ಹಲ್ಮಿಡಿಗಿಂತ ಪ್ರಾಚೀನ ಕನ್ನಡ ಶಾಸನ ತಾಳಗುಂದದಲ್ಲಿ ಪತ್ತೆ

ಇತಿಹಾಸ

ಲೇಖನ
– ಎಂ.ನವೀನ್ ಕುಮಾರ್, ಅಧ್ಯಕ್ಷರು,
ಕನ್ನಡ ಸಂಶೋಧನೆ ಮತ್ತು ಅಭಿವೃದ್ಧಿ ಪ್ರತಿಷ್ಠಾನ(ರಿ)
ಶಿರಾಳಕೊಪ್ಪ 9844491854

ಕನ್ನಡ ಭಾಷೆಯ ಇತಿಹಾಸವನ್ನು ಹುಡುಕುತ್ತಾ ಸಾಗಿದಂತೆಲ್ಲ ಕನ್ನಡದ ಹಿರಿತನ ಹೆಚ್ಚುತ್ತಾ ಹೋಗುವುದು ಬೆಳಕಿಗೆ ಬರುತ್ತಿದೆ. ಕನ್ನಡ ಭುವನೇಶ್ವರಿಯ ತಲೆಯ ಮೇಲಿನ ಕಿರೀಟಕ್ಕೆ ಮತ್ತೆ ಮತ್ತೆ ಗರಿಗಳು ಬಂದು ಸೇರುತ್ತಿವೆ. ಆ ಗರಿಯ ಹಿರಿಮೆಯಿಂದ ಕನ್ನಡಿಗರ ಪ್ರಾಚೀನತೆ, ಪ್ರಾವೀಣ್ಯತೆ, ಕೀರ್ತಿ ಹೆಮ್ಮರವಾಗಿ ಬೆಳೆಯುತ್ತಿದ್ದು. ಆ ಕಿರೀಟಕ್ಕೆ ಮುಕುಟವಿಟ್ಟಂತೆ ಭಾಸವಾಗುತ್ತಿರುವುದು ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲ್ಲೂಕಿನ ತಾಳಗುಂದ ಎಂಬ ಪುಟ್ಟ ಗ್ರಾಮ.
ಎರಡು ಸಾವಿರ ವರ್ಷಗಳ ಇತಿಹಾಸ ಹೊಂದಿರುವ ಈ ಗ್ರಾಮಕ್ಕೆ ಸಾತಕರ್ಣಿಯರು, ಕದಂಬರು, ಗಂಗರು, ರಾಷ್ಟ್ರಕೂಟರು, ಚಾಲುಕ್ಯರು, ಕಲಚೂರಿಗಳು, ಅಳೂಪರು, ಭಟಾರಿಗಳು, ಕಲ್ಯಾಣಿ ಚಾಲುಕ್ಯರು, ಕೆಳದಿ ಅರಸರು, ವಿಜಯನಗರ ಸಾಮಾಜ್ಯ ಸೇರಿದಂತೆ ಕನ್ನಡ ನಾಡಿನ ಎಲ್ಲಾ ಪ್ರಮುಖ ರಾಜವಂಶಗಳು ಪ್ರವೇಶಮಾಡಿದ್ದು ಅದಕ್ಕೆ ಸಂಬಂಧಪಟ್ಟ ಶಾಸನಗಳು,ವೀರಗಲ್ಲು, ಮಾಸ್ತಿಕಲ್ಲು, ನಾಣ್ಯಗಳು, ತಾಮ್ರದ ಶಾಸನ ಸೇರಿದಂತೆ ಹಲವಾರು ದಾಖಲೆಗಳು ಲಭಿಸಿವೆ.

ತಾಳಗುಂದ ಗ್ರಾಮವು ಶಿರಾಳಕೊಪ್ಪದಿಂದ 6 ಕಿ.ಮೀ. ದೂರದಲ್ಲಿದೆ. ಕನ್ನಡದ ಮೂಲ ಬೇರುಗಳು ಇಲ್ಲಿಂದಲೇ ಟಿಸಿಲೊಡೆದು ನಾಡಿನಾದ್ಯಂತ ಹಬ್ಬಿವೆ. ಕನ್ನಡದ ಪ್ರಥಮ ದೊರೆ ಮಯೂರ ವರ್ಮನ ಜನ್ಮಸ್ಥಳ, ಕನ್ನಡದ ಪ್ರಥಮ ಸಾಮ್ರಾಜ್ಯ ಕದಂಬ ಸಾಮ್ರಾಜ್ಯ ಸ್ಥಾಪನೆಯಾದ ಸ್ಥಳ, ಕನ್ನಡ ನಾಡಿನ ಪ್ರಾಚೀನ (ಪ್ರಥಮ) ದೇವಾಲಯ, ಪ್ರಾಚೀನ (ಪ್ರಥಮ) ಕೆರೆ, ಪ್ರಾಚೀನ (ಪ್ರಥಮ) ಶಿಲಾಶಾಸನ, ಪ್ರಾಚೀನ (ಪ್ರಥಮ) ಕನ್ನಡ ಶಾಲೆ, ಪ್ರಾಚೀನ (ಪ್ರಥಮ) ವಿಶ್ವವಿದ್ಯಾಲಯ ಸೇರಿದಂತೆ ಕನ್ನಡ ನಾಡಿನ ಹಲವಾರು ಪ್ರಥಮಗಳ ಕುರುಹುಗಳು ತಾಳಗುಂದ ಗ್ರಾಮದಲ್ಲಿ ಲಭ್ಯವಿದ್ದು, ಈಗ ಆ ಗುಂಪಿಗೆ ಕರ್ನಾಟಕದ ಪ್ರಾಚೀನ ಕನ್ನಡ ಶಾಸನವು ಸೇರ್ಪಡೆಯಾಗಿದೆ.
ಹಾಸನ ಜಿಲ್ಲೆಯ ಹಲ್ಮಿಡಿಯ ಶಾಸನವನ್ನು ಇದುವರೆಗೂ ಕನ್ನಡದ ಪ್ರಾಚೀನ ಶಾಸನವೆನ್ನಲಾಗುತ್ತಿತ್ತು. ಆದರೆ ಕೇಂದ್ರ ಪುರಾತತ್ವ ಇಲಾಖೆ ಹಲ್ಮಿಡಿಗಿಂತಲು ಹಳೆಯದಾದ ಶಾಸನವನ್ನು ತಾಳಗುಂದಲ್ಲಿ 2013-14 ರಲ್ಲಿ ಪತ್ತೆ ಹಚ್ಚಿದೆ. ಆ ಶಾಸನವು ಕ್ರಿ.ಶ. 370 ರಿಂದ 450ರ ಅವಧಿಯದು ಎಂದು 2016 ಡಿಸೆಂಬರ್ ತಿಂಗಳಲ್ಲಿ ಇಲಾಖೆ ಅಧಿಕೃತವಾಗಿ ಪ್ರಕಟಿಸಿದೆ. ಹೀಗೆ ಕನ್ನಡದ ಲಿಖಿತ ದಾಖಲೆಯ ಪ್ರಾಚೀನತೆ ಒಂದು ಶತಮಾನ ಹಿಂದಕ್ಕೆ ಸಾಗಿದರೂ, ಈ ಕುರಿತಾಗಿ ಕನ್ನಡದ ವಿದ್ವತ್ ಪ್ರಪಂಚ ಗಮನಕ್ಕೆ ತೆಗೆದುಕೊಂಡಿಲ್ಲ ಎಂಬುದು ವಿಷಾದಕರ ಸಂಗತಿ.
ಕನ್ನಡದ ಪ್ರಾಚೀನತೆ ಒಂದು ಶತಮಾನಗಳಷ್ಟು ಹಿಂದಕ್ಕೆ ಸಾಗುತ್ತಿದೆ ಎಂದು ಅಧಿಕೃತವಾಗಿ ಪುರಾತತ್ವ ಇಲಾಖೆ ಘೋಷಣೆ ಮಾಡಿದರೂ ಈ ಸುದ್ದಿ ಕನ್ನಡ ಸಾಹಿತಿಗಳು, ಬುದ್ದಿಜೀವಿಗಳಲ್ಲಿ ಸಂಚಲನ ಮೂಡಿಸಿಲ್ಲ.
ಈ ಶಾಸನವು ಕನ್ನಡದ ಹಿರಿತನವನ್ನು ಹೆಚ್ಚುವಂತೆ ಮಾಡಿದ್ದು, ಕ್ರಿ.ಶ.450 ರ ಹಲ್ಮಿಡಿ ಶಾಸನದ ಅವಧಿಗಿಂತ ಪೂರ್ವದಲ್ಲಿಯೆ ಕನ್ನಡ ಭಾಷೆಯ ಲಿಪಿಗಳು ಬಳಕೆಯಲ್ಲಿ ಇದ್ದವು ಎನ್ನುವುದಕ್ಕೆ ಸಾಕ್ಷಿಯಂತೆ ಲಭಿಸಿದೆ.
ಸಿಂಹಕಟಾಂಜನ (ಶಾಸನ) ಪತ್ತೆಯಾದದ್ದು ಹೇಗೆ ?
ಶಿರಾಳಕೊಪ್ಪದ ಕನ್ನಡ ಸಂಶೋಧನೆ ಮತ್ತು ಅಭಿವೃದ್ಧಿ ಪ್ರತಿಷ್ಠಾನ ಹಲವಾರು ವರ್ಷಗಳಿಂದ ತಾಳಗುಂದ ಗ್ರಾಮ ಹಾಗೂ ಕದಂಬ ಸಾಮ್ರಾಜ್ಯದ ಸ್ಥಾಪಕ ಮಯೂರ ವರ್ಮನ ಇತಿಹಾಸವನ್ನು ಹೊರಜಗತ್ತಿಗೆ ಪರಿಚಯಿಸುವ ದೃಷ್ಟಿಯಿಂದ ಕಾರ್ಯನಿರ್ವಹಿಸುತ್ತಾ ಬಂದಿದೆ. ಈ ನಿಟ್ಟಿನಲ್ಲಿ ತಾಳಗುಂದ ಗ್ರಾಮದಲ್ಲಿ ಉತ್ಖನನ ನಡೆಯಬೇಕು ಎಂದು ಪುರಾತತ್ವ ಇಲಾಖೆಯ ಮೇಲೆ ಸತತ ಒತ್ತಡ ಹೇರುತ್ತಾ ಬರಲಾಗಿತ್ತು. ಇದಕ್ಕೆ ಸ್ಪಂದಿಸಿದ ಭಾರತೀಯ ಪುರಾತತ್ವ ಇಲಾಖೆಯು ಕನ್ನಡದ ಅಧಿಕಾರಿ ಕೇಶವ ಟಿ.ಎಂ. ಅವರ ನೇತೃತ್ವದಲ್ಲಿ 2012-13ರಲ್ಲಿ ಮೊದಲ ಬಾರಿಗೆ ನಡೆಸಿದ ಪ್ರಾಯೋಗಿಕ ಉತ್ಖನನದಲ್ಲಿ ಗಂಗರ ಕಾಲದ 13 ಚಿನ್ನದ ನಾಣ್ಯಗಳು, ಕಲಚೂರಿ ಕಾಲದ ತಾಮ್ರದ ತಟ್ಟೆಗಳು, ಸಾವಿರಾರು ವರ್ಷದ ಹಿಂದಿನ ಪೂಜಾ ಸಾಮಗ್ರಿಗಳು, ಮಣ್ಣಿನ ಹಣತೆಗಳು ಲಭಿಸಿದವು.
ಇದರಿಂದ ಮತ್ತಷ್ಟು ಉತ್ತೇಜನಗೊಂಡ ಇಲಾಖೆ 2013-14 ರಲ್ಲಿ ಎರಡನೇ ಬಾರಿ ಮತ್ತೆ ಪ್ರಾಯೋಗಿಕ ಉತ್ಖನನ ನಡೆಸಿತು. ಈ ಉತ್ಖನನದಲ್ಲಿ ಅಮೂಲ್ಯವಾದ ಎರಡು ಶಾಸನಗಳು ಲಭ್ಯವಾದವು. ಒಂದು ಸಿಂಹಕಟಾಂಜನ (ಶಾಸನ)ದ ಉತ್ತರ ಭಾಗದಲ್ಲಿ ಲಭ್ಯವಾಯಿತು. ಈ ಶಾಸನ ಕ್ರಿ.ಶ. 370 ರಿಂದ 450ರ ಮಧ್ಯದ ಕಾಲದ್ದೆಂದು ಕೇಂದ್ರ ಪುರಾತತ್ವ ಇಲಾಖೆ ಪ್ರಕಟಿಸಿದೆ. ಇದೇ ಶಾಸನ ಹಲ್ಮಿಡಿಗಿಂತ ಹಳೆಯ ಶಾಸನವಾಗಿದ್ದು, ಅದರಲ್ಲಿ ವಜಿನಾಗ(ಯ್ಯ) ಎಂಬ ಅಂಬಿಗನಿಗೆ ಭೂಮಿಯನ್ನು ಉಡುಗೊರೆಯಾಗಿ ನೀಡಿದ ಬಗ್ಗೆ ಬೆಳಕು ಚೆಲ್ಲುತ್ತದೆ. ಈ ಶಾಸನದಲ್ಲಿ ತುಂಡರಿಸಿದ 7 ಸಾಲುಗಳಿದ್ದು ಸಂಸ್ಕೃತ ಹಾಗೂ ಕನ್ನಡ ಶಬ್ದಗಳನ್ನು ಬಳಸಲಾಗಿದೆ. ಸಂಸ್ಕೃತ ಪದಗಳಿಗಿಂತ ಹೆಚ್ಚಿನ ಸಂಖ್ಯೆಯ ಪದಗಳು ಕನ್ನಡ ಪದಗಳಾಗಿರುವುದರಿಂದ ಶಾಸನಶಾಸ್ತ್ರಜ್ಞರು ಈ ಶಾಸನವು ಕನ್ನಡ ಶಾಸನವೆಂದು ಘೋಷಿಸಿದ್ದಾರೆ.
ಈ ಶಾಸನ ಸುಮಾರು 1.8 ಮೀ ಆಳದಲ್ಲಿ ಭೂಗತವಾಗಿತ್ತು. ಈ ಶಾಸನದ ಮೇಲಿನ ಮಣ್ಣಿನ ಪದರದಲ್ಲಿ ಕಾಕುತ್ಸವರ್ಮನ ಕಾಲದ ನಾಣ್ಯಗಳು ಲಭ್ಯವಾದರೆ ಅದರ ಮೇಲಿನ ಮಣ್ಣಿನ ಪದರದಲ್ಲಿ ಗಂಗರ ಕಾಲದ ನಾಣ್ಯಗಳು, ಕಲ್ಯಾಣ ಚಾಲುಕ್ಯರು, ಕಲಚೂರಿಗಳ ಕಾಲದ ವಸ್ತುಗಳು ಲಭಿಸಿವೆ. ಈ ಎಲ್ಲಾ ಭೌಗೋಳಿಕ ಅಂಶಗಳನ್ನು ಗಮನಿಸಿದರೆ ಸಿಂಹಕಟಾಂಜನವು ಕಾಕುತ್ಸವರ್ಮನ ಹಿಂದಿನ ತಲೆಮಾರಿನ ಶಾಸನವೆನ್ನುವುದು ಸ್ಪಷ್ಟವಾಗುತ್ತದೆ.
ಶಾಸನದಲ್ಲಿನ ಕೆಲವು ಕನ್ನಡ ಪದಗಳು:
ಕೊಟ್ಟಾ, ಕೊಟ್ಟಾರ್, ನಾಲ್ಕು, ಬೋಯಿಗರ್, ನಾವಿಡ, ನಾಗ(ಯ್ಯ), ಹಲಮಿ.
ಸಿಂಹಕಟಾಂಜನದ ದಕ್ಷಿಣದಲ್ಲಿ ಮತ್ತೊಂದು ಶಾಸನ ಸಹ ಕ್ರಿ.ಶ 450ಕ್ಕೂ ಹಿಂದಿನ ಶಾಸನ ಎನ್ನಲಾಗಿದ್ದು, ತುಂಡರಿಸಿದ 2 ಸಾಲುಗಳು ಮಾತ್ರ ಲಭ್ಯವಾಗಿರುವುದರಿಂದ ಸಾಕಷ್ಟು ಮಾಹಿತಿಗಳು ಲಭ್ಯವಾಗಿಲ್ಲ.
ತಾಳಗುಂದದಲ್ಲಿ ಲಭ್ಯವಾದ ಶಾಸನ ಕನ್ನಡದ ಪ್ರಾಚೀನ ಶಾಸನವೆಂದು ಪುಷ್ಟೀಕರಿಸಲು ಇರುವ ಐತಿಹಾಸಿಕ ದಾಖಲೆಗಳು:
1. ಕನಿಷ್ಠ ಎರಡು ಸಾವಿರ ವರ್ಷಗಳ ಇತಿಹಾಸ ಹೊಂದಿರುವ ತಾಳಗುಂದ ಗ್ರಾಮದಲ್ಲಿರುವ ಪ್ರಣವಲಿಂಗೇಶ್ವರ ದೇವಾಲಯವು ದಕ್ಷಿಣ ಭಾರತದಲ್ಲಿಯೇ ಪ್ರಾಚೀನ ಶಿವಾಲಯವಾಗಿದ್ದು, ಅದು ಕನಿಷ್ಠ ಎರಡು ಸಾವಿರ ವರ್ಷಗಳ ಇತಿಹಾಸ ಹೊಂದಿದೆ. ಕ್ರಿ.ಶ.450ರ ಸ್ತಂಭ ಶಾಸನದ ಪ್ರಕಾರ ಶಾತಕರ್ಣಿಯರಿಂದ ಪೂಜಿಸಲ್ಪಡುತ್ತಿದ್ದ ಮಹದೇವ (ಪ್ರಣವಲಿಂಗೇಶ್ವರ). ಅಂದರೆ ಶಾತವಾಹನರು ಕ್ರಿ.ಪೂ 2ನೇ ಶತಮಾನದಿಂದ, ಕ್ರಿ.ಶ.2ನೇ ಶತಮಾನದವರೆಗೂ ಇಲ್ಲಿ ಆಳ್ವಿಕೆ ನಡೆಸಿದ್ದಾರೆ ಎಂಬುದು ಇತಿಹಾಸಕಾರರ ಲೆಕ್ಕಾಚಾರ. ಆ ಅವಧಿಯಲ್ಲಿ ನಾಡಿನ ದೊರೆ ತಾಳಗುಂದಲ್ಲಿ ಪೂಜೆ ಸಲ್ಲಿಸುತ್ತಾನೆಂದರೆ, ಖಂಡಿತ ಆ ಅವಧಿಯಲ್ಲಿ ಇದು ಉನ್ನತ ಧಾರ್ಮಿಕ ಹಾಗೂ ಶೈಕ್ಷಣಿಕ ಕೇಂದ್ರ ಆಗಿರುವ ಸಾಧ್ಯತೆ ಇದೆ.
2. ಪ್ರಾಚೀನ ಕರ್ನಾಟಕದಲ್ಲಿ ಶಿಕ್ಷಣ ಎಂದರೆ ನೆನಪಾಗುವುದು ತಾಳಗುಂದದ ಅಗ್ರಹಾರ, ಏಕೆಂದರೆ ಕ್ರಿ.ಶ.450ರ ತಾಳಗುಂದ ಸ್ತಂಭ ಶಾಸನದ ಪ್ರಕಾರ ಆ ಹೊತ್ತಿಗೆ (3ನೇ ಶತಮಾನದ ಆದಿಯಲ್ಲಿ) ಮಯೂರ ವರ್ಮ ಪ್ರಾಥಮಿಕ ಶಿಕ್ಷಣವನ್ನು ತಾಳಗುಂದದಲ್ಲಿ ಪಡೆದು ಉನ್ನತ ವ್ಯಾಸಂಗಕ್ಕಾಗಿ ತನ್ನ ಗುರುಸಮಾನನಾದ ಅಜ್ಜ ವೀರಶರ್ಮರ ಜೊತೆಗೆ ಕಂಚಿಗೆ ಹೋಗುತ್ತಾನೆ. (ಇಅ ಗಿ ಖಏ176) ಮಯೂರ ವರ್ಮಗಿಂತ ಪೂರ್ವದಲ್ಲಿ ಸಣ್ಣಮಟ್ಟದ ಅಧ್ಯಯನಕ್ಕೆ ಇಲ್ಲಿ ವ್ಯವಸ್ಥೆ ಇತ್ತು ಎನ್ನುವುದಕ್ಕೆ ಪುರಾವೆಯೆನಿಸುತ್ತದೆ.
3. ಹಲ್ಮಿಡಿ ಶಾಸನದ ಕನ್ನಡ ಪದ ಪ್ರಯೋಗ ಮತ್ತು ಅಕ್ಷರಗಳ ವಿನ್ಯಾಸವನ್ನು ಗಮನಿಸಿದರೆ, ಕ್ರಿ.ಶ. 450 ಕ್ಕೂ ಮೊದಲೇ ಕನ್ನಡ ಲಿಪಿಗಳು ಬಳಕೆಯಲ್ಲಿ ಇದ್ದವು ಎನ್ನುವುದು ಸಾಮಾನ್ಯ ಅಭಿಪ್ರಾಯ. ಅದಕ್ಕೆ ಪೂರಕ ಎನ್ನುವಂತೆ ಇತ್ತೀಚಿಗೆ ನಡೆದ ಧಾರವಾಡ ಸಾಹಿತ್ಯ ಸಂಭ್ರಮದಲ್ಲಿ ಲಿಪಿ ತಜ್ಞ ಷ.ಶೆಟ್ಟರ್ ಅವರು ಕನ್ನಡ ಲಿಪಿಗಳು ಹಲ್ಮಿಡಿಗಿಂತ ಪೂರ್ವದಲ್ಲಿ ಬಳಕೆಯಲ್ಲಿದ್ದು, 3ನೇ ಶತಮಾನದಲ್ಲಿ ಕನ್ನಡ ಲಿಪಿಗಳ ಅನ್ವೇಷಣೆ ಅಥವಾ ಉಗಮವಾಗಿರಬಹುದು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಹಾಗಾಗಿ, ಆ ಕಾಲಘಟ್ಟದಲ್ಲಿ ಕರ್ನಾಟಕದಲ್ಲಿ ತಾಳಗುಂದ ಹೊರತು ಮತ್ಯಾವ ಪ್ರದೇಶದಲ್ಲಿಯೂ ಸಹ ಉನ್ನತ ಅಧ್ಯಯನ ಕೇಂದ್ರಗಳು ಕಾಣಸಿಗುವುದಿಲ್ಲ. ಹಾಗಾಗಿ, ತಾಳಗುಂದದಲ್ಲಿ ಹಲ್ಮಿಡಿಗಿಂತ ಪ್ರಾಚೀನ ಶಾಸನ ಲಭ್ಯವಾಗಿರುವುದು ಸಹಜ ಬೆಳವಣಿಗೆ.
4. ಇಲ್ಲಿನ ಒಂದು ಶಾಸನವು ಕದಂಬ ದೊರೆ ಮಯೂರ ವರ್ಮ 18 ಅಶ್ವಮೇದ ಯಾಗಗಳನ್ನು ಯಶಸ್ವಿಯಾಗಿ ಮಾಡಿದ್ದಾಗಿ, ಅದನ್ನು ಯಶಸ್ವಿಯಾಗಿ ನಡೆಸಿಕೊಟ್ಟ ಬ್ರಾಹ್ಮಣರಿಗೆ 144 ಹಳ್ಳಿಗಳ ದಾನ ನೀಡಿದ್ದಾಗಿ ಉಲ್ಲೇಖಿಸುತ್ತದೆ. ಅಂದರೆ ಮಯೂರನ ಅವಧಿಯಲ್ಲಿ (ಕ್ರಿ.ಶ. 325-370) ಶಿಕ್ಷಣ ಉನ್ನತ ಸ್ಥಾನದಲ್ಲಿತ್ತು ಎನ್ನಬಹುದು. (ಇಅ ಗಿ ಖಏ 186)
5. ಹಲ್ಮಿಡಿ ಶಾಸನವು ಕೂಡ ಕದಂಬರ ಶಾಸನವಾಗಿದ್ದು ಶಾಸನವನ್ನು ಅಂದಿನ ಕಾಲದಲ್ಲಿ ರಚನೆ ಮಾಡಿದ ವ್ಯಕ್ತಿಯು, ಆ ಅವಧಿಯ ಪ್ರಖ್ಯಾತ ವಿದ್ವಾಂಸನಾಗಿರುವ ಸಾಧ್ಯತೆಯಿದ್ದು, ಅಂತಹ ವಿದ್ವಾಂಸನಿಗೆ ಶಾಸನ ರಚನೆ ಜ್ಞಾನ ನೀಡುವಂಥ ಶಿಕ್ಷಣ ಕೇಂದ್ರಗಳು ತಾಳಗುಂದ ಹೊರತು ಪಡಿಸಿ ರಾಜ್ಯದ ಯಾವುದೇ ಮೂಲೆಯಲ್ಲಿ ಇದ್ದ ಬಗ್ಗೆ ಈ ವರೆಗೂ ಮಾಹಿತಿ ಕಂಡು ಬಂದಿಲ್ಲ. ಹಾಗಾಗಿ, ಆತನ ಅಭ್ಯಾಸ ಕೂಡ ತಾಳಗುಂದಲ್ಲಿ ಆಗಿರುವ ಸಾಧ್ಯತೆ ಇದೆ. ಅದಕ್ಕೆ ಪೂರಕ ಎನ್ನುವಂತೆ ಸಿಂಹಕಟಾಂಜನ ತಾಳಗುಂದಲ್ಲಿ ಸಿಕ್ಕಿದೆ.
6. ಲಿಪಿಯ ರಚನೆಯಲ್ಲೂ ತಾಳಗುಂದದ ಶಿಕ್ಷಣ ವ್ಯವಸ್ಥೆ ಇಡೀ ದಕ್ಷಿಣ ಭಾರತದಲ್ಲೇ ಉತ್ತಮವಾಗಿತ್ತೆಂದು ಹೇಳಬಹುದು. ಭಾರತದ ಇತಿಹಾಸದಲ್ಲಿ ಕ್ರಿ.ಶ.450ರ ವೇಳೆಗೆ ತಾಳಗುಂದ ಸ್ಥಂಭ ಶಾಸನದ ಅಕ್ಷರಗಳ ಕ್ರಮಬದ್ದತೆ, ಶಿಸ್ತು, ವಿನ್ಯಾಸ, ಇದರ ಜೊತೆಗೆ ಅಕ್ಷರಗಳ ಸೌಂದರ್ಯಗಳಲ್ಲಿ ಕಂಡುಬರುವ ಶಿಷ್ಟತೆ ಆ ವೇಳೆಯ ಯಾವ ಶಿಲಾ ಶಾಸನದಲ್ಲೂ ಕಾಣಸಿಗುವುದಿಲ್ಲ. (ಹಳಗನ್ನಡ ಲಿಪಿ, ಲಿಪಿಕಾರ, ಲಿಪಿ ವ್ಯವಸಾಯ- ಷ.ಶೆಟ್ಟರ್ ಪುಟ ಸಂಖ್ಯೆ-29)
ಈ ಎಲ್ಲಾ ಅಂಶಗಳನ್ನು ಪರಿಗಣಿಸಿದರೆ ಇತಿಹಾಸ ಸಂಶೋಧಕರಾದ ಷ.ಶೆಟ್ಟರ್ ಅವರ ಅಭಿಪ್ರಾಯದಂತೆ ಕನ್ನಡ ಲಿಪಿಗಳು 3ನೇ ಶತಮಾನದ ಆಸುಪಾಸಿನಲ್ಲಿ ಬಳಕೆಗೆ ಬಂದಿರಬೇಕು. ಹಾಗಾಗಿದ್ದರೆ, ಆ ಲಿಪಿಗಳ ಉಗಮ ಶಿವಮೊಗ್ಗ ಜಿಲ್ಲೆಯ ತಾಳಗುಂದ ಗ್ರಾಮದಲ್ಲಿಯೇ ಆಗಿರುವ ಸಾಧ್ಯತೆಯನ್ನು ಅಲ್ಲಗಳೆಯಲಾಗದು.
ಈ ಎಲ್ಲಾ ಪೂರಕ ಸಾಕ್ಷ್ಯಗಳು ಲಭಿಸಬೇಕಾದರೆ, ತಾಳಗುಂದದಲ್ಲಿ ಪೂರ್ಣ ಪ್ರಮಾಣದಲ್ಲಿ ಉತ್ಖನನ ಕಾರ್ಯನಡೆಯಬೇಕು. ಇನ್ನೂ ಸಾಕಷ್ಟು ಅಧ್ಯಯನವಾದರೆ ಕನ್ನಡದ ಎಲ್ಲಾ ಮೂಲ ಬೇರುಗಳು ಇಲ್ಲಿ ಲಭಿಸುವ ಸಾಧ್ಯತೆಯಿದೆ. ಪುರಾತತ್ವ ಇಲಾಖೆ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಇಲ್ಲಿ ಇನ್ನೂ ಹೆಚ್ಚಿನ ಉತ್ಖನನ ಕಾರ್ಯ ನಡೆಸಬೇಕು ಎಂದು ಸ್ಥಳೀಯರು ಒತ್ತಾಯಿಸುತ್ತಿದ್ದಾರೆ.

 

Be the first to comment

Leave a Reply

Your email address will not be published.


*