ಕೇರಳ ಸಚಿವರ ನೇತೃತ್ವದಲ್ಲಿ ಕ್ಯಾಂಪಾ ಹಣಕ್ಕಾಗಿ ಕೇಂದ್ರಕ್ಕೆ ನಿಯೋಗ ಈಶ್ವರ ಖಂಡ್ರೆ ನೇತೃತ್ವದ ಸಚಿವರ ಮಟ್ಟದ ಸಭೆಯಲ್ಲಿ ನಿರ್ಣಯ

ಬೆಂಗಳೂರು, ಆ.12: ಆನೆಗಳು ನಾಡಿಗೆ ಬಾರದಂತೆ ತಡೆಯಲು ರೈಲ್ವೆ ಬ್ಯಾರಿಕೇಡ್ ಉತ್ತಮ ಸಾಧನವಾಗಿದ್ದು, ಇದರ ನಿರ್ಮಾಣಕ್ಕೆ ಹೆಚ್ಚಿನ ಹಣಕಾಸಿನ ಅಗತ್ಯವಿದೆ. ಆದರೆ, ಕೇಂದ್ರ ಸರ್ಕಾರ ನಮ್ಮ ಕ್ಯಾಂಪಾ ನಿಧಿಯನ್ನೇ ಇದಕ್ಕೆ ನೀಡುತ್ತಿಲ್ಲ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ಬೇಸರ ವ್ಯಕ್ತಪಡಿಸಿದ್ದಾರೆ.


ಬೆಂಗಳೂರಿನ ಜಿಕೆವಿಕೆ ಆವರಣದಲ್ಲಿ ನಡೆದ ಸಚಿವರ ಮಟ್ಟದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಕ್ಯಾಂಪಾ ಹಣವನ್ನು ರೈಲ್ವೆ ಬ್ಯಾರಿಕೇಡ್ ಗೆ ಬಿಡುಗಡೆ ಮಾಡುವ ಕುರಿತಂತೆ ಇಂದು ಇಲ್ಲಿ ಪಾಲ್ಗೊಂಡಿರುವ ಎಲ್ಲ ಸಚಿವರೂ ಕೇಂದ್ರ ಹವಾಮಾನ ಬದಲಾವಣೆ, ಪರಿಸರ ಮತ್ತು ಅರಣ್ಯ ಸಚಿವರಿಗೆ ಮನವಿ ಸಲ್ಲಿಸೋಣ ಎಂಬ ಸಲಹೆ ನೀಡಿದರು.
ಕೇರಳದ ಅರಣ್ಯ ಸಚಿವ ಎ.ಕೆ. ಸಸೀಂದ್ರನ್ ಈ ಉಪಕ್ರಮದ ನೇತೃತ್ವವನ್ನು ತಾವು ವಹಿಸುವುದಾಗಿ ಸ್ವಯಂ ಪ್ರೇರಿತವಾಗಿ ಪ್ರಕಟಿಸಿದರು. ಮಹಾರಾಷ್ಟ್ರ ಮತ್ತು ಇತರ ರಾಜ್ಯಗಳ ಅರಣ್ಯ ಸಚಿವರನ್ನೂ ಕರೆದುಕೊಂಡು ದೆಹಲಿಗೆ ನಿಯೋಗ ತೆರಳುವ ಮೂಲಕ ಕೇಂದ್ರ ಸಚಿವರನ್ನು ಭೇಟಿ ಮಾಡಿ ಮನವಿ ಸಲ್ಲಿಸಲು ದಿನಾಂಕ ನಿಗದಿ ಮಾಡುವಂತೆ ಈಶ್ವರ ಖಂಡ್ರೆ ತಿಳಿಸಿದರು. ಸಭೆ ಸಮ್ಮತಿಸಿತು.
ಲಾಂಟನಾ ಮತ್ತು ಸನ್ನಾ ಸಮಸ್ಯೆ ಪರಿಹಾರಕ್ಕೆ ಬೇರೆ ರಾಜ್ಯಗಳಲ್ಲಿ ಕೈಗೊಂಡಿರುವ ಕ್ರಮಗಳ ಕುರಿತ ಚರ್ಚೆಯ ವೇಳೆ, ನಿರಂತರವಾಗಿ ಲಾಂಟನಾವನ್ನು ಮೂಲೋತ್ಪಾಟನೆ ಮಾಡುವುದೇ ಪರಿಹಾರ ಎಂಬ ಅಭಿಪ್ರಾಯ ವ್ಯಕ್ತವಾಯಿತು.
ಕೆಲವು ಆದಿವಾಸಿಗಳು ಲಾಂಟನಾದಿಂದ ಅಲಂಕಾರಿಕ ವಸ್ತು ಮತ್ತು ವನ್ಯಮೃಗಗಳ ಪ್ರತಿಕೃತಿ ನಿರ್ಮಾಣ ಮಾಡುತ್ತಿದ್ದು, ಅವರೇ ಸ್ವತಃ ಮುಂದೆ ಬಂದು ಲಾಂಟನಾ ಕಳೆ ತೆಗೆಯುವುದಾದರೆ ಅವರಿಗೆ ಅವಕಾಶ ಕೊಡುವ ಬಗ್ಗೆಯೂ ಚರ್ಚಿಸಲಾಯಿತು.
ಆನೆ-ಮಾನವ ಸಂಘರ್ಷದಲ್ಲಿ ಮೃತಪಟ್ಟವರಿಗೆ ಮತ್ತು ಬೆಳೆ ನಷ್ಟಕ್ಕೊಳಗಾದವರಿಗೆ ನೀಡಲಾಗುತ್ತಿರುವ ಪರಿಹಾರ, ಆನೆಗಳು ನಾಡಿಗೆ ಬಾರದಂತೆ ತಡೆಯಲು ಯಾವ ಯಾವ ರಾಜ್ಯದಲ್ಲಿ ಯಾವ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂಬ ಬಗ್ಗೆ ಈಶ್ವರ ಖಂಡ್ರೆ ಅವರು ಇತರ ರಾಜ್ಯಗಳ ಸಚಿವರು ಮತ್ತು ಅಧಿಕಾರಿಗಳೊಂದಿಗೆ ಸಮಾಲೋಚಿಸಿ ಮಾಹಿತಿ ಪಡೆದರು.
ಜಾರ್ಖಂಡ್ ನ ಅರಣ್ಯ ಸಚಿವ ಬೈದ್ಯನಾಥ್ ರಾಮ್, ತಮಿಳುನಾಡು ಅರಣ್ಯ ಸಚಿವ ಎಂ. ಮಥಿವೆಂಥನ್, ತೆಲಂಗಾಣ ಅರಣ್ಯ ಸಚಿವೆ ಕೊಂಡ ಸುರೇಖಾ ಪಾಲ್ಗೊಂಡಿದ್ದರು.

ಆನೆ – ಮಾನವ ಸಂಘರ್ಷ ತಗ್ಗಿಸಲು ತಂತ್ರಜ್ಞಾನದ ಬಳಕೆ
ಮಾನವ-ವನ್ಯಜೀವಿ ಸಂಘರ್ಷ ನಿಯಂತ್ರಣಕ್ಕೆ ಪ್ರಥಮ ಆದ್ಯತೆ: ಈಶ್ವರ ಖಂಡ್ರೆ
ಬೆಂಗಳೂರು, ಆ.12: ಮಾನವ-ವನ್ಯಜೀವಿ ಸಂಘರ್ಷದ ಸಮಸ್ಯೆಯನ್ನು ಪರಿಹರಿಸುವುದು ಸರ್ಕಾರದ ಪ್ರಥಮ ಆದ್ಯತೆಯಾಗಿದೆ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ತಿಳಿಸಿದ್ದಾರೆ.
ಬೆಂಗಳೂರಿನ ಗಾಂಧೀಕೃಷಿ ವಿಜ್ಞಾನ ಕೇಂದ್ರ (ಜಿ.ಕೆ.ವಿ,ಕೆ.)ದಲ್ಲಿ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಇಲಾಖೆ ವಿಶ್ವ ಆನೆ ದಿನದ ಅಂಗವಾಗಿ ಆಯೋಜಿಸಿದ್ದ ಆನೆ- ಮಾನವ ಸಂಘರ್ಷ ನಿರ್ವಹಣೆ ಕುರಿತ ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ಮಾತನಾಡಿದ ಅವರು, ಜನರ ಮತ್ತು ವನ್ಯಜೀವಿಗಳ ಸುರಕ್ಷತೆ ಖಾತ್ರಿಪಡಿಸಲು ತಮ್ಮ ಇಲಾಖೆ ಹಲವಾರು ಕ್ರಮಗಳನ್ನು ಕೈಗೊಂಡಿದೆ ಎಂದರು.
ತಂತ್ರಜ್ಞಾನದ ಅಳವಡಿಕೆ ಮತ್ತು ಸಮುದಾಯ-ಚಾಲಿತ ಉಪಕ್ರಮಗಳೊಂದಿಗೆ ಆನೆಗಳು ನಾಡಿಗೆ ಬಂದು ಹಾನಿ ಮಾಡುವುದನ್ನು ನಿಯಂತ್ರಿಸಲು ಕರ್ನಾಟಕ ರಾಜ್ಯವು ಶ್ರಮಿಸುತ್ತಿದ್ದು, ಈ ಸವಾಲು ಎದುರಿಸುವಲ್ಲಿ ಮುಂಚೂಣಿಯಲ್ಲಿದೆ ಎಂದು ಈಶ್ವರ ಖಂಡ್ರೆ ತಿಳಿಸಿದರು.
ಮಾನವ- ವನ್ಯಜೀವಿ ಸಂಘರ್ಷ ಕೇವಲ ಕರ್ನಾಟಕ ಅಥವಾ ಭಾರತದ ಯಾವುದೋ ಒಂದು ರಾಜ್ಯದ ಸಮಸ್ಯೆಯಲ್ಲ ಬದಲಾಗಿ ಜಾಗತಿಕ ಸಮಸ್ಯೆಯಾಗಿದೆ. ಮಾನವ-ಆನೆ ಸಂಘರ್ಷವು ಪರಿಸರ, ಸಾಮಾಜಿಕ ಮತ್ತು ಆರ್ಥಿಕ ಅಂಶಗಳನ್ನು ಒಳಗೊಂಡ ಒಂದು ಸಂಕೀರ್ಣ ಸಮಸ್ಯೆಯಾಗಿದೆ ಎಂದರು.
ಅಮೂಲ್ಯವಾದ ಜೀವ ಹಾನಿ, ಬೆಳೆ ಹಾನಿಗೆ ಕಾರಣವಾಗುತ್ತಿರುವ ಈ ಸಮಸ್ಯೆಗೆ ಸುಸ್ಥಿರ ಪರಿಹಾರಗಳನ್ನು ಕಂಡುಕೊಳ್ಳಲು ನಮ್ಮ ಸಂಘಟಿತ ಮತ್ತು ಸಹಯೋಗದ ಪ್ರಯತ್ನಗಳು ಅಗತ್ಯ ಮತ್ತು ಅನಿವಾರ್ಯ ಎಂದು ತಾವು ಭಾವಿಸುವುದಾಗಿ ತಿಳಿಸಿದರು.
ಆದಿವಾಸಿಗಳ ಕೊಡುಗೆ ಅಪಾರ:
ರಾಜ್ಯದ ಅರಣ್ಯವನ್ನು ಜೀವನ ಮತ್ತು ಜೀವನೋಪಾಯಕ್ಕಾಗಿ ಅವಲಂಬಿಸಿರುವ ಅಸಂಖ್ಯಾತ ಸಮುದಾಯಗಳೂ ಇದ್ದು, ಅರಣ್ಯ ಸಂರಕ್ಷಣೆಯಲ್ಲಿ ಇವರ ಪಾತ್ರ ಮಹತ್ವದ್ದು ಎಂದರು. ಕಾಡು ಎಂದರೆ ಕೇವಲ ಮರ, ಗಿಡ, ಪ್ರಾಣಿ, ಪಕ್ಷ ಅಷ್ಟೇ ಅಲ್ಲ. ಕಾಡು ಈ ಭೂ ಗ್ರಹದ ಜೀವನಾಡಿ, ಎಲ್ಲ ಜೀವಜಂತುಗಳ ಉಸಿರು. ನಮಗೆ ಶುದ್ಧ ಗಾಳಿ, ಶುದ್ಧ ನೀರು, ಫಲವತ್ತಾದ ಮಣ್ಣು ಲಭಿಸುವುದೇ ಅರಣ್ಯದಿಂದ ಎಂದು ಪ್ರತಿಪಾದಿಸಿದರು.
ಕರ್ನಾಟಕ ಸರ್ಕಾರ ಅರಣ್ಯದಲ್ಲಿ ಕಳ್ಳಬೇಟೆ ನಿಗ್ರಹಕ್ಕೆ ಕೈಗೊಂಡಿರುವ ಕಟ್ಟುನಿಟ್ಟಿನ ಕ್ರಮಗಳಿಂದಾಗಿ ವನ್ಯಮೃಗಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. 2023ರ ಆನೆ ಗಣತಿಯ ಪ್ರಕಾರ ರಾಜ್ಯದಲ್ಲಿ 6395 ಆನೆಗಳಿದ್ದು, ಗಜ ಸಂಖ್ಯೆಯಲ್ಲಿ ರಾಜ್ಯ ಪ್ರಥಮ ಸ್ಥಾನದಲ್ಲಿದೆ. ಅದೇ ರೀತಿ 563 ಹುಲಿ ಹೊಂದಿರುವ ಕರ್ನಾಟಕ ವ್ಯಾಘ್ರಗಳ ಸಂಖ್ಯೆಯಲ್ಲಿ 2ನೇ ಸ್ಥಾನದಲ್ಲಿದೆ ಇಂದು ರಾಜ್ಯಕ್ಕೆ ಹೆಮ್ಮೆಯ ಸಂಗತಿ ಎಂದು ಅರಣ್ಯ ಸಚಿವರು ಹೇಳಿದರು.
ರಾಜ್ಯದಲ್ಲಿ ಪ್ರತಿ ವರ್ಷ ಸರಾಸರಿ 30 ಜನರು ಆನೆಗಳ ದಾಳಿಯಿಂದ ಸಾವಿಗೀಡಾಗುತ್ತಿರುವುದು ನೋವಿನ ಸಂಗತಿ ಎಂದು ಹೇಳಿದ ಅವರು, ಈ ಸಮ್ಮೇಳನದಲ್ಲಿ ನಡೆಯುವ ಚಿಂತನ ಮಂಥನದ ಫಲವಾಗಿ, ಮಾನವ- ಆನೆಗಳ ಸಂಘರ್ಷ ನಿರ್ವಹಣೆಗೆ ಸೂಕ್ತ ಪರಿಹಾರ ಹೊರಹೊಮ್ಮಲಿ ಎಂದು ಆಶಿಸಿದರು.
ನಮ್ಮ ಪೂರ್ವಿಕರು ಕಾಡಿನೊಂದಿಗೆ ಮತ್ತು ವನ್ಯಜೀವಿಗಳೊಂದಿಗೆ ಸಹಬಾಳ್ವೆ ಮಾಡುವುದನ್ನು ಕಲಿತಿದ್ದರು. ಇಂದಿಗೂ ಕಾಡಿನಲ್ಲೇ ವಾಸಿಸುವ ಆದಿವಾಸಿಗಳು ವನ್ಯಜೀವಿ ದಾಳಿಯಿಂದ ಮೃತಪಡುವುದು ಅಪರೂಪದಲ್ಲೇ ಅಪರೂಪ. ಆದರೆ ನಗರ ವಾಸಿಗಳಾದ ನಾವು ಈಗ ಆಧುನಿಕ ಯುಗದಲ್ಲಿ ಆ ಸಹಬಾಳ್ವೆಯ ಸಂವೇದನೆ ಕಳೆದುಕೊಳ್ಳುತ್ತಿದ್ದೇವೆ ಎಂದು ಈಶ್ವರ ಖಂಡ್ರೆ ಅಭಿಪ್ರಾಯಪಟ್ಟರು.
ವನ್ಯಜೀವಿ ಮತ್ತು ಮಾನವ ಸಂಘರ್ಷ ತಡೆಗೆ ನಮ್ಮ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹೆಚ್ಚಿನ ಆಸಕ್ತಿ ತಳೆದಿದ್ದಾರೆ. 2023-24 ಸಾಲಿನಲ್ಲಿ ರೈಲ್ವೆ ಬ್ಯಾರಿಕೇಡ್ ನಿರ್ಮಾಣಕ್ಕಾಗಿ 100 ಕೋಟಿ ರೂ. ಹೆಚ್ಚುವರಿ ಅನುದಾನ ನೀಡಿದ್ದಾರೆ ಎಂದರು.
ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕೂಡ ಅರಣ್ಯ ಇಲಾಖೆಯ ಸುರಕ್ಷತಾ ಕಾರ್ಯಗಳಿಗೆ ಮತ್ತು ಅರಣ್ಯ ಸಂರಕ್ಷಣೆಯ ನಿಟ್ಟಿನಲ್ಲಿ ಇಲಾಖೆ ಕೈಗೊಂಡಿರುವ ಕ್ರಮಗಳಿಗೆ ಬೆಂಬಲ ನೀಡಿದ್ದಾರೆ. ಈ ಸಂದರ್ಭದಲ್ಲಿ ಅವರಿಬ್ಬರಿಗೂ ಅರಣ್ಯ ಇಲಾಖೆಯ ಪರವಾಗಿ ಧನ್ಯವಾದ ಅರ್ಪಿಸಿದರು.
ಇಂದು ಇಡೀ ಜಗತ್ತು ಜಾಗತಿಕ ತಾಪಮಾನ ಏರಿಕೆ ಮತ್ತು ಹವಾಮಾನ ಬದಲಾವಣೆಯ ಸವಾಲು ಎದುರಿಸುತ್ತಿದೆ. ನಾವು ಹಸಿರು ಹೊದಿಕೆ ಹೆಚ್ಚಳ ಮಾಡುವ ಮೂಲಕ ಮಾತ್ರ ಇದಕ್ಕೆ ಪರಿಹಾರ ಕಂಡುಕೊಳ್ಳಲು ಸಾಧ್ಯ. ಹೀಗಾಗಿ ನಮ್ಮ ಸರ್ಕಾರ 2023-24ರ ಸಾಲಿನಲ್ಲಿ 5 ಕೋಟಿ ಸಸಿ ನೆಟ್ಟು ಬೆಳೆಸುವ ಸಂಕಲ್ಪ ಮಾಡಿತು. ನಿಮಗೆಲ್ಲ ಆಶ್ಚರ್ಯ ಆಗಬಹುದು ನಾವು 5 ಕೋಟಿ 48 ಲಕ್ಷ ಸಸಿ ನೆಟ್ಟು ಗುರಿ ಮೀರಿದ ಸಾಧನೆ ಮಾಡಿದ್ದೇವೆ. ಜೊತೆಗೆ ಈ ರೀತಿ ನೆಡಲಾದ ಸಸಿಗಳ ಪೈಕಿ ಎಷ್ಟು ಬದುಕುಳಿದಿದೆ ಎಂದು ತಿಳಿಯಲು ಜಿಯೋ ಟ್ಯಾಗ್ ಮಾಡಿಸಿ ಆಡಿಟ್ ಕೂಡ ಮಾಡುತ್ತಿದ್ದೇವೆ ಎಂದು ತಿಳಿಸಿದರು.
ಪ್ರಾಣಿಗಳ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿದೆ. ಆದರೆ ಅದಕ್ಕೆ ಅನುಗುಣವಾಗಿ ಅರಣ್ಯ ಪ್ರದೇಶ ಬೆಳೆಯುತ್ತಿಲ್ಲ. ಹೀಗಾಗಿ ಕರ್ನಾಟಕ ಸರ್ಕಾರ ಕಳೆದ ವರ್ಷ 3395.73 ಹೆಕ್ಟೇರ್ ಪ್ರದೇಶವನ್ನು ಅರಣ್ಯ ಎಂದು ಘೋಷಿಸಿದೆ. ಜೊತೆಗೆ 2500 ಎಕರೆಗೂ ಹೆಚ್ಚು ಅರಣ್ಯ ಒತ್ತುವರಿಯನ್ನು ತೆರವು ಮಾಡಿಸಿದೆ.
ಅರಣ್ಯ ಅಪರಾಧಗಳನ್ನು ತಡೆಯಲು ಮತ್ತು ತಪ್ಪಿತಸ್ಥರಿಗೆ ಶಿಕ್ಷೆ ಆಗುವಂತೆ ಮಾಡಲು ಆನ್ ಲೈನ್ ಎಫ್.ಐ.ಆರ್. ವ್ಯವಸ್ಥೆಯನ್ನು ತರಲು ನಾವು ಕಾರ್ಯೋನ್ಮುಖರಾಗಿದ್ದೇವೆ. ಆಧುನಿಕ ತಂತ್ರಜ್ಞಾನದ ನೆರವಿನಿಂದ ಅರಣ್ಯ ಮತ್ತು ವನ್ಯಜೀವಿ ಸಂರಕ್ಷಣೆಗೆ ಮುಂದಾಗಿದ್ದೇವೆ ಎಂದು ತಿಳಿಸಿದರು.
ಕಾಡಿನಲ್ಲಿ ಬೆಂಕಿ ಕಾಣಿಸಿಕೊಂಡಾಗ ದೂರ ಸಂವೇದಿ ತಂತ್ರಜ್ಞಾನ ಉಪಗ್ರಹಗಳ ನೆರವಿನಿಂದ ಮಾಹಿತಿ ಲಭಿಸುತ್ತದೆ. ಈ ಹಿಂದೆ ನಾಸಾದಿಂದ ಕಾಡ್ಗಿಚ್ಚಿನ ಮಾಹಿತಿ ಮೊದಲು ಇಸ್ರೋದ ರಾಷ್ಟ್ರೀಯ ದೂರಸಂವೇದಿ ಕೇಂದ್ರ (ಎನ್‍ಆರ್ ಎಸ್‍ಸಿ)ಕ್ಕೆ ಬಂದು, ಅಲ್ಲಿಂದ ಭಾರತೀಯ ಅರಣ್ಯ ಸರ್ವೇಕ್ಷಣಾ ಇಲಾಖೆ (ಎಫ್‍ಎಸ್‍ಐ)ಗೆ ಬರುತ್ತಿತ್ತು. ನಂತರ ಅವರು ಆಯಾ ರಾಜ್ಯಗಳಿಗೆ ಮಾಹಿತಿ ತಲುಪಿಸುತ್ತಿದ್ದರು. ಈಗ ನೇರವಾಗಿ ನಾಸಾದಿಂದ ಇಸ್ರೋದ ರಾಷ್ಟ್ರೀಯ ದೂರಸಂವೇದಿ ಕೇಂದ್ರ (ಎನ್‍ಆರ್ ಎಸ್‍ಸಿ)ಕ್ಕೆ ಬಂದು ಅಲ್ಲಿಂದ ಕರ್ನಾಟಕ ದೂರ ಸಂವೇದಿ ಸಂಸ್ಥೆಗೆ (ಕೆಎಸ್‍ಆರ್ ಎಸ್‍ಸಿ) ಬರುತ್ತದೆ. ಆ ಮಾಹಿತಿ ಅರಣ್ಯ ಇಲಾಖೆಯ ಸಂಬಂಧಿತ ವಲಯಕ್ಕೆ ರವಾನೆ ಆಗುತ್ತದೆ. ಇದರಿಂದ ತಕ್ಷಣವೇ ಸ್ಪಂದಿಸಲು, ಬೆಂಕಿ ನಂದಿಸಲು ಸಾಧ್ಯವಾಗಲಿದ್ದು, ಇದು ಹೆಚ್ಚಿನ ಅರಣ್ಯ ನಾಶ ತಡೆಯುತ್ತದೆ ಎಂದರು.
ತಂತ್ರಜ್ಞಾನದ ಅಳವಡಿಕೆ:
ಇದೇ ತಂತ್ರಜ್ಞಾನವನ್ನು ಅರಣ್ಯ ಒತ್ತುವರಿ ತಡೆಗೂ ಅಳವಡಿಸಲು ಈಗ ನಾವು ಮುಂದಾಗಿದ್ದೇವೆ. ಯಾವುದೇ ಅರಣ್ಯ ಪ್ರದೇಶದಲ್ಲಿ ಮರ ಕಡಿದು ಒತ್ತುವರಿ ಮಾಡಿದರೆ, ಸಕಾಲಿಕವಾಗಿ ಎಚ್ಚರಿಕೆ ನೀಡುವ ಉಪಗ್ರಹ ಆಧಾರಿತ ವ್ಯವಸ್ಥೆಯನ್ನೂ ಅಭಿವೃದ್ಧಿ ಪಡಿಸುತ್ತಿದ್ದೇವೆ ಎಂದು ಮಾಹಿತಿ ನೀಡಿದರು.
ಈ ನಿಟ್ಟಿನಲ್ಲಿ ನಮ್ಮ ನೆರೆಯ ರಾಜ್ಯಗಳಾದ ಕೇರಳ, ಆಂಧ್ರಪ್ರದೇಶ ಮತ್ತು ತಮಿಳುನಾಡಿನೊಂದಿಗೆ ಬಲವಾದ ಸಹಕಾರವನ್ನು ಬೆಳೆಸುವುದು ನಮ್ಮ ಪ್ರಮುಖ ಕಾರ್ಯತಂತ್ರಗಳಲ್ಲಿ ಒಂದಾಗಿದೆ. ರಾಜ್ಯ ಗಡಿಗಳಲ್ಲಿ ಮಾನವ-ಆನೆ ಸಂಘರ್ಷವನ್ನು ಪರಿಹರಿಸಲು ಮತ್ತು ನೀಲಗಿರಿ ತಪ್ಪಲಿನಲ್ಲಿ ಸಂರಕ್ಷಿತ ಕಾನನದೊಳಗೆ ಆನೆಗಳ ಸುರಕ್ಷಿತ ಸಂಚಾರ ಉತ್ತೇಜಿಸಲು ನಾವು ಒಟ್ಟಾಗಿ ಅಂತಾರಾಜ್ಯ ಸಮನ್ವಯ ಸಮಿತಿಯನ್ನು (ಐಸಿಸಿ) ರಚಿಸಿದ್ದೇವೆ ಮತ್ತು ಆ ಸಂಬಂಧ ಚಾರ್ಟರ್ ಗೆ ಸಹಿ ಹಾಕಿದ್ದೇವೆ. ಬಂಡೀಪುರದಲ್ಲಿ ನಡೆದ ಸಮನ್ವಯ ಸಭೆಯಲ್ಲಿ ಸಿದ್ಧಪಡಿಸಿದ “ಬಂಡೀಪುರ ಚಾರ್ಟರ್” ಒಡಂಬಡಿಕೆ ಈ ನಿಟ್ಟಿನಲ್ಲಿ ಮಹತ್ವದ ಮೈಲಿಗಲ್ಲಾಗಿದೆ. ಇದು ಸಂರಕ್ಷಣೆ ಮತ್ತು ಸಂಘರ್ಷ ಪರಿಹಾರಕ್ಕೆ ನಮ್ಮ ಸಾಮೂಹಿಕ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ ಎಂದರು.
ಮಾನವ-ಆನೆ ಸಂಘರ್ಷದಿಂದ ಮೃತಪಟ್ಟವರ ಕುಟುಂಬಕ್ಕೆ ಮತ್ತು ಗಾಯಗೊಂಡವರಿಗೆ ತಕ್ಷಣವೇ ಆರ್ಥಿಕ ಪರಿಹಾರ ಮತ್ತು ನೆರವು ನೀಡುತ್ತಿದ್ದೇವೆ, ಬೆಳೆ ಪರಿಹಾರವನ್ನು ತ್ವರಿತವಾಗಿ ವಿತರಿಸುತ್ತಿದ್ದೇವೆ. ಜೊತೆಗೆ ಕರ್ನಾಟಕ ಸರ್ಕಾರವು ರೈತರು ಕಷ್ಟಪಟ್ಟು ಬೆಳೆದ ಬೆಳೆಗಳನ್ನು ರಕ್ಷಿಸಲು ಮತ್ತು ಜನರ ಜೀವ ಉಳಿಸಲು ಸೌರ ವಿದ್ಯುತ್ ಬೇಲಿ ಅಳವಡಿಸಿಕೊಳ್ಳಲು ಸಬ್ಸಿಡಿ ನೀಡುತ್ತಿದೆ. ಮಾನವ-ವನ್ಯಜೀವಿ ಸಂಘರ್ಷವನ್ನು ನಿಭಾಯಿಸಲು ನಾವು ಪ್ರತ್ಯೇಕ ಬಜೆಟ್ ಅನ್ನು ನಿಗದಿಪಡಿಸಿದ್ದೇವೆ, ರೈಲ್ವೆ ಬ್ಯಾರಿಕೇಡ್ ಗಳು, ಸೌರ ತಂತಿ ಬೇಲಿ ಅಳವಡಿಕೆ, ಆನೆ-ನಿಗ್ರಹ ಕಂದಕಗಳ ನಿರ್ಮಾಣಕ್ಕಾಗಿ ವಾರ್ಷಿಕವಾಗಿ 150 ಕೋಟಿ ರೂ.ಗಳನ್ನು ವೆಚ್ಚ ಮಾಡಿದ್ದೇವೆ ಎಂದು ತಿಳಿಸಿದರು.
ಮಾನವ -ವನ್ಯಜೀವಿ ಸಂಘರ್ಷದಿಂದ ಹೆಚ್ಚಿನ ಸಾವುಗಳು ಸಂಭವಿಸುವ ಕಡೆಗಳಲ್ಲಿ, ವನ್ಯಜೀವಿ ಪ್ರದೇಶಗಳಲ್ಲಿ ದಣಿವರಿಯದೆ ಕೆಲಸ ಮಾಡುವ ನಮ್ಮ ಮುಂಚೂಣಿ ಸಿಬ್ಬಂದಿಯ ಕಲ್ಯಾಣವು ನಮಗೆ ಅತ್ಯಂತ ಮಹತ್ವದ್ದಾಗಿದೆ. ಗುತ್ತಿಗೆ ನೌಕರರು ಸೇರಿದಂತೆ ಇಲಾಖೆಯ ಎಲ್ಲಾ ಸಿಬ್ಬಂದಿಗಳಿಗೆ ನಾವು “ಕಷ್ಟಕರ ಸನ್ನಿವೇಶದ ಕಾರ್ಯ ನಿರ್ವಹಣಾ ಭತ್ಯೆ” ಯನ್ನು ನೀಡುತ್ತಿದ್ದೇವೆ ಎಂದು ಈಶ್ವರ ಖಂಡ್ರೆ ತಿಳಿಸಿದರು.
ರೇಡಿಯೋ ಕಾಲರ್ ಅಳವಡಿಕೆ:
ನಾವು ಇಂದು ಇಲ್ಲಿ ಮಾನವ-ಆನೆ ಸಂಘರ್ಷ ನಿರ್ವಹಣೆ ಕುರಿತಂತೆ ಚಿಂತನ ಮಂಥನ ನಡೆಸಲು ಸೇರುತ್ತಿರುವ ಸಂದರ್ಭದಲ್ಲಿ, ನಮ್ಮ ಸಾಮರ್ಥ್ಯವನ್ನು ಹೆಚ್ಚಿಸುವ ಹಲವಾರು ಸುಧಾರಿತ ತಾಂತ್ರಿಕ ಅನುಷ್ಠಾನ ಕುರಿತಂತೆ ಘೋಷಿಸಲು ನಾನು ಹೆಮ್ಮೆಪಡುತ್ತೇನೆ. ಆನೆಗಳ ಸಂಚಾರದ ಬಗ್ಗೆ ಮಾಹಿತಿ ತಿಳಿಯಲು ರೇಡಿಯೋ ಕಾಲರ್ ಅಳವಡಿಸುವ ಕಾರ್ಯವನ್ನೂ ರಾಜ್ಯ ಸರ್ಕಾರ ಮಾಡುತ್ತಿದೆ. ಜಿಎಸ್ಎಂ ಆಧಾರಿತ ಕ್ಯಾಮೆರಾ ಟ್ರ್ಯಾಪ್ ಗಳು ಮತ್ತು ಗರುಡ ಇ- ನಿಗಾ ವ್ಯವಸ್ಥೆಯನ್ನು ಬಳಸಲಾಗುತ್ತಿದೆ. ವನ್ಯಜೀವಿಗಳು ಮತ್ತು ಜನರ ಸುರಕ್ಷತೆಯನ್ನು ಖಾತ್ರಿಪಡಿಸಿಕೊಳ್ಳಲು ನಾವು ತಂತ್ರಜ್ಞಾನವನ್ನು ಬಳಸಿಕೊಳ್ಳುತ್ತಿದ್ದೇವೆ. ಮೇ 2023 ರಲ್ಲಿ ದಕ್ಷಿಣ ಭಾರತದಾದ್ಯಂತ ನಡೆಸಿದ ಸಂಯೋಜಿತ ಆನೆಗಳ ಜನಸಂಖ್ಯೆಯ ಅಂದಾಜು ವಿಜ್ಞಾನ ಆಧಾರಿತ ನಿರ್ವಹಣೆಗೆ ನಮ್ಮ ಬದ್ಧತೆಗೆ ಸಾಕ್ಷಿಯಾಗಿದೆ. ಈ ರೂಢಿಗಳಿಂದ ಸಂಗ್ರಹಿಸಿದ ದತ್ತಾಂಶವು ಅಮೂಲ್ಯವಾಗಿದೆ, ಭವಿಷ್ಯದ ಸಂರಕ್ಷಣಾ ತಂತ್ರಗಳನ್ನು ಯೋಜಿಸಲು ನಿರ್ಣಾಯಕ ಒಳನೋಟಗಳನ್ನು ಒದಗಿಸುತ್ತದೆ. ಇದು ಪ್ರಾದೇಶಿಕ ಸಹಕಾರಕ್ಕೆ ಜ್ವಲಂತ ಉದಾಹರಣೆಯಾಗಿದೆ ಎಂದರು.
ಮಾನವ- ವನ್ಯಜೀವಿ ಸಂಘರ್ಷ ತಗ್ಗಿಸಲು ಮತ್ತು ಜನರ ಮತ್ತು ವನ್ಯಜೀವಿಗಳ ಸಂರಕ್ಷಣೆಗೆ ರಾಜ್ಯಗಳು ಹೇಗೆ ಸಂಘಟಿತ ಪ್ರಯತ್ನ ಮಾಡಬಹುದು ಎಂಬ ವರದಿಯನ್ನು ಇಂದು ಸಮ್ಮೇಳನದಲ್ಲಿ ಬಿಡುಗಡೆ ಮಾಡಲಾಗುತ್ತಿದೆ ಎಂದರು.
ಸಹಯೋಗದ ವೇದಿಕೆ:
ಈ ಸಮ್ಮೇಳನವು ವೈಜ್ಞಾನಿಕ ಸಮುದಾಯ, ಸರ್ಕಾರಿ ಅಧಿಕಾರಿಗಳು ಮತ್ತು ನಾಗರಿಕ ಸಮಾಜ ಸಂಸ್ಥೆಗಳ ನಡುವಿನ ಸಹಯೋಗಕ್ಕೆ ವೇದಿಕೆಯಾಗಿದೆ. ಜ್ಞಾನವನ್ನು ಹಂಚಿಕೊಳ್ಳಲು, ವಿಚಾರಗಳನ್ನು ವಿನಿಮಯ ಮಾಡಿಕೊಳ್ಳಲು ಮತ್ತು ಮಾನವ-ಆನೆ ಸಂಘರ್ಷವನ್ನು ನಿರ್ವಹಿಸಲು ಮತ್ತು ತಗ್ಗಿಸಲು ನವೀನ ವಿಧಾನಗಳನ್ನು ಅಭಿವೃದ್ಧಿಪಡಿಸಲು ನಾವು ಈ ಸಮಾವೇಶದಲ್ಲಿ ಪ್ರಯತ್ನಿಸಲಿದ್ದೇವೆ. ಸಂಘರ್ಷದ ಸವಾಲು ಅರ್ಥಮಾಡಿಕೊಳ್ಳುವುದು, ಅಂತರ-ವಲಯ ಸಹಯೋಗವನ್ನು ಉತ್ತೇಜಿಸುವುದು, ತಂತ್ರಜ್ಞಾನವನ್ನು ಬಳಸಿಕೊಳ್ಳುವುದು ಮತ್ತು ಪರಿಣಾಮಕಾರಿ ಸಂವಹನವನ್ನು ಉತ್ತೇಜಿಸುವುದೇ ಮೊದಲಾದ ಪ್ರಮುಖ ವಿಷಯಗಳ ಮೇಲೆ ಈ ಸಮಾವೇಶದ ಗೋಷ್ಠಿಗಳಲ್ಲಿ ಚರ್ಚೆಗಳು ನಡೆಯಲಿವೆ ಎಂದು ತಿಳಿಸಿದರು.
ಸಾರ್ವಜನಿಕ ಗ್ರಹಿಕೆಯನ್ನು ರೂಪಿಸುವಲ್ಲಿ ಮತ್ತು ಮಾನವ-ವನ್ಯಜೀವಿ ಸಂಘರ್ಷದ ಬಗ್ಗೆ ನಿಖರವಾದ ಮಾಹಿತಿಯನ್ನು ಪ್ರಸಾರ ಮಾಡುವಲ್ಲಿ ಮಾಧ್ಯಮಗಳ ಪಾತ್ರವೂ ಪ್ರಮುಖವಾಗಿದೆ ಎಂಬುದನ್ನು ನಾವು ಗುರುತಿಸಿದ್ದೇವೆ. ಈ ಸಮ್ಮೇಳನ ಈ ಎಲ್ಲ ಅಂಶಗಳ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಸಕಾರಾತ್ಮಕ ಬದಲಾವಣೆಗೆ ಚಾಲನೆ ನೀಡಲು ನಿರ್ಣಾಯಕವಾಗಿದೆ ಎಂದರು.
ಶೂನ್ಯ ಮಾನವ-ಪ್ರಾಣಿ ಸಂಘರ್ಷ ವಲಯಗಳನ್ನು ಸೃಷ್ಟಿಸುವ ಗುರಿಯನ್ನು ಕರ್ನಾಟಕ ಹೊಂದಿದೆ. ಅರಣ್ಯ ಸಮನ್ವಯ ಯೋಜನೆ ಮತ್ತು ಯುವ ಸ್ವಯಂಸೇವಕರ ಪಾಲ್ಗೊಳ್ಳುವಿಕೆಯ ಮೂಲಕ ಸಾಮರಸ್ಯದ ಸಹಬಾಳ್ವೆಯನ್ನು ಉತ್ತೇಜಿಸುವ ಸಮುದಾಯ ಆಧಾರಿತ ಯೋಜನೆಯಾದ ಆನೆ-ಮಿತ್ರ ಯೋಜನೆಯಂತಹ ಉಪಕ್ರಮಗಳ ಮೂಲಕ ಮಾನವ-ಆನೆ ಸಂಘರ್ಷವನ್ನು ತಡೆಗಟ್ಟುವ ಪ್ರಯತ್ನಗಳನ್ನು ಮುಂದುವರಿಸಲು ಕರ್ನಾಟಕ ಬದ್ಧವಾಗಿದೆ ಎಂದು ಈಶ್ವರ ಖಂಡ್ರೆ ಹೇಳಿದರು.
ಸಂಶೋಧನಾ ಪ್ರಬಂಧಗಳ ಪ್ರಸ್ತುತಿಯ ಸಮಯದಲ್ಲಿ ಒಂದು ಸಮರ್ಪಿತ ನಿಧಿ ಸ್ಥಾಪಿಸುವ. ಮಾನವ-ಆನೆ ಸಂಘರ್ಷದ ಸಂಶೋಧನೆಗೆ ಪ್ರತ್ಯೇಕವಾಗಿ ಹಣವನ್ನು ಮೀಸಲಿಡುವ ಬಗ್ಗೆ ನಾನು ಪ್ರಸ್ತಾಪಿಸುತ್ತೇನೆ. ನಾವು ಈ ನಿಟ್ಟಿನಲ್ಲಿ ಸಾಗಬೇಕಾದ ಹಾದಿ ಇನ್ನೂ ಬಹುದೂರವಿದೆ. ನಾವು ಎದುರಿಸುತ್ತಿರುವ ಸವಾಲುಗಳು ನಿತ್ಯ ಹೆಚ್ಚಾಗುತ್ತಿವೆ. ಹವಾಮಾನ ಬದಲಾವಣೆ, ಆವಾಸಸ್ಥಾನದ ವಿಘಟನೆ ಮತ್ತು ಬದಲಾಗುತ್ತಿರುವ ಭೂ-ಬಳಕೆಯ ಮಾದರಿಗಳು ಪರಿಸ್ಥಿತಿಯನ್ನು ಉಲ್ಬಣಗೊಳಿಸುತ್ತವೆ ಎಂದರು.
ಆನೆಗಳು ಮತ್ತು ಇತರ ವನ್ಯಜೀವಿಗಳಿಗೆ ಯಾವುದೇ ರಾಜ್ಯದ ಗಡಿ ಇರುವುದಿಲ್ಲ. ವನ್ಯ ಜೀವಿಗಳು ಒಂದು ರಾಜ್ಯದ ಕಾಡಿನಿಂದ ಮತ್ತೊಂದು ರಾಜ್ಯಕ್ಕೆ ಹೋಗುತ್ತವೆ. ಹೀಗಾಗಿ ಆನೆ ಸೇರಿದಂತೆ ವನ್ಯಜೀವಿ -ಮಾನವ ಸಂಘರ್ಷ ನಿಯಂತ್ರಣಕ್ಕೆ ನೆರೆ ರಾಜ್ಯಗೊಂದಿಗೆ ಸಹಯೋಗ ಮತ್ತು ಸಹಕಾರ ಅತ್ಯಂತ ಮುಖ್ಯವಾಗಿದೆ. ಅದೇ ರೀತಿ ಅಂತರರಾಷ್ಟ್ರೀಯ ಗಡಿಗಳಾದ್ಯಂತ, ಸಹಯೋಗದ ನಿರ್ವಹಣೆಯೂ ಈ ಸಮಯದ ಅಗತ್ಯವಾಗಿದೆ ಎಂದು ಭಾವಿಸುವುದಾಗಿ ಹೇಳಿದರು.
ಈ ಅಂತಾರಾಷ್ಟ್ರೀಯ ಸಮ್ಮೇಳನವು ವಿಚಾರಗಳು, ಅನುಭವಗಳು ಮತ್ತು ಜ್ಞಾನವನ್ನು ವಿನಿಮಯ ಮಾಡಿಕೊಳ್ಳಲು ಒಂದು ವೇದಿಕೆಯನ್ನು ಒದಗಿಸುತ್ತದೆ. ಈ ಚರ್ಚೆಗಳಲ್ಲಿ ಮುಕ್ತತೆ ಮತ್ತು ನಾವೀನ್ಯತೆಯ ಮನೋಭಾವದಿಂದ ತೊಡಗಿಸಿಕೊಳ್ಳುವಂತೆ ಮನವಿ ಮಾಡಿದರು.
ನಾವು ಈ ಸಮಾವೇಶದಲ್ಲಿ ಹೊಸ ಮಾರ್ಗಗಳನ್ನು ಅನ್ವೇಷಿಸೋಣ, ಪರಸ್ಪರರ ಯಶಸ್ಸು ಮತ್ತು ವೈಫಲ್ಯಗಳಿಂದ ಕಲಿಯೋಣ ಮತ್ತು ಸುಸ್ಥಿರ, ಮಾನವೀಯ ಮತ್ತು ಅಂತರ್ಗತ ಕಾರ್ಯತಂತ್ರಗಳನ್ನು ಅಭಿವೃದ್ಧಿಪಡಿಸುವತ್ತ ಶ್ರಮಿಸೋಣ ಎಂದು ಕರೆ ನೀಡಿದರು.
ಈ ಸಮಾವೇಶದಲ್ಲಿ ಹೊರಹೊಮ್ಮುವ ಅಭಿಪ್ರಾಯಗಳು, ಚಿಂತನೆಗಳು, ನಮಗೆ ಮಾರ್ಗದರ್ಶನ ನೀಡಲಿ, ಈ ಸಮಾವೇಶದ ಫಲಶ್ರುತಿ ಫಲಪ್ರದವಾಗಿರಲಿ ಎಂದು ಆಶಿಸಿದರು.
ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮಾತನಾಡಿ, ತಾವು ಆನೆ – ಮಾನವ ಸಂಘರ್ಷ ಇರುವ ಪ್ರದೇಶದಿಂದ ಬಂದಿದ್ದು, ನಿತ್ಯ ಜನರ ಅಳಲು ಕೇಳುತ್ತೇನೆ. ಆನೆ ದಾಳಿಯಿಂದ ಒಂದೇ ಒಂದು ಸಾವೂ ಸಂಭವಿಸದ ರೀತಿಯಲ್ಲಿ ಕ್ರಮ ವಹಿಸುವ ಅಗತ್ಯವಿದೆ ಎಂದರು.
ಹಸಿರು ಎಲ್ಲರಿಗೂ ಅಗತ್ಯ. ಇಂದು ಮನೆಗಳಲ್ಲಿ ಹಸಿರು ಇರಲಿ ಎಂದು ಪ್ಲಾಸ್ಟಿಕ್ ಹೂವು, ಬಳ್ಳಿ ತಂದು ಅಲಂಕರಿಸುವ ಸ್ಥಿತಿ ಬಂದಿದೆ. ನಾವು ಹಸಿರು ಉಳಿಸಲು ಸಂಕಲ್ಪ ಮಾಡಬೇಕು ಎಂದರು.
ಇದೇ ಸಂದರ್ಭದಲ್ಲಿ ಅರಣ್ಯ ಸಂರಕ್ಷಣೆ, ಆನೆಗಳ ಸೆರೆ ಕಾರ್ಯಾಚರಣೆಯಲ್ಲಿ ಪಾಲ್ಗೊಂಡವರು ಮತ್ತು ಆನೆಗಳ ಆರೈಕೆ ಹಾಗೂ ಪರಿಸರ ಜಾಗೃತಿ ಮೂಡಿಸುವಲ್ಲಿ ಗಣನೀಯ್ ಸೇವೆ ಸಲ್ಲಿಸಿದ ಸಾಧಕರಿಗೆ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಯವರ ಕಾನೂನು ಸಲಹೆಗಾರ ಪೊನ್ನಣ್ಣ, ಜಾರ್ಖಂಡ್ ನ ಅರಣ್ಯ ಸಚಿವ ಬೈದ್ಯನಾಥ್ ರಾಮ್, ತಮಿಳುನಾಡು ಅರಣ್ಯ ಸಚಿವ ಎಂ. ಮಥಿವೆಂಥನ್, ತೆಲಂಗಾಣ ಅರಣ್ಯ ಸಚಿವೆ ಕೊಂಡ ಸುರೇಖಾ, ಕೇರಳ ಅರಣ್ಯ ಸಚಿವ ಸಸೀಂದ್ರನ್ ಪಾಲ್ಗೊಂಡಿದ್ದರು.

LOGO
Logo

Be the first to comment

Leave a Reply

Your email address will not be published.


*