ಕಂಟೈನಮೆಂಟ್ ವಲಯ ಹೊರತುಪಡಿಸಿ ಕಲಂ 144ರ ನಿಷೇಧಾಜ್ಞೆ ಪರಿಷ್ಕೃತ ಆದೇಶ ಹೊರಡಿಸಿದ ಜಿಲ್ಲಾಧಿಕಾರಿಗಳು

ವರದಿ: ಚಂದ್ರಕಾಂತ ಹಳ್ಳಿಖೇಡಕರ

ಜಿಲ್ಲಾಸುದ್ದಿಗಳು 



 ಬೀದರ:

ಬೀದರ್ ಜಿಲ್ಲೆಯಲ್ಲಿ ಕೋವಿಡ್-19 ಕೊರೊನಾ ವೈರಸ್ ಹರಡದಂತೆ ಮುಂಜಾಗೃತ ಕ್ರಮವಾಗಿ, ಜಿಲ್ಲೆಯಲ್ಲಿ ಪ್ರಸ್ತುತ ಜಾರಿಯಲ್ಲಿರುವ ಕಲಂ 144ರ ನಿಷೇಧಾಜ್ಞೆಯನ್ನು ಕಂಟೈನಮೆಂಟ್ ವಲಯ ಎಂದು ಘೋಷಣೆ ಮಾಡಿರುವ ಪ್ರದೇಶವನ್ನು ಹೊರತುಪಡಿಸಿ ಉಳಿದ ಪ್ರದೇಶಗಳಲ್ಲಿ ಮೇ.17ರವರೆಗೆ ಜಿಲ್ಲೆಯಾದ್ಯಂತ ಕೆಲವು ಷರತ್ತುಗಳಿಗೊಳಪಟ್ಟು ವಿಸ್ತರಿಸಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿಗಳಾದ ಡಾ.ಹೆಚ್.ಆರ್.ಮಹಾದೇವ್ ಅವರು ಆದೇಶ ಹೊರಡಿಸಿದ್ದಾರೆ.

ಬೀದರ್ ಜಿಲ್ಲೆ ಕಿತ್ತಳೆ ಬಣ್ಣ ಎಂದು ಘೋಷಿಸಿರುವುದರಿಂದ ಸರ್ಕಾರದಿಂದ ಈಗಾಗಲೆ ಕೋವಿಡ್-19 ಹರಡದಂತೆ ಕೈಗೊಂಡಿರುವ ನಿರ್ಬಂಧಗಳಲ್ಲಿ ಕೆಲವೊಂದು ವಿನಾಯಿತಿಗಳನ್ನು ನೀಡಿರುತ್ತಾರೆ. ಬೀದರ್ ಜಿಲ್ಲೆಯಲ್ಲಿ ಕೊರೊನಾ ವೈರಸ್ ಹರಡದಂತೆ ಮುಂಜಾಗೃತ ಕ್ರಮ ಜರುಗಿಸುವ ನಿಟ್ಟಿನಲ್ಲಿ ಬೀದರ್ ಜಿಲ್ಲೆಯಾದ್ಯಂತ ಸಿ.ಆರ್.ಪಿ.ಸಿ. ಕಾಯ್ದೆ 1973 ರ ಕಲಂ 144 ರನ್ವಯ ನಿಷೇಧಾಜ್ಞೆ ಜಾರಿಗೊಳಿಸಿ ಈಗಾಗಲೇ ಆದೇಶಿಸಲಾಗಿತ್ತು. ಕೊರೊನಾ ವೈರಸ್ ಸೋಂಕನ್ನು ನಿಯಂತ್ರಿಸಲು ಜನದಟ್ಟಣೆಯನ್ನು ತಡೆಗಟ್ಟುವುದು ಅನಿವಾರ್ಯವಾಗಿರುತ್ತದೆ. ಸರ್ಕಾರದ ಮಾರ್ಗಸೂಚಿಯ ಪ್ರಕಾರ ಸಾರ್ವಜನಿಕರು ಸಂಜೆ 7 ಗಂಟೆಯಿಂದ ಬೆಳಿಗ್ಗೆ 7 ಗಂಟೆವರೆಗೆ ಕರ್ಫ್ಯೂ ಜಾರಿಗೊಳಿಸಲಾಗಿರುವುದರಿಂದ ನಿಷೇಧಾಜ್ಞೆ ಆದೇಶವನ್ನು ಮೇ17ರವರೆಗೆ ವಿಸ್ತರಿಸುವುದು ಅತ್ಯವಶ್ಯಕವಾಗಿದೆ. ಆದ್ದರಿಂದ ದಂಡ ಪ್ರಕ್ರಿಯಾ ಸಂಹಿತೆ ಸಿ.ಆರ್.ಪಿ.ಸಿ. ಕಾಯ್ದೆ 1973ರ ಕಲಂ 144 ರನ್ವಯ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಜಿಲ್ಲೆಯಲ್ಲಿ ಕಂಟೈನಮೆಂಟ್ ವಲಯ ಹೊರತುಪಡಿಸಿ ನಿಷೇಧಾಜ್ಞೆ ಅದೇಶವನ್ನು ಪರಿಣಾಮಕಾರಿಯಾಗಿ ಜಾರಿಯಾಗಲು ಉಲ್ಲೇಖಿತ ಆದೇಶವನ್ನು ಮಾರ್ಪಡಿಸಿ ಪರಿಷ್ಕೃತ ಆದೇಶ ಹೊರಡಿಸಲಾಗಿದೆ.

*ಮೇ.4ರಿಂದಲೇ ಅನ್ವಯ:* ಅನಗತ್ಯವಾಗಿ ಸಾರ್ವಜನಿಕರು ಗುಂಪು ಸೇರುವುದು ಹಾಗೂ ನಿಷೇಧಾಜ್ಞೆಯ ನಿಯಮಗಳನ್ನು ಉಲ್ಲಂಘಿಸಿದಲ್ಲಿ ಸದರಿಯವರ ವಿರುದ್ಧ 188 ಐಪಿಸಿ ಅನ್ವಯ ಕಾನೂನುಕ್ರಮ ಜರುಗಿಸಲಾಗುವುದು. ಸದರಿ ಆದೇಶವು ಮೇ.4ರಿಂದ ಅನ್ವಯವಾಗುವಂತೆ ಮೇ.17ರ ಮಧ್ಯರಾತ್ರಿ 12 ಗಂಟೆಯವರೆಗೆ ಚಾಲ್ತಿಯಲ್ಲಿ ಇರುತ್ತದೆ ಮತ್ತು ಕಂಟೈನಮೆಂಟ್ ಝೋನ್ ವಲಯಕ್ಕೆ ಈ ಆದೇಶವು ಅನ್ವಯಿಸುವುದಿಲ್ಲ.
*ಷರತ್ತುಗಳು ಏನೇನು*: ಬೀದರ್ ಜಿಲ್ಲೆಯಲ್ಲಿ ಸಂಜೆ 7 ಗಂಟೆಯಿಂದ ಬೆಳಿಗ್ಗೆ 7 ಗಂಟೆವರೆಗೆ ಕರ್ಫ್ಯೂ ಜಾರಿಗೊಳಿಸಿದ್ದು ಸಾರ್ವಜನಿಕರು ತಮ್ಮ ಮನೆಗಳಲ್ಲಿಯೇ ಇರುವುದು. ಆದರೆ, ವೈದ್ಯಕೀಯ ಕ್ಷೇತ್ರ ಮತ್ತು ಇತರೆ ಅತ್ಯಗತ್ಯ ಕ್ಷೇತ್ರಗಳ ಸೇವೆಗೆ ವಿನಾಯಿತಿ ನೀಡಲಾಗಿರುತ್ತದೆ.
ಜಿಲ್ಲೆಯ ಎಲ್ಲಾ ಅಂಗಡಿ/ಮಳಿಗೆಗಳನ್ನು ಸಾಮಾಜಿಕ ಅಂತರ ಕಾಯ್ದುಕೊಂಡು ಬೆಳಿಗ್ಗೆ 7 ಗಂಟೆಯಿಂದ ಸಂಜೆ 7 ಗಂಟೆಯವರೆಗೆ ತೆರೆಯಬಹುದು. ಬೀದರ್ ಜಿಲ್ಲೆಯಲ್ಲಿ ಜನಸಾಮಾನ್ಯರು ಸಾರ್ವಜನಿಕ ಸ್ಥಳಗಳಲ್ಲಿ ಉಗುಳಬಾರದು. ಸಾರ್ವಜನಿಕರು ಫೇಸ್ ಮಾಸ್ಕ್ ಕಡ್ಡಾಯವಾಗಿ ಧರಿಸತಕ್ಕದ್ದು. ಬೀದರ್ ಜಿಲ್ಲೆಯ ಮಧ್ಯ ಮಾರಾಟದ ಸನ್ನದುಗಳಾದ ಸಿಎಲ್-2 (ವೈನ್ ಶಾಪ್ ಅಂಡ್ ಎರ‍್ಪಿ) ಮತ್ತು ಸಿಎಲ್-11 ಸಿ (ಎಂಎಸ್‌ಐಎಲ್ ಮದ್ಯೆ ಮಳಿಗೆ ) ಅಂಗಡಿಗಳನ್ನು ಬೆಳಿಗ್ಗೆ 7 ಗಂಟೆಯಿಂದ ಸಂಜೆ 7 ಗಂಟೆಯವರೆಗೆ ತೆರೆಯಬಹುದು. ಸಾರ್ವಜನಿಕರ ಅಗತ್ಯ ಸೇವೆಗಳಿಗೆ ಈ ಆದೇಶ ಅನ್ವಯಿಸುವದಿಲ್ಲ.
ಸಾಮೂಹಿಕವಾಗಿ ಧಾರ್ಮಿಕ ಹಾಗೂ ವೈಯಕ್ತಿಕ ಕಾರ್ಯಕ್ರಮಗಳನ್ನು ಆಯೋಜಿಸುವಂತಿಲ್ಲ. ಉಲ್ಲೇಖಗಳ ಕೇಂದ್ರ ಹಾಗೂ ರಾಜ್ಯ ಸರಕಾರದ ಸುತ್ತೋಲೆ ಅನ್ವಯ ಕೈಗಾರಿಕಾ ಘಟಕಗಳು, ಕಟ್ಟಡ ನಿರ್ಮಾಣಕ್ಕೆ, ಕಟ್ಟಡ ನಿರ್ಮಾಣದ ಕಚ್ಚಾ ಹಾಗೂ ಬಿಡಿ ಸಾಮಾಗ್ರಿಗಳ ಮಾರಾಟ ಪ್ರಾರಂಭಿಸಲು ಅನುಮತಿಸಿದೆ. ಅಗತ್ಯ ಮೂಲಭೂತ ಸೌಕರ್ಯಗಳ ದಿನಸಿ ಅಂಗಡಿಗಳು ಪ್ರಾರಂಭಿಸಲು ಅನುಮತಿಸಿದೆ. ಎಲ್ಲಾ ತರಹದ ದ್ವಿಚಕ್ರ ಹಾಗೂ ನಾಲ್ಕು ಚಕ್ರದ ವಾಹನಗಳ ಶೋರೂಂ ಹಾಗೂ ಸರ್ವಿಸ್ ಸೆಂಟರ್ ಪ್ರಾರಂಭಿಸಲು ಅನುಮತಿಸಿದೆ.
ಹಾರ್ಡವೇರ್, ಎಲ್‌ಕ್ಟ್ರಿಕಲ್
ಮಳಿಗೆಗಳು (ರೈತರ ಕೃಷಿ ಉದ್ಯಮಕ್ಕೆ ಸಂಬಂಧಪಟ್ಟಂತೆ) ತೆರೆಯಲು ಅನುಮತಿ ನೀಡಿದೆ. ಕೃಷಿ ಹಾಗೂ ನೀರಾವರಿಗೆ ಉತ್ತೇಜಿಸುವಂತಹ ರೈತರಿಗೆ ಅನ್ವಯಿಸತಕ್ಕ ಎಲ್ಲಾ ಅಂಗಡಿಗಳು ಪ್ರಾರಂಭಿಸಲು ಅನುಮತಿಸಿದೆ. ಸರಕಾರದ ಎಲ್ಲಾ ತರಹದ ಅಭಿವೃದ್ಧಿ ಕಾಮಗಾರಿಗಳಿಗೆ ಯಾವುದೇ ಪರವಾನಿಗೆಯ ಅವಶ್ಯಕತೆ ಇರುವುದಿಲ್ಲ. ಸಾರ್ವಜನಿಕರ ಮದುವೆಗಳಿಗೆ 50 ಜನ ಮೀರದಂತೆ ಸಂಬಂಧಪಟ್ಟ ತಹಸೀಲ್ದಾರರ ಅನುಮತಿ ಪಡೆದ ನಂತರವೇ ಆಯೋಜಿಸಲು ಅನುಮತಿಸಿದೆ. ಶವ ಸಂಸ್ಕಾರ ಪ್ರಕರಣಗಳಲ್ಲಿ ಯಾವುದೇ ಪರವಾನಿಗೆ ಅವಶ್ಯಕತೆ ಇರದೆ ಕೇವಲ ಸಂಬಂಧಪಟ್ಟ ಪೋಲಿಸ್ ಠಾಣೆಗೆ ಮಾಹಿತಿ ನೀಡಿ (20) ವ್ಯಕ್ತಿಗಳು ಮೀರದಂತೆ ಅಂತ್ಯ ಸಂಸ್ಕಾರವನ್ನು ನೆರವೇರಿಸುವುದು.
ಮಾಲ್, ಮಲ್ಟಿಪ್ಲಕ್ಸ್, ಸಿನಿಮಾ ಮಂದಿರಗಳು ತೆರೆಯಲು ಅನುಮತಿ ಇರುವುದಿಲ್ಲ. ಮಂದಿರ, ಮಸೀದಿ, ಗುರುದ್ವಾರ ಹಾಗೂ ಚರ್ಚಗಳಲ್ಲಿ ಸಾಮೂಹಿಕ ಪ್ರಾರ್ಥನೆ ನಿಷೇಧಿಸಿದೆ. ಮಸಾಜ್ ಸೆಂಟರ್ಸ, ಈಜು ಕೊಳಗಳು, ಜಿಮ್ ಗಳನ್ನು ತೆರೆಯಲು ಅನುಮತಿ ಇರುವುದಿಲ್ಲ. ಹೋಟೆಲಗಳಲ್ಲಿ ಪಾರ್ಸಲಗಳ ಮೂಲಕವೇ ಸೇವೆ ನೀಡಬೇಕು. ಪಾನ್ ಅಂಗಡಿಗಳಲ್ಲಿ ಬೀಡಿ, ಸಿಗರೇಟ್, ಗುಟಕಾ, ಪಾನ್ ಬೀಡಾಗಳ ಮಾರಾಟವನ್ನು ನಿಷೇಧಿಸಿದೆ. ಯಾವುದೇ ಸಾರ್ವಜನಿಕ ಸಭೆ ಸಮಾರಂಭಗಳಿಗೆ ಅನುಮತಿ ಇರುವುದಿಲ್ಲ ಎಂದು ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ದಂಡಾಧಿಕಾರಿಗಳ ಪ್ರಕಟಣೆ ತಿಳಿಸಿದೆ.



 

Be the first to comment

Leave a Reply

Your email address will not be published.


*