ಜೀಲ್ಲಾ ಸುದ್ದಿಗಳು
ಸಾರ್ವಜನಿಕ ಪ್ರದೇಶಗಳಲ್ಲಿ ಮಾಸ್ಕ್ ಧರಿಸದಿದ್ದರೆ, ಉಗುಳಿದರೆ ದಂಡ
ಯಾದಗಿರಿ ಅಂಬಿಗ ನ್ಯೂಸ್ ಸುದ್ದಿ:ಜಿಲ್ಲೆಯ ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಕೇಂದ್ರ ಸರ್ಕಾರದ ಆದೇಶದಂತೆ ಹಾಗೂ ಕರ್ನಾಟಕ ಪೌರಸಭೆಗಳ ಅಧಿನಿಯಮ 1964ರ ಪ್ರಕಾರ ಸಾರ್ವಜನಿಕ ಸ್ಥಳದಲ್ಲಿ ಮುಖಕವಚ (ಮಾಸ್ಕ್) ಧರಿಸದಿದ್ದಲ್ಲಿ ಅಥವಾ ಉಗುಳಿದಲ್ಲಿ ಮತ್ತು ಅಂಗಡಿಗಳ ಮುಂದೆ ಸಾಮಾಜಿಕ ಅಂತರ ಕಾಪಾಡದಿದ್ದಲ್ಲಿ ಮೇ 1ರಿಂದ ಪೊಲೀಸ್ ಇಲಾಖೆಯ ಸಹಯೋಗದೊಂದಿಗೆ ದಂಡ ವಿಧಿಸಲಾಗುವುದು ಎಂದು ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರೂ ಆಗಿರುವ ಅಪರ ಜಿಲ್ಲಾಧಿಕಾರಿಗಳಾದ ಪ್ರಕಾಶ್ ಜಿ.ರಜಪೂತ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜಿಲ್ಲೆಯ ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯ ಕಚೇರಿಗಳಲ್ಲಿ, ಕಾರ್ಖಾನೆಗಳಲ್ಲಿ, ಇತರೆ ಸಾರ್ವಜನಿಕ ಹಾಗೂ ಕೆಲಸದ ಸ್ಥಳಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಈಗಾಗಲೇ ಸೂಚಿಸಲಾಗಿದೆ.
ನವದೆಹಲಿ ಗೃಹ ವ್ಯವಹಾರಗಳ ನಿರ್ದೇಶನಾಲಯ ಕಾರ್ಯದರ್ಶಿಗಳು ಲಾಕ್‍ಡೌನ್ ಪರಿಸ್ಥಿತಿಯಲ್ಲಿ ಕೋವಿಡ್-19 ಸೋಂಕು ದೇಶದಾದ್ಯಂತ ಹರಡದಂತೆ ಪಾಲಿಸಬೇಕಾದ ಕ್ರಮಗಳ ಕುರಿತು ನಿರ್ದೇಶನ ನೀಡಿದ್ದು, ಅದರನ್ವಯ ಎಲ್ಲಾ ಸಾರ್ವಜನಿಕ ಹಾಗೂ ಕೆಲಸದ ಸ್ಥಳಗಳಲ್ಲಿ ಮುಖ ಕವಚಗಳನ್ನು ಧರಿಸುವುದು ಕಡ್ಡಾಯವಾಗಿರುತ್ತದೆ.
ಅಲ್ಲದೇ ಸಾರ್ವಜನಿಕ ಪ್ರದೇಶಗಳಲ್ಲಿ ಉಗುಳುವವರಿಗೆ ದಂಡದ ಮೂಲಕ ಶಿಕ್ಷಿಸಲು ಸೂಚಿಸಿರುತ್ತಾರೆ ಎಂದು ಅವರು ತಿಳಿಸಿದ್ದಾರೆ.
ಕೆಲವು ಸಾರ್ವಜನಿಕರು ಬೇಜವಾಬ್ದಾರಿತನದಿಂದ ಸಾರ್ವಜನಿಕ ಸ್ಥಳಗಳಲ್ಲಿ ಮುಖ ಕವಚಗಳನ್ನು ಧರಿಸದಿರುವುದು ಹಾಗೂ ಉಗುಳುವುದು ಕಂಡುಬಂದಿದ್ದು, ಸದರಿ ನಡವಳಿಕೆಯಿಂದ ಸಾರ್ವಜನಿಕರ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವುದು ಹಾಗೂ ಸೋಂಕು ಹರಡುವ ಸಾಧ್ಯತೆ ಹೆಚ್ಚಾಗುವುದು. ಈ ಹಿನ್ನೆಲೆಯಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಮುಖ ಕವಚ ಧರಿಸದಿದ್ದರೆ ಮತ್ತು ಗುಟ್ಕಾ, ತಂಬಾಕು, ಪಾನ್ ಇತರೆ ಯಾವುದೇ ವಸ್ತುವನ್ನು ಬಾಯಿಯಲ್ಲಿ ಜಗಿದು ಅಥವಾ ಹಾಗೆಯೇ ಸಾರ್ವಜನಿಕ ಸ್ಥಳದಲ್ಲಿ ಉಗುಳಿ ರೋಗ ಹರಡಲು ಕಾರಣಿಕರ್ತರಾದಲ್ಲಿ ಕರ್ನಾಟಕ ಪೌರಸಭೆಗಳ ಅಧಿನಿಯಮ 1964ರ ಪ್ರಕರಣ ಸಂಖ್ಯೆ 248 (4)ರನ್ವಯ 100 ರೂ. ದಂಡ ವಿಧಿಸಲಾಗುವುದು ಎಂದು ಅವರು ಮಾಹಿತಿ ನೀಡಿದ್ದಾರೆ.
ಅಂಗಡಿಗಳ ಮಾಲೀಕರು ತಮ್ಮ ಅಂಗಡಿಗಳ ಮುಂದೆ ಸಾಮಾಜಿಕ ಅಂತರವನ್ನು ಪಾಲಿಸದಿದ್ದಲ್ಲಿ ಪ್ರಕರಣ ಸಂಖ್ಯೆ 248 (4)ರನ್ವಯ 200 ರೂ. ದಂಡ ವಿಧಿಸಲಾಗುವುದು. ಸಾಂಕ್ರಾಮಿಕ ರೋಗ ತಡೆಗಟ್ಟಲು ನೇಮಕ ಮಾಡಲಾದ ವ್ಯಕ್ತಿ ಅಥವಾ ಅಧಿಕಾರಿಯ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಲ್ಲಿ, ಅಂಗಡಿಗಳ ಮುಂದೆ ಸಾಮಾಜಿಕ ಅಂತರ ಕಾಪಾಡಿಕೊಳ್ಳುವಂತೆ ಸೂಚಿಸಿದಾಗ ಅಂಗಡಿಯವರು ಮೊದಲ ಬಾರಿಗೆ ವಿರೋಧಿಸಿದಾಗ ಪ್ರಕರಣ ಸಂಖ್ಯೆ 249 (5) (ಖ) ರನ್ವಯ 1000 ರೂ. ದಂಡ, ಅಂಗಡಿಗಳ ಮುಂದೆ ಸಾಮಾಜಿಕ ಅಂತರ ಕಾಪಾಡಿಕೊಳ್ಳಲು ಅಂಗಡಿಯವರು ಎರಡನೇ ಬಾರಿಗೂ ವಿಫಲವಾದಲ್ಲಿ ಪ್ರಕರಣ ಸಂಖ್ಯೆ 324ರನ್ವಯ ಅಂಗಡಿಗೆ ನೀಡಲಾದ ಪರವಾನಿಗೆಯನ್ನು ರದ್ದುಪಡಿಸಲಾಗುವುದು.
ಸದರಿ ಉಲ್ಲಂಘನೆಯ ಕಟ್ಟುನಿಟ್ಟಿನ ಮೇಲ್ವಿಚಾರಣೆಗಾಗಿ ತಂಡಗಳನ್ನು ರಚಿಸಿದ್ದು, ಉಲ್ಲಂಘಿಸುವವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಎಚ್ಚರಿಕೆ ನೀಡಿದ್ದಾರೆ.
Be the first to comment