಿ ಮಕ್ಕಳು ಮತ್ತು ಪಾಲಕರಲ್ಲಿರುವ ಕೋವಿಡ್-19 ಭಯ ದೂರ ಮಾಡಿದೆ.
ಉಚಿತ ಮಾಸ್ಕ ವಿತರಣೆ:ಪರೀಕ್ಷಾ ದಿನದಂದು ಗುಡೂರ ತಾಲೂಕಾ ಪಂಚಾಯತ್ ಸದಸ್ಯರಾದ ಶ್ರೀಮತಿ ಗೋಡಿಯವರು ಹಾಗೂ ದಿನಾಂಕ:27-06-2020ರಂದು ಇಲಕಲ್ಲ ತಹಶಿಲ್ದಾರರಾದ ವೇದವ್ಯಾಸ ಮುತಾಲಿಕ ರವರು ಪರೀಕ್ಷಾ ಕೇಂದ್ರದ 358 ವಿದ್ಯಾರ್ಥಿಗಳಿಗೆ ಉಚಿತವಾಗಿ ಮಾಸ್ಕ ವಿತರಿಸಿದರು.
ಪ್ರತಿದಿನ ಶಾಲೆಗೆ ಸ್ಯಾನಿಟೈಸರ್ ಸಿಂಪಡಣೆ:ಪರೀಕ್ಷೆ ಪ್ರಾರಂಭದ ಮುನ್ನಾದಿನ ಮತ್ತು ಪರೀಕ್ಷೆ ಪ್ರಾರಂಭದ ಹಿಂದಿನ ದಿವಸ ಹೀಗೆ ಪ್ರತಿ ಪರೀಕ್ಷೆ ನಡೆಯುವದಕ್ಕಿಂತ ಮುಂಚೆ ಗ್ರಾಮ ಪಂಚಾಯತಿ ಇಲಾಖೆಯವರಿಂದ ಪ್ರತಿ ಕೊಠಡಿ ಒಳಗು ಹೊರಗು ಸ್ಯಾನಿಟೈಸರ್ ಸಿಂಪಡಿಸಲಾಗುತ್ತಿತ್ತು.ಅದರಂತೆ ಪ್ರತಿದಿನ ಎಲ್ಲರಿಗೂ ಕುಡಿಯಲು ಫಿಲ್ಟರ್ ನೀರಿನ ವ್ಯವಸ್ಥೆಯನ್ನು ಕೂಡಾ ಮಾಡಲಾಗಿತ್ತು.
ಅಧಿಕಾರಿಗಳ ಭೇಟಿ:ಪರೀಕ್ಷಾ ಕೇಂದ್ರಕ್ಕೆ ಹುನಗುಂದ ಹಾಗೂ ಇಲಕಲ್ಲ ತಹಶಿಲ್ದಾರರು, ಹಿಂದುಳಿದ ವರ್ಗಗಳ ತಾಲೂಕಾ ಅಧಿಕಾರಿಗಳು,ಶಿಕ್ಷಣ ಇಲಾಖೆಯ ಜಿಲ್ಲಾ ಅಧಿಕಾರಿಗಳು,ತಾಲೂಕಾ ಕ್ಷೇತ್ರ ಶಿಕ್ಷಣಾಧಿಕಾರಿಗಳು ಮತ್ತು ಸ್ಥಾನಿಕ ಜಾಗೃತದಳದ ಅಧಿಕಾರಿಗಳು ಹೀಗೆ ಹಲವು ಅಧಿಕಾರಿಗಳು ಪರೀಕ್ಷಾ ಕೇಂದ್ರಕ್ಕೆ ಭೇಟಿ ನೀಡಿ ಮೆಚ್ಚುಗೆ ವ್ಯಕ್ತಪಡಿಸಿದರು.
ಮೊಬೈಲ್ ಸ್ವಾಧೀನಾಧಿಕಾರಿಗಳ ನೇಮಕ:ಪ್ರತಿ ವರ್ಷ ವಾಟ್ಸಾಪ್,ಅಥವಾ ಮೊಬೈಲ್ ಗಳ ಮೂಲಕ ಪ್ರಶ್ನೆಪತ್ರಿಕೆ ಸೋರಿಕೆ ಕಂಡುಬಂದಿದ್ದು ಅದನ್ನು ತಪ್ಪಿಸಲು ಪ್ರತಿ ಪರೀಕ್ಷಾ ಕೇಂದ್ರಕ್ಕೂ ಈ ವರ್ಷ ಮೊಬೈಲ್ ಸ್ವಾಧೀನಾಧಿಕಾರಿಗಳನ್ನು ನೇಮಕಮಾಡಲಾಗಿದ್ದು ಅವರು ಬೆಳಿಗ್ಗೆ ಸಿಬ್ಬಂದಿಯವರು ಪರೀಕ್ಷಾ ಕೇಂದ್ರಕ್ಕೆ ಆಗಮಿಸುತ್ತಿದ್ದಂತೆ ಮೊಬೈಲ್ ಗಳನ್ನು ತಮ್ಮ ಸ್ವಾಧೀನಕ್ಕೆ ಪಡೆದುಕೊಳ್ಳುತ್ತಿದ್ದರು.ಆಡಳಿತಾತ್ಮಕ ಮಾಹಿತಿ ನೀಡುವ ಕಾರಣ ಮುಖ್ಯ ಅಧಿಕ್ಷಕರಿಗೆ ಮಾತ್ರ ಮೊಬೈಲ್ ಬಳಕೆಗೆ ಅವಕಾಶ ನೀಡಲಾಗಿತ್ತು.
ಪರೀಕ್ಷಾ ಕೇಂದ್ರದ ಮುಖ್ಯ ಅಧೀಕ್ಷಕರಾಗಿ ಎಸ್.ಜಿ.ಹೊಸಮನಿ,ಉಪ ಅಧೀಕ್ಷಕರಾಗಿ ಎಸ್.ಬಿ.ದಾಸರ,ಕಸ್ಟೊಡಿಯನ್ ಎಫ್.ಎಮ್.ತುಂಬದ ಇವರನ್ನೊಳಗೊಂಡು ಪ್ರತಿ ದಿನ 21 ಕೊಠಡಿ ಮೇಲ್ವಿಚಾರಕರು ಪರೀಕ್ಷಾ ಕಾರ್ಯನಿರ್ವಹಿಸಿದ್ದು, ಉರ್ದು ಮಾಧ್ಯಮದ 25, ಕನ್ನಡ ಮಾಧ್ಯಮದ-318, ಆಂಗ್ಲ ಮಾಧ್ಯಮದ-02,ಒಟ್ಟು 345 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ನೊಂದಾಯಿಸಿದ್ದರು. ಅದರಲ್ಲಿ 10 ವಿದ್ಯಾರ್ಥಿಗಳು ಗೈರಾಗಿ ಒಟ್ಟು 335 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದಾರೆ.20 ವಿದ್ಯಾರ್ಥಿಗಳಿಗೆ ಒಂದು ಬ್ಲಾಕ್ ನಂತೆ ಒಟ್ಟು 18 ಬ್ಲಾಕ್ ಗಳನ್ನು, 01 ವಿಶೇಷ ಬ್ಲಾಕ್ ನ್ನು ಮಾಡಲಾಗಿತ್ತು.ಎಲ್ಲ ಕೊಠಡಿಗಳಿಗೂ ಸಿ.ಸಿ.ಕ್ಯಾಮರಾ ಅಳವಡಿಸಲಾಗಿದೆ.
Be the first to comment