ಮುಸಲ್ಮಾನ ಬಾಂಧವರೊಂದಿಗೆ ಜಿಲ್ಲಾಧಿಕಾರಿಗಳ ಸಭೆ

ವರದಿ:- ಚಂದ್ರಕಾಂತ ಹಳ್ಳಿಖೇಡಕರ್ ಬೀದರ್.

ಜೀಲ್ಲಾ ಸುದ್ದಿಗಳು

ಬೀದರ ಏಪ್ರಿಲ್ 30 (ಅಂಬಿಗ ನ್ಯೂಸ್ ): ರಂಜಾನ್ ಹಬ್ಬ ಮತ್ತು ಬೀದರ ಓಲ್ಡ್ ಸಿಟಿನಲ್ಲಿನ ಸಾರ್ವಜನಿಕರ ಕುಂದುಕೊರತೆ ಆಲಿಸುವುದಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳಾದ ಡಾ.ಹೆಚ್.ಆರ್.ಮಹಾದೇವ್ ಅವರು ಏ.30ರಂದು ಸಭೆ ನಡೆಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿಯ ಹೊರಾಂಗಣದಲ್ಲಿ ನಡೆದ ಸಭೆಯಲ್ಲಿ ಬೀದರ ಶಾಸಕರಾದ ರಹೀಂ ಖಾನ್ ಸೇರಿದಂತೆ ಮುಸಲ್ಮಾನ ಬಾಂಧವರು ಮತ್ತು ವಿವಿಧ ಸಂಘಟನೆಗಳ ಮುಖಂಡರು ಸೇರಿದ್ದರು.
ಕಂಟೈನಮೆಂಟ್ ಏರಿಯಾದಲ್ಲಿ ಇರುವ ನಮಗೆ ಆರೋಗ್ಯ ಚಿಕಿತ್ಸೆ ಮತ್ತು ಕಿರಾಣಿ, ತರಕಾರಿ, ಹಣ್ಣು ಸೇರಿದಂತೆ ಎಲ್ಲವೂ ಇನ್ನೂ ಸಮರ್ಪಕ ರೀತಿಯಲ್ಲಿ ಸಿಗಬೇಕಿದೆ ಎಂದು ಮನವಿ ಮಾಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿಗಳು, ತಮ್ಮ ಸಲಹೆ ಸೂಚನೆಗೆ ಸ್ವಾಗತವಿದೆ. ಪ್ರತಿ ದಿನ ವೈದ್ಯಾಧಿಕಾರಿಗಳು ಮತ್ತು ಇನ್ನಿತರ ಅಧಿಕಾರಿಗಳೊಂದಿಗೆ ಸಭೆ ನಡೆಸುವಾಗ ಓಲ್ಡ್ ಸಿಟಿಯಲ್ಲಿನ ಸ್ಥಿತಗತಿ ಬಗ್ಗೆ ಕೂಡ ಚರ್ಚಿಸಲಾಗುತ್ತದೆ. ಕಂಟೈನಮೆಂಟ್ ಏರಿಯಾ ಘೋಷಿತ ಪ್ರದೇಶದಲ್ಲಿ ಕಿರಾಣಿ, ತರಕಾರಿ ಸೇರಿದಂತೆ ಅಗತ್ಯ ವಸ್ತುಗಳು ಸಾರ್ವಜನಿಕರಿಗೆ ತೊಂದರೆಯಾಗದಂತೆ ನೋಡಿಕೊಳ್ಳಲು ಸಂಬಂಧಿಸಿದ ಅಧಿಕಾರಿಗಳು ಈಗಾಗಲೇ ಕಾರ್ಯಪ್ರವೃತ್ತರಾಗಿದ್ದಾರೆ. ಏನಾದರು ಕೊರತೆಯಿದೆ ಎಂದು ತಿಳಿದ ಕೂಡಲೇ ಎಲ್ಲ ವ್ಯವಸ್ಥೆಗೆ ಕ್ರಮ ವಹಿಸಲಾಗುತ್ತಿದೆ. ಆದಾಗ್ಯೂ ಕೆಲವು ಕಡೆ ತೊಂದರೆಯಾಗಿರಬಹುದು. ಈ ಬಗ್ಗೆ ಕೂಡಲೇ ಅಧಿಕಾರಿಗಳಿಗೆ ಸೂಚಿಸಿ ಸರಿಪಡಿಸಲಾಗುವುದು ಎಂದು ಹೇಳಿದರು.
ಕಂಟೈನಮೆಂಟ್ ಪ್ರದೇಶದಲ್ಲಿ ಯಾರಿಗೇ ಆಗಲಿ ರಕ್ತದೊತ್ತಡ, ಮಧುಮೇಹ ಹೀಗೆ ಯಾವುದಾದರು ಕಾಯಿಲೆಯಿಂದ ನರಳುತ್ತಿದ್ದರೆ ಅಂತವರು ಮತ್ತು ಗರ್ಭೀಣಿಯರು ಚಿಕಿತ್ಸೆ ಪಡೆದುಕೊಳ್ಳಲು ಆಸ್ಪತ್ರೆ ವ್ಯವಸ್ಥೆ ಮಾಡಲಾಗಿದೆ. ಅಲ್ಲಿ ಸಮರ್ಪಕ ವೈದ್ಯಾಧಿಕಾರಿಗಳ ಲಭ್ಯತೆಯೂ ಇದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು. ಬ್ರಿಮ್ಸನಲ್ಲಿ ಡಯಾಲಿಸಿಸ್ ಕೇಂದ್ರಗಳು ಕಾರ್ಯನಿರ್ವಹಿಸುತ್ತಿದ್ದು, ಕಿಡ್ನಿ ವೈಫಲ್ಯ ತೊಂದರೆಗೀಡಾದವರು ಅಲ್ಲಿ ಚಿಕಿತ್ಸೆ ಪಡೆದುಕೊಳ್ಳಬಹುದು ಎಂದರು.
ಸಭೆಯಲ್ಲಿ ಜಿಪಂ ಸಿಇಓ ಗ್ಯಾನೇಂದ್ರಕುಮಾರ ಗಂಗವಾರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ.ಎಲ್.ನಾಗೇಶ, ಬೀದರ ಸಹಾಯಕ ಆಯುಕ್ತರಾದ ಅಕ್ಷಯ್ ಶ್ರೀಧರ್, ನಗರಸಭೆ ಪೌರಾಯುಕ್ತರಾದ ಬಸಪ್ಪ, ಮುಖಂಡರಾದ ವಹೀದ್ ಲಖನ್, ಸಯ್ಯದ್ ಕಿರ್ಮಾನಿ, ಅಬ್ದುಲ್ ಖದೀರ್, ಡಾ.ಮಕ್ಸೂದ್ ಚೆಂದಾ, ಮನ್ಸೂರ ಖಾದ್ರಿ, ಯೂಸುಪ್, ಅಬ್ದುಲ್ ವಹೀದ್ ಖಾಸ್ಮಿ, ಜಾವೇದ್ ಕಾಂಟ್ರಾಕ್ಟರ್, ಅಹ್ಮದ್ ಶೇಠ್, ಶಾಖೀರುಲ್ಲಾ ಖಾನ್ ಸೇರಿದಂತೆ ಇತರರು ಇದ್ದರು.

Be the first to comment

Leave a Reply

Your email address will not be published.


*