ಮನರೇಗಾ ಕಾಮಗಾರಿ ಸ್ಥಳಕ್ಕೆ ಜಿ.ಪಂ ಸಿಇಒ ಶಿಲ್ಪಾ ಶರ್ಮಾ ಭೇಟಿ

ವರದಿ:ರಾಘವೇಂದ್ರ ಮಾಸ್ತರ ಸುರಪುರ

ಅಂಬಿಗ ನ್ಯೂಸ್ ಸುದ್ದಿ: ಸುರಪುರ ತಾಲ್ಲೂಕಿನ ಖಾನಾಪುರ (ಎಸ್.ಎಚ್.) ಗ್ರಾಮ ಪಂಚಾಯಿತಿ ಗುಡ್ಡದಲ್ಲಿ ಮಳೆ ನೀರು ಇಂಗಿಸಲು ಮತ್ತು ಮಣ್ಣಿನ ಸವಕಳಿ ತಡೆಯಲು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಅನುಷ್ಠಾನಗೊಳ್ಳುತ್ತಿರುವ ಕಂದಕಗಳ ನಿರ್ಮಾಣ (ಕಾಂಟ್ರೋ ಟ್ರೆಂಚಸ್) ಕಾಮಗಾರಿ ಸ್ಥಳಕ್ಕೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಶಿಲ್ಪಾ ಶರ್ಮಾ ಅವರು ಬುಧವಾರ ಭೇಟಿ ನೀಡಿ, ಪರಿಶೀಲಿಸಿದರು.

ಕೂಲಿಕಾರರ ಜಾಬ್ ಕಾರ್ಡ್‍ಗಳನ್ನು ಪರಿಶೀಲಿಸಿದ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ಕೋವಿಡ್-19 ಸಾಂಕ್ರಾಮಿಕ ರೋಗವಾಗಿರುವುದರಿಂದ ಒಬ್ಬರಿಂದ ಒಬ್ಬರಿಗೆ ಹರಡುತ್ತದೆ. ಆದ್ದರಿಂದ ಪ್ರತಿಯೊಬ್ಬರೂ ಸಾಮಾಜಿಕ ಅಂತರ ಕಾಪಾಡಬೇಕು. ಮುಖಕ್ಕೆ ಮಾಸ್ಕ್‍ಗಳನ್ನು ಹಾಕಿಕೊಳ್ಳಬೇಕು. ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಬೇಕು ಎಂದು ಸೂಚಿಸಿದರು.

ಸುರಪುರ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಅಮರೇಶ ಅವರು ಮಾತನಾಡಿ, 52 ಜನ ಕೂಲಿಕಾರ್ಮಿಕರು ಸಾಮಾಜಿಕ ಅಂತರ ಕಾಪಾಡಿಕೊಂಡು ಕೆಲಸ ಮಾಡುತ್ತಿದ್ದಾರೆ. ಕೆಲಸದ ಸ್ಥಳದಲ್ಲಿ ಶುದ್ಧ ಕುಡಿಯುವ ನೀರು, ನೆರಳು, ಪ್ರಥಮ ಚಿಕಿತ್ಸಾ ಕಿಟ್‍ಗಳ ವ್ಯವಸ್ಥೆ ಮಾಡಲಾಗಿದೆ. ಅಲ್ಲದೆ, ಎಲ್ಲಾ ಕೂಲಿಕಾರರಿಗೆ ಗ್ರಾಮ ಪಂಚಾಯಿತಿ ವತಿಯಿಂದ ಸ್ಯಾನಿಟೈಸರ್ ಮತ್ತು ಮಾಸ್ಕ್‍ಗಳನ್ನು ವಿತರಿಸಲಾಗಿದೆ ಎಂದು ಮಾಹಿತಿ ನೀಡಿದರು.

“ಪ್ರತಿದಿನ 275 ರೂಪಾಯಿಗಳ ಕೂಲಿ ಸಿಗುತ್ತಿದೆ. ಈ ತುರ್ತು ಪರಿಸ್ಥಿತಿಯಲ್ಲಿ ಪತಿಯೊಂದಿಗೆ ನನಗೂ ಕೂಡ ಕೆಲಸ ಸಿಕ್ಕಿರುವುದರಿಂದ ಜೀವನಕ್ಕೆ ನೆರವಾಗಿದೆ” ಎಂಬುದಾಗಿ ಕೂಲಿಕಾರ್ಮಿಕರಾದ ದುರಗಮ್ಮ ಅವರು ಸಂತಸ ವ್ಯಕ್ತಪಡಿಸಿದರು.

ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿಗಳಾದ ಮುಕ್ಕಣ್ಣ ಕರಿಗಾರ, ತಾಲ್ಲೂಕು ಪಂಚಾಯಿತಿ ಸಹಾಯಕ ನಿರ್ದೇಶಕ ವಿಶ್ವನಾಥ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ದುರಗಮ್ಮ ಮಕಾಶಿ, ಸುರಪುರ ತಾಂತ್ರಿಕ ಸಹಾಯಕ ವೆಂಕಟರೆಡ್ಡಿ, ಸಿಬ್ಬಂದಿಗಳಾದ ಆಶಣ್ಣ, ಸಿದ್ದಣ್ಣ ಅವರು ಉಪಸ್ಥಿತರಿದ್ದರು.

Be the first to comment

Leave a Reply

Your email address will not be published.


*